ಇಲ್ಲಿಯೇ ಇದ್ದಾರೆ; ಇದ್ದವರ ಮನದಲಿ ಚಂಪಾ


Team Udayavani, Jan 11, 2022, 6:00 AM IST

ಇಲ್ಲಿಯೇ ಇದ್ದಾರೆ; ಇದ್ದವರ ಮನದಲಿ ಚಂಪಾ

ಸಂಕ್ರಮಣ ಪತ್ರಿಕೆಯ ಮೂಲಕ ನೂರಾರು ಕವಿಗಳನ್ನು ಬೆಳೆಸಿದವರು ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ). ತಾವು ನಂಬಿದ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿ ಬದುಕಿದ ಮೇರು ವ್ಯಕ್ತಿತ್ವ ಅವರದು. “ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ’ ಎನ್ನುತ್ತಿದ್ದ ಅವರ ನಿರ್ಗಮನ ದೊಡ್ಡದೊಂದು ಶೂನ್ಯವನ್ನು ಸೃಷ್ಟಿಸಿದೆ.

ಪ್ರೀತಿ ಇಲ್ಲದೆ ಏನನ್ನೂ ಮಾಡಲಾರೆ

ದ್ವೇಷವನ್ನು ಕೂಡ

ಎಂದು ಬರೆದವರು, ಹಾಗೇ ಬದುಕಿದವರು ಚಂಪಾ. ಸಾಹಿತಿ, ಸಂಕ್ರಮಣ ಪತ್ರಿಕೆ ಸಂಪಾದಕ, ಹೋರಾಟಗಾರ, ಸದಾ ವ್ಯಂಗ್ಯವಾಡುವವರು ಎಂದೆಲ್ಲಾ ಅವರು ಪ್ರಸಿದ್ಧಿ ಯಾಗಿದ್ದು, ನಿಜ, ಅವರು ಒರಟರಾಗಿ, ಜಗಳಗಂಟರಾಗಿ ಕಂಡರೂ ಹೃದಯವಂತರಾಗಿದ್ದರು ಎಂಬುದನ್ನು ಮರೆಯ ಲಾಗದು. ಉದಾಹರಣೆಗೆ, ಅವರ ನೇರ ವಿದ್ಯಾರ್ಥಿಯಾಗಿದ್ದ ಶಂಕರ ಕಟಗಿ ಅವರು ಇಂಗ್ಲಿಷ್‌ ಎಂಎ ಓದುವಾಗ ಚಂಪಾ ಅವರ ಮನೆಯಲ್ಲಿ ಊಟ ಮಾಡುತ್ತಿದ್ದರು. ಈ ವಿಷಯವನ್ನು ಯಾರಿಗೂ ಹೇಳಬೇಡವೆಂದು ಚಂಪಾ ಎಚ್ಚರಿಸಿದ್ದರು. ಆದರೆ “ಸಂಕ್ರಮಣ’ ಪತ್ರಿಕೆಯ ಬೆಳ್ಳಿಹಬ್ಬದ ಕಾರ್ಯಕ್ರಮ ಧಾರವಾಡದಲ್ಲಿ ನಡೆದಾಗ ಶಂಕರ ಕಟಗಿ ಅವರು ಈ ಸಂಗತಿಯನ್ನು ನೆನಪಿಸಿಕೊಂಡರು. ಅನಂತರ ಮಾತನಾಡಿದ ಚಂಪಾ “ಕವಿ ಕಟಗಿ ಆಗು, ಕಟಗಿ ಕವಿ ಆಗಬೇಡ’ ಎಂದು ಕುಟುಕಿದ್ದರು.

ನನ್ನ ಪಿಎಚ್‌.ಡಿ. ಗುರುಗಳಾದ ಅವರು ಮತ್ತಾರಿಗೂ ಗೈಡ್‌ (ಮಾರ್ಗದರ್ಶಕರು) ಆಗಲಿಲ್ಲ. ಹೀಗಾಗಿ ಅವರ ಏಕೈಕ ಶಿಷ್ಯ ನಾನು. ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌. ಡಿ. ಕೈಗೊಳ್ಳಲು ನೆರವಾಗಿದ್ದ ಅವರನ್ನು ತಿಂಗಳಿಗೊಮ್ಮೆ ಭೇಟಿಯಾಗಲು ಹೋದಾಗ ನನ್ನೊಂದಿಗೆ ಪುಟ್ಟ ಚಹಾದಂಗಡಿಗೂ ಬರುತ್ತಿದ್ದರು. ನನಗೆ ಪಿಎಚ್‌ಡಿ ಗೈಡ್‌ ಆಗಿದ್ದ ಚಂಪಾ, ತಾವೇ ಪಿಎಚ್‌.ಡಿ ಪೂರ್ಣಗೊಳಿಸಲಿಲ್ಲ. “ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಮಾರ್ಗದರ್ಶಕರೊಬ್ಬರ ಬಳಿ ಪಿಎಚ್‌.ಡಿ ಕೈಗೊಂಡಾಗ ಅವರು ನಿಧನರಾದರು. ಅನಂತರ ಮತ್ತೂಬ್ಬ ಮಾರ್ಗದರ್ಶಕರನ್ನು ಹುಡುಕಿಕೊಂಡೆ.  ಅವರೂ ತೀರಿಕೊಂಡರು. ಹೀಗೆ ಇಬ್ಬರು ಗೈಡ್‌ಗಳು ತೀರಿಕೊಂಡಾಗ ಪಿಎಚ್‌.ಡಿ. ಮಾಡುವುದನ್ನೇ ಕೈಬಿಟ್ಟೆ’ ಎಂದು ತಮಾಷೆಯಾಗಿ ಹೇಳುತ್ತಿದ್ದರು.

ಅವರು ಧಾರವಾಡದಲ್ಲಿದ್ದಾಗ ಯುವ ಲೇಖಕರೊಬ್ಬರು “ಏನ್ರಿ ಸರ, ಸಾಹಿತಿಗಳು ಒಬ್ಬೊಬ್ಬರ ತೀರಿಕೊಳ್ಳಾಕ ಹತ್ಯಾರ?’ ಎಂದು ಆತಂಕದಿಂದ ಕೇಳಿದಾಗ ಚಂಪಾ ಅವರು “ಏನ ಒಟ್ಟಿಗೇ ಸಾಯಬೇಕೇನ್ರಿ?’ ಎಂದಾಗ ಯುವ ಲೇಖಕ ಏನು ಹೇಳಬೇಕೆಂದು ಗೊತ್ತಾಗದೆ ಸುಮ್ಮನಾಗಿದ್ದರು. ಇದು ಚಂಪಾ ಅವರ ಶೈಲಿ. ಸದಾ ವ್ಯಂಗ್ಯ, ವಿಡಂಬನೆ, ತಮಾಷೆ ಮಾಡುತ್ತಿದ್ದ ಚಂಪಾ, ಬಹು ದೊಡ್ಡ ಕನ್ನಡ ಹೋರಾಟಗಾರರು ಎಂಬುದನ್ನು ಮರೆಯಬಾರದು.

ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ “ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ’ ಎಂದು ಕಸಾಪವನ್ನು ಚಳವಳಿಯಲ್ಲಿ ತೊಡಗಿಸಿದ್ದರು ಎಂಬುದು ಗಮನಾರ್ಹ. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವೇ ಬೋಧನಾ ಮಾಧ್ಯಮ ವಾಗಿರಬೇಕು, ಬೇಕಿದ್ದರೆ ಇಂಗ್ಲಿಷನ್ನು ಪ್ರಾಥಮಿಕ 5ನೇ ತರಗತಿಯಿಂದ ಕಲಿಸಬೇಕು. ಕೇಂದ್ರ ಪಠ್ಯಕ್ರಮದ (ಹಿಂದಿ, ಇಂಗ್ಲಿಷ್‌) ಮಾಧ್ಯಮಗಳ ಶಾಲೆಗಳಲ್ಲಿ ಕನ್ನಡವನ್ನು ಕಲಿಸ ಬೇಕು ಎಂದು ಹೋರಾಡಿದ್ದರು. ಜತೆಗೆ ಕನ್ನಡ ನುಡಿ, ಕನ್ನಡಗಡಿ ಜಾಗೃತಿ ಜಾಥಾ ಕೈಗೊಂಡಿದ್ದರು. ಮುಖ್ಯವಾಗಿ ಅವರು ಕಸಾಪ ಅಧ್ಯಕ್ಷರಾಗಿದ್ದಾಗ ಶನಿವಾರದ ಪುಸ್ತಕಸಂತೆ ಗಮನ ಸೆಳೆಯಿತು. ಬೆಂಗಳೂರಿನ ಪರಿಷತ್ತಿನ ಅಂಗಳದಲ್ಲಿ ಕನ್ನಡ ಪುಸ್ತಕ ಪ್ರಕಾಶಕರನ್ನು ಮತ್ತು ಮಾರಾಟಗಾರ

ರನ್ನು ಆಹ್ವಾನಿಸಿ, ರಿಯಾಯಿತಿ ದರದಲ್ಲಿ ಓದುಗರಿಗೆ ಪುಸ್ತಕಗಳು ಸಿಗುವಂತೆ ಕ್ರಮ ಕೈಗೊಂಡರು. ಜತೆಗೆ ‘ಅಧ್ಯಕ್ಷರ ಪುಸ್ತಕನಿಧಿ’ ಎಂದರೆ ತಾವು ಭಾಗವಹಿಸುವ ಕಾರ್ಯ ಕ್ರಮಗಳಲ್ಲಿ ಶಾಲು, ಹಾರದ ಬದಲು ಪುಸ್ತಕ ನೀಡಲು ಕೋರಿಕೊಂಡಿದ್ದರು. ಹಾಗೆ ಸಂಗ್ರಹಗೊಂಡ ಪುಸ್ತಕಗಳನ್ನು ಗಡಿನಾಡ ಗ್ರಂಥಾಲಯಗಳಿಗೆ, ಗ್ರಾಮೀಣ ಗ್ರಂಥಾಲ ಯಗಳಿಗೆ ಕಾಣಿಕೆಯಾಗಿ ನೀಡಿದ್ದರು.

ಬೆಂಗಳೂರು ಗುಲಾಬಿ ನಗರವಲ್ಲ, ಲಾಬಿಗಳ ನಗರ ಎನ್ನುತ್ತಿದ್ದ ಅವರು, ಬೆಂಗಳೂರಲ್ಲಿಯೇ ನೆಲೆಯೂರುವವರೆಗೆ ಅಂದರೆ ಧಾರವಾಡ ಬಿಡುವವರೆಗೂ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್‌ ಮಾಸ್ತರಿಕೆ ಮಾಡಿದವರು. ಆಗೆಲ್ಲ ಸಾಹಿತ್ಯಾಸಕ್ತ ವಿದ್ಯಾರ್ಥಿಗಳಿಗೆ ಥಟ್ಟನೆ ಹತ್ತಿರ ವಾಗುತ್ತಿದ್ದವರೇ ಚಂಪಾ. ಯಾವುದೇ ಎಂಎ ಓದುವ ವಿದ್ಯಾರ್ಥಿಗೆ ಸಾಹಿತ್ಯದಲ್ಲಿ ಆಸಕ್ತಿಯಿದ್ದು, ಬರವಣಿಗೆಯಲ್ಲಿ ತೊಡಗಿಕೊಂಡಿದ್ದರೆ ಚಂಪಾ ಅವರ ಒಡನಾಟ ಸುಲಭವಾಗಿ ಸಿಗುತ್ತಿತ್ತು. ಏಕೆಂದರೆ ಗಿರಡ್ಡಿ ಗೋವಿಂದರಾಜ, ಎಂ.ಎಂ.ಕಲಬುರ್ಗಿ ಸುಲಭವಾಗಿ ಹತ್ತಿರ ಆಗುತ್ತಿರಲಿಲ್ಲ.

ತಮ್ಮ “ಸಂಕ್ರಮಣ’ ಸಾಹಿತ್ಯ ಪತ್ರಿಕೆಯ ಮೂಲಕ ಯುವಲೇಖಕರೂ ಸೇರಿದಂತೆ ಎಲ್ಲ ಬಗೆಯ ಲೇಖಕರಿಗೆ ವೇದಿಕೆ ಒದಗಿಸುತ್ತಿದ್ದರು. ಈ ಮೂಲಕ ಅನೇಕ ಲೇಖಕರನ್ನು ಬೆಳಕಿಗೆ ತಂದರು, ಬೆಳೆಸಿದರು. ಐವತ್ತು ವರ್ಷಗಳವರೆಗೆ ಸಂಕ್ರಮಣ ಪತ್ರಿಕೆ ನಡೆಸಿದ್ದೂ ಅವರ ಅಗ್ಗಳಿಕೆ.

* * *

ತಮ್ಮನ್ನು ಭೇಟಿಯಾದ ಹಿರಿಕಿರಿಯವರೊಂದಿಗೆ ಜವಾರಿ ಕನ್ನಡದಲ್ಲಿ ಮಾತನಾಡುತ್ತ ಆತ್ಮೀಯರಾಗುತ್ತಿದ್ದರು. ಜತೆಗೆ ಮಾತನಾಡುತ್ತಲೇ ಫ‌ನ್‌ ಮಾಡುತ್ತ ನಗಿಸುತ್ತಿದ್ದರು. ಹೀಗೆಯೇ ಒಂದಿನ ಅವರನ್ನು ಕಂಡಾಕ್ಷಣ ಗಿರಡ್ಡಿ ಗೋವಿಂದ ರಾಜ ಅವರು ತಮ್ಮ ತಲೆಗೆ ಕಪ್ಪು ಬಣ್ಣ ಹಚ್ಚಿಕೊಂಡಿದ್ದನ್ನು ಅವರ ಗಮನಕ್ಕೆ ತಂದೆ. ಇದಕ್ಕೆ ಅವರು “ಹೌದ್ರಿ, ಮನಿಗೆ ಪೇಂಟ್‌ ಮಾಡಿಸಾಕ ಹತ್ತಿದ್ದ. ಪೇಂಟ್‌ ಉಳಿದಿರಬೇಕು. ಅದನ್ನ ತಲಿಗೆ ಹಚ್ಚಿಕೊಂಡಾನ’ ಎಂದು ನಕ್ಕಿದ್ದರು.

ಇನ್ನೊಂದು ಉದಾಹರಣೆ; ಧಾರವಾಡದ ಕವಿಯೊಬ್ಬರು ಭೇಟಿಯಾದಾಗಲೆಲ್ಲ ಕವಿತೆ ಓದುವೆ ಎಂದು ಗಂಟು ಬೀಳುತ್ತಿದ್ದರು. ಅವರಿಂದ ತಪ್ಪಿಸಿಕೊಳ್ಳಲು “ನೀವು ಭಾಳ ಸಣ್ಣ ಅದೀರಿ. ಕವಿತೆ ಬರಿಯೋದು ಬಿಡ್ರಿ, ಆರೋಗ್ಯ ಸುಧಾರಿಸ್ತದ ಎಂದಿದ್ದೆ. ಇದರಿಂದ ಸಿಟ್ಟಾದ ಕವಿ, ಚಂಪಾ ಅವರಿಗೆ ದೂರು ನೀಡಿದ್ದರು. ಅನಂತರ ಚಂಪಾ ಅವರು’ ಏನರ ಹೇಳಿ, ಕವಿತೆ ಬರಿಯೋದು ಬಿಡ್ರಿ ಅಂತ ಯಾರಿಗೂ ಹೇಳಬ್ಯಾಡ್ರಿ. ಮುಂದ ತಮಗೆ ತಿಳದ ಬಿಡತಾರ’ ಎಂದು ಸಲಹೆ ನೀಡಿದ್ದರು.

ಗೆಳೆಯರೊಬ್ಬರನ್ನು ಧಾರವಾಡಕ್ಕೆ ಕರೆದುಕೊಂಡು ಹೋಗಿ ಅವರನ್ನು ಪರಿಚಯಿಸಿದಾಗ “ಧಾರವಾಡದಾಗ ಪ್ರೇಕ್ಷಣೀಯ ಸ್ಥಳಗಳು .ಪ್ರೇಕ್ಷಣೀಯ ವ್ಯಕ್ತಿಗಳು ಸಿಗ್ತಾರ’ ಎಂದು ವ್ಯಂಗ್ಯವಾಡಿದ್ದರು. ಹೀಗೆ ಮಾತಿನ ಚಟಾಕಿ ಮೂಲಕ ನಗಿಸುತ್ತಲೇ ನನ್ನಂಥ ವಿದ್ಯಾರ್ಥಿಗಳಿಗೆ ಸ್ಫೂರ್ತಿ, ಮಾರ್ಗದರ್ಶಕರಾಗಿದ್ದರು. ಅನೇಕ ಊರುಗಳಿಗೆ ತಿರುಗಾಡಿ ಅದರಲ್ಲೂ ಸಣ್ಣ ಸಣ್ಣ ಊರುಗಳಿಗೂ ಬಸ್‌ನಲ್ಲಿ ಹೋಗಿ ಭಾಷಣಗಳ ಮೂಲಕ ಪ್ರಭಾವಿಸಿದ್ದರು.

ಯಾವ ಹಮ್ಮಿಲ್ಲದ, ಯಾರಿಗೂ ಬಾಗದ, ಬೀಗದ ಅವರು ಮತ್ತೆ ನಾಟಕಗಳನ್ನು ಬರೆದಿದ್ದರೆ ಕನ್ನಡಕ್ಕೆ ಕೊಡುಗೆ ಯಾಗುತ್ತಿತ್ತು. ಈ ಕುರಿತು ಅವರಿಗೆ ಕೆಲವು ಬಾರಿ ಹೇಳಿದಾಗ ಬರಿತೀನ್ರಿ ಎನ್ನುತ್ತಿದ್ದರೇ ಹೊರತು ಬರೆಯಲಿಲ್ಲ. ಆದರೆ ಧಾರವಾಡದಲ್ಲಿ ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ ಅವರೊಂದಿಗೆ “ಮ್ಯಾಳ’ ತಂಡ ಕಟ್ಟಿ ನಾಟಕವಾಡಿದ್ದರು. ಅದೊಂದು ದಿನ ನಾಟಕ ಪ್ರದರ್ಶನದ ದಿನ ಎಲ್ಲರನ್ನೂ ಕರೆದುಕೊಂಡು ಹೋಗಲು ಮಿನಿ ಬಸ್‌ನೊಂದಿಗೆ ಹೊರಟಿ ದ್ದರು. ಯುವ ಕಲಾವಿದರಿಬ್ಬರು ತಡವಾಗಿ ಬಂದು ಪರಸ್ಪರ ಉತ್ತರ ಕರ್ನಾಟಕ ಭಾಷೆಯಲ್ಲಿ ಬೈದುಕೊಂಡಾಗ’ ಇಬ್ರ ಪಾತ್ರಗಳ ಪರಿಚಯ ಆತ್ರಿ’ ಎಂದು ಚಂಪಾ ತಮಾಷೆ ಮಾಡಿದ್ದರು.

* * *
ಬೇಂದ್ರೆ ಅವರೊಂದಿಗೆ ಚಂಪಾ ಜಗಳವಾಡಿದ್ದನ್ನು ಮರೆಯಲಾಗದು. ಅದೊಂದು ದಿನ ಚಂಪಾ ಅವರದೊಂದು ಹೇಳಿಕೆ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಏನೆಂದರೆ ಬೇಂದ್ರೆ ಯವರ ಸೃಜನಶೀಲತೆ ಬತ್ತಿ ಹೋಗಿದೆ. ಕವಿತೆ ಬರೆಯು ವುದನ್ನು ನಿಲ್ಲಿಸಬೇಕು ಎಂದು. ಇದನ್ನು ಓದಿದ ಬೇಂದ್ರೆಯವರು ಕುದಿದು ಜಗಳವಾಡಲು ಕಾಯುತ್ತಿದ್ದರು. ಹಾಗೆ ಕಾಯುವಾಗ ಅದೊಂದು ದಿನ ಕರ್ನಾಟಕ ವಿಶ್ವವಿದ್ಯಾನಿಲಯ ಆವರಣಕ್ಕೆ ಹೋಗುವ ಮುನ್ನ ರೈಲ್ವೇ ಗೇಟ್‌ ಇದೆ. ರೈಲು ಬರುವ ಮುನ್ನ ಹಾಕಲಾಗಿದ್ದ ಗೇಟ್‌ ಆಚೆ ಬೇಂದ್ರೆ, ಈಚೆ ಚಂಪಾ. ಅವರನ್ನು ಕಂಡಿದ್ದೇ ಕೆಂಡಾ ಮಂಡಲರಾದ ಬೇಂದ್ರೆ ತಮ್ಮ ಪುತ್ರ ವಾಮನ ಅವರ ಸ್ಕೂಟರ್‌ ಹಿಂದೆ ಕುಳಿತಿದ್ದವರು ಇಳಿದು ಚಂಪಾ ಅವರ ಬಳಿ ಜಗಳವಾಡಿದ್ದನ್ನು ಕಣ್ಣಿಗೆ ಕಟ್ಟುವ ಹಾಗೆ’ ಬೇಂದ್ರೆ ನಾನು ಕಂಡಂತೆ, ನನಗೆ ಕಂಡಷ್ಟು’ ಎಂಬ ಪುಟ್ಟ ಪುಸ್ತಕದಲ್ಲಿ ಚಿತ್ರಿಸಿದ್ದಾರೆ. ಹೀಗೆಯೇ ಬೇಂದ್ರೆಯವರ ಕುರಿತೇ ಕವಿತೆಯಲ್ಲಿ

ಹೋಗಿ ಬರ್ತೇನಜ್ಜ, ಹೋಗಿ ಬರ್ತೇನಿ ನಿನ್ನ ಪಾದದ ಧೂಳಿ ನನ್ನ ಹಣೆಯ ಮೇಲಿರಲಿ ಕಣ್ಣೊಳಗೆ ಮಾತ್ರ ಅದು ಬೀಳದಿರಲಿ

ಎಂಬ ಕವಿತೆಯ ಸಾಲುಗಳನ್ನು ಮರೆಯಲಾಗದು. ಹಿರಿಯ ಕವಿಗಳ ಕಾವ್ಯ ಪರಂಪರೆಯ ಪ್ರಭಾವ ಇರಲಿ, ಪರಿಣಾಮವಾಗದಿರಲಿ ಎನ್ನುವ ಆಶಯ ಅವರದಾಗಿತ್ತು. ಹೀಗೆಯೇ ಬದುಕು, ಬರವಣಿಗೆ ಕುರಿತು “ನನ್ನ ಕವಿತೆಗಳಲ್ಲಿ ನನ್ನ ಹುಡುಕದಿರು’ ಎಂದೂ ಅವರು ಕವಿತೆ ಬರೆದದ್ದು ಗಮನಾರ್ಹ.

ಸತ್ತವರು ಎಲ್ಲಿಗೆ ಹೋಗುತ್ತಾರೆ?
ಎಲ್ಲಿಗೂ ಹೋಗುವುದಿಲ್ಲ
ಇಲ್ಲಿಯೇ ಇರುತ್ತಾರೆ
ಇದ್ದವರ ಮನದಲ್ಲಿ..

ಹೀಗೆ ಬರೆದ ಚಂಪಾ, ನನ್ನಂಥ ಅನೇಕರ ಬದುಕಿಗೆ ಸಂಕ್ರಮಣವಾಗಿದ್ದರು. ಅವರು ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೆ ನಮ್ಮೊಳಗೇ ಇದ್ದಾರೆ; ಇರುತ್ತಾರೆ ಕೂಡ.

ನವ್ಯ ಮಾರ್ಗದಲ್ಲಿ ಚಂಪಾ ಕಾವ್ಯ ಕೃಷಿ
ಚಂಪಾ ಅವರು 1939ರ ಜೂನ್‌ 18ರಂದು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹತ್ತಿಮತ್ತೂರಿನಲ್ಲಿ ಜನಿಸಿದರು. ಹಾವೇರಿ, ಧಾರವಾಡದಲ್ಲಿ ಶಿಕ್ಷಣ ಪೂರೈಸಿದ ಅವರಿಗೆ ಕಾಲೇಜು ವಿದ್ಯಾರ್ಥಿಯಾಗಿದ್ದಾಗ ವಿ.ಕೃ.ಗೋಕಾಕರ ಮಾರ್ಗದರ್ಶನ ಸಿಕ್ಕಿತು. ವಿದ್ಯಾರ್ಥಿಯಾಗಿದ್ದಾಗಲೇ ಅವರ ಪ್ರಥಮ ಕವನ ಸಂಕಲನ “ಬಾನುಲಿ’ (1960) ಪ್ರಕಟವಾಯಿತು. ನವ್ಯ ಮಾರ್ಗದಲ್ಲಿ ಕಾವ್ಯ ಕೃಷಿ ಆರಂಭಿಸಿದ ಅವರು ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್‌ ಸ್ನಾತಕೋತ್ತರ (1962) ಪದವಿ ಪಡೆದರು.

ಕರ್ನಾಟಕ ವಿವಿಯಲ್ಲೇ  ಇಂಗ್ಲಿಷ್‌ ವಿಭಾಗದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಅವರು ಸ್ನೇಹಿತರಾದ ಗಿರಡ್ಡಿ ಗೋವಿಂದರಾಜು, ಸಿದ್ದಲಿಂಗ ಪಟ್ಟಣ ಶೆಟ್ಟಿ ಅವರ ಜತೆ ಸೇರಿ  “ಸಂಕ್ರಮಣ’ (1964)ಹೆಸರಿನಲ್ಲಿ ದ್ವೆ„ಮಾಸಿಕ ಪತ್ರಿಕೆ ಆರಂಭಿಸಿದರು. 2018ರ ವರೆಗೂ ಆ ಪತ್ರಿಕೆ ಪ್ರಕಟವಾಯಿತು. ಬ್ರಿಟಿಷ್‌ ಕೌನ್ಸಿಲ್‌ನ ವಿದ್ಯಾರ್ಥಿ ವೇತನದೊಂದಿಗೆ ಇಂಗ್ಲೆಂಡ್‌ನ‌ ಲೀಡ್ಸ್‌ ವಿಶ್ವ ವಿದ್ಯಾನಿಲಯದಿಂದ ಎಂ.ಎ. (ಭಾಷಾಶಾಸ್ತ್ರ) ಪದವಿ ಪೂರೈಸಿದರು. ತುರ್ತುಪರಿಸ್ಥಿತಿ ವಿರೋಧಿಸಿ ಜೆಪಿ ಚಳವಳಿಯಲ್ಲಿ ಭಾಗಿಯಾಗಿ ಸೆರೆಮನೆ ವಾಸ ಅನುಭವಿಸಿದರು. ಗೋಕಾಕ್‌ ಚಳವಳಿಯಲ್ಲಿ ಭಾಗವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.

ಸಾಹಿತ್ಯ ಕೃಷಿ: “ಬಾನುಲಿ, “ಮಧ್ಯಬಿಂದು, “ಹತ್ತೂಂಬತ್ತು ಕವನಗಳು, “ಗಾಂಧಿ ಸ್ಮರಣೆ, “ಓ ನನ್ನ ದೇಶಬಾಂಧವರೆ’,  “ಹೂವು ಹೆಣ್ಣು ತಾರೆ’, “ಅರ್ಧ ಸತ್ಯದ ಹುಡುಗಿ’,”ಗುಂಡಮ್ಮನ ಹಾಡು’, “ಶಾಲಿ¾ಲಾ ಓ ನನ್ನ ಶಾಲಿ¾ಲಾ’ ಸೇರಿದಂತೆ ಹಲವು ಕವನ ಸಂಕಲ ರಚಿಸಿದ್ದಾರೆ.  “ಕೊಡುಗೆ’, “ಅಪ್ಪ’, “ಕುಂಟಾ ಕುಂಟಾ ಕುರವತ್ತಿ’, “ಗುರ್ತಿನವರು’, “ಗೋಕರ್ಣದ ಗೌಡ್‌ಸ್ಯಾನಿ’, “ಕತ್ತಲ ರಾತ್ರಿ’, “ಜಗದಂಬೆಯ ಬೀದಿ ನಾಟಕ’, “ಬರುಡಿಬಾಬಾನ ವಸ್ತ್ರಾಪಹರಣ ಪವಾಡ’, “ನಳಕವಿಯಮಸ್ತಕಾಭಿಷೇಕ’, “ಟಿಂಗರ ಬುಡ್ಡಣ್ಣ’, “ಕತ್ತಲ ರಾತ್ರಿ’, “ವಂದಿಮಾಗಧ’ ಸೇರಿದಂತೆ ಒಟ್ಟು 11 ನಾಟಕಗಳನ್ನು ರಚಿಸಿದ್ದಾರೆ.

“ಸಂಕ್ರಮಣ ಕಾವ್ಯ’, “ಗಾಂಧಿ ಗಾಂಧಿ’, ಜೂನ್‌ 75 ಮಾರ್ಚ್‌ 77, “ನೆಲ್ಸನ್‌ ಮಂಡೆಲಾ’, “ಕನ್ನಡ ನಾಡಿಗೊಂದು ಪ್ರಾದೇಶಿಕ ಪಕ್ಷ’, “ಸಂಕ್ರಮಣ ಸಾಹಿತ್ಯ’, “ಸಂಕ್ರಮಣ ಕಾವ್ಯ ಸಂಚಯ’,”ಬಂಡಾಯ ಮತ್ತು ಸಾಹಿತ್ಯ ಸೇರಿದಂತೆ’ ಹಲವು ಕೃತಿಗಳನ್ನು ಸಂಪಾದಿಸಿದ್ದಾರೆ.

ಚಂಪಾ ಅವರಿಗೆ ಒಲಿದ ಪ್ರಶಸ್ತಿಗಳು

ಕರ್ನಾಟಕ ರಾಜ್ಯೋತ್ಸವ ಪ್ರಸ್ತಿ

ಪಂಪ ಪ್ರಶಸ್ತಿ

ಕರ್ನಾಟಕ ನಾಟಕ ಅಕಾಡೆಮಿ

ಬಸವಶ್ರೀ

ಕರುನಾಡ ಭೂಷಣ

ಸಾಹಿತ್ಯ ಅಖಾಡೆಮಿ ಬಹುಮಾನ

ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ

ಆಳ್ವಾಸ್‌ ನುಡಿಸಿರಿ ಪ್ರಶಸ್ತಿ

ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ

ಕೆ.ವಿ. ಶಂಕರಗೌಡ ರಂಗಭೂಮಿ ಪ್ರಶಸ್ತಿ,

ಸಂದೇಶ್‌ ಮಾಧ್ಯಮ ಪ್ರಶಸ್ತಿ,

2017 ರಲ್ಲಿ ಮೈಸೂರಿನಲ್ಲಿ ನಡೆದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇ ಳನದ ಅಧ್ಯಕ್ಷರಾಗಿ ಆಯ್ಕೆ.

– ಗಣೇಶ ಅಮೀನಗಡ

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.