ನೈಜೀರಿಯಾದ ಕತೆ: ಆಮೆ ಕಲಿಸಿದ ಪಾಠ

Team Udayavani, Jun 2, 2019, 6:00 AM IST

ಒಮ್ಮೆ ಕಾಡಿನಲ್ಲಿ ಭೀಕರ ಕ್ಷಾಮ ಬಂದಿತು. ಮಳೆಯಿಲ್ಲದೆ ಜಲಾಶಯಗಳು ಬತ್ತಿಹೋದವು. ಮರಗಿಡಗಳು ಒಣಗಿದವು. ಈ ಸಮಯದಲ್ಲಿ ಕಾಡಿನ ರಾಜನಾದ ಸಿಂಹವು ಸಸ್ಯಗಳನ್ನು ತಿಂದು ಬದುಕುವ ಎಲ್ಲ ಪ್ರಾಣಿಗಳನ್ನೂ ಸಭೆ ಕರೆಯಿತು. “”ನೀವೆಲ್ಲರೂ ಆಹಾರವಿಲ್ಲದೆ ಸಾಯುವ ಬದಲು ಒಂದು ಪುಣ್ಯಕಾರ್ಯವನ್ನು ಮಾಡಬಹುದಲ್ಲವೆ?” ಎಂದು ಕೇಳಿತು. ಪ್ರಾಣಿಗಳು ಒಕ್ಕೊರಲಿನಿಂದ, “”ಪುಣ್ಯಕಾರ್ಯವೆ? ದೊರೆಗಳು ಏನೆಂದು ವಿವರವಾಗಿ ಹೇಳಿದರೆ ಯೋಚನೆ ಮಾಡಬಹುದು” ಎಂದವು.

“”ಬೇರೇನಲ್ಲ, ಹೇಗಿದ್ದರೂ ಸಾಯುತ್ತೀರಿ. ವೃಥಾ ಈ ದೇಹವನ್ನು ಮಣ್ಣು ಮಾಡುವ ಬದಲು ಬದುಕಿದ್ದಾಗಲೇ ಯಾರಾದರೂ ದೊಡ್ಡ ವ್ಯಕ್ತಿಗಳಿಗೆ ದಾನವಾಗಿ ಕೊಡಬಹುದು. ನಮ್ಮಂತಹ ಮಾಂಸಾಹಾರಿಗಳ ಹಸಿವು ನೀಗಲು ನಿಮ್ಮ ನಶ್ವರವಾದ ಶರೀರ ಸದ್ಬಳಕೆಯಾದರೆ ಸ್ವರ್ಗದಲ್ಲಿ ನಿಮಗೆ ದೊಡ್ಡ ಸ್ಥಾನ ಸಿಗುವುದು ಖಂಡಿತ” ಎಂದು ಬಣ್ಣದ ಮಾತುಗಳನ್ನು ಹೇಳಿತು ಸಿಂಹ. ಅದರ ಮಾತಿನ ಉದ್ದೇಶ ಎಲ್ಲ ಪ್ರಾಣಿಗಳಿಗೂ ಅರ್ಥವಾಯಿತು. ಅಳಿಲು ಪಿಳಿಪಿಳಿ ಕಣ್ಣು ಬಿಡುತ್ತ, “”ದೊರೆಯೇ, ಬರಗಾಲ ಬಂತು ಎಂದ ಕೂಡಲೇ ಯಾರಾದರೂ ಸಾಯಲು ಸಿದ್ಧರಾಗುತ್ತಾರೆಯೆ? ದೇವರು ದೊಡ್ಡವನು. ಇಂದಲ್ಲ, ನಾಳೆಯಾದರೂ ನಮ್ಮ ಗೋಳನ್ನು ಅರ್ಥ ಮಾಡಿಕೊಂಡು ಧಾರಾಳ ಮಳೆ ಸುರಿಸಬಹುದು. ಸಸ್ಯಗಳು ಮರಳಿ ಚಿಗುರಬಹುದು. ಆ ವರೆಗೂ ಕಸವನ್ನೋ ಕಡ್ಡಿಯನ್ನೋ ತಿಂದು ಬದುಕಲು ಇಚ್ಛಿಸುತ್ತೇವಲ್ಲದೆ ಸ್ವರ್ಗದಲ್ಲಿ ಜಾಗ ಸಿಗುತ್ತದೆಂದು ಈಗಲೇ ನಿಮಗೆ ಆಹಾರವಾಗಲು ಯಾರಾದರೂ ಹಂಬಲಿಸುತ್ತಾರೆಯೆ?” ಎಂದು ಮೆಲ್ಲಗೆ ಕೇಳಿತು.

ಸಿಂಹ ಕೋಪದಿಂದ ಹೂಂಕರಿಸಿತು. “”ದೊಡ್ಡವರ ಮುಂದೆ ಇಷ್ಟು ಮಾತನಾಡಲು ನಿನಗೆಷ್ಟು ಪೊಗರು? ಹಿತವಾದ ಮಾತುಗಳಿಂದ ಹೇಳಿದರೆ ನನಗೆ ಎದುರು ವಾದಿಸುತ್ತೀಯಲ್ಲವೆ? ನಾನು ಸ್ಪಷ್ಟವಾಗಿ ಹೇಳುತ್ತೇನೆ. ನಾಳೆಯಿಂದ ಒಂದು ಮನೆಯಿಂದ ಒಬ್ಬರ ಹಾಗೆ ಸರದಿ ಯಲ್ಲಿ ಬಂದು ನನಗೆ ಆಹಾರವಾಗಬೇಕು. ಇದಕ್ಕೆ ಯಾರು ಒಪ್ಪುವುದಿಲ್ಲವೋ ಅವರ ಇಡೀ ಕುಟುಂಬವನ್ನು ಒಮ್ಮಲೇ ನಾಶ ಮಾಡಿಬಿಡುತ್ತೇನೆ” ಎಂದು ಪಂಜ ಎತ್ತಿ ತೋರಿಸಿತು.

ಬಡಪಾಯಿ ಪ್ರಾಣಿಗಳು ಭಯದಿಂದ ನಡುಗಿಬಿಟ್ಟವು. ಮೊಲ ಮುಂದೆ ಬಂದು ಸಿಂಹಕ್ಕೆ ವಂದಿಸಿತು. “”ಏನೋ ಹುಡುಗ ಬುದ್ಧಿಯಿಂದ ಅಳಿಲು ಮಾತನಾಡಿತು. ವಿವೇಕಶಾಲಿಯಾದ ತಾವು ವ್ಯಗ್ರರಾಗಬಾರದು. ನಿಮ್ಮ ಮಾತನ್ನು ಮೀರಿದರೆ ನಮ್ಮ ವಂಶ ಉಳಿಯುವುದಿಲ್ಲ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಆದಕಾರಣ ದಿನಕ್ಕೊಂದು ಮನೆಯಿಂದ ಮೊದಲು ಅಲ್ಲಿ ಅಜ್ಜಿಯರಿದ್ದರೆ ನಿಮಗೆ ಆಹಾರವಾಗಲು ತಂದುಕೊಡುತ್ತೇವೆ. ಅದರ ಮೇಲೂ ಕ್ಷಾಮ ನೀಗದಿದ್ದರೆ ತಾಯಂದಿರನ್ನು ತಂದೊಪ್ಪಿಸುತ್ತೇವೆ. ಅನಂತರ ಕೂಡ ಪರಿಸ್ಥಿತಿ ಹೀಗೆಯೇ ಉಳಿದರೆ ನಾವು ನಿಮ್ಮ ಹಸಿವೆ ನೀಗಿಸಿ ಪುಣ್ಯ ಕಟ್ಟಿಕೊಳ್ಳುತ್ತೇವೆ. ದಯಾಳುವಾದ ತಾವು ಈ ವ್ಯವಸ್ಥೆಯನ್ನು ಒಪ್ಪಿಕೊಳ್ಳಬೇಕು” ಎಂದು ಪ್ರಾರ್ಥಿಸಿತು. ಸಿಂಹ ಬಯಸಿದ್ದು ಇದನ್ನೇ ಆದಕಾರಣ, “”ಇದಕ್ಕೆ ನನ್ನ ಒಪ್ಪಿಗೆಯಿದೆ. ಆದರೆ ಯಾರಾದರೂ ಮಾತಿಗೆ ತಪ್ಪಿದರೆ ಮತ್ತೆ ನನ್ನ ಪರಾಕ್ರಮವನ್ನು ತಡೆಯಲು ಬರಬಾರದು” ಎಂದು ಹೇಳಿತು. “”ಆಗಲಿ ದೊರೆ” ಎಂದಿತು ಮೊಲ.

ಮರುದಿನ ಅಳಿಲು ತನ್ನ ಅಜ್ಜಿಯನ್ನು ಕರೆದುಕೊಂಡು ಸಿಂಹದ ಗವಿಗೆ ಬಂದಿತು. ಸಿಂಹ ಅದನ್ನು ಒಂದೇ ತುತ್ತಿಗೆ ಗುಳಮ್ಮನೆ ನುಂಗಿತು. “”ಏನಿದು, ಒಂದು ಹಿಡಿಗೂ ಇಲ್ಲದ ಆಹಾರ ಇಷ್ಟು ದೊಡ್ಡ ದೇಹದ ಹಸಿವು ನೀಗಿಸುತ್ತದೆ ಎಂದುಕೊಂಡಿರಾ? ಎಲ್ಲಿ, ಸರದಿಗಾಗಿ ಕಾಯುವುದು ಬೇಡ. ಇನ್ನಷ್ಟು ಮಂದಿಯ ಅಜ್ಜಿಯರು ಬರಲಿ. ನನ್ನ ಹೊಟ್ಟೆ ತುಂಬುವ ತನಕ ಆಹಾರ ಸಿಗಬೇಕು” ಎಂದು ಕೂಗಾಡಿತು. ಸಿಂಹದ ಆಹಾರವಾಗಲು ಬೆಕ್ಕು, ಮುಳ್ಳುಹಂದಿ ಮೊದಲಾದ ಪ್ರಾಣಿಗಳು ತಮ್ಮ ಅಜ್ಜಿಯರನ್ನು ಕರೆತಂದು ಒಪ್ಪಿಸಿದವು.

ಇದನ್ನು ಕಂಡು ಪುಟ್ಟ ಆಮೆಗೆ ತುಂಬ ಭಯವಾಯಿತು. ಸಿಂಹವು ಮಾತಿಗೆ ತಪ್ಪಿದೆ. ಇದೇ ರೀತಿ ದಿನವೂ ಹಸಿವು ನೀಗುವಷ್ಟು ಪ್ರಾಣಿಗಳನ್ನು ನುಂಗಿದರೆ ಎಲ್ಲವೂ ಅಳಿದುಹೋಗಲು ಹೆಚ್ಚು ದಿನ ಬೇಡ ಎಂದು ಲೆಕ್ಕ ಹಾಕಿತು. ಅದು ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿತ್ತು. ಅಜ್ಜಿಯೇ ಆರೈಕೆ ಮಾಡಿ ಅದನ್ನು ಬೆಳೆಸಿತ್ತು. ಮೊಮ್ಮಗುವಿನ ಮೇಲೆ ಅಜ್ಜಿಗೆ ಎಷ್ಟು ಪ್ರೀತಿ ಇತ್ತೋ ಅಜ್ಜಿಗೂ ಮೊಮ್ಮಗು ಎಂದರೆ ಪಂಚಪ್ರಾಣವಾಗಿತ್ತು. ಆಮೆ ಅಜ್ಜಿಯೊಂದಿಗೆ ಸಿಂಹದ ವಿಷಯ ಹೇಳಿತು. ಎಲ್ಲ ಕೇಳಿದ ಮೇಲೆ ಅಜ್ಜಿ, “”ಹಾಗಿದ್ದರೆ ಸಿಂಹಕ್ಕೆ ಆಹಾರವಾಗಲು ನಾಳೆ ನನ್ನ ಸರದಿ ತಾನೆ? ಒಳ್ಳೆಯದು ಮಗೂ, ಸಿಂಹದ ಸಮೀಪ ನನ್ನನ್ನು ಕರೆದುಕೊಂಡು ಹೋಗಿ ಬಿಟ್ಟು ಬಂದುಬಿಡು. ಆಮೇಲೆ ನಿನ್ನ ಆರೋಗ್ಯವನ್ನು ಚೆನ್ನಾಗಿ ನೋಡಿಕೋ. ನಾನು ಇಲ್ಲ ಎಂದು ದುಃಖದಲ್ಲಿ ಊಟ ಮಾಡದೆ ಇರಬೇಡ” ಎಂದು ಕಣ್ಣೀರು ಮಿಡಿಯಿತು.

ಮರಿ ಆಮೆ ಅಜ್ಜಿಯನ್ನು ಬಿಗಿದಪ್ಪಿಕೊಂಡಿತು. “”ಇಲ್ಲ ಅಜ್ಜಿ, ನನ್ನ ಮೇಲೆ ಇಷ್ಟು ಪ್ರೀತಿಯಿಟ್ಟಿರುವ ನಿನ್ನನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ. ನಾನೊಂದು ಉಪಾಯ ಹುಡುಕಿದ್ದೇನೆ. ಕಾಡಿನಲ್ಲಿ ಒಂದು ದೊಡ್ಡ ಮರವಿದೆ. ನನ್ನ ಗೆಳೆಯರಾದ ಗಿಡುಗ ಪಕ್ಷಿಗಳಿಗೆ ಹೇಳಿ ಅದರ ತುದಿಯಲ್ಲಿರುವ ಗೂಡಿನೊಳಗೆ ನಿನ್ನನ್ನು ರಹಸ್ಯವಾಗಿ ಇಡುವಂತೆ ಹೇಳಿದ್ದೇನೆ. ದಿನವೂ ನಾನು ಆಹಾರದೊಂದಿಗೆ ಮರದ ಬಳಿಗೆ ಬರುತ್ತೇನೆ. ನೀನು ಮೇಲಿನಿಂದ ಒಂದು ಬುಟ್ಟಿಯನ್ನು ಹಗ್ಗದಲ್ಲಿ ಕೆಳಗಿಳಿಸಬೇಕು. ಅದರಲ್ಲಿ ಆಹಾರವನ್ನಿರಿಸಿದ ಬಳಿಕ ಮೇಲಕ್ಕೆಳೆದುಕೊಳ್ಳಬೇಕು. ಹೀಗೆ ನಿನ್ನನ್ನು ಕಾಪಾಡುತ್ತೇನೆ. ಸಿಂಹಕ್ಕೆ ಏನಾದರೊಂದು ಸುಳ್ಳು ಹೇಳುತ್ತೇನೆ” ಎಂದು ಸಣ್ಣ ದನಿಯಲ್ಲಿ ಹೇಳಿತು.

ಗಿಡುಗ ಪಕ್ಷಿಗಳು ಅಜ್ಜಿ ಆಮೆಯನ್ನು ಮರದ ತುದಿಯಲ್ಲಿದ್ದ ಗೂಡಿನಲ್ಲಿ ಸುರಕ್ಷಿತವಾಗಿ ಇರಿಸಿದವು. ಮರಿ ಆಮೆ ಮರುದಿನ ಕಣ್ಣೀರಿಳಿಸುತ್ತ ಸಿಂಹದ ಬಳಿಗೆ ಹೋಯಿತು. “”ಒಡೆಯಾ, ತುಂಬ ದುಃಖದ ಸುದ್ದಿ ಹೇಳಲು ತಮ್ಮ ಬಳಿಗೆ ಬಂದಿದ್ದೇನೆ. ಇಂದು ನಿಮಗೆ ಆಹಾರವಾಗಬೇಕಾಗಿದ್ದ ನನ್ನ ಅಜ್ಜಿಯು ನಿನ್ನೆ ರಾತ್ರೆಯೇ ವೃದ್ಧಾಪ್ಯದಿಂದ ತೀರಿಕೊಂಡಳು. ಪ್ರತಿಯಾಗಿ ನನ್ನ ತಾಯಿಯನ್ನು ಕರೆದುಕೊಂಡು ಬರಬಹುದೆಂದರೆ ಹುಟ್ಟಿದಾಗಲೇ ಅವಳನ್ನು ಕಳೆದುಕೊಂಡೆ. ದಯಾಳುವಾದ ತಮ್ಮ ಹಸಿವು ನೀಗಲು ನನ್ನ ದೇಹ ಮಾತ್ರ ಇದೆ. ಇದರಲ್ಲಿ ಒಂದು ಹಿಡಿ ಮಾಂಸವೂ ಇಲ್ಲ. ತಾವು ಇನ್ನೊಂದು ವರ್ಷ ಕಾದರೆ ಮೃಷ್ಟಾನ್ನ ಮಾಡುವಷ್ಟು ದೇಹ ಬಲಿಯುತ್ತದೆ. ಆಗ ತಿನ್ನಲು ಯೋಗ್ಯನಾಗುತ್ತೇನೆ” ಎಂದು ನಿವೇದಿಸಿತು. ಸಿಂಹ ಅದರ ಮಾತನ್ನು ನಂಬಿತು. “”ಹೌದಲ್ಲವೆ, ಅನಿರೀಕ್ಷಿತವಾಗಿ ಸಾವು ಬಂದರೆ ನೀನಾದರೂ ಏನು ಮಾಡಬಲ್ಲೆ? ಇಂದಿನ ಆಹಾರಕ್ಕೆ ಬೇರೆ ಏನಾದರೂ ಮಾಡುತ್ತೇನೆ. ಮುಂದಿನ ವರ್ಷ ನೀನು ಬಂದು ನನ್ನ ಹಸಿವು ನೀಗಿಸಿದರಾಯಿತು” ಎಂದು ಹೇಳಿ ಅದನ್ನು ಕಳುಹಿಸಿತು.

ಮರಿ ಆಮೆ ನಿಶ್ಚಿಂತೆಯಿಂದ ಮನೆಗೆ ಬಂದಿತು. ದಿನವೂ ರಹಸ್ಯವಾಗಿ ಅಜ್ಜಿ ನೆಲೆಸಿದ ಮರದ ಬಳಿಗೆ ಆಹಾರ ತೆಗೆದುಕೊಂಡು ಹೋಗುತ್ತಿತ್ತು. ಅಜ್ಜಿ ಹಗ್ಗದ ಮೂಲಕ ಮೇಲಿನಿಂದ ಬುಟ್ಟಿಯನ್ನು ಕೆಳಗಿಳಿಸುತ್ತಿತ್ತು. ಮರಿ ಅದರಲ್ಲಿಟ್ಟ ಅಹಾರವನ್ನು ಮೇಲಕ್ಕೆಳೆದುಕೊಳ್ಳುತ್ತಿತ್ತು. ಹೀಗೆ ಬಹು ಕಾಲ ಕಳೆಯಿತು. ಒಂದು ದಿನ ಮಾತ್ರ ಆಮೆ ಆಹಾರ ತಂದು ಬುಟ್ಟಿಯಲ್ಲಿಡುವುದನ್ನು ನರಿ ನೋಡಿತು. ಮರದ ಮೇಲೆ ಅಜ್ಜಿ ಹಾಯಾಗಿರುವುದೂ ಅದಕ್ಕೆ ಗೋಚರಿಸಿತು. ಆಮೇಲೆ ಅರೆಕ್ಷಣವೂ ತಡ ಮಾಡಲಿಲ್ಲ. ನೇರವಾಗಿ ಸಿಂಹದ ಬಳಿಗೆ ಬಂದಿತು.

“”ಒಡೆಯಾ, ದೇಹ ಇಷ್ಟು ದೊಡ್ಡದಿದ್ದರೂ ನಿಮ್ಮ ಮೆದುಳು ಬಹು ಚಿಕ್ಕದು. ದೇಹ ಸಣ್ಣದಾದರೂ ಆಮೆಯ ಜಾಣತನ ದೊಡ್ಡದು. ಅದರ ಮಾತು ನಂಬಿ ಮೋಸ ಹೋದಿರಿ” ಎಂದು ಹಂಗಿಸುತ್ತ ಈ ಸಂಗತಿಯನ್ನು ಹೇಳಿತು. ಸಿಂಹಕ್ಕೆ ತಾಳಲಾಗದಷ್ಟು ಕೋಪ ಬಂದಿತು. “”ಈಗಲೇ ನಡೆ. ಆ ಮರ ಎಲ್ಲಿದೆ ಎಂದು ತೋರಿಸು. ಮುದಿ ಆಮೆಯನ್ನು ಕೆಳಗೆ ತಂದು ಒಂದೇಟಿಗೆ ಕೊಂದುಬಿಡುತ್ತೇನೆ” ಎನ್ನುತ್ತ ನರಿಯೊಂದಿಗೆ ಮರದ ಬಳಿಗೆ ಬಂದಿತು. ಆಗ ಮರಿ ಆಮೆ ಅಜ್ಜಿಗೆ ಆಹಾರ ಕೊಡಲು ಅಲ್ಲಿಗೆ ತಲುಪಿತ್ತು. ಅದು ಸಿಂಹವನ್ನು ಕಂಡು, “”ಪ್ರಭುಗಳು ನನ್ನ ಮೋಸವನ್ನು ಕ್ಷಮಿಸ ಬೇಕು. ಅಜ್ಜಿಯ ಮೇಲಿನ ಪ್ರೀತಿಯಿಂದಾಗಿ ತಮಗೆ ಮೋಸ ಮಾಡಿಬಿಟ್ಟೆ. ತಾವು ಆಹಾರವನ್ನು ಮರದ ಮೇಲೆ ಕಳುಹಿಸುವ ಈ ಬುಟ್ಟಿಯಲ್ಲಿ ಕುಳಿತರೆ ಹಗ್ಗದಲ್ಲಿ ಮೇಲೆಳೆದು ಕೊಳ್ಳಲು ಅಜ್ಜಿಗೆ ಹೇಳುತ್ತೇನೆ. ಅಲ್ಲಿಗೆ ಹೋಗಿ ಅವಳನ್ನು ಆಹಾರವಾಗಿ ಸ್ವೀಕರಿಸಬಹುದು” ಎಂದು ಪ್ರಾರ್ಥಿಸಿತು.

ಆಮೆಯ ಮಾತು ಕೇಳಿ ಸಿಂಹ ಬುಟ್ಟಿಯಲ್ಲಿ ಕುಳಿತ ಕೂಡಲೇ ಅಜ್ಜಿ ಆಮೆ ಅದನ್ನು ಮರದ ಮೇಲೆಳೆದುಕೊಂಡು ಅಲ್ಲಿಂದ ನೇರವಾಗಿ ನೆಲಕ್ಕೆ ಧುಮುಕಿತು. ಚಿಪ್ಪು ಗಟ್ಟಿಯಿರುವ ಕಾರಣ ಅದಕ್ಕೆ ಏನೂ ತೊಂದರೆಯಾಗಲಿಲ್ಲ. ಮೊಮ್ಮಗನೊಂದಿಗೆ ಬೇಗಬೇಗನೆ ದೂರದ ನದಿಗೆ ಹೋಗಿ ಅಲ್ಲೇ ಮನೆ ಮಾಡಿತು. ಬಳಿಕ ಆಮೆಗಳಿಗೆ ನೀರೇ ಮನೆಯಾಯಿತು. ಸಿಂಹವು ಕೆಳಗಿಳಿಯಲಾಗದೆ ಮರದಲ್ಲೇ ಜೋತಾಡುತ್ತ ಇತ್ತು. ಜಿರಾಫೆ ಬಂದು ಅದನ್ನು ಕೆಳಗಿಳಿಸಿದ ಬಳಿಕ ನಾಚಿಕೆಯಿಂದ ಮುಖ ಮರೆಸಿಕೊಂಡು ಓಡಿತು.

ಪ. ರಾಮಕೃಷ್ಣ ಶಾಸ್ತ್ರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮೇಘಾಲಯ ರಾಜ್ಯವು ಹಿಮಾಲಯದ ವಿಶೇಷ ಅನುಗ್ರಹಕ್ಕೊಳಗಾದ ಸುಮಸುಂದರ ತರುಲತೆಗಳ ನಾಡು. ಈ ರಾಜ್ಯದ ಈಸ್ಟ್‌ ಖಾಸಿ ಹಿಲ್ಸ್‌ ಜಿಲ್ಲೆಯಲ್ಲಿರುವ ಒಂದು ಪುಟ್ಟ ಹಳ್ಳಿಯೇ...

  • ಪಾಶ್ಚಾತ್ಯ ವಾದ್ಯಕ್ಕೆ ಭಾರತೀಯ ಸಂಸ್ಕಾರ ಕೊಟ್ಟವರು ಕದ್ರಿ ಗೋಪಾಲನಾಥರು ವಿದ್ಯಾ ಭೂಷಣ ನಮ್ಮ ಊರಿನವರು. ಅಂದರೆ, ದಕ್ಷಿಣಕನ್ನಡ ಜಿಲ್ಲೆಯವರು ಎಂದು ಹೇಳುವುದಕ್ಕೆ...

  • ಅಮರ್ತ್ಯ ಸೇನ್‌ ಅವರಂತೆ ಅಭಿಜಿತ್‌ ಬ್ಯಾನರ್ಜಿ ಅವರದ್ದು ಕೂಡ ಅಭಿವೃದ್ಧಿ ಕೇಂದ್ರಿತ ಸಂಶೋಧನೆ. ಕೊನೆಗೂ ಈ ಅಭಿವೃದ್ಧಿಯನ್ನು ಸಾಧಿಸುವ ಭಾಗವಾಗಿ ನಡೆಯುವ ಬಡತನ...

  • ಆ ಮುದಿಬ್ರಾಹ್ಮಣ ತನ್ನ ಕೈಗಳಲ್ಲಿ ಕರ್ಣನಿಂದ ದಾನವಾಗಿ ಪಡೆದ ಕರ್ಣಕುಂಡಲವನ್ನು ಹಿಡಿದುಕೊಂಡು ನಿಧಾನವಾಗಿ ಹೆಜ್ಜೆಗಳನ್ನು ಊರುತ್ತ ಹೋಗುತ್ತಿದ್ದ. ಅವನ ಹಣ್ಣು...

  • ನಮ್ಮ ಲೇಔಟಿನ ಚಿಕ್ಕ ದಾರಿಯ ಪಕ್ಕದಲ್ಲೊಂದು ಪುಟ್ಟ ಗಿಡ ದೊಡ್ಡದಾಯಿತು. ಹಸು, ಕುರಿ, ಮೇಕೆಗಳು ಗಿಡದ ರೆಂಬೆಗಳನ್ನು ತಿಂದು ಹಾಕಿದರೂ, ಸರಿಯಾಗಿ ನೀರುಣಿಸುವವರು...

ಹೊಸ ಸೇರ್ಪಡೆ