ಭಾನುವಾರ ಬಿಜೆಪಿ ಅಧ್ಯಕ್ಷರ ಪದಗ್ರಹಣ ಸಾಧ್ಯತೆ
Team Udayavani, Aug 22, 2019, 3:00 AM IST
ಬೆಂಗಳೂರು: ರಾಜ್ಯ ಬಿಜೆಪಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಪದಗ್ರಹಣ ಸಮಾರಂಭ ಆ.25ರಂದು ರಾಜ್ಯ ಬಿಜೆಪಿ ಕಚೇರಿ ಬಳಿ ನಡೆಯುವ ಸಾಧ್ಯತೆ ಇದೆ. ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಗುರುವಾರ ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಲಿದ್ದಾರೆ.
ಭಾನುವಾರ ಬೆಳಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಬಳಿಕ, ನೂತನ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ರಾಜ್ಯ ಬಿಜೆಪಿ ಕಚೇರಿ ಮುಂಭಾಗದಲ್ಲೇ ಸಾವಿರಾರು ಕಾರ್ಯಕರ್ತರು, ಬೆಂಬಲಿಗರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಸಲು ಚಿಂತಿಸಲಾಗಿದೆ ಎಂದು ಮೂಲಗಳು ಹೇಳಿವೆ.