ಸಯ್ಯದ್ ಮುಷ್ತಾಕ್ ಅಲಿ ಟಿ20 : ಯುಪಿಯನ್ನು ಕೆಡವಿದ ಕರ್ನಾಟಕ
Team Udayavani, Jan 19, 2021, 5:30 AM IST
ಬೆಂಗಳೂರು: ಸುರೇಶ್ ರೈನಾ, ಭುವನೇಶ್ವರ್ ಕುಮಾರ್ ಮೊದಲಾದ ಅನುಭವಿ ಕ್ರಿಕೆಟಿಗರನ್ನು ಹೊಂದಿದ್ದ ಉತ್ತರಪ್ರದೇಶ ವಿರುದ್ಧದ “ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ’ ಟಿ20 ಪಂದ್ಯದಲ್ಲಿ ಕರ್ನಾಟಕ 5 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿ ಲೀಗ್ ಹಣಾಹಣಿಯನ್ನು ಮುಗಿಸಿದೆ.
ಸೋಮವಾರ ಆಲೂರಿನ ಕೆಎಸ್‌ಸಿಎ (2) ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಉತ್ತರಪ್ರದೇಶ ಉತ್ತಮ ಆರಂಭದ ಹೊರತಾಗಿಯೂ 8 ವಿಕೆಟಿಗೆ 132 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಕುಸಿಯಿತು. ಜವಾಬು ನೀಡತೊಡಗಿದ ಕರುಣ್ ನಾಯರ್ ಪಡೆ 19.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿ ಜಯ ಸಾಧಿಸಿತು.
ಇದು “ಎಲೈಟ್ ಎ’ ವಿಭಾಗದಲ್ಲಿ ಕರ್ನಾಟಕಕ್ಕೆ 5 ಪಂದ್ಯಗಳಲ್ಲಿ ಒಲಿದ 4ನೇ ಗೆಲುವು. ಆದರೆ ಪಂಜಾಬ್ ಐದೂ ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ನಾಟಕೀಯ ಕುಸಿತ :
ಅಭಿಷೇಕ್ ಗೋಸ್ವಾಮಿ (47) ಮತ್ತು ಕರಣ್ ಶರ್ಮ (41) ಯುಪಿಗೆ ಉತ್ತಮ ಆರಂಭ ಒದಗಿಸಿದರು. 8.2 ಓವರ್‌ಗಳಲ್ಲಿ 69 ರನ್ ಪೇರಿಸಿದರು. ಆದರೆ ಇಲ್ಲಿಂದ ಮುಂದೆ ಪ್ರವೀಣ್ ದುಬೆ ಮತ್ತು ಜಗದೀಶ್ ಸುಚಿತ್ ದಾಳಿಗೆ ಸಿಲುಕಿದ ಪ್ರಿಯಂ ಗರ್ಗ್ ಪಡೆ ನಾಟಕೀಯ ಕುಸಿತ ಕಂಡಿತು.
16.1 ಓವರ್‌ಗಳಲ್ಲಿ 5ಕ್ಕೆ 100 ರನ್ ಮಾಡಿದ ಕರ್ನಾಟಕವೂ ಅಪಾಯದ ಸ್ಥಿತಿಯಲ್ಲಿತ್ತು. ಆದರೆ ಶ್ರೇಯಸ್ ಗೋಪಾಲ್ 28 ಎಸೆತಗಳಿಂದ ಅಜೇಯ 47 ರನ್ ಬಾರಿಸಿ ಕರ್ನಾಟಕದ ಗೆಲುವನ್ನು ಸಾರಿದರು.
ಸಂಕ್ಷಿಪ್ತ ಸ್ಕೋರ್
ಉತ್ತರ ಪ್ರದೇಶ-8 ವಿಕೆಟಿಗೆ 132 (ಗೋಸ್ವಾಮಿ 47, ಕರಣ್ ಶರ್ಮ 41, ದುಬೆ 15ಕ್ಕೆ 3, ಸುಚಿತ್ 21ಕ್ಕೆ 3). ಕರ್ನಾಟಕ-19.3 ಓವರ್‌ಗಳಲ್ಲಿ 5 ವಿಕೆಟಿಗೆ 136 (ಶ್ರೇಯಸ್ ಗೋಪಾಲ್ ಔಟಾಗದೆ 47, ಪಡಿಕ್ಕಲ್ 34, ನಾಯರ್ 21, ಜೋಶಿ 21, ಕರಣ್ ಶರ್ಮ 23ಕ್ಕೆ 2).