ಬಹರೇನ್ ನಿಂದ 250 ಭಾರತೀಯರ ರಿಲೀಸ್‌

ಫ‌ಲ ಕೊಟ್ಟ ಪ್ರಧಾನಿ ಮೋದಿ ಬಹರೈನ್‌ ಪ್ರವಾಸ

Team Udayavani, Aug 26, 2019, 6:05 AM IST

ಬಹರೈನ್‌: ಪ್ರಧಾನಿ ನರೇಂದ್ರ ಮೋದಿ ಬಹರೈನ್‌ ಪ್ರವಾಸ ಫ‌ಲ ನೀಡಿದೆ. ಆ ದೇಶದ ವಿವಿಧ ಕಾರಾಗೃಹಗಳಲ್ಲಿರುವ ಭಾರತೀಯ ಮೂಲದ 250 ಮಂದಿ ಕೈದಿಗಳನ್ನು ಅನುಕಂಪದ ಆಧಾರದಲ್ಲಿ ಬಿಡುಗಡೆ ಮಾಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

ಪ್ರಧಾನಿ ಮೋದಿ ಪ್ರವಾಸದ ವೇಳೆಯೇ ಸದ್ಭಾವನೆಯ ಸೂಚಕವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ನಿರ್ಧಾರ ಕೈಗೊಂಡ ಬಹರೈನ್‌ನ ರಾಜಮನೆತನಕ್ಕೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ. ಅಧಿಕೃತ ಮಾಹಿತಿಗಳ ಪ್ರಕಾರ ಸೌದಿ ಅರೇಬಿಯಾದಲ್ಲಿ 1,811, ಯುಎಇನಲ್ಲಿ 1,392 ಮಂದಿ ಭಾರತೀಯರು ಜೈಲಿನಲ್ಲಿ ಇದ್ದಾರೆ.

ಪ್ರಧಾನಿಗೆ ಪ್ರಶಸ್ತಿ: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ನಲ್ಲಿ ಮೋದಿಗೆ ಝಾಯೇದ್‌ ಗೌರವ ನೀಡಿದ ನಂತರದಲ್ಲಿ ಈಗ ಬಹರೈನ್‌ ಕೂಡ ‘ಕಿಂಗ್‌ ಹಮದ್‌ ಆರ್ಡರ್‌ ಆಫ್ ರಿನೈಯಸನ್ಸ್‌’ ಪುರಸ್ಕಾರವನ್ನು ನೀಡಿ ಗೌರವಿಸಿದೆ. ಇಲ್ಲಿನ ಈ ಅತ್ಯುನ್ನತ ನಾಗರಿಕ ಪುರಸ್ಕಾರವನ್ನು ರಾಜ ಹಮದ್‌ ಬಿನ್‌ ಇಸಾ ಬಿನ್‌ ಸಲ್ಮಾನ್‌ ಅಲ್ ಖಲೀಫಾ ಪ್ರದಾನ ಮಾಡಿದ್ದಾರೆ. ಗಲ್ಫ್ ದೇಶಗಳೊಂದಿಗೆ ಉತ್ತಮ ಸಂಬಂಧ ನಿರ್ಮಾಣಕ್ಕೆ ಶ್ರಮಿಸಿದ ಗಣ್ಯರಿಗೆ ಈ ಪುರಸ್ಕಾರ ನೀಡಲಾಗುತ್ತದೆ. ಇನ್ನೊಂದೆಡೆ, ಮೋದಿಗೆ ಪ್ರಶಸ್ತಿ ನೀಡಿದ್ದರಿಂದ ಕ್ರುದ್ಧಗೊಂಡಿರುವ ಪಾಕಿಸ್ತಾನದ ಸೆನೆಟ್ ಮುಖ್ಯಸ್ಥ ಸಾದಿಕ್‌ ಸಂಜ್ರಾನಿ, ಖಂಡಿಸಿ ತಮ್ಮ ಯುಎಇ ಪ್ರವಾಸವನ್ನು ರದ್ದು ಮಾಡಿದ್ದಾರೆ.

ದೇಗುಲ ಪುನರುಜ್ಜೀವನಕ್ಕೆ ಶಂಕುಸ್ಥಾಪನೆ: ಬಹ್ರೇನ್‌ನಲ್ಲಿರುವ 200 ವರ್ಷಗಳಷ್ಟು ಹಳೆಯ ಶ್ರೀಕೃಷ್ಣ ನ (ಶ್ರೀನಾಥಜಿ)ದೇಗುಲದ ಪುನರುಜ್ಜೀವನ ಕಾರ್ಯಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. 30 ಕೋಟಿ ರೂ. ಯೋಜನೆ ಇದಾಗಿದ್ದು, ಇಲ್ಲಿ ಬಹರೈನ್‌ನಲ್ಲಿರುವ ಭಾರತೀಯರ ವಿವಾಹ ಕಾರ್ಯಕ್ರಮಗಳಿಗೆ ಕಲ್ಯಾಣ ಮಂಟಪ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಒಟ್ಟು 4 ಮಹಡಿಗಳು ಇರಲಿದ್ದು, 16,500 ಚದರಡಿ ವಿಸ್ತೀರ್ಣದಲ್ಲಿ ಹೊಸ ಮಂದಿರ ನಿರ್ಮಾಣವಾಗಲಿದೆ. ಬಹರೈನ್‌ನಲ್ಲಿ ಒಟ್ಟು 3.50 ಲಕ್ಷ ಭಾರತೀಯರಿದ್ದು, ಇಲ್ಲಿನ ಜನಸಂಖ್ಯೆಯಲ್ಲಿ ಭಾರತೀಯರು ಮೂರನೇ ಸ್ಥಾನದಲ್ಲಿದ್ದಾರೆ.

ಜೇಟ್ಲಿ ನೆನೆದ ಪ್ರಧಾನಿ: ಮೂರು ದೇಶಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬಹರೈನ್‌ನಲ್ಲಿ ಮಾತನಾಡುತ್ತಾ, ಶನಿವಾರ ನಿಧನರಾದ ಮಾಜಿ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರನ್ನು ನೆನಪಿಸಿಕೊಂಡರು. ವಿದ್ಯಾರ್ಥಿ ಜೀವನದಿಂದ ರಾಜಕೀಯ ಜೀವನದವರೆಗೂ ಒಟ್ಟಿಗೆ ಸಾಗಿ ಬಂದ ಒಬ್ಬ ಆತ್ಮೀಯ ಮಿತ್ರನನ್ನು ಕಳೆದುಕೊಂಡೆ ಎಂದು ಮೋದಿ ಕಂಬನಿ ತುಂಬಿದ ಕಣ್ಣಲ್ಲೇ ಜೇಟ್ಲಿಯನ್ನು ಸ್ಮರಿಸಿದರು.

ಬಹರೈನ್‌ ನ್ಯಾಷನಲ್ ಸ್ಟೇಡಿಯಂನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ದುಃಖದಲ್ಲಿದ್ದರೂ ನಿಗದಿತ ಕರ್ತವ್ಯದಿಂದಾಗಿ ಅನಿವಾರ್ಯವಾಗಿ ನನ್ನ ಕೆಲಸ ಮುಂದುವರಿಸುತ್ತಿದ್ದೇನೆ ಎಂದು ಜೇಟ್ಲಿ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಸಾಧ್ಯವಾಗದೇ ಇರುವುದಕ್ಕೆ ಬೇಸರ ತೋಡಿಕೊಂಡರು.

ನನ್ನ ವಿದ್ಯಾರ್ಥಿ ಜೀವನದಿಂದಲೂ ನಾವು ಒಟ್ಟಿಗೆ ಹೆಜ್ಜೆ ಇಟ್ಟಿದ್ದೇವೆ. ನಮ್ಮ ಸಾಮಾಜಿಕ ಜೀವನ ಹಾಗೂ ರಾಜಕೀಯ ಜೀವನದಲ್ಲೂ ನಾವು ಒಟ್ಟಿಗೆ ನಡೆದಿದ್ದೇವೆ. ನಮ್ಮ ಕನಸನ್ನು ನನಸಾಗಿಸಿಕೊಳ್ಳಲು ಸವಾಲುಗಳನ್ನು ಒಟ್ಟಾಗಿ ಎದುರಿಸಿದ್ದೇವೆ. ಕೆಲವೇ ದಿನಗಳ ಹಿಂದೆ ನನ್ನ ಸ್ನೇಹಿತೆ ಸುಷ್ಮಾ ಸ್ವರಾಜ್‌ ನಿಧನರಾಗಿದ್ದರು. ಈಗ ಅರುಣ್‌ ಜೇಟ್ಲಿ ನಮ್ಮನ್ನು ಅಗಲಿದ್ದಾರೆ. ಈ ಬಹರೈನ್‌ನ ನೆಲದಲ್ಲಿ ನಿಂತು ನಾನು ಜೇಟ್ಲಿಗೆ ಶೃದ್ಧಾಂಜಲಿ ಸಲ್ಲಿಸುತ್ತಿದ್ದೇನೆ ಎಂದು ಮೋದಿ ಹೇಳಿದರು. ಇದೇ ವೇಳೆ ಬಹ್ರೇನ್‌ನಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ, ತಮ್ಮ ಸರ್ಕಾರ ಕೈಗೊಂಡ ಹಲವು ಕ್ರಮಗಳ ಬಗ್ಗೆ ಮಾತನಾಡಿದರು. ಬಹರೈನ್‌ಗೆ ಭಾರತೀಯ ಪ್ರಧಾನಿ ಆಗಮಿಸಲು ಇಷ್ಟು ವರ್ಷಗಳೇ ಬೇಕಾಯಿತು. ಇಲ್ಲಿ ಭಾರತೀಯರ ಪ್ರಾಮಾಣಿಕತೆ, ವಿಶ್ವಾಸಾರ್ಹತೆ ಮತ್ತು ಶ್ರಮದ ಬಗ್ಗೆ ಒಳ್ಳೆಯ ಹೆಸರಿದೆ. ಈ ಹೆಸರನ್ನು ನಾವು ಉಳಿಸಿಕೊಳ್ಳಬೇಕು. ಪ್ರತಿ ಭಾರತೀಯನೂ ತನ್ನ ಕನಸು ನನಸಾಗುತ್ತದೆ ಎಂಬ ವಿಶ್ವಾಸವನ್ನು ಹೊಂದಿದ್ದಾನೆ. ಇದು ನನಗೆ ಖುಷಿ ನೀಡುತ್ತದೆ, ಇದೇ ಖುಷಿಯಲ್ಲಿ ನಾನು ಅವರ ಕನಸು ನನಸು ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ