Updated at Sat,24th Jun, 2017 3:51PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಚಿಕ್ಕೋರ ಬಾಯಲ್ಲಿ ದೊಡ್ಡ ಮಾತು

ಬಹುಶಃ ಯಾವ ಭಾಷೆಯಲ್ಲೂ ಇಷ್ಟೊಂದು ಮಕ್ಕಳ ಸಿನಿಮಾ ಬರುತ್ತಿಲ್ಲ. ಅಷ್ಟರ ಮಟ್ಟಿಗೆ ಕನ್ನಡದಲ್ಲಿ ಮಕ್ಕಳ ಸಿನಿಮಾಗಳು ತಯಾರಾಗುತ್ತಿವೆ. ಹಾರರ್‌ ಸಿನಿಮಾಗಳ ಟ್ರೆಂಡ್‌ ಹೇಗೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋಗುತ್ತಿದೆಯೋ, ಅದೇ ತರಹ ಮಕ್ಕಳ ಸಿನಿಮಾಗಳ ಟ್ರೆಂಡ್‌ ಕೂಡಾ ಹೆಚ್ಚುತ್ತಿದೆ. ಆದರೆ, ಮಕ್ಕಳ ಸಿನಿಮಾಗಳು ಯಾಕೆ ಅಷ್ಟೊಂದು ಗಮನ ಸೆಳೆಯುತ್ತಿಲ್ಲ ಅಂದರೆ ಅದಕ್ಕೆ ಕಾರಣ ಬಿಡುಗಡೆಯ ಭಾಗ್ಯ ಸಿಗದಿರುವುದು.

ಹೌದು, ಬಹುತೇಕ ಮಕ್ಕಳ ಸಿನಿಮಾಗಳು ಸುದ್ದಿಯಾಗೋದು ಮತ್ತು ಹೀಗೊಂದು ಸಿನಿಮಾ ತಯಾರಾಗಿದೆ ಎಂದು ಗೊತ್ತಾಗೋದು ಆ ಸಿನಿಮಾಗಳಿಗೆ ಪ್ರಶಸ್ತಿ ಬಂದಾಗ ಮತ್ತು ತಮಗೆ ಪ್ರಶಸ್ತಿ ಬರಲಿಲ್ಲ ಎಂದು ಕೆಲವು ಚಿತ್ರತಂಡದವರು ಬೇಸರ ತೋಡಿಕೊಂಡಾಗ ಮಾತ್ರ. ಅದೇನೇ ಆದರೂ ಮಕ್ಕಳ ಸಿನಿಮಾಗಳ ಸಂಖ್ಯೆಯಲ್ಲಂತೂ ಗಣನೀಯ ಏರಿಕೆಯಾಗುತ್ತಿದೆ. ಸದ್ಯ 'ಪುಟಾಣಿ ಸಫಾರಿ', 'ಕೀಟ್ಲೆ ಕೃಷ್ಣ', 'ಎಳೆಯರು ನಾವು ಗೆಳೆಯರು', 'ಬೈಸಿಕಲ್‌' ಸೇರಿದಂತೆ ಒಂದಷ್ಟು ಮಕ್ಕಳ ಸಿನಿಮಾಗಳು ಬಿಡುಗಡೆಯ ತಯಾರಿಯಲ್ಲಿದೆ. ಇವೆಲ್ಲವೂ ಮಾಧ್ಯಮದ ಮುಂದೆ ಬಂದು ತಮ್ಮ ಸಿನಿಮಾಗಳನ್ನು ಪ್ರಚಾರ ಮಾಡಿ, ಜನರಿಗೆ ತಲುಪಿಸುವ ಪ್ರಯತ್ನದಲ್ಲಿದೆ. ಇನ್ನು, ಪ್ರಚಾರದ ಗೋಜಿಗೆ ಹೋಗದೇ, ಥಿಯೇಟರ್‌ಗೆ ಬರುವ ಕನಸು ಕಾಣದೇ ಪ್ರಶಸ್ತಿಗಾಗಿಯೇ ಮಾಡಿರುವಂತಹ ಮಕ್ಕಳ ಸಿನಿಮಾಗಳನ್ನು ಲೆಕ್ಕಹಾಕುತ್ತಾ ಹೋದರೆ ಪಟ್ಟಿ ದೊಡ್ಡದಾಗುತ್ತದೆ.

ದಿನದಿಂದ ದಿನಕ್ಕೆ ಮಕ್ಕಳ ಸಿನಿಮಾಗಳ ಹೆಚ್ಚುತ್ತಿರುವಾಗ ಸಹಜವಾಗಿಯೇ ಒಂದು ಪ್ರಶ್ನೆ ಬರುತ್ತದೆ. ಕನ್ನಡದಲ್ಲಿ ಮಕ್ಕಳ ಸಿನಿಮಾಕ್ಕೆ ಅಷ್ಟೊಂದು ಮಾರುಕಟ್ಟೆ ಇದೆಯಾ, ಹಾಕಿದ ಬಂಡವಾಳ ವಾಪಾಸ್‌ ಬರುತ್ತಾ ಅನ್ನೋದು. ಆದರೆ, ಇಲ್ಲಿ ಗಮನಿಸಬೇಕಾದ ಮತ್ತೂಂದು ಅಂಶವೆಂದರೆ ಮಕ್ಕಳ ಸಿನಿಮಾ ಮಾಡುವ ಬಹುತೇಕ ಮಂದಿಯ ಟಾರ್ಗೆಟ್‌ ಪ್ರಶಸ್ತಿ ಮತ್ತು ಸರ್ಕಾರ ಕೊಡುವ 25 ಲಕ್ಷ ಸಬ್ಸಿಡಿ ಎಂಬುದನ್ನು ಅಲ್ಲಗಳೆಯುವಂತಿಲ್ಲ. 2016ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ, ಸಾಕಷ್ಟು ಮಕ್ಕಳ ಸಿನಿಮಾಗಳನ್ನು ನೋಡಿದ್ದ ನಿರ್ದೇಶಕಿ ಕವಿತಾ ಲಂಕೇಶ್‌ ಅವರು ಮಕ್ಕಳ ಸಿನಿಮಾವನ್ನು ಮಕ್ಕಳು ನೋಡುವಂತಾಗಬೇಕು ಮತ್ತು ಗುಣಮಟ್ಟ ಸುಧಾರಣೆಯಾಗಬೇಕು ಎಂದಿದ್ದರು.

'ಮಕ್ಕಳ ಸಿನಿಮಾಗಳ ನಿಜವಾದ ಅರ್ಥವನ್ನು ಕಂಡುಕೊಂಡು ಸಿನಿಮಾ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳ ಸಿನಿಮಾ ಎಂದರೆ ಬೋಧನೆ ಎಂಬುದಾಗಿದೆ. ಹಾಗಾಗಿಯೇ ಬಹುತೇಕ ಮಕ್ಕಳ ಸಿನಿಮಾಗಳು ಕುಡುಕ ಅಪ್ಪ, ಮಗನ ಕಷ್ಟ ... ಇಂತಹ ವಿಷಯಗಳ ಸುತ್ತವೇ ಸುತ್ತುತ್ತವೆ. ಇನ್ನು, ಮಕ್ಕಳ ಸಿನಿಮಾಗಳನ್ನು ಪ್ರಶಸ್ತಿ ಹಾಗೂ ಸಬ್ಸಿಡಿಗಾಗಿ ಮಾಡುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಿನಿಮಾಗಳ ಗುಣಮಟ್ಟ ಕುಸಿಯುತ್ತಿದೆ' ಎನ್ನುವ ಕವಿತಾ ಲಂಕೇಶ್‌ ಅವರು, ಮಕ್ಕಳ ಸಿನಿಮಾವನ್ನು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನವಾಗಬೇಕು ಎನ್ನುತ್ತಾರೆ.

'ಮಕ್ಕಳು ಮಕ್ಕಳಾಗಿರಬೇಕು. ಮಕ್ಕಳ ಬಾಯಲ್ಲಿ ದೊಡ್ಡವರು ಹೇಳುವ ಡೈಲಾಗ್‌ ಹೇಳಿಸಿದರೆ, ಬೋಧನೆ ಮಾಡಿಸಿದರೆ ಅದನ್ನು ಸಹಿಸಿಕೊಳ್ಳೋದು ಕಷ್ಟ. ಈ ಬಾರಿ ಕೆಲವು ಸಿನಿಮಾಗಳನ್ನು ನೋಡುವಾಗ ಯಾಕಪ್ಪಾ ಇವರಿಗೆ ಇಂತಹ ಆಲೋಚನೆ ಬರುತ್ತದೆ ಎಂದು ಸಿಟ್ಟು ಬರುತ್ತಿತ್ತು. ಕೆಲವು ಸಿನಿಮಾಗಳಿಗೆ ಒಂದು ಲಕ್ಷ ರೂಪಾಯಿಯೂ ಖರ್ಚಾಗಿರುವುದಿಲ್ಲ. ಟೈಟಲ್‌ ಕಾರ್ಡ್‌ ಜೊತೆಗೆ ಎರಡು ಮೂರು ಲೊಕೇಶನ್‌ಗಳನ್ನು ತೋರಿಸಿರುತ್ತಾರೆ. ಈ ತರಹ ಮಕ್ಕಳ ಸಿನಿಮಾಗಳನ್ನು ಕೆಲವು ಮಂದಿ ಮಾಡುವುದರಿಂದ ಮಕ್ಕಳ ಸಿನಿಮಾಗಳೆಂದರೆ ಸಬ್ಸಿಡಿ, ಅವಾರ್ಡ್‌ಗಾಗಿ ಮಾಡುವ ಸಿನಿಮಾ ಎನ್ನುವಂತಾಗಿದೆ. ಹಾಲಿವುಡ್‌ನ‌ಲ್ಲಿ ಮಕ್ಕಳ ಸಿನಿಮಾಕ್ಕೆ ದೊಡ್ಡ ಮಾರುಕಟ್ಟೆ ಇದೆ. ಅದಕ್ಕೆ ಕಾರಣ ಅವರು ಆ ಸಿನಿಮಾಗಳನ್ನು ಎಂಟರ್‌ಟೈನಿಂಗ್‌ ಆಗಿ, ಮಕ್ಕಳು ಖುಷಿಪಡುವ ರೀತಿಯಲ್ಲಿ ಮಾಡುತ್ತಾರೆ. ಆ ಪ್ರಯತ್ನ ನಮ್ಮಲ್ಲಿ ಆಗುತ್ತಿಲ್ಲ. ಮಕ್ಕಳ ಸಿನಿಮಾವನ್ನು ಸರಿಯಾಗಿ ಬಳಸಿಕೊಂಡರೆ ಇಲ್ಲೂ ಅದಕ್ಕೊಂದು ಒಳ್ಳೆಯ ಮಾರುಕಟ್ಟೆ ಸಿಗುತ್ತದೆ' ಎನ್ನುವುದು ಕವಿತಾ ಲಂಕೇಶ್‌ ಮಾತು.

ಮಕ್ಕಳ ಸಿನಿಮಾಗಳನ್ನು ಪ್ರಶಸ್ತಿಗಾಗಿ, ಸಬ್ಸಿಡಿಗಾಗಿ ಮಾಡುತ್ತಾರೆ ಎಂಬ ಮಾತಿನ ನಡುವೆಯೇ ಒಂದಷ್ಟು ಮಂದಿ ಪ್ಯಾಶನ್‌ಗಾಗಿ, ಜನರಿಗೆ ತಲುಪಬೇಕೆಂಬ ಉದ್ದೇಶದಿಂದಲೂ ಮಾಡುತ್ತಿದ್ದಾರೆ. ಅಂತಹವರು ಬಜೆಟ್‌ ವಿಷಯದಲ್ಲೂ ಉದಾರಿಗಳಾಗಿರುತ್ತಾರೆ. ಸಿನಿಮಾ ತಲುಪಬೇಕೆಂಬ ಉದ್ದೇಶದಿಂದ ಯಾವುದಕ್ಕೂ ಕಾಂಪ್ರಮೈಸ್‌ ಆಗುವುದಿಲ್ಲ. 'ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ಒಳ್ಳೆಯ ಗುಣಮಟ್ಟವಿರುವ ಮಕ್ಕಳ ಸಿನಿಮಾ ಬಂದಿರಲಿಲ್ಲ. ಆಗ ನಾವ್ಯಾಕೆ ಒಂದು ಗುಣಮಟ್ಟದ ಮಕ್ಕಳ ಸಿನಿಮಾ ಮಾಡಿ ಜನರನ್ನು ಥಿಯೇಟರ್‌ಗೆ ಕರೆಸುವ ಪ್ರಯತ್ನ ಮಾಡಬಾರದು ಎನಿಸಿ ಆರಂಭಿಸಿದ್ದೇ 'ಎಳೆಯರು ನಾವು ಗೆಳೆಯರು'. ಸಿನಿಮಾ ಜನರಿಗೆ ತಲುಪಬೇಕಾದರೆ, ಗುಣಮಟ್ಟ ಕೊಡಬೇಕಾದರೆ ಬಜೆಟ್‌ ಬೇಕು. ಹಾಗಾಗಿಯೇ ನಮ್ಮ ಸಿನಿಮಾದ ಬಜೆಟ್‌ ಕೂಡಾ ಯಾವುದೋ ಕಮರ್ಷಿಯಲ್‌ ಸಿನಿಮಾ ಮಾಡುವಷ್ಟು ಆಗಿದೆ. ಯಾವುದಕ್ಕೂ ಕಾಂಪ್ರಮೈಸ್‌ ಆಗಿಲ್ಲ. ಹಾಗಾಗಿ ಇವತ್ತು ನಮ್ಮ ಸಿನಿಮಾ ಬಗ್ಗೆ ನಾಲ್ಕು ಜನ ಮಾತನಾಡುತ್ತಾರೆ. ಸಿನಿಮಾ ಜನರಿಗೆ ಇಷ್ಟವಾದರೆ ಬಂಡವಾಳ ವಾಪಾಸ್‌ ಬರುತ್ತದೆ ಎಂಬ ವಿಶ್ವಾಸವಿದೆ. ಪ್ರಶಸ್ತಿ, ಸಬ್ಸಿಡಿ ಎಲ್ಲವೂ ಆ ನಂತರದ ಮಾತು' ಎನ್ನುವುದು 'ಎಳೆಯರು ಗೆಳೆಯರು' ಚಿತ್ರದ ನಿರ್ಮಾಪಕ ನಾಗರಾಜ್‌ ಗೋಪಾಲ್‌ ಅವರ ಮಾತು.

ಸದ್ಯ 'ಬೈಸಿಕಲ್‌' ಎನ್ನುವ ಮಕ್ಕಳ ಸಿನಿಮಾ ಕೂಡಾ ತಯಾರಾಗಿ, ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಚಿತ್ರದ ನಿರ್ದೇಶಕ ನವೀನ್‌ ಕೂಡಾ ತಾವು ಖುಷಿಗಾಗಿ ಮತ್ತು ಒಳ್ಳೆಯ ಸಿನಿಮಾ ಮಾಡುವ ಉದ್ದೇಶದಿಂದಷ್ಟೇ ಸಿನಿಮಾ ಮಾಡಿದ್ದೇವೆ ಎನ್ನುತ್ತಾರೆ. 'ನಾವು ಯಾವುದೇ ಕಮರ್ಷಿಯಲ್‌ ಸಿನಿಮಾಕ್ಕೆ ಕಡಿಮೆ ಇಲ್ಲದಂತೆ ಸಿನಿಮಾ ಮಾಡಿದ್ದೇವೆ. ಕಮರ್ಷಿಯಲ್‌ ಆಗಿಯೂ ಈ ಸಿನಿಮಾವನ್ನು ಜನರಿಗೆ ತಲುಪಿಸುವ ಉದ್ದೇಶವಿದೆ' ಎನ್ನುತ್ತಾರೆ ನವೀನ್‌.

ಸಹಜವಾಗಿಯೇ ಒಂದು ಪ್ರಶ್ನೆ ಬರುತ್ತದೆ. ಮಕ್ಕಳ ಸಿನಿಮಾ ಕಮರ್ಷಿಯಲ್‌ ಆದರೆ ಗುಣಮಟ್ಟ ಬರುತ್ತಾ ಎಂದು. ಇಲ್ಲಿ ಕಮರ್ಷಿಯಲ್‌ ಎಂದರೆ ಮಕ್ಕಳ ಕೈಯಲ್ಲಿ ಮೂರು ಫೈಟ್‌, ಎರಡು ಹಾಡು ಮಾಡಿಸೋದು ಅಲ್ಲ. ಬದಲಾಗಿ ಮಕ್ಕಳ ಸಿನಿಮಾವನ್ನು ಕಟ್ಟಿಕೊಡುವ ರೀತಿ ಹಾಗೂ ಗುಣಮಟ್ಟ ಬದಲಾಗೋದು, ಜನರಿಗೆ ಸಿನಿಮಾವನ್ನು ತಲುಪಿಸುವ ಟ್ರೆಂಡ್‌ ಆರಂಭವಾಗೋದು. ಈ ತರಹ ಆದರೆ, ಅದರಲ್ಲಿ ನಟಿಸಿದ ಕಲಾವಿದರು ಕೂಡಾ ಖುಷಿಯಾಗಬಹುದು. ಅವಾರ್ಡ್‌ ಬಂದಾಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲಷ್ಟೇ ಸೀಮಿತವಾಗದೇ, ಜನ ನಮ್ಮ ಸಿನಿಮಾವನ್ನು ನೋಡುತ್ತಿದ್ದಾರಲ್ಲ ಎಂಬ ಖುಷಿ ಕೂಡಾ ಅವರದಾಗಬಹುದು.

- ರವಿಪ್ರಕಾಶ್‌ ರೈ


More News of your Interest

Back to Top