ಕಥೆಗೂ ಶೀರ್ಷಿಕೆಗೂ ಸಂಬಂಧ ಹುಡುಕಬೇಡಿ

ಅರ್ಥವಿಲ್ಲದ ಟೈಟಲ್‌ಗೆ ಮುಹೂರ್ತ ಸಂಭ್ರಮ

Team Udayavani, May 3, 2019, 6:00 AM IST

ಸಾಮಾನ್ಯವಾಗಿ ಒಂದು ಚಿತ್ರಕ್ಕೆ ಶೀರ್ಷಿಕೆಯನ್ನು ಇಡಬೇಕಾದರೆ, ಚಿತ್ರತಂಡ ಸಾಕಷ್ಟು ಅಳೆದು ಅದಕ್ಕೊಪ್ಪುವ ಹೆಸರನ್ನು ಇಡುತ್ತದೆ. ಕೆಲವರು ಚಿತ್ರಕ್ಕೆ ಮೊದಲೇ ಶೀರ್ಷಿಕೆಯನ್ನಿಟ್ಟು ನಂತರ ಅದರ ಮೇಲೆ ಕಥೆ ಮಾಡಿ, ಅದನ್ನು ಸಿನಿಮಾ ಮಾಡಿದ ನಿದರ್ಶನಗಳೂ ಚಿತ್ರರಂಗದಲ್ಲಿ ಸಾಕಷ್ಟಿದೆ.

ಇನ್ನು ಕೆಲವರು ಬೇಕೆಂದೆ ಒಂದಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡು, ಪ್ರಚಾರ ಗಿಟ್ಟಿಸಿಕೊಳ್ಳಲು ತಮ್ಮ ಚಿತ್ರಕ್ಕೆ ಚಿತ್ರ-ವಿಚಿತ್ರ ಟೈಟಲ್‌ಗ‌ಳನ್ನು ಇಡುವುದನ್ನೂ ಚಿತ್ರರಂಗದಲ್ಲಿ ಆಗಾಗ್ಗೆ ಕಾಣುತ್ತೇವೆ. ಆದರೆ ಇಲ್ಲೊಂದು ಚಿತ್ರತಂಡ ಆಡಿಯನ್ಸ್‌ಗೆ ಕ್ಯಾಚಿಯಾಗಿದೆ ಅನ್ನೋ ಏಕೈಕ ಕಾರಣಕ್ಕೆ ತಮ್ಮ ಚಿತ್ರಕ್ಕೆ ವಿಚಿತ್ರ ಹೆಸರನ್ನಿಟ್ಟಿದೆ. ಅಂದಹಾಗೆ, ಆ ಚಿತ್ರದ ಹೆಸರು “ಕಾರ್ಕಿ’.

ಏನಿದು “ಕಾರ್ಕಿ’? ಎಂದರೆ “ಆ ಟೈಟಲ್‌ಗೆ ಅರ್ಥವೇ ಇಲ್ಲ’ ಅಂತಾರೆ ಚಿತ್ರದ ನಿರ್ದೇಶಕರು! “ಇತ್ತೀಚೆಗೆ ವಿಭಿನ್ನ ಟೈಟಲ್‌ಗ‌ಳ ಚಿತ್ರಗಳು ಬರುತ್ತಿರುವುದರಿಂದ, ಆಡಿಯನ್ಸ್‌ಗೆ ಕ್ಯಾಚಿಯಾಗಿ ಕಾಣುತ್ತದೆ. ಟೈಟಲ್‌ ಬೇಗ ಜನರನ್ನ ರೀಚ್‌ ಆಗುತ್ತದೆ ಅನ್ನೋ ಕಾರಣಕ್ಕೆ, ಇಂಥದ್ದೊಂದು ಡಿಫ‌ರೆಂಟ್‌ ಟೈಟಲ್‌ ಇಟ್ಟುಕೊಂಡಿದ್ದೇವೆ’ ಎನ್ನುವುದು ನಿರ್ದೇಶಕ ಲೋಕೇಶ್‌ ಪ್ರಭು ಮಾತು.

ಇತ್ತೀಚೆಗೆ “ಕಾರ್ಕಿ’ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಇದೇ ವೇಳೆ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿಯನ್ನೂ ಕರೆದಿತ್ತು. ಆದರೆ ಚಿತ್ರದ ಬಗ್ಗೆ ಏನಾದರೂ ಹೇಳಬಹುದು ಗಂಟೆಗಟ್ಟಲೆ ಎಲ್ಲರೂ ಕಾದು ಕುಳಿತಿದ್ದರೂ, ಚಿತ್ರದ ನಿರ್ಮಾಪಕರು, ನಿರ್ದೇಶಕರು ಅದ್ಯಾವುದರ ಪರಿವೇ ಇಲ್ಲದಂತೆ ಓಡಾಡಿಕೊಂಡಿದ್ದರು. ಕೊನೆಗೆ ಪತ್ರಿಕಾಗೋಷ್ಠಿಯಲ್ಲಿ ಕಾದು ಕಾದು ಸುಸ್ತಾದ ಪತ್ರಕರ್ತರೇ ನಿರ್ದೇಶಕರು – ನಿರ್ಮಾಪಕರನ್ನು ಕರೆದು ಮಾತನಾಡಿಸಿದರೂ, ಅವರಿಗೆ ಕಾದಿದ್ದು ಮಾತ್ರ ನಿರಾಸೆ.

“ಕಾರ್ಕಿ’ ಚಿತ್ರದ ಒನ್‌ಲೈನ್‌ ಕಥೆ ಏನು? ಚಿತ್ರದಲ್ಲಿ ಏನು ಹೇಳಲು ಹೊರಟಿದ್ದೀರಿ? ಇದು ಯಾವ ಜಾನರ್‌ನ ಸಿನಿಮಾ..? ಹೀಗೆ ಹತ್ತಾರು ಪ್ರಶ್ನೆಗಳು ತೂರಿಬಂದರೂ, ಚಿತ್ರತಂಡ ಮಾತ್ರ “ಅವರನ್‌ ಬಿಟ್‌ ಇವರ್ಯಾರು’ ಎಂಬ “ಕಣ್ಣಾಮುಚ್ಚೆ’ ಆಟದಂತೆ ಒಬ್ಬರ ಮುಖವನ್ನು ಒಬ್ಬರು ನೋಡುತ್ತಾ ಹಲ್ಲು ಕಿರಿಯುತ್ತ “ಊಹ್ನೂ..’ ಎಂದು ತಲೆಯಾಡಿಸುತ್ತ ನಿಂತು ಬಿಟ್ಟಿತು.

ಕೊನೆಗೂ ಪಟ್ಟುಬಿಡದೆ ಒಂದಷ್ಟು ಕೆದಕಿದ ಪತ್ರಕರ್ತರಿಗೆ ಇದೊಂದು ಸೈಕಲಾಜಿಕಲ್‌ ಸಸ್ಪೆನ್ಸ್‌ – ಥ್ರಿಲ್ಲರ್‌ ಚಿತ್ರ. ನಗರ ಪ್ರದೇಶದ ಹುಡುಗರ ಒಂದು ದಿನದ ಕಥೆ. ಚಿತ್ರದಲ್ಲಿದ್ದು, ಈ ಜನರೇಷನ್‌ ಯೋಚನೆ ಹೇಗಿದೆ ಅನ್ನೊದು ಚಿತ್ರ. ಚಿತ್ರದಲ್ಲಿ ಪ್ರತಿ ಪಾತ್ರಕ್ಕೂ 2 ಗೆಟಪ್‌ಗ್ಳಿವೆ. ಬೆಂಗಳೂರು, ದಾಂಡೇಲಿ, ಯಲ್ಲಾಪುರ, ರಾಮೇಶ್ವರಂ ಸುತ್ತಮುತ್ತ ಸುಮಾರು 30 ದಿನ ಚಿತ್ರದ ಶೂಟಿಂಗ್‌ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿತು.

ಇನ್ನು “ವರ್ಲ್ಡ್ ಕ್ಲಾಸ್‌ ಪಿಕ್ಚರ್’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ಕಾರ್ಕಿ’ ಚಿತ್ರವನ್ನು ಆರ್‌.ಎಸ್‌ ಕುಮಾರ್‌, ಸಂಪತ್‌ ಕುಮಾರ್‌, ಕೃಷ್ಣ ಕುಮಾರ್‌, ಅಕ್ಷಯ್‌ ರಾವ್‌ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ರೋಜರ್‌ ನಾರಾಯಣ್‌, ಐಶ್ವರ್ಯಾ, ಪಾವನಾ, ರಿಯಾನ್ಷಿ, ಚಿತ್ರದ ಹಾಡುಗಳಿಗೆ ಯದುನಂದನ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಜಿತಿನ್‌ ದಾಸ್‌ ಛಾಯಾಗ್ರಹಣ, ಮಾಸ್‌ ಮಾದ ಸಾಹಸ, ಪುರುಷೋತ್ತಮ್‌ ಕಲಾ ನಿರ್ದೇಶನವಿದೆ. ಚಿತ್ರಕ್ಕೆ ಲೋಕೇಶ್‌ ಪ್ರಭು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

“ಕಾರ್ಕಿ’ ಚಿತ್ರದ ಮುಹೂರ್ತ ಸಮಾರಂಭದಲ್ಲಿ ನಟ ನೆನಪಿರಲಿ ಪ್ರೇಮ್‌, ಧನಂಜಯ್‌, ನಿರ್ದೇಶಕ ವಿಜಯ ಪ್ರಸಾದ್‌ ಮೊದಲಾದವರು ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು. ಒಟ್ಟಾರೆ ಯಾವುದೇ ಪೂರ್ವತಯಾರಿ ಇಲ್ಲದೆ ಅವ್ಯವಸ್ಥಿತವಾಗಿ ಶುರುವಾಗಿರುವ “ಕಾರ್ಕಿ’ ಅದೆಷ್ಟರ ಮಟ್ಟಿಗೆ ಪ್ರೇಕ್ಷಕರ ಗಮನ ಸೆಳೆಯುತ್ತದೆಯೋ ದೇವರೇ ಬಲ್ಲ..!


ಈ ವಿಭಾಗದಿಂದ ಇನ್ನಷ್ಟು

  • ಅಂತೂ ಇಂತೂ ಇನ್ನು ಎರಡು ವಾರ ಕಳೆದರೆ 2019 ಪೂರ್ಣಗೊಳ್ಳಲಿದೆ. ಚಿತ್ರರಂಗ ಕೂಡ ಎಂದಿಗಿಂತ ಗರಿಗೆದರಿ ನಿಂತಿದೆ. ಈ ವರ್ಷ ಇಟ್ಟುಕೊಂಡ ಕೆಲವು ನಿರೀಕ್ಷೆ ಸುಳ್ಳಾದರೆ,...

  • "ನಾನು ಇಲ್ಲಿಯವರೆಗೆ ಹೀರೋ ಆಗಿ ಅನೇಕ ಸಿನಿಮಾಗಳಲ್ಲಿ ಆ್ಯಕ್ಟಿಂಗ್‌ ಮಾಡಿದ್ದೀನಿ. ಆದ್ರೆ, ಇಲ್ಲಿಯವರೆಗೂ ಯಾವ ಸಿನಿಮಾಗಳಲ್ಲೂ, ರಿಲೀಸ್‌ ಆದ ನಂತರ ಸಿನಿಮಾ ಸಕ್ಸಸ್‌...

  • ಕೆಂಪಾಗಿ ಕಂಗೊಳಿಸುತ್ತಿದ್ದ ಸೂರ್ಯ. ಜೋರಾಗಿ ಬೀಸುತ್ತಿದ್ದ ಗಾಳಿ. ಜೊತೆಗೆ ಒಂದಷ್ಟು ಚಳಿ. ಆಗಾಗ ಇಣುಕಿ ಮರೆಯಾಗುತ್ತಿದ್ದ ಬಿಸಿಲು, ಸುತ್ತಲ ಹಸಿರು .... ರಸ್ತೆ...

  • ಇತ್ತೀಚೆಗಷ್ಟೇ ದಿನೇಶ್‌ ಬಾಬು ನಿರ್ದೇಶನದ "ಹಗಲು ಕನಸು' ಬಿಡುಗಡೆಯಾಗಿದೆ. ಅದರ ಬೆನ್ನಲ್ಲೇ ತಮ್ಮ ನಿರ್ದೇಶನದ ಇನ್ನೊಂದು ಸಿನಿಮಾ ಮಾಡಿ ಪ್ರೇಕ್ಷಕರ ಮುಂದೆ ತರಲು...

  • ಸಾಮಾನ್ಯವಾಗಿ ನಮ್ಮಲ್ಲಿ ರಾಜಕಾರಣಿಯ ಮಕ್ಕಳು ರಾಜಕಾರಣಿ, ಕಲಾವಿದರ ಮಕ್ಕಳು ಕಲಾವಿದರು, ಉದ್ಯಮಿಗಳ ಮಕ್ಕಳು ಉದ್ಯಮಿಗಳಾಗುತ್ತಾರೆ. ತಂದೆಯ ಹೆಸರಿನಲ್ಲಿ, ತಮ್ಮ...

ಹೊಸ ಸೇರ್ಪಡೆ