ಪ್ರಾಕೃತಿಕ ಸೌಂದರ್ಯದ ನಡುವೆ ಮೆರೆಯುತ್ತಿದೆ ವರಂಗ ಬಸದಿ

Team Udayavani, Sep 27, 2019, 5:31 AM IST

ಕೆರೆಯ ನಡುವೆಯೊಂದು ಬಸದಿಯ ನಿರ್ಮಾಣ ಮಾಡಿ ಆ ಬಸದಿಗೆ ಬರುವ ಭಕ್ತಾದಿಗಳಿಗೆ ಅರ್ಚಕರೇ ಅಂಬಿಗನಾಗಿ ಭಕ್ತರನ್ನು ಕರೆತಂದು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವಂತ ಪವಿತ್ರ ಸ್ಥಳವೇ ವರಂಗ ಕೆರೆ ಬಸದಿ.

ಸುತ್ತಲೂ ಪಶ್ಚಿಮಘಟ್ಟಗಳ ಸಾಲು ಸಾಲು, ತಳದಲ್ಲಿ ವಿಶಾಲ ಕೆರೆ ಆ ಕೆರೆಯ ನಡುವೆ ವಿರಾಜಮಾನಳಾಗಿ ನೆಲೆ ನಿಂತ ದೇವಿ ಪದ್ಮಾವತಿ ಅಮ್ಮನವರ ಬಸದಿ, ಪ್ರಕೃತಿಯ ಸೌಂದರ್ಯವನ್ನೇ ಮುಡಿಗೇರಿಸಿಕೊಂಡಂತೆ ಬಾಸವಾಗುತ್ತದೆ. ಅಂದ ಹಾಗೆ ಈ ಬಸದಿಯು ಸುಮಾರು ಹದಿನೈದು ಎಕರೆ ವಿಶಾಲವಾದ ಪ್ರದೇಶದಲ್ಲಿ ಮೈತಳೆದು ನಿಂತಿದೆ.

ಕ್ಷೇತ್ರದ ಇತಿಹಾಸ :
ಅತಿಶಯ ಕ್ಷೇತ್ರವಾಗಿರುವ ವರಂಗ ಸುಮಾರುಸಾವಿರ ವರುಷಗಳ ಇತಿಹಾಸವನ್ನು ಹೊಂದಿದೆ, ಹನ್ನೆರಡನೇ ಶತಮಾನದಲ್ಲಿ ಈ ಬಸದಿಯನ್ನು ನಿರ್ಮಿಸಲಾಗಿದ್ದು ಜೊತೆಗೆ ಇಲ್ಲಿರುವಂತಹ ಮೂರ್ತಿಗಳನ್ನು ಈ ಕಾಲದÇÉೇ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ. ಇಲ್ಲಿನ ಕೆರೆಯನ್ನು ಅಂದಿನ ಆಳುಪ ಮನೆತನದ ರಾಣಿಯಾದ ಜಾಕಾಲೀದೇವಿ ನಿರ್ಮಿಸಿದ್ದಳೆಂದು ಇತಿಹಾಸ ತಿಳಿ ಹೇಳುತ್ತದೆ.

ಒಂದು ರೀತಿಯಲ್ಲಿ ಹೇಳುವುದಾದರೆ ವರಂಗ ಎಂಬ ರಾಜನು ಇಲ್ಲಿಯ ಪ್ರದೇಶವನ್ನು ಅಳುತಿದ್ದ ಎಂಬ ಪ್ರತೀತಿ ಇದ್ದು ಮುಂದೆ ಇದು ರಾಜನ ಹೆಸರಿನಿಂದ ಪ್ರಚಲಿತವಾಯಿತು ಎಂದು ಹೇಳಲಾಗುತ್ತಿದ್ದರೆ, ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಇಲ್ಲಿ ಇರುವ ನೇಮಿನಾಥಮೂರ್ತಿಯು ಸ್ವಲ್ಪ ವಾಲಿಕೊಂಡಿದ್ದು ಹಾಗಾಗಿ ವಾರೆಅಂಗ ಹೊಂದಿದ ಮೂರ್ತಿ ಎಂದು ಕರೆಯುತಿದ್ದರು ಮುಂದೆ ಇದು ವರಂಗ ಎಂದು ಪ್ರಸಿದ್ದಿ ಪಡೆಯಿತು ಎಂಬ ಪ್ರತೀತಿಯೂ ಇದೆ.

ಚತುರ್ಮುಖ ಗರ್ಭಗುಡಿ :
ಈ ಬಸದಿಯ ವಿಶೇಷತೆಗಳಲ್ಲಿ ಮುಖ್ಯವಾದುದು ಚತುರ್ಮುಖ ಗರ್ಭಗುಡಿ ಬಸದಿಯ ನಾಲ್ಕು ಸುತ್ತಲೂ ದ್ವಾರಗಳಿದ್ದು ಪ್ರತಿಯೊಂದು ದಿಕ್ಕಿಗೂ ಒಂದೇ ಅಳತೆಯ ಮುಖಮಂಟಪ ಹೊಂದಿದೆ. ಅದೇ ರೀತಿ ಬಸದಿಯ ಹೊರಭಾಗದಲ್ಲಿ ಜೈನತೀರ್ಥಂಕರರಾದ ಅನಂತನಾಥ, ಶಾಂತಿನಾಥ, ಪಾರ್ಶ್ವನಾಥ, ನೇಮಿನಾಥ ವಿಗ್ರಹಗಳ ಕೆತ್ತನೆಗಳನ್ನು ಮಾಡಲಾಗಿದೆ.

ಇಲ್ಲಿ ಹೊಯ್ಸಳ ಮತ್ತು ಚಾಲುಕ್ಯ ಶೈಲಿಗಳ ಸಮ್ಮಿಶ್ರಣವಿದ್ದು ಈ ವಿಗ್ರಹಗಳ ಎರಡೂ ಬದಿಗಳಲ್ಲಿ ಆಯಾ ತೀರ್ಥಂಕರರ ಯಕ್ಷ ಯಕ್ಷಿಯರ ಬಿಂಬಗಳಿವೆ. ದೇವಿ ಪದ್ಮಾವತಿಯು ಇಲ್ಲಿನ ಪ್ರಧಾನ ಶಕ್ತಿಯಾಗಿ ನೆಲೆ ನಿಂತಿ¨ªಾಳೆ. ಬಸದಿಯನ್ನು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲಾಗಿದೆ.

ಭಕ್ತರಿಗೆ ಅರ್ಚಕರೇ ಅಂಬಿಗರದಾಗ :
ಈ ಬಸದಿಗೆ ಬರಲು ದೋಣಿಯೊಂದೇ ಮಾರ್ಗ, ವಿಶಾಲವಾದ ಕಮಲದ ಕೆರೆಯ ಮಧ್ಯಭಾಗದಲ್ಲಿ ನೆಲೆ ನಿಂತಿರುವ ದೇವಿ ಪದ್ಮಾವತಿಯ ದರ್ಶನ ಪಡೆಯಲು ಬರುವ ಭಕ್ತರನ್ನು ಕರೆತರುವುದು ಬಸದಿಯ ಅರ್ಚಕರೇ, ಇಲ್ಲಿ ನಿತ್ಯ ಮೂರು ಹೊತ್ತು ಪೂಜೆ ನಡೆಯುತ್ತದೆ. ಇಲ್ಲಿಗೆ ಬಂದ ಭಕ್ತರನ್ನು ಬಸದಿಯ ಅರ್ಚಕರೇ ದೋಣಿಯ ಮೂಲಕ ಕರೆ ತಂದು ದೇವರಿಗೆ ಪೂಜೆ ಸಲ್ಲಿಸಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿ ದಡ ಸೇರಿಸುವುದು ಇಲ್ಲಿನ ಅರ್ಚಕರೇ.

ಇಷ್ಟಾರ್ಥ ಸಿದ್ದಿಯಾದ ವರಂಗ ಕ್ಷೇತ್ರ :
ಈ ಕ್ಷೇತ್ರವು ಹಲವು ವೈಶಿಷ್ಯಗಳನ್ನು ಹೊಂದಿದೆ ಎಂಬುದು ಪ್ರತೀತಿ ಅದಕ್ಕೆ ಇಂಬು ಕೊಡುವಂತಿದೆ ಇಲ್ಲಿಗೆ ಬರುವಂತ ಭಕ್ತರ ದಂಡು. ಅರ್ಚಕರೇ ಹೇಳುವಂತೆ ಇಲ್ಲಿಗೆ ಭೇಟಿ ಕೊಡುವ ಭಕ್ತರಲ್ಲಿ ಅನ್ಯಧರ್ಮಿಯರೇ ಹೆಚ್ಚು ಬಂದಂತಹ ಭಕ್ತರ ಇಷ್ಟಾರ್ಥಗಳನ್ನು ದೇವಿ ಈಡೇರಿಸುತ್ತಾಳೆ. ಹಾಗಾಗಿ ಇಲ್ಲಿ ಮದುವೆಗಾಗಿ ದೇವರ ಪ್ರಸಾದ ಕೇಳುವುದು ಹಾಗೆಯೆ ಮದುವೆಯಾದ ನವದಂಪತಿಗಳು ಮೊದಲ ಪೂಜೆ ಸಲ್ಲಿಸಲು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.

ಅದೇ ರೀತಿ ಚರ್ಮರೋಗ ನಿವಾರಣೆಗಾಗಿ ಹರಕೆ ಹೇಳುವುದು ಹಿಂದಿನಿಂದಲೂ ನಡೆದುಬಂದಿದೆ, ಸಮಸ್ಯೆ ಪರಿಹಾರವಾದರೆ ದೇವಿಗೆ ಹುರುಳಿ ಹಾಗೂ ಬೆಳ್ತಿಗೆ ಅಕ್ಕಿ ಸಮರ್ಪಿಸುವುದು ಇಲ್ಲಿನ ವಾಡಿಕೆ. ಮತ್ತೂಂದು ವಿಶೇಷತೆಯೇನೆಂದರೆ ಭಕ್ತರು ಸಮರ್ಪಿಸಿದ ಹರಕೆಯ ಅಕ್ಕಿ, ಹುರುಳಿಯನ್ನು ಕೆರೆಯಲ್ಲಿರುವ ಮೀನು, ಆಮೆಗಳಿಗೆ ಆಹಾರವಾಗಿ ನೀಡಲಾಗುತ್ತದೆ.

ಇನ್ನೊಂದು ಹೆಮ್ಮೆಯ ವಿಚಾರ ಏನೆಂದರೆ ಶ್ರವಣಬೆಳಗೊಳದಲ್ಲಿ ಮಠಾಧೀಶರಾಗಿರುವ ಚಾರುಕೀರ್ತಿ ಭಟ್ಟಾರಕಶ್ರೀಗಳು ಮೂಲತಃ ವರಂಗದವರಾಗಿರುವುದು ಅದೇ ರೀತಿ ಇಲ್ಲಿನ ಆಡಳಿತವನ್ನು ಹೊಸನಗರದ ಹುಂಬುಜ ಬಸದಿಯ ಮಠಾಧೀಶರು ಮುನ್ನಡೆಸುತ್ತಿರುವುದು ವಿಶೇಷ.

ವರ್ಷದ ಎÇÉಾ ದಿನಗಳಲ್ಲಿಯೂ ಈ ಕೆರೆಯಲ್ಲಿ ನೀರು ತುಂಬಿದ್ದು ಬಸದಿಯ ಸೌಂದರ್ಯವನ್ನುಇಮ್ಮಡಿಗೊಳಿಸುತ್ತದೆ. ಇಲ್ಲಿನ ಊರಿನ ಜನರ, ಭಕ್ತರ ಸಹಕಾರದಿಂದ ಬಸದಿಯ ಸೌಂದರ್ಯ ಇನ್ನು ಹಾಗೆ ಉಳಿದಿದ್ದು ದಿನದಿಂದ ದಿನಕ್ಕೆ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಭೇಟಿ ನೀಡುತ್ತಿ¨ªಾರೆ ಎಂಬುದು ಸಂತಸದ ವಿಷಯ, ಇನ್ನು ಮುಂದೆಯೂ ಪ್ರಕೃತಿಯ ಜೊತೆ ಬಸದಿಯ ಸೌಂದರ್ಯ ಭದ್ರವಾಗಿರಲಿ ಎಂದುಹಾರೈಸೋಣ…

ದಾರಿಹೇಗೆ :
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಈ ಪ್ರದೇಶ ಕಾಣಸಿಗುತ್ತದೆ, ಹೆಬ್ರಿಯಿಂದ ಕಾರ್ಕಳ ಮಾರ್ಗದಲ್ಲಿ 5ಕಿಮೀ ಸಾಗುವಾಗ ವರಂಗಕ್ಷೇತ್ರ ಎದುರುಗೊಳ್ಳುತ್ತದೆ.

ಕಾರ್ಕಳದಿಂದ ಹೆಬ್ರಿ ಮಾರ್ಗವಾಗಿ ಸುಮಾರು 25ಕಿಮೀ ಹಾಗೆಯೇ ಉಡುಪಿಯಿಂದ ಸುಮಾರು 37ಕಿಮೀ ,ಮಂಗಳೂರು ಮಾರ್ಗವಾಗಿ ಬರುವವರಿಗೆ 85ಕಿಮೀ ಕ್ರಮಿಸಬೇಕಾಗುತ್ತದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ