ಗಾಂಧಿಸ್ಮೃತಿಯ ಗುಂಗಿನಲ್ಲಿ

ದಿಲ್‌ವಾಲೋಂಕೀ ದಿಲ್ಲಿ

Team Udayavani, Sep 29, 2019, 5:00 AM IST

ಗಾಂಧಿಸ್ಮತಿ ಸಂಕೀರ್ಣ

ಇಂಗ್ಲೆಂಡಿನಲ್ಲಿ ವಕೀಲರಾಗಿದ್ದಾಗ ತನ್ನ ಉಡುಪುಗಳ ವಿಚಾರದಲ್ಲಿ ಆತ ಜಂಟಲ್‌-ಮ್ಯಾನ್‌ ಆಗಿದ್ದು ಸತ್ಯ. ಆದರೆ, ತನ್ನ ಸಾಮಾಜಿಕ ಮತ್ತು ರಾಜಕೀಯ ಒಳನೋಟಗಳು ಪ್ರಖರವಾಗುತ್ತ ಹೋದಂತೆ ಅವರು ತಮ್ಮ ವಸ್ತ್ರಗಳ ಶೋಕಿಯನ್ನು ಇಷ್ಟಿಷ್ಟಾಗಿಯೇ ತ್ಯಜಿಸುತ್ತ ಹೋದರು”, ಎನ್ನುತ್ತ ಆಸ್ಟ್ರೇಲಿಯನ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ ಮಾಧ್ಯಮ ಸಂಸ್ಥೆಗಾಗಿ ಪ್ರಸ್ತುತ ಜಗತ್ತಿನ ಫ್ಯಾಷನ್‌ ಲೋಕ ಮತ್ತು ಅರ್ಥವ್ಯವಸ್ಥೆಯನ್ನು ಇತಿಹಾಸದೊಂದಿಗೆ ತಾಳೆಹಾಕುತ್ತಿದ್ದವರು ವೋಗ್‌ ಇಂಡಿಯಾ ಫ್ಯಾಷನ್‌ ಪತ್ರಿಕೆಯ ಮಾಜಿ ಸಂಪಾದಕರೂ, ಅಂಕಣಕಾರ್ತಿಯೂ ಆಗಿ ಖ್ಯಾತರಾಗಿದ್ದ ಬಂದನಾ ತಿವಾರಿ.

ಹೀಗೆ, ಬಂದನಾ ತಿವಾರಿಯವರು ಇತ್ತೀಚೆಗೆ ತನ್ನ ಮಾತಿನಲ್ಲಿ ನೆನಪಿಸಿಕೊಳ್ಳುತ್ತಿದ್ದದ್ದು ಮತ್ತ್ಯಾರನ್ನೂ ಅಲ್ಲ. ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರನ್ನು. ತಿವಾರಿಯವರ ಮಾತನ್ನು ಕೇಳುತ್ತಿದ್ದರೆ ಎಲ್ಲಿಯ ಗಾಂಧಿ, ಎಲ್ಲಿಯ ಫ್ಯಾಷನ್‌ ಲೋಕ ಎಂಬ ಪ್ರಶ್ನೆಗಳು ಮೂಡುವುದು ಸಹಜ. ಆದರೆ, ಫ್ಯಾಷನ್‌ ಲೋಕದಲ್ಲಿ ಅನವಶ್ಯಕವೆಂಬಷ್ಟು ಹೆಚ್ಚುತ್ತಿರುವ ಬಟ್ಟೆಗಳ ಉತ್ಪಾದನೆ ಮತ್ತು ಬಳಕೆದಾರರ ಕೊಳ್ಳುಬಾಕತನಗಳು ಮಿತಿಮೀರುತ್ತಿರುವ ಕಾಲಘಟ್ಟದಲ್ಲಿ ದಿರಿಸಿನ ವಿಚಾರದಲ್ಲಾದರೂ ಸರಳತೆಯೇ ಮೈವತ್ತಂತಿದ್ದ ಗಾಂಧೀಜಿಯವರನ್ನು ನೆನಪಿಸಿಕೊಳ್ಳುವುದು ಬಂದನಾರವರಿಗೆ ಸೂಕ್ತವೆನ್ನಿಸಿತೇನೋ. ಗಾಂಧಿಯವರನ್ನು ಚರ್ಚಿಲ್‌, “ಅರೆಬೆತ್ತಲೆ ಫ‌ಕೀರ’ನೆಂದು ವ್ಯಂಗ್ಯವಾಡಿದಾಗ ಗಾಂಧಿ ಈ ಹೇಳಿಕೆಯನ್ನು ಪ್ರಶಂಸೆಯೆಂಬಂತೆ ಸ್ವೀಕರಿಸಿದ ದೃಷ್ಟಾಂತವನ್ನು ಹೇಳಲು ಕೂಡ ತಿವಾರಿಯವರು ಮರೆತಿರಲಿಲ್ಲ. ಇನ್ನು ವಿಶ್ವದಾದ್ಯಂತ ಗಾಂಧಿಯವರ ಬಗ್ಗೆ ಬಂದಿರುವಷ್ಟು ಸಾಹಿತ್ಯವು ಬಹುಶಃ ಬೇರೆ ಯಾರ ಬಗ್ಗೆಯೂ ಬಂದಿರಲಿಕ್ಕಿಲ್ಲವೇನೋ! ತನ್ನ ಭೌತಿಕ ದೇಹವನ್ನು ತ್ಯಜಿಸಿ ಅಂದಾಜು ಮುಕ್ಕಾಲು ಶತಮಾನವೇ ಉರುಳಿಹೋದರೂ ಗಾಂಧಿ ಅದೆಷ್ಟು ಸಾರ್ವಕಾಲಿಕರಾಗಿ ಉಳಿದಿದ್ದಾರೆ ಎಂಬುದಕ್ಕೆ ಇಂಥ ಉದಾಹರಣೆಗಳೇ ಸಾಕ್ಷಿ.

ಅಂದ ಹಾಗೆ, ಗಾಂಧೀಜಿಯವರು ತಮ್ಮ ಜೀವನದ ಕೊನೆಯ 144 ದಿನಗಳನ್ನು ಕಳೆದಿದ್ದು ರಾಷ್ಟ್ರರಾಜಧಾನಿಯಾದ ದಿಲ್ಲಿಯಲ್ಲಿ. ದಿಲ್ಲಿಯಲ್ಲಿರುವ ಗಾಂಧಿಸ್ಮತಿ ಸಂಕೀರ್ಣವು ಒಂದು ರೀತಿಯಲ್ಲಿ ಅವರ ಕೊನೆಯ ದಿನಗಳ ಹಸಿಹಸಿ ನೆನಪನ್ನು ಜೀವಂತವಾಗಿಟ್ಟಿರುವ ಅಪರೂಪದ ಪ್ರದೇಶ. ಗುಜರಾತಿನ ಸಾಬರಮತಿ ಆಶ್ರಮದಷ್ಟೇ ಪ್ರಶಾಂತವಾದ ಮತ್ತು ಮಹಾತ್ಮರ ಶಾಂತಿ-ಸಾಮರಸ್ಯ-ಸಹಬಾಳ್ವೆಯ ಜೀವನಸಂದೇಶಗಳನ್ನು ಇಂದಿಗೂ ಉಸಿರಾಡುತ್ತಿರುವ ಗಾಂಧಿಸ್ಮತಿಯು ನಿಜಕ್ಕೂ ದಿಲ್ಲಿಯ ಪುಣ್ಯಭೂಮಿಗಳಲ್ಲೊಂದು.

ಸಂಕೀರ್ಣದೊಳಗಿರುವ ಗಾಂಧೀಜಿ ಮತ್ತು ಕಸ್ತೂರಿಬಾ ಪ್ರತಿಕೃತಿಗಳು

ಗಾಂಧಿತಾತನ ನೆನಪಲ್ಲಿ
ದಿಲ್ಲಿಯ ಪ್ರಮುಖ ಆರ್ಥಿಕ ಕೇಂದ್ರವಾದ ಕನೌಟ್‌ ಪ್ಲೇಸ್‌ (ಸಿಪಿ) ನಿಂದ ಬೆರಳೆಣಿಕೆಯಷ್ಟು ಕಿ.ಮೀ. ಗಳ ದೂರದಲ್ಲಿರುವ ಒಂದು ಸುಂದರ ಸಂಕೀರ್ಣದಲ್ಲಿ ಅಪ್ಪಟ ಶ್ವೇತವರ್ಣದಿಂದ ಕಂಗೊಳಿಸುತ್ತಿರುವ, ಮೇಲ್ನೋಟಕ್ಕೆ ಖಾಸಗಿ ಬಂಗಲೆಯಂತೆ ಕಾಣುತ್ತಿರುವ ಪ್ರದೇಶವೊಂದಿದೆ. ಸದ್ಯ ಈ ಕಟ್ಟಡದ ಹೊರಭಾಗದಲ್ಲಿ ಗಾಂಧಿಸ್ಮತಿಯೆಂಬ ಹೆಸರನ್ನು ಹಾಕಿಸಿದ್ದರೂ ಒಂದು ಕಾಲದಲ್ಲಿ ಈ ಕಟ್ಟಡವು ಬಿರ್ಲಾ ಹೌಸ್‌ ಎಂದೇ ಪ್ರಖ್ಯಾತವಾಗಿತ್ತು. ಆ ದಿನಗಳಲ್ಲಿ ಅದು ಉದ್ಯಮಲೋಕದ ದಿಗ್ಗಜರಾಗಿದ್ದ ಬಿರ್ಲಾ ಕುಟುಂಬಕ್ಕೆ ಸೇರಿದ್ದ ಖಾಸಗಿ ಬಂಗಲೆಯಾಗಿತ್ತು. ಗಾಂಧೀಜಿ, ಸರ್ದಾರ್‌ ಪಟೇಲರಂಥ ಆ ಕಾಲದ ಪ್ರಮುಖ ರಾಜಕೀಯ ನೇತಾರರು ಬಿರ್ಲಾ ಕುಟುಂಬದ ಖ್ಯಾತ ಉದ್ಯಮಿಗಳಲ್ಲೊಬ್ಬರಾಗಿದ್ದ ಘನಶ್ಯಾಮದಾಸ್‌ ಬಿರ್ಲಾರವರು 1928ರಲ್ಲಿ ನಿರ್ಮಿಸಿದ್ದ ಈ ಬಂಗಲೆಯಲ್ಲಿ ಅತಿಥಿಯಾಗಿ ಉಳಿದುಕೊಳ್ಳುವ ರೂಢಿಯಿತ್ತಂತೆ. ಮುಂದೆ 1973ರ ನಂತರವೇ ಈ ಪ್ರದೇಶವನ್ನು ಭಾರತ ಸರ್ಕಾರವು ಘನಶ್ಯಾಮದಾಸ್‌ ಬಿರ್ಲಾರಿಂದ ಖರೀದಿಸಿ ಗಾಂಧೀಜಿಯವರ ನೆನಪಿನಲ್ಲಿ ಗಾಂಧಿಸ್ಮತಿಯನ್ನಾಗಿಸಿಕೊಂಡಿದ್ದು.

ನೆಲ್ಸನ್‌ ಮಂಡೇಲಾರವರು ಅದೆಷ್ಟೋ ವರ್ಷಗಳ ಕಾಲ ದಕ್ಷಿಣಆಫ್ರಿಕಾದ ಜೈಲಿನ ಪುಟ್ಟ ಕೋಣೆಯೊಂದರಲ್ಲಿ ಕೈದಿಯಾಗಿದ್ದರು. ಇಕ್ಕಟ್ಟಾದ ಗೂಡಿನಂತಿರುವ ಈ ಸೆರೆಮನೆಯು ಇಂದಿಗೂ ಪ್ರವಾಸಿಗರನ್ನು ಆತ್ಮಾವಲೋಕನಕ್ಕೆ ಹಚ್ಚುವಂತೆ, ಮಂಡೇಲಾರ ಆ ಸವಾಲಿನ ದಿನಗಳನ್ನು ನೆನೆಸಿಕೊಂಡು ಬೆಚ್ಚಿಬೀಳಿಸುವಂತೆ ಗಾಂಧಿಸ್ಮತಿಯ ಪ್ರಭಾವಳಿಯೂ ಅದೆಷ್ಟೋ ಪ್ರವಾಸಿಗರನ್ನು ಗಾಂಧೀಹತ್ಯೆಯ ಆ ಕರಾಳದಿನಗಳತ್ತ ಮತ್ತೆ ಕರೆದೊಯ್ಯುತ್ತದೆ. ಇಂದು “ಹುತಾತ್ಮರ ಮಂಟಪ’ವೆಂಬ ಹೆಸರಿನಲ್ಲಿ ನಿಂತಿರುವ, ಇಡೀ ಕಟ್ಟಡ ಸಂಕೀರ್ಣದ ಕೇಂದ್ರಬಿಂದುವಾಗಿರುವ ಅದೇ ಪುಟ್ಟ ಜಾಗದಲ್ಲಿ ಗುಂಡಿನೇಟಿಗೆ ಬಲಿಯಾಗಿ “ಹೇ ರಾಮ್‌’ ಎಂದು ನಿಡುಸುಯ್ಯುತ್ತ ಗಾಂಧಿ ನೆಲಕ್ಕುರುಳಿದ್ದರು. ಗಾಂಧೀಜಿ ತನ್ನ ಬೆಂಬಲಿಗರೊಂದಿಗೆ ಕಾಲ್ನಡಿಗೆಯಲ್ಲಿ ಅತ್ತ ಹೊರಟಿದ್ದು, ಸುತ್ತಲೂ ಅಂದು ಸೇರಿರಬಹುದಾಗಿದ್ದ ಜನಜಂಗುಳಿ, ಅನಿರೀಕ್ಷಿತವಾಗಿ ನಡೆದುಹೋದ ಆ ಅನಾಹುತ… ಹೀಗೆ ಎಲ್ಲ ನೆನಪುಗಳೂ ಗಾಂಧೀಸ್ಮತಿಯಲ್ಲಿರುವ ಈ ಹುತಾತ್ಮ ಮಂಟಪ ಮತ್ತು ಸುತ್ತಲಿನ ಹಸಿರು ಪರಿಸರದ ಹವೆಯಲ್ಲಿ ದಟ್ಟವಾಗಿವೆ.

ಆ ದಿನಗಳು
ಗಾಂಧಿಸ್ಮತಿಯ ಆವರಣದಲ್ಲೇ ಇಬ್ಬರು ಮಕ್ಕಳ ಜೊತೆ ನಗುಮುಖದೊಂದಿಗೆ ನಿಂತಿರುವ ಗಾಂಧಿಯವರ ಆಳೆತ್ತರದ ವಿಗ್ರಹವೊಂದು ಪ್ರವಾಸಿಗರಿಗೆ ಸ್ವಾಗತ ಕೋರುವುದನ್ನು ಕಾಣಬಹುದು. ಪಾರಿವಾಳವೊಂದನ್ನು ಹಿಡಿದುಕೊಂಡಿರುವ ಓರ್ವ ಬಾಲಕನೂ, ಜೊತೆಗಿರುವ ಬಾಲಕಿಯೂ ಗಾಂಧಿಯವರು ಹತ್ತಿರದಿಂದ ನೋಡಿದ್ದ ಭಾರತದ ಬಡ ಮತ್ತು ಶೋಷಿತವರ್ಗಗಳಿಗೆ ಸಂಕೇತದಂತಿವೆ. “ನನ್ನ ಬದುಕೇ ನನ್ನ ಸಂದೇಶ’ ಎಂಬ ವಾಕ್ಯದೊಂದಿಗೆ ಬೀಗುತ್ತಿರುವ ಈ ಸುಂದರ ವಿಗ್ರಹವನ್ನು ನಿರ್ಮಿಸಿದವರು ಈ ದೇಶ ಕಂಡ ಅತ್ಯುತ್ತಮ ಶಿಲ್ಪಿಗಳಲ್ಲೊಬ್ಬರಾದ ರಾಮ್‌ ಸುತಾರ್‌. ಇನ್ನು ಆವರಣದಲ್ಲೇ ಕಾಣಬಹುದಾದ ಪ್ರಾರ್ಥನಾ ಮೈದಾನ, ಗಾಂಧೀಜಿಯವರು ತಮ್ಮ ಪ್ರಾರ್ಥನಾ ಅವಧಿಯಲ್ಲಿ ಮತ್ತು ಜನಸಮೂಹದೊಂದಿಗಿನ ಚರ್ಚೆಯ ಸಂದರ್ಭಗಳಲ್ಲಿ ಕುಳಿತುಕೊಳ್ಳುತ್ತಿದ್ದ ಸ್ಥಳ… ಇತ್ಯಾದಿಗಳು ಗಾಂಧೀಜಿಯವರ ಸಮಕಾಲೀನ ದಿಗ್ಗಜರಾದ ಆಲ್ಬರ್ಟ್‌ ಐನ್‌ಸ್ಟೆನ್‌, ರವೀಂದ್ರನಾಥ್‌ ಠಾಕೂರರ ಸಾಲುಗಳೊಂದಿಗೆ ಸೇರಿಕೊಂಡು ಗಾಂಧಿಯವರು ಗಳಿಸಿಕೊಂಡಿದ್ದ ಅಪಾರ ಜನಪ್ರಿಯತೆಗೆ ಕನ್ನಡಿ ಹಿಡಿಯುವಂತಿವೆ.

ಮೋಹನದಾಸ್‌ ಕರಮಚಂದ ಗಾಂಧಿಯೆಂಬ ಸಾಮಾನ್ಯ ಬಾಲಕನೊಬ್ಬ ಮಹಾತ್ಮಾ ಗಾಂಧಿಯಾಗುವವರೆಗಿನ ಸುದೀರ್ಘ‌ ಮತ್ತು ಸಾರ್ಥಕ ಪಯಣಕ್ಕೆ ಸಾಕ್ಷಿಯಾಗಲು ಗಾಂಧೀಸ್ಮತಿಯಲ್ಲಿ ಪ್ರದರ್ಶನಕ್ಕಿಡಲಾಗಿರುವ ಅಪರೂಪದ ಕಪ್ಪು-ಬಿಳುಪು ಛಾಯಾಚಿತ್ರಗಳೇ ಸಾಕು. ಛಾಯಾಚಿತ್ರಗಳು ಮತ್ತು ಜೊತೆಗೇ ದಾಖಲಿಸಿರುವ ಸಂಕ್ಷಿಪ್ತ ವಿವರಗಳ ಮೂಲಕವಾಗಿ ಇತಿಹಾಸದ ಕಿರುಬೆರಳನ್ನು ಹಿಡಿದುಕೊಂಡು ಗಾಂಧಿಯೆಂಬ ಯುಗಪುರುಷನ ದಿನಗಳಿಗೆ ಮರಳಿಹೋಗುವ ಆ ಅನುಭವವೇ ವಿಶಿಷ್ಟ. ಆವರಣದ ಮತ್ತೂಂದೆಡೆ ತನ್ನ ಶೈಲಿಯಿಂದಾಗಿ ಮೇಲ್ನೋಟಕ್ಕೆ ಬುದ್ಧವಿಹಾರದಂತೆ ಕಾಣುವ ಪುಟ್ಟ ಕೋಣೆಯೊಂದರಲ್ಲಿ ಗಾಂಧೀಜಿಯವರ ಬದುಕಿನ ಪಯಣವನ್ನು ಸುಂದರ ವರ್ಣಚಿತ್ರಗಳೊಂದಿಗೆ ಪ್ರಸ್ತುತಪಡಿಸಲಾಗಿದೆ. ಬಿರ್ಲಾ ಹೌಸ್‌ನಲ್ಲಿ ಗಾಂಧೀಜಿಯವರು ತಂಗಿದ್ದ ಕೋಣೆಯು ಅವರ ಕೊನೆಯ ದಿನ ಹೇಗಿತ್ತೋ, ಅದೇ ಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿರುವುದು ವಿಶೇಷ. ಕೆಲವೇ ಕೆಲವು ವಸ್ತುಗಳನ್ನು ಹೊಂದಿರುವ, ಭವ್ಯಬಂಗಲೆಯೊಳಗಿದ್ದರೂ ವಿಲಾಸಗಳು ಸೋಕದ ಗಾಂಧೀಜಿಯವರ ಕೋಣೆಯು ಸಾಬರಮತಿ ಆಶ್ರಮದಲ್ಲಿರುವ ವಿನೋಭಾಭಾವೆಯವರ ಪುಟ್ಟ ಗೂಡಿನಂತಿರುವ ಕೋಣೆಯೊಂದನ್ನು ನೆನಪಿಸಿದರೆ ಅಚ್ಚರಿಯಿಲ್ಲ.

ತಮ್ಮ ವಸ್ತುಗಳನ್ನೆಲ್ಲ ಬಿಳಿಬಟ್ಟೆಯೊಂದರಲ್ಲಿ ಮೂಟೆಯಂತೆ ಹಾಕಿ ಹೊರಟುಬಿಡುವಷ್ಟು ಸರಳ ಜೀವನವನ್ನು ನಡೆಸುತ್ತಿದ್ದರಂತೆ ಮದರ್‌ ತೆರೇಸಾ. ಇತ್ತ ಭಗವದ್ಗೀತೆಯ ಒಂದು ಹಳೆಯ ಪ್ರತಿ, ನೆಲದ ಮೇಲೆ ಹಾಸಲಾಗಿರುವ ಶ್ವೇತವರ್ಣದ ಪುಟ್ಟದೊಂದು ಹಾಸಿಗೆ ಮತ್ತು ತಲೆದಿಂಬು, ತಗ್ಗಿನ ಮೇಜು, ಮೂರು ಮರ್ಕಟಗಳ ಚಿಕ್ಕ ಮೂರ್ತಿ… ಹೀಗೆ ಭೌತಿಕರೂಪದ ಕೆಲವೇ ಬೆರಳೆಣಿಕೆಯ ವಸ್ತುಗಳನ್ನು ಬಿಟ್ಟರೆ ಆ ಕೋಣೆಯಲ್ಲಿ ಇಂದಿಗೂ ಜೀವಂತವಾಗಿರುವುದು ಬೆಲೆಕಟ್ಟಲಾಗದ ಗಾಂಧಿಯ ನೆನಪುಗಳು ಮಾತ್ರ.

(ಅಂಕಣ ಮುಕ್ತಾಯ)

ಪ್ರಸಾದ್‌ ನಾೖಕ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಧಕ್ಕ ಸದ್ದಿಲ್ಲದೆ ಸಣ್ಣ ಗೇಟಿನಿಂದ ನುಸುಳುತ್ತಿರುವುದನ್ನು ಕಿಟಕಿಯಿಂದ ನೋಡುತ್ತಿರುವಾಗಲೇ, ಇವಳು ಯಾವುದೋ "ಸತ್ತ ಹೆಗ್ಗಣ'ವನ್ನು ಹುಡುಕಿಕೊಂಡು ಬಂದಿರಬಹುದೆಂದು...

  • ನೀಲಿ ಆಗಸದ ನೀರವತೆಯಲ್ಲಿ ನನ್ನನ್ನೇ ನಾನು ಮರೆತು ತೇಲುವ ಸೋಜಿಗದ ಸಡಗರದ ದಿನಗಳನ್ನು ಲೆಕ್ಕ ಹಾಕುತ್ತ, ವಿಮಾನದ ವಿಶಲ್‌ ಸದ್ದು ಕೇಳಿದಾಗೆಲ್ಲ ಮನದೊಳಗೆ ಅಡಗಿದ್ದ...

  • ಕನ್ನಡನಾಡಿನ ಮಟ್ಟಿಗೆ ಗಂಭೀರವಾದ ಸಂಸ್ಕೃತಿ ಸಂವಾದ ನಡೆಯುವುದು ಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನ ನೀನಾಸಂನಲ್ಲಿ. ರಂಗಭೂಮಿ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ...

  • ಸಾಯುವ ನಿನ್ನ ಸಂಕಟ | ತುಳಿದ ಕಾಲಿಗೆ ತಿಳಿಯದು | (ನಾನು ಮತ್ತು ಇರುವೆ) ರಾತ್ರಿಯಿಡೀ ಸೇರಿ ಕಟ್ಟಿದ ಗೂಡು ಕಂಡು | ಇರುವೆಗಳಿಗೆ ದಾರಿ ಹೇಳಿತು | ಇದು ಸಾವಿನ ಅರಮನೆ...

  • ಸುಮಾರು ಇನ್ನೂರೈವತ್ತು ನಾಟಿಕಲ್‌ ಮೈಲಿ ದೂರ ಕಡಲಲ್ಲಿ ಚಲಿಸಿ ತಲುಪಬಹುದಾದ ಮಾಮೂಲಿ ಹಡಗನ್ನು ಬಿಟ್ಟು ನಾನೂರೈವತ್ತು ಮೈಲು ಕಡಲಲ್ಲಿ ಸುತ್ತಿ ಬಳಸಿ ಎರಡು ದ್ವೀಪಗಳನ್ನು...

ಹೊಸ ಸೇರ್ಪಡೆ