ಗುಲ್ವಾಡಿ – ಸೌಕೂರು ಕುದ್ರು ರಸ್ತೆಯಿಡೀ ಕೆಸರುಮಯ

Team Udayavani, Jun 17, 2019, 6:10 AM IST

ಕುಂದಾಪುರ: ರಸ್ತೆ ನಿರ್ಮಾಣವಾಗಿ ಸುಮಾರು 10 -12 ವರ್ಷಗಳೇ ಕಳೆದಿವೆ. ಆದರೆ ಇನ್ನೂ ಡಾಮರು ಅಥವಾ ಕಾಂಕ್ರೀಟ್‌ ಭಾಗ್ಯ ಸಿಕ್ಕಿಲ್ಲ. ಪ್ರತಿ ಮಳೆಗಾಲದಲ್ಲಿ ಕೆಸರುಮಯ ರಸ್ತೆಯಲ್ಲಿ ಸಂಚರಿಸುವುದೇ ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ.
ಇದು ಗುಲ್ವಾಡಿಯಿಂದ ಸೌಕೂರು ಕುದ್ರುವಿಗೆ ಸಂಪರ್ಕ ಕಲ್ಪಿಸುವ ಸುಮಾರು 3 ಕಿ.ಮೀ. ಉದ್ದದ ರಸ್ತೆಯ ದುಃಸ್ಥಿತಿ. ಈ ಬಗ್ಗೆ ಹಲವು ವರ್ಷಗಳಿಂದ ಸ್ಥಳೀಯರು ಎಲ್ಲ ಹಂತಗಳ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ.
ಮಾಜಿ ಶಾಸಕರು, ಹಾಲಿ ಶಾಸಕರಿಬ್ಬರಿಗೂ ಕೂಡ ರಸ್ತೆ ಡಾಮರೀಕರಣಕ್ಕೆ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದರು. ಆದರೆ ಈ ವರೆಗೆ ಮಾಡಿಕೊಡುವ ಭರವಸೆ ಮಾತ್ರ ಸಿಕ್ಕಿದೆ.
ಈ ರಸ್ತೆಯನ್ನೇ ಆಶ್ರಯಿಸಿಕೊಂಡು ಸೌಕೂರು ಕುದ್ರು ಭಾಗದಲ್ಲಿ ಸುಮಾರು 35-40 ಮನೆಗಳಿವೆ. ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಇವರಿಗೆ ಈ ರಸ್ತೆ ಬಿಟ್ಟರೆ ಸಂಚಾರಕ್ಕೆ ಬೇರೆ ದಾರಿಯಿಲ್ಲ.
ರಸ್ತೆ ನಿರ್ಮಾಣದ ಅನಂತರ ಕೆಲ ವರ್ಷಗಳವರೆಗೆ ಮಣ್ಣಿನ ರಸ್ತೆಯಾಗಿದ್ದು, ಆ ಬಳಿಕ ಜಲ್ಲಿ ಕಲ್ಲು ಹಾಕಲಾಗಿತ್ತು. ಪ್ರಸ್ತುತ ಈ ರಸ್ತೆ ಮಳೆಯ ನೀರು ನಿಂತು ಕೊಳದಂತಾಗಿದ್ದು, ಕೆಸರು ನೀರಿನಲ್ಲಿ ಸಾಗಬೇಕಾದ ಪಾದಚಾರಿಗಳು ಸಂಕಷ್ಟ ಅನುಭವಿಸುವ ಸ್ಥಿತಿ ಇದೆ. ಸಂಬಂಧಿಸಿದ ಇಲಾಖೆ ಕೂಡಲೇ ಡಾಮರೀಕರಣಕ್ಕೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಮನವಿ.

ಕೂಡಲೇ ಸರಿಪಡಿಸಿ
ರಸ್ತೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಶಾಸಕರು ಸಹಿತ ಜಿ.ಪಂ. ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳೆಲ್ಲರಿಗೂ ಮನವಿ ಮಾಡಿದ್ದೇವೆ. ಆದರೆ ಯಾರೂ ಕೂಡ ಸ್ಪಂದಿಸಿಲ್ಲ. ಈಗಂತೂ ಈ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಇನ್ನು ಈ ಮಳೆಗಾಲವಿಡೀ ಹೇಗೆ ಹೋಗುವುದು ಎಂದು ತಿಳಿಯುತ್ತಿಲ್ಲ. ಈಗ ತಾತ್ಕಾಲಿಕವಾಗಿಯಾದರೂ ಸಂಬಂಧಪಟ್ಟವರು ಸುಗಮ ವಾಹನ ಸಂಚಾರಕ್ಕೆ ಅನುವಾಗುವಂತೆ ಕೂಡಲೇ ಹೊಂಡ – ಗುಂಡಿಗಳಿರುವ ಕಡೆ, ಕೆಸರು ಇರುವ ಕಡೆ ಜಲ್ಲಿ ಮಿಶ್ರಿತ ತೇಪೆ ಕಾರ್ಯ ಮಾಡಲಿ. ಮಳೆಗಾಲ ಮುಗಿದ ಬಳಿಕ ಡಾಮರೀಕರಣ ಅಥವಾ ಕಾಂಕ್ರಿಟೀಕರಣ ಮಾಡಲು ಮುಂದಾಗಲಿ.
-ರವೀಂದ್ರ, ಸೌಕೂರು ಕುದ್ರು

ಅನುದಾನಕ್ಕೆ ಪ್ರಯತ್ನ
ಗುಲ್ವಾಡಿ – ಸೌಕೂರು ಕುದ್ರು ರಸ್ತೆಯ ಡಾಮರೀಕರಣದ ಬಗ್ಗೆ ಮಳೆಗಾಲ ಮುಗಿದ ತತ್‌ಕ್ಷಣ ಅನುದಾನಕ್ಕೆ ಪ್ರಯತ್ನಿಸಲಾಗುವುದು. ಈಗ ತಾತ್ಕಾಲಿಕವಾಗಿ ವಾಹನ ಸಂಚರಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ಜರಗಿಸಲು ಸಂಬಂಧಪಟ್ಟವರಿಗೆ ಸೂಚಿಸುತ್ತೇನೆ. ಜಿ.ಪಂ. ಅನುದಾನ ಇನ್ನೂ ಕೂಡ ಹಂಚಿಕೆಯಾಗಿಲ್ಲ.
-ಜ್ಯೋತಿ ನಾಯಕ್‌, ಕಾವ್ರಾಡಿ ಜಿ.ಪಂ. ಸದಸ್ಯೆ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ