ಹೊರಗುತ್ತಿಗೆ ಸಿಬ್ಬಂದಿ ಕೈಬಿಡಲ್ಲ: ಪ್ರಿಯಾಂಕ್
Team Udayavani, Jul 4, 2018, 6:00 AM IST
ವಿಧಾನ ಪರಿಷತ್ತು: ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿನಿಲಯಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ
ಕಾರ್ಯ ನಿರ್ವಹಿಸುತ್ತಿದ್ದ ಯಾರನ್ನೂ ಕೈಬಿಡುವ ಪ್ರಶ್ನೆ ಇಲ್ಲ. ಇಲಾಖೆ ಸಚಿವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಬಿಜೆಪಿಯ ಎನ್. ರವಿಕುಮಾರ್ ಪ್ರಸ್ತಾಪಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎರಡು ಇಲಾಖೆಗಳ ವಿದ್ಯಾರ್ಥಿನಿಲಯಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸಿದ್ದ ಅಡುಗೆಯವರು, ಅಡುಗೆ ಸಹಾಯಕರು, ಕಾವಲು ಸಿಬ್ಬಂದಿ ಧರಣಿ ಆರಂಭಿಸಿದ ಮೊದಲ ದಿನವೇ ಸ್ಥಳಕ್ಕೆ ತೆರಳಿ ಅಹವಾಲು ಆಲಿಸಿದ್ದೆ. ಮಾನವೀಯತೆ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಹೊರಗುತ್ತಿಗೆ ನೌಕರರು ನಾಲ್ಕು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. 8-10 ವರ್ಷಗಳಿಂದ ಕಾರ್ಯ ನಿರ್ವಹಿಸಿದ ಸಿಬ್ಬಂದಿಯನ್ನು ಮತ್ತೆ ತೆಗೆದುಕೊಳ್ಳದಿದ್ದರೆ ಅವರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಸರ್ಕಾರಕ್ಕೆ ಮಾನವೀಯತೆ ಇದೆಯೇ ಎಂದು ಪ್ರಶ್ನಿಸಿದರು.