ಲೋಫ‌ರ್ ಕಹಾನಿ : ಸೋಂಬೇರಿಗಳ ಐಷಾರಾಮಿ ಕನಸು

Team Udayavani, May 3, 2019, 6:20 AM IST

ಯಾರಿಗಾದ್ರೂ ಲೋಫ‌ರ್ ಅಂಥ ಕರೆಯುತ್ತಿದ್ದರೆ ನಿಮ್ಮ ರಿಯಾಕ್ಷನ್ಸ್‌ ಹೇಗಿರಬಹುದು? ಒಂದೊ ನಿಮ್ಮ ಕಣ್ಣು ಕೆಂಪಗಾಗಿ, ಪಿತ್ತ ನೆತ್ತಿಗೇರಬಹುದು ಅಥವಾ ಎಂಥ ಕೆಟ್ಟ ಬೈಗುಳವಾಡುತ್ತಿದ್ದಾರೆ ಎಂದು ಮೂಗು ಮುರಿಯಬಹುದು. ಇನ್ನೂ ಅದರ ಒಳಾರ್ಥ ಬಲ್ಲವರು ಪ್ರತಿಕ್ರಿಯೆ ಕೊಡಬಹುದು, ಅಥವಾ ಕೊಡದೆಯೂ ಇರಬಹುದು. ಆದರೆ ನಟ ಕಂ ನಿರ್ದೇಶಕ ಮೋಹನ್‌ ಮಾತ್ರ ಲೋಫ‌ರ್ ಅನ್ನೋ ಪದವನ್ನು ಸದ್ಯ ಖುಷಿ ಖುಷಿಯಾಗಿ ಆಡಿಯನ್ಸ್‌ ಮುಂದೆ ಹೇಳಲು ಹೊರಟಿದ್ದಾರೆ.

ಅಂದಹಾಗೆ ಮೋಹನ್‌ ಬಾಯಲ್ಲಿ ಲೋಫ‌ರ್ ಅನ್ನೋ ಪದ ಗುನುಗಲು ಕಾರಣ ಅವರ “ಲೋಫ‌ರ್ ‘ಚಿತ್ರ. ನಿಮಗೆ ನೆನಪಿರಬಹುದು ಆರಂಭದಲ್ಲಿ ಮೋಹನ್‌ ತಮ್ಮ ಚಿತ್ರಕ್ಕೆ “ಲೋಫ‌ರ್’ ಅನ್ನೋ ಟೈಟಲ್‌ ಇಟ್ಟಾಗ ಫಿಲಂ ಚೇಂಬರ್‌ ಈ ಟೈಟಲ್‌ ನೀಡಲು ನಿರಾಕರಿಸಿತ್ತು. ಆದರೆ ಅಂತಿಮವಾಗಿ ಪಟ್ಟು ಬಿಡದ ಮೋಹನ್‌ ಆ್ಯಂಡ್‌ ಟೀಮ್‌ ತಮ್ಮ ಚಿತ್ರಕ್ಕೆ ಲೋಫ‌ರ್ ಅನ್ನೋ ಟೈಟಲ್‌ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿತ್ತು. ಸುಮಾರು ಒಂದು ವರ್ಷದ ಹಿಂದೆ ಶುರುವಾದ ಈ ಚಿತ್ರದ ಕೆಲಸಗಳು ಅಂದುಕೊಂಡಂತೆ ಸರಿಯಾದ ಸಮಯಕ್ಕೆ ಮುಗಿದು, ಲೋಫ‌ರ್ ಚಿತ್ರ ಇಂದು (ಮಾ. 3) ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಚಿತ್ರದ ಬಿಡುಗಡೆಗೂ ಮುನ್ನ ಮಾತಿಗೆ ಕುಳಿತ ನಿರ್ದೇಶಕ ಮೋಹನ್‌ ಮತ್ತು ನಿರ್ಮಾಪಕ ಬಿ.ಎನ್‌ ಗಂಗಾಧರ್‌ ಲೋಫ‌ರ್ ಹಿಂದಿನ ಕೆಲವು ವಿಶೇಷತೆಗಳನ್ನು ತೆರೆದಿಟ್ಟಿರು.

ಆರಂಭದಲ್ಲಿ ಮೋಹನ್‌ ಮತ್ತು ಬಿ.ಕೆ ಗಂಗಾಧರ್‌ ತಮ್ಮ ಚಿತ್ರಕ್ಕೆ “ಲೋಫ‌ರ್’ ಅಂಥ ಹೆಸರಿಟ್ಟಾಗ ಅನೇಕರು, ಚಿತ್ರಕ್ಕೆ ಇಂಥ ಟೈಟಲ್ಲಾ? ಅಂಥ ಹುಬ್ಬೇರಿಸಿದ್ದು ಉಂಟಂತೆ. ಆದರೆ ಈ ಬಗ್ಗೆ ಮಾತನಾಡುವ ಮೋಹನ್‌, ಲೋಫ‌ರ್ ಅಂದ ತಕ್ಷಣ ಅದೊಂದು ಕೆಟ್ಟ ಪದ ಅಥವಾ ಬೈಗುಳ ಎಂದು ಹಲವರು ಭಾವಿಸುವುದುಂಟು. ಆದರೆ, ಲೋಫ‌ರ್ ಎಂಬ ಪದಕ್ಕೆ ಅಲೆಮಾರಿ ಎನ್ನುವುದು ನಿಜವಾದ ಅರ್ಥ. ಅದನ್ನ ನಾವುಗಳು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದೇವೆ ಅಷ್ಟೇ.

ನಾಲ್ವರು ಹುಡುಗರು ಮತ್ತು ಮೂವರು ಹುಡುಗಿಯರ ಅಲೆಮಾರಿ ಜೀವನದ ಚಿತ್ರಣ ಈ ಚಿತ್ರದಲ್ಲಿದೆ. ಚಿತ್ರದ ಕಥೆ ಮತ್ತು ಪಾತ್ರಗಳಿಗೆ ಹೊಂದಾಣಿಕೆ ಆಗುತ್ತದೆ ಎನ್ನುವ ಕಾರಣಕ್ಕೆ ಚಿತ್ರಕ್ಕೆ ಲೋಫ‌ರ್ ಎಂದು ಹೆಸರಿಟ್ಟಿದ್ದೇವೆ. ಈಗಾಗಲೇ ಹಿಂದಿ, ತೆಲುಗು ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ಲೋಫ‌ರ್ ಎನ್ನುವ ಹೆಸರಿನಲ್ಲಿ ಹಲವು ಚಿತ್ರಗಳು ಬಂದು ಸೂಪರ್‌ ಹಿಟ್‌ ಆದ ಉದಾಹರಣೆ ಸಾಕಷ್ಟಿದೆ. ನಾವು ಕೂಡ ಅಂಥದ್ದೇ ಒಂದು ಒಳ್ಳೆಯ ಕಥೆ, ಸಂದೇಶವನ್ನು ಇಟ್ಟುಕೊಂಡು ಈ ಚಿತ್ರವನ್ನು ಮಾಡಿದ್ದೇವೆ. ಹಾಗಾಗಿ ಲೋಫ‌ರ್ ಅನ್ನೋದಕ್ಕೆ ಬೇರೆ ವ್ಯಾಖ್ಯಾನ ಇಲ್ಲ ಎನ್ನುತ್ತಾರೆ.

ಜೀವನವನ್ನು ಬೈಯುತ್ತಾ, ಅದೃಷ್ಟವನ್ನು ಜರಿಯುತ್ತ ಶ್ರಮಪಡದೆ ಶ್ರೀಮಂತರಾಗಬೇಕು ಅನ್ನೋ ಮನಸ್ಥಿತಿಯ ಹುಡುಗರ ಬದುಕು ಈ ಚಿತ್ರದಲ್ಲಿದೆ. ಜೀವನದಲ್ಲಿ ಸಂತೋಷ ಅನ್ನೋದನ್ನ ನಾವು ನಡೆಯುವ ದಾರಿಯಲ್ಲಿ ಕಂಡುಕೊಳ್ಳಬೇಕು, ಅದು ಹುಡುಕಿಕೊಂಡು ಹೋದರೆ ಸಿಗುವುದಿಲ್ಲ. ಕ್ಷಣಿಕ ಸುಖ-ಸಂತೋಷಕ್ಕಾಗಿ ಅಡ್ಡದಾರಿ ಹಿಡಿದರೆ, ಭವಿಷ್ಯದಲ್ಲಿ ಅದರ ಪರಿಣಾಮಗಳು ಏನಾಗಬಹುದು ಅನ್ನೋದನ್ನ ಚಿತ್ರದಲ್ಲಿ ಹೇಳಿದ್ದೇವೆ.

ನಮ್ಮ ಸುತ್ತಮುತ್ತ ನಾನು ನೋಡಿದ ಕೆಲವು ಸಂಗತಿಗಳನ್ನು ಆಧರಿಸಿ ಈ ಚಿತ್ರದ ಸ್ಕ್ರಿಪ್ಟ್ ಮಾಡಿದ್ದೇನೆ. ಹಾಗಂತ ಚಿತ್ರದಲ್ಲಿ ಭೋದನೆ ಇಲ್ಲ. ಇಲ್ಲಿ ಕಾಮಿಡಿ, ಸೆಂಟಿಮೆಂಟ್‌, ಎಮೋಷನ್ಸ್‌, ಮೆಸೇಜ್‌ ಹೀಗೆ ಚಿತ್ರವೊಂದರಲ್ಲಿ ಏನೇನು ಇರಬೇಕೋ ಅದೆಲ್ಲವೂ ಇದೆ. ಒಂದೇ ಮಾತಿನಲ್ಲಿ ಹೇಳ್ಳೋದಾದ್ರೆ, ಲೋಫ‌ರ್ ಎರಡು ಗಂಟೆ ಆಡಿಯನ್ಸ್‌ಗೆ ಕಂಪ್ಲೀಟ್‌ ಮನರಂಜನೆ ನೀಡುವಂಥ ಪೈಸಾ ವಸೂಲ್‌ ಚಿತ್ರ ಅನ್ನೋದು ಮೋಹನ್‌ ಮಾತು.

ಇನ್ನು ಹಿರಿಯ ನಿರ್ಮಾಪಕ ಬಿ.ಎನ್‌ ಗಂಗಾಧರ್‌ ತಮ್ಮ ಎ.ಎನ್‌.ಎಸ್‌. ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಲೋಫ‌ರ್ ಚಿತ್ರವನ್ನು ನಿರ್ಮಿಸಿದ್ದಾರೆ. ಲೋಫ‌ರ್ ತಮ್ಮ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ 26ನೇ ಚಿತ್ರವಾಗಿದ್ದು, ಚಿತ್ರದ ಬಗ್ಗೆ ಬಿ.ಎನ್‌ ಗಂಗಾಧರ್‌ ಸಾಕಷ್ಟು ಭರವಸೆಯ ಮಾತುಗಳನ್ನಾಡುತ್ತಾರೆ. ಚಿತ್ರ ನಾವಂದುಕೊಂಡಂತೆ ಚೆನ್ನಾಗಿ ಬಂದಿದೆ. ಇಂದಿನ ಜನರೇಷನ್‌, ಯುವಕರಿಗೆ ಅತ್ಯಂತ ಹತ್ತಿರವಾದ ಕಥೆ ಈ ಚಿತ್ರದಲ್ಲಿದೆ. ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡುವ ಚಿತ್ರ ಇದು. ಬಹುತೇಕ ಹೊಸ ಪ್ರತಿಭೆಗಳು ಚಿತ್ರದಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆ. ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುವುದು ಎಂಬ ನಂಬಿಕೆಯಿದೆ ಎನ್ನುತ್ತಾರೆ.

ಇನ್ನು ಈ ಚಿತ್ರದ ಕಥೆ ಪ್ರಮುಖವಾಗಿ ಏಳು ಜನ ಲೋಫ‌ರ್ ಗಳ (ಅಲೆಮಾರಿ) ಸುತ್ತ ನಡೆಯಲಿದೆಯಂತೆ. ಚಿತ್ರದಲ್ಲಿ ಲೋಫ‌ರ್ ಗಳಾಗಿ ಚೇತನ್‌, ಅರ್ಜುನ್‌ ಆರ್ಯ, ಮನು, ಕೆಂಪೇಗೌಡ, ಸುಷ್ಮಾ, ಸಾಕ್ಷಿ, ಶ್ರಾವ್ಯಾ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಟೆನ್ನಿಸ್‌ ಕೃಷ್ಣ, ಉಮೇಶ್‌ ಮೊದಲಾದವರು ಇತರೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಲೋಫ‌ರ್ ಚಿತ್ರಕ್ಕೆ ಡಿ. ಪ್ರಸಾದ್‌ ಬಾಬು ಛಾಯಾಗ್ರಹಣ, ಶಿವಪ್ರಸಾದ್‌ ಯಾದವ್‌ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಒಟ್ಟು ಎರಡು ಹಾಡುಗಳಿದ್ದು, ದಿನೇಶ್‌ ಕುಮಾರ್‌ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಹಾಡುಗಳಿಗೆ ಮೋಹನ್‌, ಹರ್ಷ ಸಾಹಿತ್ಯ ರಚಿಸಿದ್ದಾರೆ. ತ್ರಿಭುವನ್‌ ನೃತ್ಯ ಮತ್ತು ಕೌರವ ವೆಂಕಟೇಶ್‌ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಬೆಂಗಳೂರು, ಹೊಸನಗರ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

  • "ನಾನು ಏನು ಅಂದುಕೊಂಡಿದ್ದೆನೋ ಹಾಗೇ ಆಗಿದೆ...' - ಹೀಗೆ ಹೇಳಿ ಹಾಗೊಂದು ಸ್ಮೈಲ್‌ ಕೊಟ್ಟರು ನಿರ್ಮಾಪಕ ಶ್ರೀನಿವಾಸ್‌. ಅವರು ಹೀಗೆ ಹೇಳಿದ್ದು ತಮ್ಮ ನಿರ್ಮಾಣದ...

  • "ಈ ಸಿನಿಮಾದ ನಿಜವಾದ ಹೀರೋ ನಿರ್ಮಾಪಕ ಮುನಿರತ್ನ' - ಹೀಗೆ ಹೇಳಿ ಪಕ್ಕದಲ್ಲಿ ಕುಳಿತಿದ್ದ ನಿರ್ಮಾಪಕ ಮುನಿರತ್ನ ಅವರತ್ತ ನೋಡಿದರು ನಿರ್ದೇಶಕ ನಾಗಣ್ಣ. ಅವರು ಹೀಗೆ...

  • ಈಗಾಗಲೇ ಶೀರ್ಷಿಕೆ, ಫ‌ಸ್ಟ್‌ಲುಕ್‌ ಹಾಗೂ ಟೀಸರ್‌ ಮೂಲಕ ಸಾಕಷ್ಟು ಕುತೂಹಲ ಮೂಡಿಸಿರುವ "ಕಮರೊಟ್ಟು ಚೆಕ್‌ಪೋಸ್ಟ್‌' ಇದೀಗ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದಲ್ಲಿ...

  • ಮುಹೂರ್ತದ ಬಳಿಕ ಎಲ್ಲಿಯೂ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿರದ "ಅಮರ್‌' ಚಿತ್ರತಂಡ, ಚಿತ್ರದ ಬಿಡುಗಡೆಗೂ ಮುನ್ನ ಪತ್ರಿಕಾಗೋಷ್ಟಿಯನ್ನು ನಡೆಸಿ "ಅಮರ್‌' ಸಿನಿ...

  • ಶಾದಿ ಕೆ ಆಫ್ಟರ್‌ ಎಫೆಕ್ಟ್...! - ಇದು ಬಾಲಿವುಡ್‌ನ‌ಲ್ಲಿ ಬಂದ ಸಿನಿಮಾದ ಹೆಸರು. ಈಗ ಇಲ್ಲೇಕೆ ಈ ಹೆಸರಿನ ಪ್ರಸ್ತಾಪ ಎಂಬ ಸಣ್ಣದ್ದೊಂದು ಪ್ರಶ್ನೆ ಕಾಡಬಹುದು. ಹಾಗಂತ,...

ಹೊಸ ಸೇರ್ಪಡೆ