ರಣಜಿ ಕ್ರಿಕೆಟ್‌: ಕರ್ನಾಟಕಕ್ಕೆ ಗೆಲುವಿನ ಭರವಸೆ

Team Udayavani, Feb 14, 2020, 6:53 AM IST

ಬೆಂಗಳೂರು: ಮೊದಲ ಇನ್ನಿಂಗ್ಸ್‌ನಲ್ಲಿ ತೀರಾ ಕಳಪೆ ಬ್ಯಾಟಿಂಗ್‌ ನಡೆಸಿದ್ದ ಬರೋಡ ದ್ವಿತೀಯ ಇನ್ನಿಂಗ್ಸ್‌ ನಲ್ಲಿ ಉತ್ತಮ ಹೋರಾಟ ಪ್ರದರ್ಶಿಸಿದೆ. 5 ವಿಕೆಟ್‌ಗಳನ್ನಷ್ಟೇ ಕೈಲಿರಿಸಿಕೊಂಡು 60 ರನ್ನುಗಳ ಸಣ್ಣ ಮೊತ್ತದ ಮುನ್ನಡೆಯಷ್ಟೇ ಹೊಂದಿದೆ. ಹೀಗಾಗಿ ರಣಜಿ ಅಂತಿಮ ಲೀಗ್‌ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಗೆಲುವಿನ ಸಾಧ್ಯತೆ ಹೆಚ್ಚಿದೆ ಎನ್ನಲಡ್ಡಿಯಿಲ್ಲ.

ಮೊದಲ ದಿನ ಕೇವಲ 85 ರನ್‌ಗೆ
ಬರೋಡ ಪತನಗೊಂಡಿತ್ತು. ಇದಕ್ಕುತ್ತರಿಸಿದ್ದ ರಾಜ್ಯ ತಂಡವೂ ದಿನದಾಟದ ಅಂತ್ಯಕ್ಕೆ 165ಕ್ಕೆ 7 ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿತ್ತು. ಗುರುವಾರ ಬ್ಯಾಟಿಂಗ್‌ ಮುಂದುವರಿಸಿದ ಕರ್ನಾಟಕ 233 ರನ್‌ ಗಳಿಸಿ ಆಲೌಟಾಯಿತು. ಒಟ್ಟು 148 ರನ್‌ ಮುನ್ನಡೆ ಪಡೆದುಕೊಂಡಿತು.

2ನೇ ಇನ್ನಿಂಗ್ಸ್‌ ಆರಂಭಿಸಿದ ಬರೋಡ ದಿನದಾಟದ ಅಂತ್ಯಕ್ಕೆ 5 ವಿಕೆಟಿಗೆ 208 ರನ್‌ ಗಳಿಸಿದೆ. ಸದ್ಯದ ಮುನ್ನಡೆ 60 ರನ್‌, ಅಗ್ರ ಕ್ರಮಾಂಕದ ಬ್ಯಾಟ್ಸ್‌
ಮನ್‌ಗಳೆಲ್ಲ ಔಟಾಗಿರುವುದರಿಂದ 3ನೇ ದಿನದ ಮೊದಲ ಅವಧಿಯಲ್ಲಿ ಕರ್ನಾಟಕ ಉಳಿದ 5 ವಿಕೆಟ್‌ಗಳನ್ನು ಬೇಗನೇ ಉರುಳಿಸಿದರೆ ಜಯಭೇರಿ ಮೊಳಗಿಸುವ ಸಾಧ್ಯತೆ ಇದೆ.

ಪಠಾಣ್‌-ಹೂಡಾ ಆಧಾರ
ಕೇದಾರ್‌ ದೇವಧರ್‌ (15) ಹಾಗೂ ವಿಷ್ಣು ಸೋಲಂಕಿ (2) ವಿಕೆಟ್‌ 48 ರನ್‌ ಆಗುವಷ್ಟರಲ್ಲಿ ಕಳೆದುಕೊಂಡ ಬರೋಡ ಮತ್ತೆ ಆತಂಕಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಆರಂಭಕಾರ ಅಹ್ಮದ್‌ನೂರ್‌ ಪಠಾಣ್‌-ದೀಪಕ್‌ ಹೂಡಾ ಜವಾಬ್ದಾರಿಯುತ ಆಟವಾಡಿದರು. ಇಬ್ಬರೂ ಅರ್ಧ ಶತಕ ಬಾರಿಸಿ ತಂಡವನ್ನು ಆಧರಿಸಿದರು. 3ನೇ ವಿಕೆಟಿಗೆ 94 ರನ್‌ ಪೇರಿಸಿ
ಬೌಲಿಂಗ್‌ ಟ್ರ್ಯಾಕ್‌ನಲ್ಲಿ ಸಾಹಸ ಮೆರೆದರು.

ಪಠಾಣ್‌ 162 ಎಸೆತಗಳಿಂದ 90 ರನ್‌ ಬಾರಿಸಿದರೆ (8 ಬೌಂಡರಿ, 3 ಸಿಕ್ಸರ್‌), ಹೂಡಾ 71 ಎಸೆತ ನಿಭಾಯಿಸಿ ಭರ್ತಿ 50 ರನ್‌ ಹೊಡೆದರು (3 ಬೌಂಡರಿ, 2 ಸಿಕ್ಸರ್‌). ಈ ಜೋಡಿಯನ್ನು ಬೇರ್ಪಡಿಸಿದ ರೋನಿತ್‌ ಮೋರೆ ಕರ್ನಾಟಕಕ್ಕೆ ಮೇಲುಗೈ ಒದಗಿಸಿದರು. ಒಟ್ಟು 46 ರನ್‌ ಅಂತರದಲ್ಲಿ 3 ವಿಕೆಟ್‌ ಬಿತ್ತು. ಅಭಿಮನ್ಯು ರಜಪೂತ್‌ (31) ಹಾಗೂ ಪಾರ್ಥ್ ಕೊಹ್ಲಿ (4) ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ರಾಜ್ಯದ ಪರ ಪ್ರಸಿದ್ಧ್ ಕೃಷ್ಣ, ರೋನಿತ್‌ ಮೋರೆ ತಲಾ 2 ಹಾಗೂ ಕೆ. ಗೌತಮ್‌ ಒಂದು ವಿಕೆಟ್‌ ಉರುಳಿಸಿದರು. ಮೊದಲ ದಿನದಂತೆ ಎರಡನೇ ದಿನವೂ ಪಿಚ್‌ ತಿರುವು ಪಡೆದುಕೊಳ್ಳಬಹುದು ಎನ್ನುವ ಲೆಕ್ಕಾಚಾರ ಫ‌ಲಿಸಲಿಲ್ಲ. ಮೊದಲ ದಿನ ಉಭಯ ತಂಡಗಳ ಒಟ್ಟು 17 ವಿಕೆಟ್‌ಗಳು ಪತನಗೊಂಡಿದ್ದವು. 2ನೇ ದಿನ 8 ವಿಕೆಟ್‌ ಮಾತ್ರ ಉರುಳಿತು.

ಸಂಕ್ಷಿಪ್ತ ಸ್ಕೋರ್‌:
ಬರೋಡ-85 ಮತ್ತು 5 ವಿಕೆಟಿಗೆ 208 (ಅಹ್ಮದ್‌ನೂರ್‌ 90, ಹೂಡಾ 50, ರಜಪೂತ್‌ ಬ್ಯಾಟಿಂಗ್‌ 31, ದೇವಧರ್‌ 15, ಪ್ರಸಿದ್ಧ್ ಕೃಷ್ಣ 20ಕ್ಕೆ 2, ಮೋರೆ 36ಕ್ಕೆ 2, ಕೆ. ಗೌತಮ್‌ 88ಕ್ಕೆ 1). ಕರ್ನಾಟಕ-233 (ನಾಯರ್‌ 47, ಮಿಥುನ್‌ 40, ಶರತ್‌ 34,  ಸಿದ್ಧಾರ್ಥ್ 29, ಕೆ. ಗೌತಮ್‌ 27, ದೇಶಪಾಂಡೆ 15, ಸೋಯೆಬ್‌ ಸೊಪಾರಿಯ 83ಕ್ಕೆ 5, ರಜಪೂತ್‌ 17ಕ್ಕೆ 2, ಭಾರ್ಗವ್‌ ಭಟ್‌ 74ಕ್ಕೆ 2).

ಹಿಂದಿ ಮಾತೃ ಭಾಷೆ: ರಾಜಿಂದರ್‌ ಎಡವಟ್ಟು
ಹಾಟ್‌ಸ್ಟಾರ್‌ಗೆ ನೇರ ಪ್ರಸಾರದಲ್ಲಿ ಕ್ರಿಕೆಟ್‌ ಕಾಮೆಂಟ್ರಿ ನೀಡುತ್ತಿದ್ದಾಗ ರಾಜಿಂದರ್‌ ಅಮರನಾಥ್‌ ಹಿಂದಿ ಅಭಿಮಾನ ಮೆರೆದು ಪೇಚಿಗೆ ಸಿಲುಕಿದ ಘಟನೆ ಸಂಭವಿಸಿದೆ. ಕರ್ನಾಟಕ-ಬರೋಡ ನಡುವಿನ ರಣಜಿ ಪಂದ್ಯದ ಟೀ ವಿರಾಮಕ್ಕೂ ಮೊದಲು ಘಟನೆ ನಡೆಯಿತು. ಪರಿಸ್ಥಿತಿ ತೀವ್ರತೆ ಅರಿತ ರಾಜಿಂದರ್‌ ಕೂಡಲೇ ಕ್ಷಮೆಯಾಚಿಸಿದ್ದಾರೆ.

ನಡೆದಿದ್ದೇನು?
ಸುನೀಲ್‌ ಗಾವಸ್ಕರ್‌ ಇತ್ತೀಚೆಗೆ ಹಿಂದಿಯಲ್ಲಿ ಹೆಚ್ಚು ಕಾಮೆಂಟ್ರಿ ಮಾಡುತ್ತಾರೆ. ಅವರು ಡಾಟ್‌ ಬಾಲ್‌ಗ‌ಳಿಗೆ ಬಿಂದು ಬಾಲ್‌ ಎಂದೇ ಬಳಸುತ್ತಾರೆ. ಹಿಂದಿಯ ಬಗ್ಗೆ ಗಾವಸ್ಕರ್‌ಗೆ ಹೆಚ್ಚು ಒಲವಿದೆ’ ಎಂದು ಕಾಮೆಂಟ್ರಿ ಬಾಕ್ಸ್‌ನಲ್ಲಿದ್ದ ಸಹ ಕಾಮೆಂಟೇಟರ್‌ ಸುಶೀಲ್‌ ದೋಶಿ ಹೇಳಿಕೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜಿಂದರ್‌ ಅಮರನಾಥ್‌, “ಎಲ್ಲ ಭಾರತೀಯರು ಹಿಂದಿ ಭಾಷೆ ತಿಳಿದಿರಬೇಕು, ಇದು ನಮ್ಮ ಮಾತೃ ಭಾಷೆ, ಇದಕ್ಕಿಂತ ದೊಡ್ಡ ಭಾಷೆ ಇನ್ನೊಂದಿಲ್ಲ’ ಎಂದರು. ಕೂಡಲೇ ಇದಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗತೊಡಗಿದವು.
ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಭಾಷೆಗಳ ಉಳಿವಿಗಾಗಿ ಹೋರಾಟ ನಡೆಯುತ್ತಿರುವ ಹೊತ್ತಿನಲ್ಲಿ ರಾಜಿಂದರ್‌ ಹೇಳಿಕೆ ವಿವಾದಕ್ಕೆ ಕಾರಣವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ಎದುರಾಯಿತು.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ರಾಜಿಂದರ್‌ ಅಮರನಾಥ್‌, “ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಅದರದ್ದೇ ಆದ ಮಹತ್ವವಿದೆ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ’ ಎಂದು ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ನಡೆಸಿದರು.

ಇನ್ನಿಂಗ್ಸ್‌ ಮುನ್ನಡೆಯತ್ತ ಮುಂಬಯಿ
ಮುಂಬಯಿ: ಮಧ್ಯಪ್ರದೇಶ ವಿರುದ್ಧ ರಣಜಿ ಅಂತಿಮ ಲೀಗ್‌ ಪಂದ್ಯವಾಡುತ್ತಿರುವ ಮುಂಬಯಿ ಇನ್ನಿಂಗ್ಸ್‌ ಮುನ್ನಡೆಯನ್ನು ಖಚಿತಪಡಿಸಿದೆ.

ಆತಿಥೇಯ ಮುಂಬಯಿಯ 427ಕ್ಕೆ ಉತ್ತರವಾಗಿ ಮಧ್ಯಪ್ರದೇಶ 2ನೇ ದಿನದಾಟದ ಅಂತ್ಯಕ್ಕೆ 7 ವಿಕೆಟಿಗೆ 200 ರನ್‌ ಮಾಡಿದೆ.

ರಾಯ್‌ಸ್ಟನ್‌ ಡಾಯಸ್‌, ದೀಪಕ್‌ ಶೆಟ್ಟಿ, ಶಮ್ಸ್‌ ಮುಲಾನಿ ತಲಾ 2 ವಿಕೆಟ್‌ ಹಾರಿಸಿ ಮಧ್ಯಪ್ರದೇಶಕ್ಕೆ ಘಾತಕವಾಗಿ ಪರಿಣಮಿಸಿದರು. ವೆಂಕಟೇಶ್‌ ಅಯ್ಯರ್‌ 87 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಮುಂಬಯಿ ಪರ ಆಕರ್ಷಿತ್‌ ಗೋಮೆಲ್‌ 122 ಹಾಗೂ ಸಫ‌ìರಾಜ್‌ ಖಾನ್‌ 177 ರನ್‌ ಬಾರಿಸಿದರು. ಇವರಿಂದ 4ನೇ ವಿಕೆಟಿಗೆ 275 ರನ್‌ ಹರಿದು ಬಂತು.
ಮಧ್ಯಪ್ರದೇಶ ಪರ ಗೌರವ್‌ ಯಾದವ್‌ 4, ಕುಲದೀಪ್‌ ಸೇನ್‌ 3, ಶುಭಂ ಶರ್ಮ 3 ವಿಕೆಟ್‌ ಕಿತ್ತರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ