ಹೊಸ ಬ್ಯಾಟಿಂಗ್ ಸೆನ್ಸೇಶನ್ ಶಫಾಲಿ ವರ್ಮಾ ಈಗ ವಿಶ್ವದ ನಂ.1 ಟಿ20 ಆಟಗಾರ್ತಿ
Team Udayavani, Mar 4, 2020, 12:45 PM IST
ದುಬೈ: ಭಾರತದ ಹೊಸ ಬ್ಯಾಟಿಂಗ್ ಸೆನ್ಸೇಶನ್, 16ರ ಹರೆಯದ ಹುಡುಗಿ ಶಫಾಲಿ ವರ್ಮಾ ವಿಶ್ವ ಟಿ20 ರಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೆ ತಲುಪಿದ್ದಾರೆ. ಮಿಥಾಲಿ ರಾಜ್ ನಂತರ ಈ ಸಾಧನೆ ಮಾಡಿದ ಮತ್ತೋರ್ವ ಆಟಗಾರ್ತಿಯಾಗಿ ಶಫಾಲಿ ಮೂಡಿ ಬಂದಿದ್ದಾರೆ.
ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ 20ನೇ ಸ್ಥಾನದಲ್ಲಿದ್ದ ಶಫಾಲಿ ಒಂದೇ ಕೂಟದ ಪ್ರದರ್ಶನದ ನಂತರ ಬರೋಬ್ಬರಿ 19 ಸ್ಥಾನ ಮೇಲೇರಿ ಮೊದಲ ಸ್ಥಾನಕ್ಕೆ ಬಂದಿದ್ದಾರೆ. ಇದುವರೆಗೆ ಅಗ್ರ ಸ್ಥಾನಿಯಾಗಿದ್ದ ಕಿವೀಸ್ ನಾಯಕಿ ಸೂಝಿ ಬೇಟ್ಸ್ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಶಫಾಲಿ ಈಗ 761 ಅಂಕ ಹೊಂದಿದ್ದಾರೆ.
ಪ್ರಸ್ತುತ ನಡೆಯುತ್ತಿರವ ವಿಶ್ವಕಪ್ ಕೂಟದಲ್ಲಿ ಶಫಾಲಿ 40.25 ಸರಾಸರಿಯಲ್ಲಿ 161 ರನ್ ಗಳಸಿದ್ದಾರೆ. ಭರ್ಜರಿ ಬ್ಯಾಟ್ ಬೀಸುತ್ತಿರುವ ಶಫಾಲಿ 161 ಸ್ಟ್ರೇಕ್ ರೇಟ್ ಹೊಂದಿದ್ದಾರೆ.
ಐಸಿಸಿ ರಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರಿದ ಅತೀ ಕಿರಿಯ ಕ್ರೀಡಾಪಟು ಎಂಬ ದಾಖಲೆಗೆ ಶಫಾಲಿ ಪಾತ್ರರಾಗಿದ್ದಾರೆ.