ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 24 ರನ್ ಗೆಲುವು
Team Udayavani, May 15, 2022, 11:49 PM IST
ಮುಂಬಯಿ: ಎರಡನೇ ಹಾಗೂ ಮೂರನೇ ಸ್ಥಾನದ ಮಹತ್ವ ಹೊಂದಿರುವ ರವಿವಾರದ ದ್ವಿತೀಯ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ 24 ರನ್ನುಗಳಿಂದ ಸೋಲನ್ನು ಕಂಡಿದೆ.
ಈ ಪಂದ್ಯದಲ್ಲಿ ಜಯ ಸಾಧಿಸಿದ ರಾಜಸ್ಥಾನ್ ರಾಯಲ್ಸ್ ಒಟ್ಟಾರೆ 16 ಅಂಕ ಗಳಿಸಿದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಸದ್ಯ ರಾಜಸ್ಥಾನ ಮತ್ತು ಲಕ್ನೋ 16 ಅಂಕ ಪಡೆದಿದ್ದು ಪ್ಲೇ ಆಫ್ ಗೆ ಬಹುತೇಕ ತೇರ್ಗಡೆ
ಯಾಗುವ ಸಾಧ್ಯತೆಯಿದೆ.
ರಾಜಸ್ಥಾನ್ ರಾಯಲ್ಸ್ ತಂಡದ ನಿಖರ ದಾಳಿಗೆ ಕುಸಿದ ಲಕ್ನೋ ತಂಡವು 8 ವಿಕೆಟಿಗೆ 154 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೊದಲು ರಾಜಸ್ಥಾನ್ 6 ವಿಕೆಟಿಗೆ 178 ರನ್ ಪೇರಿಸಿತ್ತು. ಆರಂಭಕಾರ ಯಶಸ್ವಿ ಜೈಸ್ವಾಲ್, ದೇವದತ್ತ ಪಡಿಕ್ಕಲ್ ಮತ್ತು ಸ್ಯಾಮ್ಸನ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ರಾಜಸ್ಥಾನಕ್ಕೆ ದ್ವಿತೀಯ ಓವರ್
ನಲ್ಲೇ ಭಾರೀ ಆಘಾತ ಎದುರಾಯಿತು. ಇಂಗ್ಲೆಂಡಿನ ಬಿಗ್ ಹಿಟ್ಟರ್ ಜಾಸ್ ಬಟ್ಲರ್ ಅವರ ಆಟವನ್ನು ಆವೇಶ್ ಖಾನ್ ಎರಡೇ ರನ್ನಿಗೆ ಮುಗಿಸಿದರು. ಬಟ್ಲರ್ ಕ್ಲೀನ್‌ಬೌಲ್ಡ್ ಆಗಿದ್ದರು.
ದ್ವಿತೀಯ ವಿಕೆಟಿಗೆ ಜತೆಗೂಡಿದ ಯಶಸ್ವಿ ಜೈಸ್ವಾಲ್-ಸಂಜು ಸ್ಯಾಮ್ಸನ್ ಈ ಒತ್ತಡವನ್ನು ಯಶಸ್ವಿಯಾಗಿ ನಿಭಾ ಯಿಸಿದರು. ಇಬ್ಬರೂ ಸ್ಟ್ರೋಕ್‌ಪ್ಲೇ ಮೂಲಕ ತಂಡವನ್ನು ಆಧರಿಸ ತೊಡಗಿದರು. ಈ ಜೋಡಿಯಿಂದ 6.3 ಓವರ್‌ಗಳಲ್ಲಿ 64 ರನ್ ಹರಿದು ಬಂತು. ಆದರೆ ಎರಡೇ ರನ್ ಅಂತರದಲ್ಲಿ ಇವರಿಬ್ಬರೂ ಪೆವಿಲಿ ಯನ್ ಸೇರಿಕೊಂಡಾಗ ಲಕ್ನೋ ಮತ್ತೆ ಮೇಲುಗೈ ಸೂಚನೆ ನೀಡಿತು.
32 ರನ್ ಮಾಡಿದ ಸ್ಯಾಮ್ಸನ್ ಅವರನ್ನು ಜೇಸನ್ ಹೋಲ್ಡರ್ ಮೊದಲು ವಾಪಸ್ ಕಳುಹಿಸಿದರು. 24 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಒಳಗೊಂಡಿತ್ತು. ಜೈಸ್ವಾಲ್ ವಿಕೆಟ್ ಬದೋನಿ ಪಾಲಾಯಿತು. 29 ಎಸೆತ ಎದುರಿಸಿದ ಜೈಸ್ವಾಲ್ ಗಳಿಕೆ 41 ರನ್ (6 ಬೌಂಡರಿ, 1 ಸಿಕ್ಸರ್). ಜೈಸ್ವಾಲ್ ಅವರದೇ ರಾಜಸ್ಥಾನ್ ಸರದಿಯ ಸರ್ವಾಧಿಕ ಗಳಿಕೆ ಆಗಿತ್ತು.
4ನೇ ಕ್ರಮಾಂಕದಲ್ಲಿ ಆಡಲಿಳಿದ ಪಡಿಕ್ಕಲ್ ಹೆಚ್ಚು ಆಕ್ರ ಮಣ ಕಾರಿ ಆಟವಾಡಿದರು. 39 ರನ್ ಕೇವಲ 18 ಎಸೆತಗಳಿಂದ ಬಂತು. ಸಿಡಿಸಿದ್ದು 5 ಬೌಂಡರಿ ಹಾಗೂ 2 ಸಿಕ್ಸರ್. ರವಿ ಬಿಷ್ಣೋಯಿ ಈ ವಿಕೆಟ್ ಹಾರಿಸಿದರು. ರಿಯಾನ್ ಪರಾಗ್ (17) ಕೂಡ ಬಿಷ್ಣೋಯಿ ಮೋಡಿಗೆ ಸಿಲುಕಿದರು.
ಸಂಕ್ಷಿಪ್ತ ಸ್ಕೋರ್: ರಾಜಸ್ಥಾನ್ ರಾಯಲ್ಸ್-6 ವಿಕೆಟಿಗೆ 178 (ಜೈಸ್ವಾಲ್ 41, ಪಡಿಕ್ಕಲ್ 39, ಸ್ಯಾಮ್ಸನ್ 32, ಬಿಷ್ಣೋಯಿ 31ಕ್ಕೆ 2); ಲಕ್ನೋ ಸೂಪರ್ ಜೈಂಟ್ಸ್-8 ವಿಕೆಟಿಗೆ 154 (ದೀಪಕ್ ಹೂಡಾ 59, ಕೃಣಾಲ್ ಪಾಂಡ್ಯ 25, ಸ್ಟೋಯಿನಿಸ್ 27, ಬೌಲ್ಟ್18ಕ್ಕೆ 2, ಪ್ರಸಿದ್ಧ್ ಕೃಷ್ಣ 32ಕ್ಕೆ 2, ಮೆಕಾಯ್ 35ಕ್ಕೆ 2).