ಕತೆ: ನೀರು

Team Udayavani, Nov 3, 2019, 5:15 AM IST

ಸಾಂದರ್ಭಿಕ ಚಿತ್ರ

ಎಷ್ಟು ದಿನಗಳಿಂದ ಹೀಗೆಯೇ ಕುಳಿತ್ತಿದ್ದೆವೋ ಗೊತ್ತಿಲ್ಲ. ಮೂರ್‍ನಾಲ್ಕು ದಿನವಂತೂ ಕಳೆದಿರಬಹುದು. ಯಾವಾಗಲೂ ಕಪ್ಪಗಿನ ಮೋಡ ಆಗಸವನ್ನು ಆವರಿಸಿರುವ ಕಾರಣ ಇದು ಮುಂಜಾನೆಯೋ, ಮಧ್ಯಾಹ್ನವೋ ಒಂದೂ ಗೊತ್ತಾಗುತ್ತಿಲ್ಲ. ಸುತ್ತಲೂ ನೀರು… ನೀರು… ನೀರು… ಕಣ್ಣು ಹಾಯಿಸಿದಷ್ಟೂ ದೂರದವರೆಗೂ ಬರೀ ನೀರಷ್ಟೇ ಕಾಣಿಸುತ್ತಿದೆ. ಎತ್ತರೆತ್ತರಕ್ಕೆ ಬೆಳೆದು ನಿಂತಿದ್ದ ನಮ್ಮ ಮನೆಯ ಅಕ್ಕಪಕ್ಕದ ತೆಂಗಿನ ಮರಗಳು ನೀರು ಪಾಲಾಗಿವೆ. ಮನೆಯಿಂದ ಕಾಲ್ನಡಿಗೆಯ ದೂರದಲ್ಲಿದ್ದ ನಾಯರ್‌ ಮನೆ, ಅದಕ್ಕಿಂತ ತುಸು ದೂರವೇ ಇದ್ದ ರೇಶನ್‌ ಅಂಗಡಿ ಕುರುಹೇ ಇಲ್ಲದೆ ಜಲಸಮಾಧಿಯಾಗಿದೆ. ಏನಾದರೂ ಕಾಣಲು ಸಿಗುತ್ತದೆಯೇನೋ ಎಂದು ಹುಡುಕಲು ಹೊರಟರೆ ಸಿಗುವುದು ಬರೀ ನೀರು ಮಾತ್ರ.

ನೀರಲ್ಲಿ ಕಸಕಡ್ಡಿ, ಪ್ಲಾಸ್ಟಿಕ್‌ ಬಾಟಲ್‌, ಮರದ ದಿಮ್ಮಿ ಎಲ್ಲವೂ ತೇಲಿ ಹೋಗುತ್ತಿದೆ. ಅಷ್ಟೇ ಅಲ್ಲ , ಪಾತ್ರೆ, ಕುರ್ಚಿ, ಟೇಬಲ್‌, ಟಿವಿ, ಬಟ್ಟೆ, ಚಪ್ಪಲಿ ಇನ್ನು ಏನೇನೋ. ಹಾವು, ನಾಯಿ, ದನಕರುಗಳು ನೆರೆ ನೀರು ಪಾಲಾಗುತ್ತಿದೆ. ನಮ್ಮ ಮನೆ ಎಲ್ಲರ ಮನೆಗಿಂತ ಸ್ಪಲ್ಪ ಎತ್ತರದಲ್ಲಿ ಕಟ್ಟಿರುವ ಕಾರಣ ಮನೆಯ ಟೆರೇಸ್‌ನಲ್ಲಿ ದಿನ ಕಳೆಯಲು ಸಾಧ್ಯವಾಗುತ್ತಿದೆ. ಕೈಯಲ್ಲೊಂದು ಬೇಸಿಕ್‌ ಮೊಬೈಲ್‌ ಸೆಟ್‌, ಒಂದು ಪ್ಯಾಕ್‌ ರಸ್ಕ್, ಸಣ್ಣ ಬಾಟಲಿಯಲ್ಲಿ ಕುಡಿಯೋ ನೀರು ಬಿಟ್ಟರೆ ಇನ್ನೇನೂ ಉಳಿದಿಲ್ಲ. ದಿನಪೂರ್ತಿ ಕಷ್ಟಪಟ್ಟು ಟೆರೇಸ್‌ ಗೋಡೆ ಮೇಲೆ ಹತ್ತಿ ಮೊಬೈಲ್‌ ಎಷ್ಟು ಎತ್ತರಕ್ಕೆ ಹಿಡಿದರೂ “ನೋ ನೆಟ್‌ವರ್ಕ್‌’ ಎಂದೇ ತೋರಿಸುತ್ತಿದೆ. ಈ ನೆರೆ ನೀರಿನಿಂದ ಹೊರ ಬಂದು ಜೀವ ಉಳಿಸಿಕೊಳ್ಳುವುದು ಹೇಗೆ ಎಷ್ಟು ಯೋಚಿಸಿದರೂ ಅರ್ಥವಾಗುತ್ತಿಲ್ಲ.

ಹಾಸಿಗೆ ಹಿಡಿದಿರುವ ಅಮ್ಮ ಮಲಗಿರುವ ಮಂಚದ ಕಾಲು ಈಗಾಗಲೇ ಮುಕ್ಕಾಲು ಭಾಗ ನೀರಲ್ಲಿ ಮುಳುಗಿ ಹೋಗಿದೆ. ನೀರಲ್ಲೇ ನಿಂತಿರುವ ನಮ್ಮ ಕಾಲುಗಳು ಅಲ್ಲೇ ಮರಗಟ್ಟಿದಂತೆ ಭಾಸವಾಗುತ್ತಿದೆ. ನೀರೊಳಗೆ ನಿಂತು ನಿಂತು ತಲೆ, ಕಣ್ಣು, ಮೂಗು ಎಲ್ಲವೂ ಮರಗಟ್ಟಿ ಹೋದ ಅನುಭವ. ಹೊಟ್ಟೆಯೊಳಗೆ ವಿಪರೀತ ನೋವು ಬೇರೆ. ಹಸಿವಾಗಿರೋದಕ್ಕೂ, ಇನ್ನೇನೋ ಕಾರಣಕ್ಕೋ ಗೊತ್ತಿಲ್ಲ. ಅನ್ನ-ನೀರಿಲ್ಲದೆ ನಾಲ್ಕೈದು ದಿನ ಬದುಕಬಹುದು ಅಂತ ವಿಜ್ಞಾನದಲ್ಲಿ ಓದಿದ್ದ ನೆನಪು. ಆದರೆ, ಅದು ಎಷ್ಟರ ಮಟ್ಟಿಗೆ ನಿಜ ಗೊತ್ತಿಲ್ಲ. ಅದು ನಿಜವೇ ಆಗಿದ್ದರೆ ಇನ್ನು ಕೆಲದಿನ ಬದುಕಬಹುದು ನಾವು. ಆಮೇಲೆ… ಸುತ್ತಲೂ ಕಪ್ಪಗೆ ರಾಚುವ ನೀರೇ ಸಾಕು ನಮ್ಮನ್ನು ಜಲಸಮಾಧಿ ಮಾಡಲು.

ನಾವಿಲ್ಲಿದ್ದೇವೆಂದು ಯಾರಿಗಾದರೂ ವಿಷಯ ತಿಳಿಸೋಣವೆಂದರೆ ಮೊಬೈಲ್‌ನಲ್ಲಿ ಸಿಗ್ನಲ್‌ ಸಹ ಇಲ್ಲ. ಜೋರಾಗಿ ಕಿರುಚೋಣ ಎಂದರೆ ಕಣ್ಣು ಎಷ್ಟು ದೂರದವರೆಗೆ ಹಾಯಿಸಿದರೂ ನೀರು ಬಿಟ್ಟು ಇನ್ನೇನು ಕಾಣುತ್ತಿಲ್ಲ. ದಿನಗಳಿಂದ ಅದೇ ಸುಳಿ ಸುಳಿಯಾಗಿ ಓಡೋ ನೀರನ್ನು ನೋಡಿ ಮನದಲ್ಲೇ ಭೀತಿ ಮಡುಗಟ್ಟಿ ನಿಂತಿದೆ. ರಭಸದಿಂದ ಉಕ್ಕೋ ನೀರು ಜವರಾಯ ಸಿದ್ಧನಾಗಿ ಪಾಶ ಹಿಡಿದು ಧಾವಿಸಿ ಬಂದಂತೆ ಭಾಸವಾಗುತ್ತದೆ. ನೀರಿನ ಭರೋ ಭರೋ ಸದ್ದು, ಮತ್ತೆ ಮಳೆಯ ಸೂಚನೆ ನೀಡುವ ಜೋರು ಗಾಳಿ ಎಲ್ಲವೂ ಕೇಳಿ ಕೇಳಿ ಸಾಕಾಗಿದೆ. ಯಾರಾದರೂ ಸಿಬಂದಿ ರಕ್ಷಿಸಲು ಬರುತ್ತಾರೆ ಅನ್ನೋ ಕೊನೆಯ ಆಸೆಯೂ ಹೊರಟು ಹೋಗಿದೆ. ಬಹುಶಃ ಈ ಭೀತಿಗಿಂತ ನೀರಲ್ಲಿ ಕೊಚ್ಚಿ ಹೋದರೇನೇ ಚೆನ್ನಾಗಿತ್ತೇನೋ!

ಊರಲ್ಲಿ ಯಾವತ್ತಿನಂತೆ ಮಳೆಗಾಲದಲ್ಲಿ ಮಳೆ ಶುರುವಾಗಿತ್ತು ಅಷ್ಟೆ. ಅದ್ಯಾವಾಗ ಬಿರುಸು ಪಡೆದುಕೊಂಡಿತೋ ಗೊತ್ತಾಗಲಿಲ್ಲ. ನಮ್ಮ ಮನೆಯ ಹಿಂದಿನ ಗೋಡೆ, ನಾಯರ್‌ ಕಳೆದ ವರ್ಷ ಕಟ್ಟಿಸಿದ್ದ ಹೊಸ ಮನೆ ಕುಸಿದು ಬಿದ್ದಾಗಲೇ ಗೊತ್ತಾಗಿದ್ದು ಮಳೆಯ ಹೊಡೆತ ಹೆಚ್ಚಾಗಿದೆ ಅನ್ನೋದು. ಮುಂದೆ ಏನು ಮಾಡುವುದು, ಎಲ್ಲಿಗೆ ಹೋಗೋದು ಅನ್ನೋ ಗೊಂದಲದಲ್ಲಿ ಇದ್ದಾಗಲೇ ಅನಾಹುತ ನಡೆದೇ ಹೋಗಿತ್ತು. ಅದ್ಯಾವ ಮಳೆಯಲ್ಲಿ ಅಂಥ ಮಳೆ ಸುರೀತು, ಈಗಲೂ ಗೊತ್ತಾಗುತ್ತಿಲ್ಲ. ಮನೆಯಿಂದ ಹೊರಗೆ ಬರಲೂ ಬಿಡದೆ ಮೂರ್ನಾಲ್ಕು ವಾರ ಮಳೆ ಸುರೀತಾನೆ ಇತ್ತು. ಊರ ಬಾವಿ, ನದಿ, ಹೊಳೆಯೆಲ್ಲ ಉಕ್ಕಿ ಹರಿದಿದ್ದಾಯಿತು. ರಸ್ತೆಯೂ ಮುಳುಗಿ ಹೋಯಿತು. ಇನ್ನು ಈ ಊರಲ್ಲಿ ಇರೋಕಾಗಲ್ಲ ಅಂತ ಜನರು ಗಂಟು-ಮೂಟೆ ಕಟ್ಟಿ ಹೊರಡುವ ಹೊತ್ತಿಗ ಮನೆಯೊಳಗೂ ನೀರು ನುಗ್ಗಿ ಎಲ್ಲರನ್ನು ಸ್ವಾಹಾ ಮಾಡಿತ್ತು.

ಸುತ್ತಲೂ ಸಿಟ್ಟಿನಿಂದ ಹೂಂಕರಿಸುತ್ತಿರುವ ನೀರು, ನನ್ನನ್ನು ಎಷ್ಟು ಬೇಕೋ ಅಷ್ಟು ಹಾಳುಗೆಡವಿದಿರಿ… ಎಲ್ಲವನ್ನೂ ಸಹಿಸಿಕೊಂಡೆ. ಮತ್ತಷ್ಟು ಸಹಿಸಿಕೊಂಡೆ, ಇನ್ನಷ್ಟು ಸಹಿಸಿಕೊಂಡೆ. ಆದರೆ, ನಿಮ್ಮ ಆಟಾಟೋಪಕ್ಕೆ ಕೊನೆಯಿಲ್ಲದಾಯಿತು. ಭೂಮಿ ತಾಯಿ ಮುನಿದರೆ ಯಾರಿಗೂ ಉಳಿಗಾಲವಿಲ್ಲ ಎಂದು ಸಾರಿ ಸಾರಿ ಹೇಳಿದಂತೆ ಭಾಸವಾಗುತ್ತಿದೆ. ಮುಂದೇನು ಮಾಡುವುದು, ಸುಮ್ಮನೆ ನೀರಲ್ಲಿ ಮುಳುಗುವವರೆಗೂ ಇಲ್ಲಿ ಕಾಲ ಕಳೆಯುವುದೋ ಅಥವಾ ಜೀವ ಕೈಯಲ್ಲಿ ಹಿಡಿದು ಇನ್ನಷ್ಟು ದಿನ ಹೀಗೆ ಇರುವುದೋ ಒಂದೂ ಅರ್ಥವಾಗುತ್ತಿಲ್ಲ. ಆದರೆ, ಇಂದೋ ನಾಳೆಯೋ ಗೊತ್ತಿಲ್ಲ , ನಾವು ಈ ನೀರಲ್ಲಿ ಮುಳುಗಿ ಹೋಗುತ್ತೇವೆ ಅನ್ನೋದು ಸ್ಪಷ್ಟವಾಗಿದೆ.

ನೀರು ಮೇಲಕ್ಕೇರುತ್ತಲೇ ಇದೆ. ಮಂಚ ಈಗಾಗಲೇ ನೀರಲ್ಲಿ ಮುಳುಗಿ ಹೋಗಿದೆ. ಅಮ್ಮ ನನ್ನ ಅಕ್ಕನ ಆಸರೆಯಲ್ಲೇ ಕಷ್ಟಪಟ್ಟು ನಿಂತಿದ್ದಾರೆ. ಕಣ್ಣೊಳಗೆ ಬದುಕಿ ಬಿಡುತ್ತೇವೆಂಬ ಯಾವ ನಿರೀಕ್ಷೆಯೂ ಉಳಿದಿಲ್ಲ. ಅತ್ತಲಿಂದ ನೀರು ರಭಸದಿಂದ ಉಕ್ಕಿ ಬಂದು ಕಣ್ಣು ಕತ್ತಲಾಗಿದ್ದಷ್ಟೇ ಗೊತ್ತು. “ಅಯ್ಯೋ ನೀರು… ನೀರು…’ ಜೋರಾಗಿ ಕಿರುಚಿದೆ ನಾನು. “ಯಾಕೆ ಅಷ್ಟು ಜೋರಾಗಿ ಕಿರುಚುತ್ತಿ ದ್ದಿ, ಕುಡಿಯೋಕೆ ನೀರಿಲ್ಲಾಂತ ಒದ್ದಾಡ್ತಿದ್ದೀನಿ ನಾನು. ಇವಳೊಬ್ಬಳು’ ಅಕ್ಕ ರೂಮಿನೊಳಗೊಮ್ಮೆ ಇಣುಕಿ ಅಸಹನೆಯಿಂದ ಹೊರ ಹೋದಳು.

“ಅಬ್ಟಾ ಕನಸಾಗಿತ್ತೇ…’ ಎಂಥ ಕೆಟ್ಟ ಕನಸು. ವರ್ಷದ ಹಿಂದೆ ನಡೆದಿದ್ದು ಇದೇ ಅಲ್ಲವೆ? ಎಲ್ಲ ನಿನ್ನೆ ನಡೆದಂತಿದೆ. ಎಷ್ಟು ಭಯಾನಕವಾಗಿತ್ತು ಆ ದಿನಗಳು. ಸಾವು-ಬದುಕಿನ ನಡುವಿನ ಒದ್ದಾಟ. ಬದುಕಿ ಬಿಡುತ್ತೇವೆ ಅನ್ನೋ ಕೊನೆಯ ಆಸೆಯೂ ಹೊರಟು ಹೋದ ಕ್ಷಣ, ಅಷ್ಟು ದೂರದಲ್ಲಿ ಭರವಸೆಯ ಬೆಳಕಿನಂತೆ ಕಾಣಿಸಿದ್ದು ರಕ್ಷಣಾಪಡೆಯ ಬೋಟ್‌. ನೀರಿನ ಸದ್ದಿಗೂ ಸ್ಪರ್ಧೆ ಕೊಟ್ಟು ಶಕ್ತಿಮೀರಿ ಕೂಗಿ ಕೂಗಿ ಬೋಟ್‌ ನಮ್ಮತ್ತ ತಿರುಗುವಾಗ ಮೊಗದಲ್ಲಿ ಮಂದಹಾಸ ಮೂಡಿತ್ತು. ಜೀವ ಉಳಿಸಿಕೊಂಡೆವು ಎಂಬ ಖುಷಿ. ಅಲ್ಲಿಂದ ಸರ್ಕಾರವೇ ವ್ಯವಸ್ಥೆ ಮಾಡಿದ್ದ ಗಂಜಿ ಕೇಂದ್ರಕ್ಕೆ ಸೇರಿದೆವು. ಅದು ಬದುಕಿ ಬಂದ ಮೇಲಿನ ಮತ್ತೂಂದು ಭಯಾನಕ ಬದುಕು.

ಅಲ್ಲಿ ನಮ್ಮಂತೆ ಅದೆಷ್ಟೋ ಮಂದಿಯಿದ್ದರು. ಒಂದಷ್ಟು ಮಂದಿ ಪರಿಚಿತರಿದ್ದರು. ಮನೆಯ ಅಕ್ಕಪಕ್ಕದ ಅದೆಷ್ಟೋ ಮಂದಿ ನೀರು ಪಾಲಾಗಿದ್ದರು. ಮನೆ, ಆಸ್ತಿಪಾಸ್ತಿ ಕಳೆದುಕೊಂಡವರು ಒಂದೆಡೆಯಾದರೆ, ಅಪ್ಪನನ್ನು ಕಳೆದುಕೊಂಡವರು, ಅಮ್ಮನನ್ನು ಕಳೆದುಕೊಂಡವರು, ಮಕ್ಕಳನ್ನು ಕಳೆದುಕೊಂಡವರು ಇನ್ನೊಂದೆಡೆ, ಎಲ್ಲಿ ನೋಡಿದ್ರೂ ಅಳು, ಕೂಗಾಟ, ಚೀರಾಟ, ಕೊನೆಗೊಂದು ನಿಟ್ಟುಸಿರು. ಬದುಕು ಇನ್ನು ಹೀಗೆಯೇ ಎಂದು ಅರ್ಥಮಾಡಿಕೊಳ್ಳಲು ತುಂಬಾ ಸಮಯ ಬೇಕಾಯಿತು.

ಅಮ್ಮನಿಗೆ ತಕ್ಕ ಮಟ್ಟಿಗೆ ಚಿಕಿತ್ಸೆಯೂ ಕೊಡಿಸಿ ಆಯಿತು. ಹೊತ್ತಿನ ಊಟ, ಉಟ್ಟುಕೊಳ್ಳಲು ಬಟ್ಟೆ, ಮಾನವೀಯ ಜನರು ಎಲ್ಲೆಲ್ಲಿಂದಲೂ ಕಳುಹಿಸಿಕೊಟ್ಟರು. ಹಸಿವು ನಿಂತಾಗ, ಮಾನ ಮುಚ್ಚಿಕೊಂಡಾಗ ಬದುಕು ಸ್ಪಲ್ಪ ಹಾಯೆನಿಸಿತು. ಆದರೆ, ಮಳೆ ಸುರಿದಾಗಲ್ಲೆಲ್ಲ ಬೆಚ್ಚಿ ಬೀಳುವುದು ತಪ್ಪಲ್ಲಿಲ್ಲ. ದಿನ ಹೀಗೆ ಕಳೆಯುತ್ತಿತ್ತು. ಒಂದಷ್ಟು ಜನಪ್ರತಿನಿಧಿಗಳು ಗಂಜಿಕೇಂದ್ರಕ್ಕೆ ಬಂದು ಸಾಲು ಸಾಲು ಭರವಸೆಗಳನ್ನೇ ಕೊಟ್ಟು ಹೋದರು. ಆದರೇನು, ಭರವಸೆಗಳಿಂದ ಹೊಟ್ಟೆ ತುಂಬುವುದಿಲ್ಲವಲ್ಲ. ಕೆಲದಿನಗಳಲ್ಲಿ ಎಲ್ಲರೂ ಕಳುಹಿಸಿಕೊಟ್ಟ ಸಾಮಗ್ರಿಗಳು ಕಡಿಮೆ ಬಿದ್ದಿತ್ತು. ಅನ್ನದ ಬದಲು ಬ್ರೆಡ್‌, ಬನ್‌ಗಳಿಂದ ಹೊಟ್ಟೆ ತುಂಬಿಸಿಕೊಳ್ಳಬೇಕಾಯಿತು.

ಸುಮಾರು ಒಂದು ತಿಂಗಳು ಹೀಗೆ ನೀರಿನದ್ದೇ ಕೆಟ್ಟ ಕನಸು ಕಾಣುತ್ತ, ಬೆಚ್ಚಿ ಬೀಳುತ್ತ, ಮುಂದೆ ಹೇಗಪ್ಪಾ ಎಂದು ತಲೆಕೆಡಿಸಿಕೊಳ್ಳುವುದರಲ್ಲೇ ಸಮಯ ಕಳೆಯಿತು. ಮಳೆ ಕಡಿಮೆಯಾಯಿತು. ನೆರೆ ನೀರು ಇಳಿಯಿತು. ನಾವು ಮತ್ತೆ ನಮ್ಮೂರಿನತ್ತ ಪ್ರಯಾಣ ಬೆಳೆಸಬೇಕಾಯ್ತು. ಆದರೆ, ಏನಿದೆ ಅಲ್ಲಿ. ಕುಸಿದು ಬಿದ್ದ ಮನೆ, ಪರಿಚಯವೇ ಸಿಗದಂತೆ ಹಾಳಾಗಿ ಹೋಗಿರುವ ತೋಟವನ್ನು ಬಿಟ್ಟು. ನಮ್ಮನೆಯೊಳಗಿದ್ದ ಅಕ್ಕಿ ಚೀಲದ ಕುರುಹೇ ಇಲ್ಲ. ಹಾವು, ಚೇಳುಗಳು ಮನೆಯೊಳಗೆ ಸೇರಿದ್ದವು. ಅಲ್ಲಿಂದ ಶುರುವಾಯಿತು ಬದುಕು ಕಟ್ಟಿಕೊಳ್ಳುವ ಒದ್ದಾಟ. ವಾರಗಟ್ಟಲೆ ಕುಸಿದ ಮನೆಯನ್ನು ಅಚ್ಚುಕಟ್ಟು ಮಾಡಬೇಕಾಯಿತು. ಮನೆಯಲ್ಲಿದ್ದ ಕೊಳಚೆಯನ್ನೆಲ್ಲ ಹೊರಗೆಸೆದು ನೀಟಾಗಿ ಕ್ಲೀನ್‌ ಮಾಡಲಾಯ್ತು. ಮನೆಯ ತುಂಬ ಗೋಣಿಚೀಲ ಹಾಸಿ ಶೀತವಾತಾವರಣದಿಂದ ಹೊರಬರಲು ಯತ್ನಿಸಿದೆವು.

ಸರ್ಕಾರ ನೆರೆಯಲ್ಲಿ ಮನೆ, ಆಸ್ತಿ ಕಳೆದುಕೊಂಡವರಿಗೆ ಮನೆ ಕಟ್ಟಿಕೊಡುವ ಭರವಸೆ ನೀಡಿತ್ತು. ಆದರೆ, ಯಾವೊಂದು ಕೆಲಸವೂ ನಡೆಯಲಿಲ್ಲ. ಈ ಮಧ್ಯೆ ಚಿಕಿತ್ಸೆಗೆ ದುಡ್ಡು ಸಾಕಾಗದೆ ಅಮ್ಮನ ಆರೋಗ್ಯವೂ ಹದಗೆಟ್ಟಿತು. ಈ ಒದ್ದಾಟದ ಬದುಕು ಅಮ್ಮನಿಗೂ ಸಾಕಾಗಿರಬೇಕು. ಒಂದು ಮುಂಜಾನೆ ನೀರು ತರಲೆಂದು ಹೋದವರು ಅಲ್ಲೇ ಕುಸಿದು ಬಿದ್ದರು. ಅಲ್ಲಿಗೆ ಸಂಪೂರ್ಣವಾಗಿ ಬದುಕು ಮೂರಾಬಟ್ಟೆ. ಮನೆಯಲ್ಲಿ ಅಕ್ಕಿ ಇಲ್ಲ, ಕುಡಿಯೋ ನೀರಿನ ಬಾವಿಯಿಲ್ಲ, ಕೆಲಸಕ್ಕೆ ಸೇರೋಣ ಎಂದರೆ ಕಲಿತ ಸರ್ಟಿಫಿಕೇಟ್‌ ಇಲ್ಲ. ನೊಂದು ಬಂದಾಗ ಸಾಂತ್ವನ ಹೇಳುವ ಹಿರಿಜೀವವೂ ಇಲ್ಲ. ಕೈಯಲ್ಲಿ ಉಳಿದಿರೋದು ಒದ್ದಾಡಿಕೊಂಡು ಉಳಿಸಿಕೊಂಡು ಬಂದ ಜೀವ ಮಾತ್ರ.

ರಾಜಕಾರಣಿಗಳು ಆಗೊಮ್ಮೆ ಈಗೊಮ್ಮೆ ಊರಿಗೆ ಭೇಟಿ ನೀಡುತ್ತಿದ್ದರು. ಜನರು ಅತ್ತು ಕರೆದು ತಮ್ಮ ಸಮಸ್ಯೆ ಹೇಳುತ್ತಿದ್ದರು. ಅವರೂ ಕನಿಕರಪಟ್ಟು ನಮ್ಮ ಕಥೆಯನ್ನೆಲ್ಲಾ ಸಹನೆಯಿಂದ ಕೇಳಿ ಸಾಂತ್ವನ ಹೇಳುತ್ತಿದ್ದರು. ಮತ್ತೂಂದಿಷ್ಟು ಸಾಲು ಸಾಲು ಭರವಸೆಗಳನ್ನು ನೀಡುತ್ತಿದ್ದರು. ನಂತರ ತಮ್ಮ ಬಿಳಿಯಾದ ಪಂಚೆ-ಷರಟುಗಳಿಗೆ ಕೊಳೆಯಾಗದಂತೆ ಕೆಸರುಮಯವಾದ ಮಣ್ಣಿನ ರಸ್ತೆಯನ್ನು ದಾಟಿ ಕಾರು ಹತ್ತಿ ರೊಂಯ್ಯನೆ ಹೊರಟು ಬಿಡುತ್ತಿದ್ದರು. ಯಾರೋ ಬರುತ್ತಾರೆ, ನೆರವು ನೀಡುತ್ತಾರೆ ಅನ್ನೋ ಭರವಸೆಯಲ್ಲೇ ಎಷ್ಟೋ ದಿನಗಳು ಕಳೆದದ್ದಾಯಿತು. ನಮ್ಮ ಜೀವನ ನಾವೇ ಕಟ್ಟಿಕೊಳ್ಳಬೇಕು ಎಂದು ಎಲ್ಲರಿಗೂ ತಡವಾಗಿ ಅರ್ಥವಾಗಿತ್ತು.

ಊರಿಂದ ಊರಿಗೆ ಕೆಲಸಕ್ಕಾಗಿ ಅಲೆದಾಟ ಶುರುವಾಯಿತು. ತುತ್ತಿನ ಚೀಲ ತುಂಬಿಸುವ ಯಾವ ಕೆಲಸವಾದರೂ ಸರಿ ಎಂಬಂತಹಾ ಪರಿಸ್ಥಿತಿ. ಹೊತ್ತಿನ ತುತ್ತು ತುಂಬಿಸಿಕೊಳ್ಳಲು ದಿನವೂ ಊರು ದಾಟಿ ಪಕ್ಕದ ಊರಿಗೆ ತೆರಳಿ ನಿಗದಿತ ಗಂಟೆಗಿಂತ ಅಧಿಕ ಕೆಲಸ ಮಾಡಬೇಕಾಗಿ ಬಂತು. ಬದುಕು ಕಟ್ಟಿಕೊಳ್ಳಲು ಸಾಕಷ್ಟು ಒದ್ದಾಡಬೇಕಾಗಿ ಬಂತು. ನೋವು, ಅವಮಾನ, ಶೋಷಣೆ ಎಲ್ಲವೂ. ಆದರೇನು, ನೀರಿನ ಮಧ್ಯೆಯಿಂದ ಬದುಕಿ ಬಂದಿದ್ದೇವೆ, ಇನ್ನೂ ಬದುಕಬೇಕಲ್ಲ. ಅಂತೂ ಇಂತೂ ಹೇಗೋ ಬದುಕು ತಹಬಂದಿಗೆ ಬರುತ್ತಿದೆ.

ರಾಜಕಾರಣಿಗಳು ಕೊಟ್ಟಿದ್ದು ಭರವಸೆಗಳನ್ನಷ್ಟೇ. ಜನರು ತಮ್ಮ ತಮ್ಮ ಭರವಸೆಯಿಂದಲೇ ಕಷ್ಟಪಟ್ಟು ದುಡಿದು ಮನೆ ಕಟ್ಟಿಕೊಂಡಿದ್ದಾರೆ. ಹಾಗೋ ಹೀಗೋ ತಲೆ ಮೇಲೊಂದು ಸೂರು ನಿರ್ಮಾಣವಾಗಿದೆ. ಹೊತ್ತಿಗೆ ಹೊಟ್ಟೆ ತುಂಬುವಷ್ಟು ಊಟಕ್ಕಾದರೂ ದುಡ್ಡು ಸಂಪಾದನೆಯಾಗುತ್ತಿದೆ. ನೀರಲ್ಲಿ ಮುಳುಗಿದ್ದ ಊರು ಕೂಡಾ ಚೇತರಿಸಿಕೊಳ್ಳುತ್ತಿದೆ. ಧರಾಶಾಹಿಯಾಗಿದ್ದ ಅಂಗಡಿಗಳು ಮತ್ತೆ ಹೊಸದಾಗಿ ತಲೆಯೆತ್ತಿವೆ. ಆಸ್ಪತ್ರೆಯೊಂದು ಇನ್ನೇನು ಶುರುವಾಗುತ್ತಿದೆ. ಶಾಲೆ ಮುಂದಿನ ತಿಂಗಳು ಶುರುವಾಗುತ್ತಂತೆ. ಬದುಕು ತಹಬಂದಿಗೆ ಬಂದಿದೆ. ಸಮಸ್ಯೆಗಳು ಕಡಿಮೆಯಾಗಿ ಎಲ್ಲರ ಬದುಕು ಸಹ ಮೊದಲಿನಂತೆ ಸಾಗುತ್ತಿದೆ. ರಾಜಕಾರಣಿಗಳ ಹುಸಿ ಭರವಸೆ ಎಲ್ಲರಿಗೂ ಅರ್ಥವಾಗಿದೆ.

ಈ ಸಾರಿ ಅಲ್ಲೆಲ್ಲೋ ಉತ್ತರಭಾರತದಲ್ಲಿ ಭಾರೀ ಮಳೆಯಂತೆ. ಎಲ್ಲೆಲ್ಲೂ ನೀರು… ನೀರು… ನೆರೆ… ಜನರು ಪ್ರಾಣ ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ. ಮತ್ತದೇ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ರಾಜಕಾರಣಿಗಳ ಭರವಸೆಗಳು ಮಳೆಗಿಂತಲೂ ಬಿರುಸಾಗಿದೆ. ಅಯ್ಯೋ ಅಲ್ಲಿನ ಜನರ ಸ್ಥಿತಿಯೇ. ಅವರೂ ನಮ್ಮಂತೆ ಆ ಹುಸಿ ಭರವಸೆಗಳನ್ನು ನಂಬುತ್ತಿದ್ದಾರೆ. ಅವರಿಗೆ ಗೊತ್ತಿಲ್ಲ ; ಅವರೂ ಸಹ ಇನ್ನು ನಮ್ಮಂತೆ ಉಳಿಸಿಕೊಂಡ ಜೀವಕ್ಕಾಗಿ ಬದುಕಬೇಕು. ಬದುಕು ಕಟ್ಟಿಕೊಳ್ಳಲು ಒದ್ದಾಡಬೇಕು.

ವಿನುತಾ ಪೆರ್ಲ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಳೆ ನಿಂತ ಮೇಲೂ ಮರದಿಂದ ತೊಟ್ಟಿಕ್ಕುವ ಹನಿಗಳ ಹಾಗೆ ಬಿಸಿಲನಾಡಿನ ಸಮ್ಮೇಳನ ಮುಗಿದ ಮೇಲೂ ಸವಿಕ್ಷಣಗಳು ಮತ್ತೆ ಮತ್ತೆ ಮನಸ್ಸಿಗೆ ಬರುತ್ತಿವೆ. ಫೆಬ್ರವರಿ 5 ರಿಂದ...

  • ಸಿಂಗಾಪುರದಲ್ಲಿ ಪ್ರತಿವರ್ಷ ಜನವರಿ ಕೊನೆಯ ವಾರ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಬರುವ ಚೀನೀಯರ ಹೊಸ ವರ್ಷದ ಯಾವ ಸಂಭ್ರಮಾಚರಣೆಗಳೂ ಹೊರಜಗತ್ತಿಗೆ ಕಾಣದೆ ಜನರೆಲ್ಲ...

  • ಅದೊಂದು ಚಿಕ್ಕ ಊರು. ಹೆಸರು ಹೆಸರೂರು. ಅದರ ಬಗ್ಗೆ ಕೇಳಿದವರಿಲ್ಲ, ಅದನ್ನು ನೋಡಿದವರಿಲ್ಲ. ಅಂಥ ಊರೊಂದು ಇದೆ ಎಂದೇ ಯಾರಿಗೂ ತಿಳಿದಿರಲಿಲ್ಲ. ಒಮ್ಮೆ ಹೀಗಾಯಿತು....

  • ಇತ್ತೀಚೆ ನೋಬೆಲ್‌ ಪ್ರಶಸ್ತಿ ವಿಜೇತ ಅಭಿಜಿತ್‌ ಬ್ಯಾನರ್ಜಿ ಮಾತುಕತೆಯೊಂದರಲ್ಲಿ ತಾನು ಭಾರತದಲ್ಲೇ ಇದ್ದಿದ್ದರೆ ಈ ಪ್ರಶಸ್ತಿ ಸಿಗುತ್ತಿರಲಿಲ್ಲವೆಂಬ ಮಾತು...

  • ಮುಂಬಯಿಯ ಕಾಲಾಘೋಡ ಉತ್ಸವವು ಈಗಷ್ಟೇ ಮುಗಿಯಿತು. ಪ್ರತಿ ಫೆಬ್ರವರಿ ಎರಡನೆಯ ವಾರದಲ್ಲಿ ಜರಗುವ ಈ ಕಲಾ ಉತ್ಸವವು ಕಳೆದ ಇಪ್ಪತ್ತು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ....

ಹೊಸ ಸೇರ್ಪಡೆ