ಬಿಸಿಲೋ ಬಿಸಿಲು!


Team Udayavani, May 5, 2019, 6:00 AM IST

11

ಕಳೆದ ವಾರ ಪತ್ರಿಕೆಗಳಲ್ಲಿ ವರದಿಯಾಯಿತು; ರಾಯಚೂರು, ಕಲಬುರ್ಗಿ, ಬೀದರ್‌, ವಿಜಯಪುರ, ಬಳ್ಳಾರಿ ಜಿಲ್ಲೆಗಳಲ್ಲಿ 43ರಿಂದ 44 ಡಿಗ್ರಿ ಸೆಲ್ಸಿಯಸ್‌ ಬಿಸಿಲಿನ ತಾಪವಿದೆಯೆಂದು. ಬಿಸಿಲಿಗೆ ನಗರ, ಗ್ರಾಮ ಎಲ್ಲ ಒಂದೇ. ಬೆಂಕಿಯಂತೆ ಸುರಿಯುತ್ತದೆ. ಕಳೆದ ನಲವತ್ತು ವರ್ಷಗಳಿಂದ ಬಿಸಿಲನ್ನು ಬೇಸಿಗೆಯ ದಿನಗಳಲ್ಲಿ ಅನುಭವಿಸುತ್ತ ಬಂದಿದ್ದೀನಿ. ಬಾಲ್ಯದ ದಿನಗಳಲ್ಲಿ ಬಿಸಿಲು ಇದೇ ಪರಿಯಲ್ಲಿದ್ದರೂ ಅದರ ತಾಪವು ಗಮನಕ್ಕೆ ಬರುವುದಿಲ್ಲ. ಮೇಲೆ ಹೆಸರಿಸಿದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಅರಣ್ಯ ಪ್ರದೇಶಗಳಿವೆ. ನಮ್ಮನ್ನು ಆಳುವ ಸರ್ಕಾರಗಳಾಗಲಿ, ಸಾಮಾನ್ಯ ಜನರಾಗಲಿ ಅಳಿದು ಉಳಿದ ಈ ಅರಣ್ಯ ಪ್ರದೇಶಗಳನ್ನು ರಕ್ಷಿಸಿಕೊಳ್ಳಬೇಕೆಂಬ ಕನಿಷ್ಟ ಎಚ್ಚರ, ಕಾಳಜಿ ಇಲ್ಲವೇ ಇಲ್ಲ. ಕನಿಷ್ಠಪ್ರಜ್ಞೆಯ ಅರಣ್ಯ ಇಲಾಖೆಗಳು ತಮ್ಮ ಕಾಳಜಿಯನ್ನು ತೋರಿಸುತ್ತ ಬಂದಿದ್ದರೆ, ಅದಕ್ಕೆ ಸಂಬಂಧಿಸಿದ ಮಂತ್ರಿಗಳು ತಮ್ಮ ರಾಜಕೀಯ ಪ್ರಜ್ಞೆಯಿಂದ, ಇಚ್ಛೆಯಿಂದ ಈ ಪ್ರದೇಶಗಳಲ್ಲಿ ಅರಣ್ಯಗಳ ಅಗತ್ಯವಿದೆಯೆಂದು ಭಾವಿಸಿ ದ್ದರೆ ಈ ಪ್ರಾಂತ್ಯ ಬರಡು ನೆಲವಾಗುತ್ತಿರಲಿಲ್ಲ. ಬಳ್ಳಾರಿ ಬಿಸಿಲಿಗೆ ಮಾತ್ರ ಖ್ಯಾತಿ ಹೊಂದಿದೆ. ಆದರೆ ಕಣ್ಣು ಇದ್ದವರಿಗೆ ಈ ಜಿಲ್ಲೆಯಲ್ಲಿ ಹಲವು ಕಡೆ ಅರಣ್ಯ ಪ್ರದೇಶಗಳಿವೆ. ರಾಯಚೂರು, ಬೀದರ್‌ ಜಿಲ್ಲೆಗಳಲ್ಲಿ ಅರಣ್ಯ

ಪ್ರದೇಶಗಳಿವೆ. ಕೃಷ್ಣಾ ನದಿ, ತುಂಗಭದ್ರಾ ನದಿ, ಭೀಮ ನದಿ, ಕಾರಂಜ ಸೇರಿದಂತೆ ಹಲವು ನದಿಗಳಿವೆ. ಹಗರಿ, ಹಳ್ಳ-ಕೊಳ್ಳಗಳಿವೆ. ಇವುಗಳನ್ನೂ ರಕ್ಷಣೆ ಮಾಡುವ ಪರಿಸರಪ್ರಜ್ಞೆ , ರಾಜಕೀಯ ಇಚ್ಛಾಶ್ರಯ ಅಪಾರ ಕೊರತೆ
ಯಿಂದ ಪ್ರಕೃತಿಗೆ ಧಕ್ಕೆ ಬಂದು ಬಿಸಿಲಿನ ತಾಪ ಮುಗಿಲು ಮುಟ್ಟಿದೆ.

ಈ ಬಿಸಿಲು ನಾಡಿನಲ್ಲಿ ನೀರಾವರಿಯಿದೆ. ಮಳೆಯಾಧಾರಿತ ವ್ಯವಸಾಯವೂ ಇದೆ. ತುಂಗಭದ್ರಾ, ನಾರಾಯಣಪುರ, ಕಾರಂಜಾ ಅಣೆಕಟ್ಟುಗಳಿಂದ ಸಾಕಷ್ಟು ಪ್ರದೇಶ ನೀರಾವರಿಗೆ ಒಳಪಟ್ಟಿದೆ. ಕರ್ನಾಟಕದ ಭೂಮಿಯನ್ನು ಆಂಧ್ರಪ್ರದೇಶದವರು ಕೊಂಡು ನೀರಾವರಿಗೆ ಅನುಕೂಲ ಮಾಡಿಕೊಂಡು ಭತ್ತ ಬೆಳೆಯುವ ಸಂಪ್ರದಾಯವನ್ನು ಕಲಿಸಿದವರೇ ಈ ಆಂಧ್ರದವರು. ರಾಯಚೂರು, ಯಾದಗಿರಿ ಜಿಲ್ಲೆಗಳ ಭೂಮಿಯಲ್ಲಿ ಅದೇನಪ್ಪಾ ಭತ್ತ ಬೆಳೆಯಲಾಗುತ್ತಿದೆ ಅಂದರೆ, ನೀರಿನ ಸೌಲಭ್ಯವಿದೆ ಎಂದೇ ಅರ್ಥ. ವರ್ಷಕ್ಕೆ ಎರಡು ಬೆಳೆ. ಈಚಿನ ವರ್ಷಗಳಲ್ಲಿ ಮಳೆ ಕಮ್ಮಿಯಾಗಿಯೋ, ಅಣೆಕಟ್ಟುಗಳ ನೀರನ್ನು ಸರ್ಕಾರ ದೊಡ್ಡ ದೊಡ್ಡ ಉದ್ದಿಮೆಗಳಿಗೆ ಬಳಸಲು ಪರವಾನಿಗೆ ನೀಡಿದ್ದರಿಂದ ರೈತರ ಭೂಮಿಗೆ ಬೇಸಿಗೆ ಬೆಳೆಗೆ ನೀರಿಲ್ಲದಂತಾಗಿದೆ.

ಕುತೂಹಲದ ವಿಷಯವೆಂದರೆ ನಮ್ಮ ಈ ನಾಡಿನ ಜನರಿಗೆ ಗಿಡ-ಮರಗಳ ಬಗ್ಗೆ ಕನಿಷ್ಠ ಕಾಳಜಿಯಿಲ್ಲ. ನೂರಾರು ಜಾತಿಯ ಮರಗಳನ್ನು ಬೆಳೆಯಲು ಈ ಭೂಮಿ ಫ‌ಲವತ್ತಾಗಿದೆ. ದುರದೃಷ್ಟಕರ ಸಂಗತಿಯೆಂದರೆ ಗಿಡಮರಗಳಿದ್ದರೆ, ಅವುಗಳ ನೆರಳಲ್ಲಿ ಯಾವುದೇ ಬೆಳೆ ಬೆಳೆಯುವುದಿಲ್ಲವೆಂದು ಇರುವ ಗಿಡಮರಗಳನ್ನು ರೈತರು ಕಡಿದು ತಮ್ಮ ತಮ್ಮ ಹೊಲಗಳ ಮ್ಯಾರೆಯಲ್ಲಿ, ಬದುವಿನಲ್ಲಿ ಗಿಡಮರಗಳಿಲ್ಲದಂತೆ ಬೋಳು ಮಾಡಿಕೊಂಡು ಬಿಡುತ್ತಾರೆ. ಭತ್ತ ಬೆಳೆಯುವ ಸಾವಿರಾರು ಎಕರೆಯಲ್ಲಿ ನಾಲ್ಕು ಮರಗಳಿರುವುದಿಲ್ಲ. ವ್ಯವಸಾಯ ಮಾಡುವವರು ತಮ್ಮ ಹೊಲಗಳಲ್ಲಿ ಉಳುವ ಹೊತ್ತಿನಲ್ಲಿ ಕೂತು ನೆರಳಿಗೆ ಉಣ್ಣಲು ಮರಗಳಿಲ್ಲದಂತೆ ಮಾಡಿಕೊಂಡಿದ್ದಾರೆ. ಹೊಲದಲ್ಲಿ ದುಡಿವ ಎತ್ತುಗಳಿಗೆ ದಮ್ಮಿನ ಹೊತ್ತಿನಲ್ಲಿ ನಿಲ್ಲಲು ನೆರಳು ಇಲ್ಲದಂತಾಗಿದೆ. ದನಕರುಗಳು ನೆರಳನ್ನು ಹುಡುಕುವಂತಾಗಿದೆ. ನಾನು ಚಿಕ್ಕವನಿದ್ದಾಗ ಹೈಸ್ಕೂಲಿಗೆ ಪರ ಊರಲ್ಲಿದ್ದ ಶಾಲೆಗೆ ನಾಲ್ಕು ಕಿ.ಮೀ. ನಡೆಯುತ್ತ ಹೋಗಿ ಬರುತ್ತಿದ್ದೆ. ದಾರಿಯಲ್ಲಿ ಒಂದೇ ಒಂದು ಮರ ಇರಲಿಲ್ಲ. ದಣಿವು ಆರಿಸಿಕೊಳ್ಳಲು ಗಿಡಮರಗಳ ನೆರಳನ್ನು ಹುಡುಕುವ ಪ್ರಶ್ನೆಯೇ ಇರಲಿಲ್ಲ. ಬಿಸಿಲಿಗೆ ನಡೆಯುತ್ತಲೇ ಮನೆ, ಶಾಲೆ ತಲುಪಬೇಕು. ಗಿಡಮರಗಳಿದ್ದರೆ ತಾನೇ ನೆರಳಿನ ಮುಖ. ಬೇಸಿಗೆಯಲ್ಲಿ ಮನೆಯಲ್ಲಿರಲು ಸಾಧ್ಯವಿರಲಿಲ್ಲ. ಊರಲ್ಲಿ ಗುಡಿಗಳ ಮುಂದಿರುತ್ತಿದ್ದ ಬಸದಿ, ಆಲ, ಬೇವಿನ ಮರದ ಆಶ್ರಯವನ್ನು ಗಂಡಸರು ಪಡೆಯುತ್ತಿದ್ದರು. ಮಹಿಳೆಯರ ಗತಿ? ಕರೆಂಟು ಕ್ರಮೇಣ ಊರನ್ನು ಪ್ರವೇಶಿಸಿದ್ದರೂ ಅದನ್ನು ನಂಬುವುದು ದೇವರನ್ನು ನಂಬಿದಂತೆ. ಬೀಸಣಿಕೆಗಳೇ ಗತಿ. ಉತ್ತರಕರ್ನಾಟಕದ ಮನೆಗಳಿಗೆ ಕಿಟಕಿಗಳು ಸಾಮಾನ್ಯವಾಗಿ ಇರುವುದಿಲ್ಲ. ಗವಾಕ್ಷಿಗಳು ಇರುತ್ತವೆ. ಅವು ಚೂರುಪಾರು ಬೆಳಕನ್ನು ಚೆಲ್ಲುತ್ತಿದ್ದವೇ ಹೊರತು ಗಾಳಿಯನ್ನು ಮನೆಯೊಳಗೆ ತರಲು ಗವಾಕ್ಷಿಗಳಿಗೆ ಗೊತ್ತಿರಲಿಲ್ಲ.

ಮರಗಳಿಲ್ಲದ ನಗರಗಳು
ಇನ್ನು ನಗರಗಳ ಪರಿಸ್ಥಿತಿ ನೋಡಬೇಕು- ನಗರಗಳಲ್ಲಿ ಮರಗಳಿರುತ್ತವೆ. ಅವುಗಳನ್ನು ಇನ್ಯಾರೋ ವಶಪಡಿಸಿಕೊಂಡಿರುತ್ತಾರೆ. ಪೆಟ್ರೋಲು ಬಂಕ್‌ನವರು, ವ್ಯಾಪಾರಸ್ಥರು ಇಲ್ಲಿ ಮರ ಕಂಡರೆ ಅದಕ್ಕೊಂದು ಹಸಿರು ಸೀರೆಯನ್ನೋ, ಕೆಂಪು ಸೀರೆಯನ್ನೋ ಸುತ್ತಿ ದೇವರನ್ನಾಗಿ ಮಾಡುತ್ತಾರೆ. ಅಲ್ಲಿಗೆ ಆ ಮರಗಳು ದೇವಸ್ಥಾನದ ವಶವಾಗುತ್ತವೆ. ನಗರ-ಪಟ್ಟಣಗಳಲ್ಲಿ ಯಾವುದೇ ನಿಯಮಗಳು ಪಾಲನೆಯಾಗುವುದಿಲ್ಲ. ನಮ್ಮ ಬಿಸಿಲಿನ ನಾಡಿನಲ್ಲಿ ಲೇಔಟ್‌ಗಳಲ್ಲಿ ಮನೆ ನಿರ್ಮಾಣವಾಗುತ್ತವೆ. 30×40, 60×40 ಸೈಟ್‌ಗಳಿರುತ್ತವೆ. ಅಪ್ಪಿತಪ್ಪಿಯೂ ಗಾರ್ಡನ್ನಿಗೆ ಜಾಗ ಮಾಡಬೇಕೆಂಬುದು ಯಾರಿಗೂ ಹೊಳೆಯುವುದಿಲ್ಲ. ಹೊಳೆದರೂ ಅದಕ್ಕೆ ಜಾಗ ಯಾಕೆ ವೇಸ್ಟ್‌ ಮಾಡಬೇಕು ಎಂಬುವವರೇ ಎಲ್ಲರೂ. ಏನೋ ಆಕರ್ಷಣೆಗಾಗಿ ಲೇಔಟ್‌ ಮಾಡುವವರು ಒಳಗೆ ರಸ್ತೆಬದಿಯಲ್ಲಿ ಮರಗಳನ್ನೇನೋ ನೆಡುತ್ತಾರೆ. ಗಿಡವಾಗುತ್ತದೆ. ಸೈಟ್‌ ಕೊಂಡವರು ತಮ್ಮ ಸೈಟ್‌ ಮನೆಮುಂದೆ ಗಿಡಗಳಿರುವುದು ಕಂಡರೆ ಸಂಕಟವಾಗುತ್ತದೋ ಏನೋ! ಬುನಾದಿ ಹಾಕುವ ಮುನ್ನವೇ ಇರುವ ಗಿಡಗಳನ್ನು ಕಡಿದು ಬಿಡುತ್ತಾರೆ. ಆದರೆ, ಇಂಥವರು ಮನೆ ಕಟ್ಟಿಕೊಂಡು ಕಾರುಕೊಂಡರೂ ಪಾರ್ಕ್‌ ಮಾಡಲು ಸ್ಥಳ ಮಾಡಿಕೊಂಡಿರುವುದಿಲ್ಲ. ಮನೆಮುಂದೆ ನಿಲ್ಲಿಸಿಕೊಳ್ಳುತ್ತಾರೆ. ಇರುವ ಹತ್ತು ಫೀಟಿನ ರಸ್ತೆ ಮೇಲೆಯೇ ಇವರ ಕಾರುಗಳು ಈಗ ವಿಸ್ತರಣೆಗೊಂಡ ಬಡಾವಣೆಗಳಲ್ಲಿ ಮರಗಳೇ ಇರುವುದಿಲ್ಲ. ತಮ್ಮ ತಮ್ಮ ಕಾರುಗಳನ್ನು ಮನೆಮುಂದೆ, ಬದಿಗೆ ನಿಲ್ಲಿಸಿಕೊಂಡು, ರಸ್ತೆಯನ್ನು ಇಕ್ಕಟ್ಟುಮಾಡುತ್ತಾರೆ. ಬೇರೆ ವಾಹನಗಳು ಬಂದರೆ ದಾರಿಗೆ ಕಷ್ಟ. ಜಗಳವಾಡಲು ಮಾತ್ರ ಸಿದ್ಧವಾಗಿರುತ್ತಾರೆ. ಬಿಸಿಲು ಪ್ರದೇಶವೆಂದು ಅರಿತು ನಗರಸಭೆಯವರು ಮುಂಜಾಗೃತವಾಗಿ ಕಾನೂನಿನ ಅಡಿಯಲ್ಲಿ ಗಿಡಮರಗಳನ್ನು ಬೆಳೆಸುವುದಕ್ಕೆ ಕಾನೂನಿನ ಮೂಲಕ ಒತ್ತಡ ತರಬೇಕು. ಇದು ಸಾಧ್ಯವಿಲ್ಲದಾಗಿದೆ.

ರವರವ ಎನ್ನುವ ಡಾಂಬರ್‌ ರಸ್ತೆಗಳು
ಈಗ ರಸ್ತೆಗಳು ವಿಸ್ತಾರವಾಗುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲೂ ಗ್ರಾಮ ಸಡಕ್‌ ಯೋಜನೆಗಳು ಬಂದಿವೆ. ಒಂದು ಕಾಲದಲ್ಲಿ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುತ್ತಿತ್ತು. ಅವು ಬೆಳೆದು ಮರಗಳಾಗಿವೆ. ಹೀಗೆ ಮರಗಳಿರುವ ರಸ್ತೆಗಳು ಇಕ್ಕಟ್ಟೆಂದು ತಿಳಿದು ಡಬಲ್‌ ರಸ್ತೆ ಮಾಡುವ ಯೋಜನೆಗಳಿಂದ ಮೂವತ್ತು-ನಲವತ್ತು ವರುಷಗಳ ಮರಗಳನ್ನು ಕಡಿದೇ ರಸ್ತೆಗಳನ್ನು ವಿಸ್ತರಿಸಲಾಗುತ್ತದೆ. ಮೊದಲೇ ಬಿಸಿಲು. ಡಾಂಬರ್‌ ರಸ್ತೆಗಳ ಮೇಲೆ ಮನುಷ್ಯರು, ದನಕರುಗಳು ಸಂಚರಿಸಲು ಸಾಧ್ಯವಿಲ್ಲ. ಬಿಸಿಲಿಗೆ ಡಾಂಬರ್‌ ರಸ್ತೆ ರವರವ ಅನ್ನುತ್ತಿರುತ್ತದೆ. ನೆಲದ ಮೇಲೆ ಓಡಾಡುವ ಪ್ರಾಣಿಗಳು ಡಾಂಬರ್‌ ರಸ್ತೆ ದಾಟುವುದರಲ್ಲಿ ಸಾಯುತ್ತವೆ. ರಿಂಗ್‌ರೋಡ್‌ ಕಲ್ಪನೆ ಬಂದು, ಊರನ್ನು ಸುತ್ತುವ ವರ್ತುಲ ರಸ್ತೆಯಿಂದ ಊರ ಬದಿಗಿರುವ ಗಿಡಮರಗಳು ಕಡಿಯಲ್ಪಟ್ಟವು. ರಸ್ತೆಗಳೇನೋ ಕರ್ರಗೆ ಮಿರಮಿರ ಮಿಂಚುತ್ತವೆ. ಎಡ-ಬಲ ಮರಗಳಿಲ್ಲ. ವಿಚಿತ್ರವೆಂದರೆ ಈ ರಿಂಗ್‌ ರೋಡುಗಳನ್ನು ನಿರ್ಮಿಸುತ್ತಾ ಜಾಗ ಒತ್ತುವರಿ ಮಾಡಿರುತ್ತಾರೆ. ಎಡ-ಬಲ ಗಿಡಗಳನ್ನು ನೆಡಲು ಸ್ಥಳವೇ ಇರುವುದಿಲ್ಲ. ನಗರದೊಳಗಿನ ರಸ್ತೆಗಳನ್ನು ವಿಸ್ತಾರ ಮಾಡಲು ಬಲವಂತವಾಗಿ ಇರುವ ಕಟ್ಟಡಗಳನ್ನು ಕೆಡವುತ್ತ ರಸ್ತೆ ಮಾಡುತ್ತಾರೆ. ಗಿಡ ನೆಡುವುದಕ್ಕೆ ಜಾಗವೇ ಇರುವುದಿಲ್ಲ. ಬೇಸಿಗೆಯಲ್ಲಿ ಈ ರಸ್ತೆಗಳು ಕಾಯ್ದು ಬಿಸಿಲಿಗೆ ಬಿಸಿಲು ಸೇರಿಬಿಡುತ್ತದೆ. ಪರಿಸ್ಥಿತಿಯನ್ನು ಇಲ್ಲಿದ್ದವರು ಅನುಭವಿಸಬೇಕು ಅಷ್ಟೆ.

ಬಿಸಿಲು ಪ್ರಾಂತ್ಯವಾದ ಈ ನಾಡಿನಲ್ಲಿ ಗಿಡಮರಗಳನ್ನು ಬೆಳೆಸಲು ಕಾನೂನುಗಳು ಇವೆ. ಕಡತಗಳಲ್ಲಿವೆ. ಗೋಡೆ ಬರಹಗಳಲ್ಲಿವೆ. ಭಾಷಣಗಳಲ್ಲಿವೆ. ಸಾಂಕೇತಿಕವಾಗಿವೆ. ಆದರೆ, ಸಾಮಾನ್ಯರಿಗೆ ಕಾನೂನು ಎಂದೂ ಅಡ್ಡಿಯಾಗುವುದಿಲ್ಲ. ಬಗ್ಗಿಸಿ ಮಾಡುವ ಕಾನೂನುಗಳು ಬೇಕು.

ಈ ಬಳ್ಳಾರಿ, ರಾಯಚೂರು, ಕಲಬುರಗಿ, ಬೀದರ್‌, ಯಾದಗಿರಿ, ಕೊಪ್ಪಳ, ವಿಜಯಪುರ ಜಿಲ್ಲೆಗಳಲ್ಲಿ ಅತಿ ಬೇಸಿಗೆ, ಬೇಸಿಗೆ ಎಂಬ ಎರಡು ಕಾಲಗಳಿವೆ ಎಂಬುದು ತಮಾಷೆಯಾಗಿ ಉಳಿದಿಲ್ಲ. ಈ ಜಿಲ್ಲೆಗಳಲ್ಲಿ ಅತಿ ಬೇಸಿಗೆ ಕಾಲದಲ್ಲಿಯೇ ಸಾವಿರಾರು ಜಾತ್ರೆಗಳಿರುತ್ತವೆ. ಮದುವೆಗಳಿರುತ್ತವೆ. ಚುನಾವಣೆಗಳು ನಡೆಯುವುದೇ ಅತಿ ಬೇಸಿಗೆಯ ಕಾಲದಲ್ಲಿ. ಶಾಲಾ-ಕಾಲೇಜುಗಳಲ್ಲಿ ಸೆಮಿಸ್ಟರ್‌ ಪದ್ಧತಿ ಬಂದು ಮೇ ತಿಂಗಳಲ್ಲಿ ಪರೀಕ್ಷೆಗಳು ನಡೆಯುತ್ತವೆ. ಬೇಸಿಗೆಯ ಬಿಸಿಲಿಗೆ ಸಾಯುವವರ ಲೆಕ್ಕಗಳನ್ನು ಮಾಧ್ಯದವರು ಇಡುವುದಿಲ್ಲ. ಅತಿ ಬೇಸಿಗೆಯ ಕಾಲದಲ್ಲಿ ನಡೆಯುವ ಚುನಾವಣೆಗಳ ಕೆಲಸಕ್ಕೆ ನಿಯೋಜನೆಗೊಂಡ ಸರ್ಕಾರಿ ನೌಕರರ ಪಾಡು ಅವರಿಗೇ ಗೊತ್ತು! ಪ್ರತಿ ಚುನಾವಣೆಗಳು ನಡೆದಾಗ ಕೆಲಸದ ಸಿಬ್ಬಂದಿಗಳು ಸಾಯುತ್ತಲೇ ಇರುತ್ತಾರೆ. ಈ ಸಲವೂ ಮೂವರು ಸತ್ತಿದ್ದಾರೆ. ಮಾಧ್ಯಮಗಳು ಈ ವಿಷಯವನ್ನು ಪರಿಗಣಿಸಿಯೇ ಇಲ್ಲ. ಸತ್ತವರ ಕುಟುಂಬಗಳ ಸ್ಥಿತಿಯನ್ನು ಚುನಾವಣಾ ಕಮಿಷನ್‌ ಕೂಡ ಪರಿಗಣಿಸಿಲ್ಲವೆಂದು ಎಲ್ಲರಿಗೂ ಗೊತ್ತಿದೆ.

ಈ ಜಿಲ್ಲೆಗಳಲ್ಲಿ ಬೇಸಿಗೆಯಲ್ಲಿ 43ರಿಂದ 44 ಡಿಗ್ರಿ ಸೆಲ್ಸಿಯಸ್‌ ಬಿಸಿ ಇರುತ್ತದೆ. ಈ ಬೇಸಿಗೆಯಲ್ಲಿ ಗಾಳಿ ಅದೆಲ್ಲಿ ಅಡಗಿರುತ್ತದೋ ದೇವರೇ ಬಲ್ಲ. ಕರೆಂಟ್‌ ಸರಿಯಾಗಿ ಇರುವುದಿಲ್ಲ. ರಾತ್ರಿ-ಹಗಲು ಕಳೆಯುವುದು ಕಷ್ಟ. ಅದರಲ್ಲಿ ಹುಟ್ಟಿದ ಮಕ್ಕಳು, ವಯಸ್ಸಾದವರು ಅನುಭವಿಸುವ ಪಾಡನ್ನು ಅವರೇ ಬಲ್ಲರು. ರಾತ್ರಿ ಇರಲಿ, ಹಗಲು ಇರಲಿ ಈ ಪ್ರಾಂತ್ಯದಲ್ಲಿ ಕರೆಂಟ್‌ 24 ತಾಸು ಇರಬೇಕು. ಇರುವುದಿಲ್ಲ. ಹಳ್ಳಿಗಳಲ್ಲಿ ಬೇಸಿಗೆ ಬಂದರೆ ಮನೆಯಿಂದ ಹೊರಗಿರುವ ಹವ್ಯಾಸ ಬೆಳೆಯುತ್ತದೆ. ರಾತ್ರಿ ಮಲಗುವುದೂ ಮನೆಯ ಹೊರಗೆ. ನಗರಗಳಲ್ಲಿ ಸಾಮಾನ್ಯರು ರಸ್ತೆಯ ಮೇಲೆಯೇ. ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ರಾತ್ರಿಯಲ್ಲಿ ಕಾಲಿಡಲು ಆಗದಂತೆ ಸಾಮಾನ್ಯರು ಮಲಗಿರುತ್ತಾರೆ.

ಬಿಸಿಲ ಪುರಾಣ ಮುಗಿಯಲು ಸಾಧ್ಯವಿಲ್ಲ. ಬೇಸಿಗೆಯಲ್ಲಿ ನಾನು ಮನೆಯಲ್ಲಿರುತ್ತೇನೆ. ಮನೆಯೊಳಗಿನ ಕಷ್ಟಗಳೂ ಸ್ವಾರಸ್ಯವಾಗಿರುತ್ತವೆ. ಬೇಸಿಗೆ ಬಂದರೆ ಕೆಂಪು ಇರುವೆಗಳ ಹಾವಳಿ ಶುರುವಾಗುತ್ತದೆ. ಯಾವುದೇ ವಸ್ತುವಿಗೆ ಈ ಕೆಂಪು ಇರುವೆಗಳು ಮುತ್ತುತ್ತವೆ. ಅಡಿಗೆಯ ಪಾತ್ರೆಗಳನ್ನು ದೊಡ್ಡ ತಾಟಿನಲ್ಲಿ ನೀರು ಹಾಕಿ, ಅದರ ನಡುವೆ ಇಡಬೇಕು. ನಾನು ಹಾಗೆಯೇ ಮಾಡುತ್ತೇನೆ. ಆದರೂ ಪಾತ್ರೆಗಳಿಗೆ ಇರುವೆ ಮುತ್ತಿರುತ್ತವೆ. ಪರೀಕ್ಷಿಸಿದರೆ ತಾಟಿನಲ್ಲಿ ಹಾಕಿದ ನೀರು ಆವಿಯಾಗಿ ಹೋಗಿದೆ. ಅಂದರೆ ಬಿಸಿಲಿನ ತಾಪ ಎಷ್ಟಿರಬೇಕು? ಜೀನ್ಸ್‌ ಪ್ಯಾಂಟ್‌ ಒಂದೇ ಗಂಟೆಯಲ್ಲಿ ತೊಳೆದು ಮನೆಯೊಳಗೆ ಹಾಕಿದರೂ ಒಣಗುತ್ತದೆ. ಬೈಕ್‌ ಮೇಲೆ ಹೋಗುವಾಗ ಒಂದು ಕಿ.ಮೀ. ಹೋಗುವುದರಲ್ಲಿ ಹ್ಯಾಂಡಲ್‌ ಹಿಡಿದ ಕೈ, ಬೆರಳುಗಳು, ಪೆಡಲ್‌ ಮೇಲಿಟ್ಟ ಪಾದಗಳು ಚುರುಚುರು ಉರಿಯುತ್ತವೆ. ನಮ್ಮ ಜನ ಈ ಬಿಸಿಲಿಗೆ ಬಳಲಿ ತಂಪು ಪಾನೀಯಗಳಿಗಿಂತ ಮೊರೆಹೋಗುವುದು ಮಿರ್ಚಿ ಬಜಿಗೆ. ನಾನಾ ತರಹದ ಕರಿದ ಪದಾರ್ಥಗಳಿಗೆ ಮುಗಿಬೀಳುತ್ತಾರೆ!

ಅಮರೇಶ ನುಗಡೋಣಿ

ಟಾಪ್ ನ್ಯೂಸ್

Modi Interview

J&K; ಉಗ್ರರ ನಿಗ್ರಹ ಸಾಮರ್ಥ್ಯಗಳ ಸಂಪೂರ್ಣ ಶ್ರೇಣಿ ನಿಯೋಜಿಸಲು ಮೋದಿ ಕರೆ

ಅಪ್ಪನ ಬಗ್ಗೆ ಕೆಟ್ಟದಾಗಿ ಕಮೆಂಟ್‌ ಮಾಡಿದವರಿಗೆ ಧನ್ಯವಾದ… ದರ್ಶನ್‌ ಪುತ್ರನ ಪೋಸ್ಟ್ ವೈರಲ್

ಅಪ್ಪನ ಬಗ್ಗೆ ಕೆಟ್ಟದಾಗಿ ಕಮೆಂಟ್‌ ಮಾಡಿದವರಿಗೆ ಧನ್ಯವಾದ… ದರ್ಶನ್‌ ಪುತ್ರನ ಪೋಸ್ಟ್ ವೈರಲ್

arrested

Renuka Swamy ಹತ್ಯೆ ಪ್ರಕರಣ; A-8 ಆರೋಪಿ ಪೊಲೀಸರಿಗೆ ಶರಣು

drowned

Srirangapatna: ಕಾವೇರಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು

1-ajit

Security; ಮೂರನೇ ಬಾರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ ನೇಮಕ

3

Pradeep K Vijayan: ಮನೆಯಲ್ಲಿ ಶವವಾಗಿ ಪತ್ತೆಯಾದ ಖ್ಯಾತ ನಟ; ತನಿಖೆ ಆರಂಭ

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ…

Rainy Days Memories: ಮಳೆಯಲ್ಲಿ ಸಂಭ್ರಮ ಮನದ ತುಂಬ ಚಂದ್ರಮ!

Rainy Days Memories: ಮಳೆಯಲ್ಲಿ ಸಂಭ್ರಮ ಮನದ ತುಂಬ ಚಂದ್ರಮ!

Rainy Days: ಮಳೆ ಎಂಬ ಮಾಯೆ!

Rainy Days: ಮಳೆ ಎಂಬ ಮಾಯೆ!

Solo ಎಲ್ಲ ಸೋಲೇ ಇಲ್ಲ… ಒಬ್ಬಂಟಿ ಯಾತ್ರಿಕರ ‌ಡೈರಿ

Solo ಎಲ್ಲ ಸೋಲೇ ಇಲ್ಲ… ಒಬ್ಬಂಟಿ ಯಾತ್ರಿಕರ ‌ಡೈರಿ

17

Baratang‌ Island: ಬಾರಾತಂಗ್‌ ಎಂಬ ಬೆರಗು

MUST WATCH

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

udayavani youtube

ಪ್ಯಾಕೇಜ್ಡ್ ಫುಡ್ ಆರೋಗ್ಯಕರವಾದದ್ದೇ ? | ತಜ್ಞರು ಹೇಳುವುದೇನು?

ಹೊಸ ಸೇರ್ಪಡೆ

1-msss

Congress ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

8

ವಿಷ ಸೇವನೆ : ಪದವಿ ವಿದ್ಯಾರ್ಥಿನಿಯ ಸಾವು 

Modi Interview

J&K; ಉಗ್ರರ ನಿಗ್ರಹ ಸಾಮರ್ಥ್ಯಗಳ ಸಂಪೂರ್ಣ ಶ್ರೇಣಿ ನಿಯೋಜಿಸಲು ಮೋದಿ ಕರೆ

Padubidri: ಶೌಚಾಲಯದಲ್ಲಿ ಕುಸಿದು ಬಿದ್ದು ಸಾವು

Padubidri: ಶೌಚಾಲಯದಲ್ಲಿ ಕುಸಿದು ಬಿದ್ದು ಸಾವು

6

Bantwal: ಅಕ್ರಮ ಮರಳು ಸಾಗಾಟ: ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.