ಮೈತ್ರಿ ಸರ್ಕಾರದ ಪತನಕ್ಕೆ ಸಿದ್ದು-ಎಚ್‍ಡಿಕೆ ಇಬ್ಬರೂ ಕಾರಣ
Team Udayavani, Aug 25, 2019, 3:00 AM IST
ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಇಬ್ಬರೂ ಸೇರಿಯೇ ಸಮಾಧಿ ಮಾಡಿದರು ಎಂದು ಅನರ್ಹಗೊಂಡಿರುವ ಶಾಸಕ ಎಚ್.ವಿಶ್ವನಾಥ್ ಹೇಳಿದ್ದಾರೆ. ಶನಿವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಪತನಕ್ಕೆ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಇಬ್ಬರೂ ಕಾರಣರೇ.
ಸರ್ಕಾರ ಇರುವಾಗ ಚೆನ್ನಾಗಿ ನಡೆಸದೆ ಇದೀಗ ನೀನು ಕೊಂದೆ, ನಾನು ಕೊಂದೆ, ಅವರು ಕಾರಣ, ಇವರು ಕಾರಣ ಎಂದು ಚರ್ಚಿಸುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು. ಮೈತ್ರಿ ಸರ್ಕಾರ ಪತನ ವಿಚಾರದಲ್ಲಿ ಎಚ್.ಡಿ.ದೇವೇಗೌಡರ ಹೇಳಿಕೆ ಬಗ್ಗೆ ನಾನೇನೂ ಮಾತನಾಡಲ್ಲ. ಅವರು ಮಾಜಿ ಪ್ರಧಾನಿಗಳು, ಅವರ ಬಗ್ಗೆ ಅಪಾರ ಗೌರವವಿದೆ ಎಂದರು.