3 ವರ್ಷದಿಂದ ಪತ್ರ ವಿಲೇವಾರಿ ಮಾಡದ ಅಂಚೆಯಣ್ಣ

Team Udayavani, Nov 12, 2019, 3:06 AM IST

ಯಲಬುರ್ಗಾ: ಡಿಜಿಟಲ್‌ ಲೋಕಕ್ಕೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಅಂಚೆ ಇಲಾಖೆ ಹಲವು ಬದಲಾವಣೆಗೆ ಮೈಯೊಡ್ಡಿದೆ. ಆದರೆ, ತಾಲೂಕಿನ ಸಂಗನಾಳ ಗ್ರಾಮದ ಅಂಚೆ ಯಣ್ಣ ಮೂರು ವರ್ಷದಿಂದ ಅಂಚೆ ಇಲಾಖೆಗೆ ಬಂದ ಪತ್ರಗಳನ್ನು ಸಾರ್ವಜನಿಕರಿಗೆ ತಲುಪಿಸಿಯೇ ಇಲ್ಲ!

ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ ಪೋಸ್ಟ್‌ಮ್ಯಾನ್‌ ಸುರೇಶ ತಳವಾರ 2017-18 ಹಾಗೂ 2019 ರಲ್ಲಿನ ಪೋಸ್ಟ್‌ಗಳನ್ನು ವಿಲೇವಾರಿ ಮಾಡದೇ ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ. ಸರ್ಕಾರದ ಅಧಿಕೃತ ಪ್ರಕಟಣೆಗಳು, ಪರೀಕ್ಷಾ ಪ್ರವೇಶ ಪತ್ರಗಳು, ಕೆಲಸದ ನೇಮಕ ಪತ್ರಗಳು, ಎಟಿಎಂ ಕಾರ್ಡ್‌, ಪಾಸ್‌ಬುಕ್‌, ಪ್ಯಾನ್‌ ಕಾರ್ಡ್‌ ಸೇರಿ ಅಗತ್ಯ ವಸ್ತುಗಳು ಕೊಠಡಿಯಲ್ಲೇ ಬಿದ್ದಿವೆ.

3 ವರ್ಷಗಳಿಂದ ವಿಲೇವಾರಿಯಾಗದೇ ಉಳಿದ ಸಾವಿರಾರು ಪತ್ರ-ಮಹತ್ವದ ದಾಖಲೆಗಳು ಸಕಾಲಕ್ಕೆ ಸಿಗದೆ ಸಾರ್ವಜನಿಕರು ಪರದಾಡಿದ್ದಾರೆ. ಹಲವರು ಉತ್ತಮ ಅವಕಾಶಗಳನ್ನು ಕಳೆದುಕೊಂಡಿದ್ದಾರೆ. ಬ್ಯಾಂಕ್‌ನ ವ್ಯವಹಾರಕ್ಕೂ ತೊಂದರೆಯಾಗಿದೆ.

ಬೆಳಕಿಗೆ ಬಂದದ್ದು ಹೇಗೆ?: ಗ್ರಾಮಸ್ಥರು ವೃದ್ಧಾಪ್ಯ ವೇತನ, ಆಧಾರ್‌ ಕಾರ್ಡ್‌ ಸೇರಿ ಮುಂತಾದ ಅರ್ಜಿಗಳು ದಾಖಲಿಸಿ ಬಂದರೂ ಮನೆಗೆ ಯಾವುದೇ ಪತ್ರಗಳು ತಲುಪಿಲ್ಲ. ಅಂಚೆ ಕಚೇರಿಗೆ ಹೋಗಿ ವಿಚಾರಿಸಿದರೂ ಸುರೇಶ ತಳವಾರ ಯಾವುದೇ ದಾಖಲೆಗಳು ಬಂದಿಲ್ಲ ಎಂದು ಹೇಳುತ್ತಿದ್ದ. ಅಲ್ಲದೇ ಹಾರಿಕೆ ಉತ್ತರ ನೀಡುತ್ತಿದ್ದ. ಇದರಿಂದ ಕಂಗಾಲಾದ ಗ್ರಾಮಸ್ಥರು ಹಿರಿಯ ಅಧಿಕಾರಿಗಳನ್ನು ದೂರವಾಣಿ ಹಾಗೂ ಖುದ್ದಾಗಿ ಭೇಟಿ ನೀಡಿ ದೂರು ಸಲ್ಲಿಸಿದ್ದರು.

ದೂರು ಪರಿಶೀಲನೆಗೆ ಅಧಿಕಾರಿಗಳು ಗ್ರಾಮಕ್ಕೆ ಬಂದಾಗ ಅಚ್ಚರಿ ಕಾದಿತ್ತು. ಅಂಚೆ ಕಚೇರಿ ಕೊಠಡಿಯಲ್ಲಿ 3 ವರ್ಷಗಳಿಂದ ವಿಲೇವಾರಿಯಾಗದ ಸಾವಿರಾರು ದಾಖಲೆಗಳು ಬಿದ್ದಿದ್ದವು. ಇದನ್ನು ನೋಡಿ ಕಂಗಾಲಾದ ಅಧಿಕಾರಿಗಳು ಸುರೇಶ ತಳವಾರಗೆ ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡಿದ್ದು, ಕರ್ತವ್ಯಲೋಪ ಎಸಗಿದ್ದಕ್ಕೆ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ಗ್ರಾಮಸ್ಥರು ದೂರ ವಾಣಿ ಮೂಲಕ, ಲಿಖಿತ ರೂಪದಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆಗಮಿಸಿ ಪರಿಶೀಲಿಸಿ ದಾಗ ಕರ್ತವ್ಯಲೋಪ ಬೆಳಕಿಗೆ ಬಂದಿದೆ. ಪೋಸ್ಟ್‌ಮ್ಯಾನ್‌ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
-ವಿಜಯ ಹುಬ್ಬಳ್ಳಿ, ಅಂಚೆ ಅಧಿಕಾರಿ, ಗದಗ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ