ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ವೀಡಿಯೋ ವೈರಲ್: ಐವರ ಬಂಧನ
Team Udayavani, Jul 4, 2019, 3:00 AM IST
ಪುತ್ತೂರು: ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಪುತ್ತೂರಿನ ಕಾಲೇಜೊಂದರ ಐವರು ವಿದ್ಯಾರ್ಥಿಗಳನ್ನು ಪೊಲೀ ಸರು ಬುಧವಾರ ಬಂಧಿಸಿದ್ದಾರೆ.
ವಿಡಿಯೋ ವೈರಲ್ ಆದ ಬಳಿಕ ಪುತ್ತೂರಿನ ಕಾಲೇಜೊಂದರ ವಿದ್ಯಾರ್ಥಿನಿ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಜತ್ತೂರು ಗಾಣದಮೂಲೆ ನಿವಾಸಿ ಗುರುನಂದನ್(19), ಪೆರ್ನೆ ನಿವಾಸಿ ಪ್ರಜ್ವಲ್ (19), ಪೆರ್ನೆ ಕಡಂಬು ನಿವಾಸಿ ಕಿಶನ್ (19), ಆರ್ಯಾಪು ಪಿಲಿಗುಂಡ ನಿವಾಸಿ ಸುನಿಲ್ (19) ಹಾಗೂ ಬರಿಮಾರು ಬಲ್ಯ ನಿವಾಸಿ ಪ್ರಖ್ಯಾತ್ (19) ಬಂಧಿತರು.
ಮಾರ್ಚ್ ತಿಂಗಳ ಕೊನೆಯ ವಾರದ ಒಂದು ದಿನ ಈ ಕೃತ್ಯ ನಡೆ ದಿದೆ. ಅಂದು ಸುನಿಲ್, ತನ್ನಲ್ಲಿ ಮಾತನಾಡಲಿಕ್ಕಿದೆ ಎಂದು ಕಾರಿನಲ್ಲಿ ಕುಳ್ಳಿರಿಸಿ, ಪ್ರಜ್ವಲ್ ಹಾಗೂ ಪ್ರಕೃತ್ರನ್ನು ಕೂಡಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ನಾಲ್ಕೈದು ಮಂದಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದರು.
ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದಾಗಿ ಬೆದರಿಸಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಈ ಮಧ್ಯೆ, ಈ ವಿಡಿಯೋದ ತುಣುಕೊಂದು ವಾಟ್ಸಾಪ್ ಮೂಲಕ ಹರಿದಾಡಲು ಆರಂಭಿಸಿದಾಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮಧ್ಯೆ, ಈ ಐವರು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ.