ಪ್ರಶ್ನೆ 


Team Udayavani, Sep 17, 2017, 8:55 AM IST

prashne.jpg

ವೇದಿಕೆ ಎಂದರೆ ನನಗಾಗುವುದಿಲ್ಲ. ನಿಜ ಹೇಳಬೇಕೆಂದರೆ ನಾನು ಅಂಥ ಭಾಷಣಕಾರಳಲ್ಲ. ಆದರೂ ವೇದಿಕೆ ಹತ್ತಲೇಬೇಕಾಗಿತ್ತು; ಹತ್ತಿದೆ. ಸಣ್ಣಗೆ ನಡುಕ ಸುರುವಾಯಿತು. ಎದುರಿಗೆ ಎಷ್ಟೊಂದು ಮುಖಗಳು; ರೆಪ್ಪೆ$ಬಡಿಯದೆ ನನ್ನನ್ನೇ ನೋಡುವ ಕಣ್ಣುಗಳು. ಒಂದೊಂದು ಮುಖದಲ್ಲೂ ಒಂದೊಂದು ಭಾವ. ನಾನು ಏನು ಮಾತನಾಡಿದರೂ ಎಲ್ಲ ಕಿವಿಗಳೂ ನನ್ನ ಮಾತುಗಳನ್ನು ಕೇಳಲು ತೆರೆದುಕೊಂಡೇ ಇದ್ದವು. ನಾನು ಮಾತನಾಡಲೇಬೇಕು. ಮೈಕಿನವನು ಮೈಕನ್ನು ನನ್ನ ಎತ್ತರಕ್ಕೆ ಸರಿಪಡಿಸಿದ; ಅದು ಎಂಥ ಬಿಡುಗಡೆಯ ಕ್ಷಣ. ಇನ್ನಷ್ಟು ಹೊತ್ತು ಅವನು ಮೈಕನ್ನು ಸರಿಮಾಡುತ್ತಲೇ ಇರಲಿ ಎನ್ನಿಸುವ ಭಾವ. ಮೈ ಬೆವರುತ್ತಿದೆ. ಎದೆ ಬಡಿದುಕೊಳ್ಳುತ್ತಿದೆ. ನಾನು ಬಿಡುವ ಉಸಿರೂ ಸದ್ದು ಮಾಡುತ್ತಿದೆ. ನನ್ನ ಬಾಯಿಂದ ಹೊಮ್ಮುವ ಪದಗಳಿಗಾಗಿ ಎಲ್ಲರೂ ಕಾದಿದ್ದಾರೆ. ಕೆಮ್ಮಿ ಗಂಟಲನ್ನು ಸರಿಪಡಿಸಿಕೊಂಡೆ. ಮೇಜಿನ ಮೇಲಿದ್ದ ನೀರಿನ ಗ್ಲಾಸನ್ನೆತ್ತಿಕೊಂಡು ಗಟಗಟ ಕುಡಿದೆ. ಗ್ಲಾಸು ಕೈಯಿಂದ ಜಾರಿಬಿದ್ದೀತೆಂದು ಎರಡೂ ಕೈಗಳಲ್ಲಿ ಭದ್ರವಾಗಿ ಹಿಡಿದುಕೊಂಡಿದ್ದೆ. ನನ್ನ ಈ ವಿಚಿತ್ರ ನಡವಳಿಕೆಯನ್ನು ಎಲ್ಲ ಕಣ್ಣುಗಳೂ ಕುತೂಹಲದಿಂದ ನೋಡುತ್ತಿದ್ದವು. ನನ್ನ ನಡುಕ ಇನ್ನೂ ಹೆಚ್ಚಿದಂತಾಯಿತು. ಎದೆಬಡಿತ ಇನ್ನಷ್ಟು ಜೋರಾಯಿತು.
ಆದರೂ ನಾನು ಮಾತನಾಡಬೇಕು. ನನ್ನ ಮೊದಲ ಕತೆಯನ್ನು ನಾನು ಹೇಗೆ ಬರೆದೆ? 

ಕತೆ ಬರೆಯುವುದನ್ನು ಕಲಿಯುವುದಕ್ಕಾಗಿ ಬಂದಿದ್ದ ಎಳೆಯ ಮನಸ್ಸುಗಳ ಮುಂದೆ ಈ ಗುಟ್ಟನ್ನು ಬಿಚ್ಚಬೇಕಾಗಿತ್ತು. ಅದು ಹೇಳಿದರೆ ಅವರು ಅದನ್ನು ಹಿಡಿದುಬಿಡುವವರಿದ್ದರು. ಹತ್ತಾರು ಕತೆಗಳು ಹುಟ್ಟಿಬಿಡುವ ಸಾಧ್ಯತೆ ಇತ್ತು.
ನಾನು ಮೊದಲ ಕತೆಯನ್ನು ಹೇಗೆ ಬರೆದೆ?

ಯಾವುದನ್ನೂ ಯೋಚಿಸುವುದಕ್ಕೆ ಆಗುತ್ತಲೇ ಇಲ್ಲ. ಎಲ್ಲ ಮರೆತುಹೋಗುತ್ತಿದೆ. ವ್ಯಕ್ತಿಗಳು, ಸಂಗತಿಗಳು, ಪ್ರಪಂಚ, ಸೂರ್ಯ, ಚಂದ್ರ, ಪ್ರಾಣಿಗಳು, ಹೊಲಗದ್ದೆಗಳು, ಕಾಡು, ಗುಡ್ಡಬೆಟ್ಟ, ಸುರಿಯುವ ಮಳೆ, ಭರ್ರನೆ ಬೀಸಿ ಬರುವ ಗಾಳಿ, ನಾನು ಬರೆದ ಕತೆಗಳು, ಮೊದಲ ಕತೆ, ಕೊನೆಯ ಕತೆ ಎಲ್ಲವೂ ಮರೆತುಹೋಗುತ್ತಿವೆ. ಗಡಿಯಾರದ ಟಿಕ್‌ಟಿಕ್‌ ಸದ್ದು ಮಾತ್ರ ಡಂಗುರ ಹೊಡೆದಂತೆ ಕೇಳಿಸುತ್ತಿದೆ. ಈ ಸದ್ದು ಎದೆಯನ್ನು ಹೊಕ್ಕು ತಿವಿಯುತ್ತಿದೆ. ಈ ಸದ್ದಿನಿಂದ, ಈ ತಿವಿತದಿಂದ ತಪ್ಪಿಸಿಕೊಂಡು ಓಡಿಬಿಡಬೇಕೆಂದರೆ ಮುಂದೆಯೇ ಕುಳಿತಿರುವ ಮುಖಗಳು, ನನ್ನನ್ನೇ ನೋಡುತ್ತಿರುವ ಕಣ್ಣುಗಳು, ಮೌನವನ್ನು ಬಿತ್ತಿ ಬೆಳೆಯುತ್ತಿರುವ ಸಭಾಂಗಣ-ಎಲ್ಲವೂ ತಡೆಯುತ್ತಿವೆ. ಎದೆಯ ಮಾತು ಬತ್ತಿದೆ. ಗಂಟಲು ಒಣಗಿ ದಾಹ ಹೆಚ್ಚುತ್ತಿದೆ. ಮತ್ತೆ ಮತ್ತೆ ನೀರು ಕುಡಿಯಲೇ? ನೋಡಿದವರಿಗೆ ಏನೆನ್ನಿಸಬೇಡ; ಉಕ್ಕಿ ಬರುತ್ತಿರುವ ನಗುವನ್ನು ಅವರು ತಡೆದುಕೊಂಡಿರಬಹುದು. ನಾಚಿಕೆಯಾಯಿತು. ನಿಲ್ಲುವುದಕ್ಕೂ ತ್ರಾಣವಿಲ್ಲದಂತಾಗಿದೆ; ಮೈಮನ ಸೋತಿವೆ. ಎಳೆದೆಳೆದು ತಂದರೂ ಮಾತುಗಳು ತಪ್ಪಿಸಿಕೊಳ್ಳುತ್ತಿವೆ.

ಅವತ್ತು  ಆದದ್ದೂ ಇದೇ. ಗಣಪತಿ ಭಾವ ನೋಡಿದ ಒಂದೇ ಒಂದು ನೋಟದಿಂದ.
“ನನ್ನ ಜೇಬಲ್ಲಿದ್ದ ಎರಡು ಸಾವಿರ ರೂಪಾಯಿ ಏನಾಯಿತು?’
ಪ್ರಶ್ನೆ ನೇರ ಮತ್ತು ಸರಳ. “ಏನಾಯಿತು?’ ಎಂದರೆ ಯಾರು ಕದ್ದರು ಎಂದೇ ಅರ್ಥ. ಆದರೆ ಕದ್ದ ಪದವನ್ನು ನೇರವಾಗಿ ಬಳಸಿರಲಿಲ್ಲÉ ಅಷ್ಟೆ. ಕಾಣೆಯಾದ ದುಡ್ಡನ್ನು ಹುಡುಕಿಹುಡುಕಿ ಉತ್ತರ ಕಾಣದ ಅವನು ಒಬ್ಬೊಬ್ಬರನ್ನೂ ದಿಟ್ಟಿಸಿ ನೊಡುತ್ತಿದ್ದ ನೋಟದಲ್ಲಿ ಈ ಪ್ರಶ್ನೆಯಿತ್ತು.

ಅದು ಹಬ್ಬದ ದಿನ. ನೆಂಟರಿಷ್ಟರೆಲ್ಲ ನೆರೆದ ದಿನ. ತವರು ಮನೆಯ ಈ ಹಬ್ಬಕ್ಕೆ ಸಂಭ್ರಮದಿಂದಲೇ ಹೋಗಿದ್ದೆ. ಎಲ್ಲರೂ ಹಾಗೆಯೇ ಬಂದವರು. ಪುಟ್ಟ ಮನೆಯಲ್ಲಿ ಎಷ್ಟು ಕೋಣೆಗಳಿರಲು ಸಾಧ್ಯ? ಒಂದೇ ಕೋಣೆ. ಅದೇ ಡ್ರೆಸ್ಸಿಂಗ್‌ ರೂಮ್‌, ಇಸ್ಪೀಟು ಕೋಣೆ, ಚಾಪೆಯ ಮೇಲೆ ಕಾಲು ಚಾಚಿ ಮಲಗಿ ವಿಶ್ರಾಂತಿ ಪಡೆಯುವ ಕೋಣೆ, ಖಾಸಗೀ ಸಮಾಚಾರ ವಿನಿಮಯದ ಕೋಣೆ ಇತ್ಯಾದಿ. ಎಲ್ಲರ ಬಟ್ಟೆಗಳೂ ಅಲ್ಲಿಯೇ. ಎಲ್ಲರ ಸೀರೆ ಜಾಕೀಟುಗಳೂ ಅಲ್ಲಿಯೇ. ಸ್ನಾನ ಮಾಡಿ ಬಟ್ಟೆ ಬದಲಿಸಲು ಬರುವವರಿಗೂ ಅದೇ ಕೋಣೆಯೇ ಗತಿ. ಒಳಗಿರುವವರನ್ನೆಲ್ಲ ಒಂದು ಕ್ಷಣ ಹೊರಗಟ್ಟಿ ಬಾಗಿಲು ತಳ್ಳಿ ಬಟ್ಟೆ ಬದಲಾಯಿಸಿ, ಮತ್ತೆ ಬಾಗಿಲು ತೆರೆದರೆ ಸರ್ವರಿಗೆ ಪ್ರವೇಶ ನೀಡಿದಂತೆ.

ಒಂದೇ ಕುಟುಂಬದವರು; ಮನೆಯಲ್ಲಿ ಇರುವವರು; ದೂರದಿಂದ ಬಂದ ನೆಂಟರು. ಹೊರಗಿನವರು ಎಂದು ಹೇಳುವ ಯಾರೂ ಇಲ್ಲ. ಎಲ್ಲ ಕಳ್ಳುಬಳ್ಳಿಯವರೇ. ಒಳಗಿನವರೇ.

ಗಣಪತಿ ಭಾವನ ದುಡ್ಡು ಎಲ್ಲಿ ಹೋಯಿತು? ಮೊದಲು ಹುಡುಕಾಟ ಸುರುವಾಯಿತು. ಇಡೀ ಕೋಣೆಯನ್ನೇ ಮೇಲೆ ಕೆಳಗೆ ಮಾಡಿದರೂ ನೋಟುಗಳು ಪತ್ತೆಯಾಗಲಿಲ್ಲ. ಬಟ್ಟೆಗಳನ್ನೆಲ್ಲ ಜಾಲಾಡಿದರೂ, ಜೇಬುಗಳನ್ನೆಲ್ಲ ತಡಕಾಡಿದರೂ ಪತ್ತೆಯೇ ಆಗಲಿಲ್ಲ. ಹಬ್ಬದ ಸಂಭ್ರಮ ಹೀಗೆ ಏಕಾಏಕಿ ಮಂಕಾಗಬಹುದೆಂದು ಯಾರೂ ಎಣಿಸಿರಲಿಲ್ಲ.

“ಇರಲಿ ಬಿಡೋ ಗಣಪಣ್ಣ, ಆಮೇಲೆ ಹುಡುಕೋಣ; ನಿನ್ನ ಖರ್ಚಿಗೆ ಬೇಕಾದರೆ ತಕೋ’ ಎಂದು ಒಂದು ನೋಟಿನ ಕಂತೆಯನ್ನೇ ಪ್ರಭಾಕರ ಮುಂದುಮಾಡಿದ. ಪ್ರಭಾಕರ ಖಾಸಾ ತಮ್ಮ. ಅವನ ದುಡ್ಡು ಬೇರೆ ಅಲ್ಲ; ಗಣಪಣ್ಣನದು ಬೇರೆ ಅಲ್ಲ. “ಛೆ! ಛೆ! ತೆಗಿತೆಗಿ; ಅದಲ್ಲ ಪ್ರಶ್ನೆ’ ಎಂದ ಗಣಪತಣ್ಣ ಪ್ರಭಾಕರನ ನೋಟನ್ನು ಅತ್ತ ಸರಿಸಿದ. ಅಲ್ಲಿಗೆ ಆ ಸಂಗತಿ ಮುಗಿದೇ ಹೋಗಬೇಕಾಗಿತ್ತು. ಆದರೆ ಗಣಪತಿ ಭಾವನ ಮುಖದಲ್ಲಿ “ಕದ್ದವರು ಯಾರು?’ ಎನ್ನುವ ಪ್ರಶ್ನೆ ಇಣುಕುತ್ತಿತ್ತು. ಮುಂದಿನ ಅವನ ನಡವಳಿಕೆಯಲ್ಲಿ ಈ ಪ್ರಶ್ನೆ ಎದ್ದು ಕಾಣಿಸುತ್ತಿತ್ತು. ಯಾರ ಮುಖವನ್ನು ನೋಡಿದರೂ ಅವನ ನೋಟದಲ್ಲಿ ಕಳ್ಳನನ್ನು ಹಿಡಿಯುವ ಪೊಲೀಸನೇ ಕಾಣುತ್ತಿದ್ದ.

ಗಣಪತಿ ಭಾವ ನನ್ನನ್ನು ಕಾಣದವರೇನೂ ಅಲ್ಲ. ಈ ಮನೆಗೆ ಸೊಸೆಯಾಗಿ ಬಂದಾಗಿನಿಂದಲೂ ನೋಡುತ್ತಿದ್ದಾರೆ. ಅವರ ಎರಡನೆಯ ತಮ್ಮ ಪ್ರದೀಪನ ಹೆಂಡತಿಯೇ ತಾನು. ಕೆಲಸಗಳನ್ನು ಹುಡುಕಿಕೊಂಡು ಊರುಬಿಡದೇ ಹೋಗಿದ್ದರೆ, ಎಲ್ಲರೂ ಒಟ್ಟಾಗಿ ನಡೆಸಬೇಕಾಗಿದ್ದ ಕೂಡು ಕುಟುಂಬ. ಪ್ರಭಾಕರ ಭಾವನೇ ಹಿರಿಯ; ಅವನೇ ಈ ಮನೆಯಲ್ಲಿ ನೆಲೆನಿಂತವನು. ಅಪ್ಪನ ಆಸ್ತಿಯಾಗಿ ಬಂದ ಗದ್ದೆಯನ್ನು ಉಳುಮೆ ಮಾಡುತ್ತ ತನ್ನ ಕುಟುಂಬವನ್ನು ಮುನ್ನಡೆಸಿದವನು. ಇವನೇ ಈ ಕುಟುಂಬದ ಸ್ಥಾಯೀಭಾವ. ಉಳಿದವರೆಲ್ಲ ಸಂಚಾರಿಗಳು. ಸರ್ಕಾರಿ ನೌಕರಿ ಹಿಡಿದು ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ವಲಸೆ ಹೋದವರು. ವರ್ಷದಲ್ಲಿ ಎರಡೋ ಮೂರೋ ಬಾರಿ ಹಬ್ಬ-ಹುಣ್ಣಿಮೆಯಂದು ಒಟ್ಟಿಗೆ ಸೇರುತ್ತಿದ್ದವರು. ಆದರೂ ಗಣಪತಿ ಭಾವನಿಗೆ ನಾನು ಗೊತ್ತು; ನನ್ನ ಸ್ವಭಾವ ಗೊತ್ತು. ನಾನೇಕೆ ಈ ಮನೆಯ ಮಕ್ಕಳು, ಸೊಸೆಯಂದಿರು ಎಲ್ಲ ಗೊತ್ತು. ಅಷ್ಟಾಗಿಯೂ ಎರಡು ಸಾವಿರ ರೂಪಾಯಿಯನ್ನೇ ದೊಡ್ಡದು ಮಾಡಿ, ಅದೇ ಅದೇ ಪ್ರಶ್ನೆಯನ್ನು ಎಷ್ಟು ಬಾರಿ ಕೇಳಿದ; ಯಾರನ್ನೂ ಬಿಡದೆ ಎಲ್ಲರನ್ನೂ ಕೇಳಿದ್ದು ಯಾಕೆ? ಎಲ್ಲಿಟ್ಟಿರಬಹುದು, ಎಲ್ಲಿಯಾದರೂ ಬಿದ್ದು ಹೋಯಿತೇ, ಕಳೆದುಕೊಂಡೆನೆ-ಇಂಥ ಯಾವ ಅನುಮಾನಗಳಿಗೂ ಅವಕಾಶವೇ ಇಲ್ಲದಂತೆ ಕದ್ದವರು ಯಾರು ಎಂಬಂತೆ ಕೇಳಿದರೆ ನೋವಾಗದೇ ಇರುತ್ತದೆಯೇ?

ಈ ಘಟನೆ ಸ್ವಲ್ಪ$ಹೊತ್ತು ಹುರುಪಿಗೆ ಮಂಕು ಕವಿಸಿತ್ತು. ಆದರೆ ಮಕ್ಕಳ ಸಂಭ್ರಮಕ್ಕೆ ತಡೆ ಎಲ್ಲಿ? ಅವರು ಹಬ್ಬದ ರಂಗೇರಿಸಿದ್ದರು. ದೊಡ್ಡವರೂ ಅದರಲ್ಲಿ ಎಲ್ಲವನ್ನೂ ಮರೆತಂತೆ ಕಾಣಿಸಿತು. ಎಲ್ಲರೂ ಮತ್ತು ತಂತಮ್ಮ ಕೆಲಸಗಳಲ್ಲಿ ತೊಡಗಿಕೊಂಡರು. ಮಾವಿನ ತೋರಣ ಕಟ್ಟುವವರು; ಬೇವಿನ ಹೂವನ್ನು ತಂದುಕೊಡುವವರು; ಚಿಗುರನ್ನು ಅಲ್ಲಲ್ಲಿ ಸಿಕ್ಕಿಸುವವರು. ಮೀಯಲು ಬೇಡವೆನ್ನುವ ಮಕ್ಕಳು. ಬಿಸಿನೀರಿಗೆ ಮನಸೋತು ಹಂಡೆಯ ನೀರನ್ನು ಖಾಲಿಮಾಡುವವರು; ಒಲೆಗೆ ದೊಡ್ಡ ದೊಡ್ಡ ಕೊರಡುಗಳನ್ನು ತುಂಬುವವರು. ಸಂಭ್ರಮದ ಹೊಗೆ ಆಕಾಶಕ್ಕೆ ನೆಗೆಯುತ್ತಿತ್ತು.

ನಾನು ಸ್ನಾನ ಮಾಡಿ ಹೊರಬಂದೆ. ದೇಹ ಮನಸ್ಸು ಹಗುರಾಗಿದ್ದವು. ಅಲಂಕಾರಕ್ಕೆ ಅಲ್ಲಿಗೇ ಹೋಗಬೇಕು. ಕೋಣೆಯಲ್ಲಿದ್ದವರೆಲ್ಲ ಹೊರಹೋಗಲೇ ಬೇಕು. ಮಾತಿಲ್ಲದೆ ಹೋದರು. ಇಸ್ಪೀಟು ಎಲೆಗಳು ಚಾಪೆಯ ಮೇಲೆಯೇ ಬಿದ್ದಿದ್ದವು. ಕುಡಿದು ಖಾಲಿಯಾದ ಕಾಫಿಯ ಕಪ್ಪುಗಳು ಅಲ್ಲಲ್ಲಿ ಕಾಣಿಸಿದವು. ಬಾಗಿಲು ಮುಚ್ಚಿ ಲೈಟು ಹಾಕಿ ಕನ್ನಡಿಯ ಎದುರಿಗೆ ನಿಂತರೆ ಮರುಳುಮಾಡುವ ಸುಂದರಿಯೇ ಕಾಣಿಸಿದಳು. ನನ್ನ ಗಂಡ ಈ ಮಾತನ್ನೇ ಅದೆಷ್ಟು ಬಾರಿ ಹೇಳಿದ್ದ. “ಈ ಸುಂದರಿಗೆ ಒಪ್ಪುವ ಸೀರೆ ಯಾವುದು?’ ಸೂಟ್‌ಕೇಸ್‌ ತೆರೆದರೆ ಎಷ್ಟೊಂದು ಸೀರೆಗಳು; ಎಷ್ಟೊಂದು ಬಣ್ಣಗಳು!
ಕೊನೆಗೂ ಹೊರಬಂದೆ; ಬಾಗಿಲಲ್ಲೇ ನಿಂತಿದ್ದವರೆಲ್ಲ ಸೋಜಿಗದಿಂದ ನೋಡಿದರು. ಆ ನೋಟದಲ್ಲಿಯೇ ಎಲ್ಲ ಮಾತುಗಳೂ ಇದ್ದವು. ನನ್ನ ಗಂಡ ಅಭಿಮಾನದಿಂದ ನೋಡಿದ. “ನಿನಗೆ ಈ ಸೀರೆ ಒಪ್ಪುತ್ತೆ, ಅಗದೀ ಛಲೋ’ ಎಂದು ಅವನು ಹೇಳಿದಂತೆ ಭಾಸವಾಯಿತು. ಇಂಥ ಮಾತುಗಳಿಗೆ ಹಂಬಲಿಸಿದವಳಂತೆ ಎಲ್ಲ ಮುಖಗಳನ್ನು ಎಲ್ಲ ಕಣ್ಣುಗಳನ್ನೂ ನೋಡುತ್ತ ಹೊರಗೆ ಬರುವಾಗ, ಕೊನೆಯಲ್ಲಿ ಕಂಡದ್ದು ಗಣಪತಿ ಭಾವನ ಮುಖ. ನಡಿಗೆ ನಿಧಾನವಾಯಿತು. ಗಣಪತಿ ಭಾವನ ಕಣ್ಣುಗಳಿಂದ ಕೂರಂಬುಗಳೇ ಬಂದು ನನ್ನನ್ನು ಇರಿದ ಹಾಗಾಯಿತು. ಮೌನದಲ್ಲಿಯೂ ಅವನ ಪ್ರಶ್ನೆ ಜೀವ ಪಡೆದುಕೊಂಡಂತೆ ಕಾಣುತ್ತಿತ್ತು. 

“ನನ್ನ ಜೇಬಲ್ಲಿದ್ದ ಎರಡು ಸಾವಿರ ರೂಪಾಯಿ ಏನಾಯಿತು?’
ಮತ್ತೆ ಮತ್ತೆ ಪುಟಿದೇಳುವ ಪ್ರಶ್ನೆ. 
ಒಂದೊಂದು ಪ್ರಶ್ನೆಯೂ ಒಂದೊಂದು ಹರಿತ ಬಾಣವಾಗಿ ನನ್ನತ್ತ ನುಗ್ಗಿ ಬರುತ್ತಿವೆ. ಇವುಗಳಿಂದ ತಪ್ಪಿಸಿಕೊಳ್ಳುವ ದಾರಿಯೇ ಕಾಣದೆ ನಡುಗಿದೆ. ನಾನು ಅವನ ಹಣವನ್ನು ನೋಡಿಯೇ ಇಲ್ಲ. ಆದರೆ ಹೇಗೆ ಹೇಳುವುದು ಅವನಿಗೆ; ಇದನ್ನೆಲ್ಲ ತಿಳಿಸಿ ಹೇಳಿದರೆ ನಾನೇ ಕಳ್ಳಿಯೆಂಬ ಅನುಮಾನ ಅವನಲ್ಲಿ ಬೆಳೆಯುತ್ತ ಹೋಗುತ್ತದೆಯೇ? ನನ್ನನ್ನೇ ಅವನು ಯಾಕೆ ಹಾಗೆ ನೋಡಬೇಕು. ಎಷ್ಟೊಂದು ಜನ ಹೆಂಗಸರಿಲ್ಲ; ಅವರಲ್ಲಿ ಎಷ್ಟು ಜನ ಈ ಕೋಣೆಯಲ್ಲಿ ತಮ್ಮ ಬಟ್ಟೆಗಳನ್ನು ಬದಲಾಯಿಸಿ ಬಂದಿಲ್ಲ. ಒಬ್ಬಳು ಕೋಣೆ ಸೇರಿದಾಗಲೂ, ಕೋಣೆಯಲ್ಲಿದ್ದವರೆಲ್ಲ ಹೊರಬಂದು ಅವಳ ಏಕಾಂತಕ್ಕೆ ದಾರಿಮಾಡಿಕೊಟ್ಟಿಲ್ಲವೇ? ನನ್ನನ್ನೇ ಏಕೆ ಅವನು ಗುರಿಯಾಗಿಸಿಕೊಂಡಂತೆ ನೋಡುತ್ತಿದ್ದಾನೆ?
ಹೆಜ್ಜೆ ತಪ್ಪಿಬಿದ್ದು ಬಿಡಬಹುದೆಂಬ ಭಯದಲ್ಲಿ ಮುಖ ತಿರುಗಿಸಿ, ದಿಕ್ಕು ಬದಲಿಸಿ ಹೊರಟುಹೋದೆ.

ಆ ಕಣ್ಣುಗಳ ಹರಿತ ನೋಟ ಇಡೀ ದಿನ ಚುಚ್ಚುತ್ತಿತ್ತು. ಮತ್ತೆ ಗಣಪತಿ ಭಾವನ ಹತ್ತಿರ ಸುಳಿಯದಿದ್ದರೂ ಆ ನೋಟ ಎದುರಾಗುತ್ತಲೇ ಇತ್ತು. ಅವನ ಹತ್ತಿರ ಹೋಗಿ ಇದನ್ನೆಲ್ಲ ಹೇಳಿಬಿಡಬೇಕು. “ನನ್ನನ್ನು ಯಾಕೆ ಹಾಗೆ ನೋಡುತ್ತೀಯಾ, ನನ್ನ ಮೇಲೆ ನಿನಗೆ ಅನುಮಾನವೇ? ದೇವರಾಣೆಗೂ ನಿನ್ನ ದುಡ್ಡನ್ನು ನಾನು ಕಂಡೇ ಇಲ್ಲ? ನಾನಾದರೂ ಯಾಕೆ ಕದಿಯಲಿ ಮಾರಾಯ? ಬೇಕಾಗಿದ್ದರೆ ನಿನ್ನನ್ನು ಕೇಳಿಯೇನು?’ ಎಲ್ಲ ಮಾತುಗಳೂ ಒಳಗೇ ಹುಟ್ಟಿ ಒಳಗೇ ಸಾಯುತ್ತಿದ್ದವು. ಗಣಪತಿ ಭಾವನನ್ನು ಎದುರಿಸುವ ಧೈರ್ಯವೇ ಉಡುಗಿ ಹೋದದ್ದು ಯಾಕೆ? ಅವನ ನೋಡಿದ ನೋಟ ಬಾಣವಾಗಿ ಚುಚ್ಚುತ್ತಲೇ ಇತ್ತು. ಕುಂತರೂ, ನಿಂತರೂ, ಮಲಗಿದರೂ ಅವೇ ಬಾಣಗಳು. ಮಲಗಿದಾಗಲೂ ಬಾಣಗಳು ಚುಚ್ಚುವುದೆಂದರೆ! ಬಾಣಗಳ ಹಾಸಿನ ಮೇಲೆ ಮಲಗಿದ ಭೀಷ್ಮನ ನೋವು ನನಗೆ ಅರ್ಥವಾಗಿದ್ದು ಆ ದಿನವೇ.

ಹಬ್ಬ ಮುಗಿದು ಊರಿಗೆ ಮರಳಿದ ಮೇಲೂ ಆ ಬಾಣಗಳು ಬರುತ್ತಲೇ ಇದ್ದವು; ಚುಚ್ಚುತ್ತಲೇ ಇದ್ದವು. ಈ ನೋವು, ಈ ಗಾಯ- ಇದರಿಂದ ಬಿಡುಗಡೆಯೇ ಇಲ್ಲವೇ? “ಆ ಹಣವನ್ನು ನಾನು ನೋಡಲೇ ಇಲ್ಲ ಕಣೋ ಭಾವ’ ಎಂದು ಹೇಳುವುದು ಹೇಗೆ? ನಿಜವನ್ನೇ ಹೇಳಿದರೂ, ಅವನು ಅದನ್ನು ನಂಬಬಹುದೇ? ಹಾಗಾದರೆ ಹಣ ಹೋದದ್ದು ಎಲ್ಲಿಗೆ? ಯಾರು ಕದ್ದರು? ಈ ಪ್ರಶ್ನೆಗೆ ಉತ್ತರ ಸಿಕ್ಕಿದಂತಾಗುತ್ತದೆಯೇ? ಇಷ್ಟಕ್ಕೂ ಗಣಪತಿ ಭಾವ ಎಲ್ಲರನ್ನೂ ಅನುಮಾನದಿಂದ ಯಾಕೆ ನೋಡಬೇಕು? ಹೋದದ್ದು ಹೋಯಿತು, ಅದು ದೊಡ್ಡದೇ? ಅದನ್ನು ಮರೆತುಬಿಡುವುದು ಯಾಕೆ ಸಾಧ್ಯವಿಲ್ಲ?
ಹಗಲಿರುಳು ಚಿಂತಿಸಿ ಚಿಂತಿಸಿ, ಸೋತು, ನವೆದು, ನೊಂದು ಬಿಡುಗಡೆಗಾಗಿ ಹುಡುಕುತ್ತಿದ್ದಾಗ ಹೊಳೆದದ್ದು ಈ ದಾರಿ. ಅಕ್ಷರಗಳ ಬೆನ್ನು ಹಿಡಿದು ನಡೆದುಬಿಡೋಣ; ಎಲ್ಲಿಯಾದರೂ ದಾರಿ ಸಿಕ್ಕಿಬಿಡಬಹುದು ಎಂದುಕೊಂಡು ಹೊರಟೆ. ಒಂದು ರೀತಿಯ ಸಮಾಧಾನ; ಒಂದು ರೀತಿಯ ಬಿಡುಗಡೆ. ನೋವು ಕಡಿಮೆಯಾಗಿ, ನೆಮ್ಮದಿ ಮೂಡಿದಂಥ ಅನುಭವ. ನಡೆಯುತ್ತಲೇ ಹೋದೆ. ಈ ಕತೆ ಸಿಕ್ಕಿತು. ಗಣಪತಿ ಭಾವ ಈ ಕತೆಯನ್ನು ಎಂದಾದರೂ ಒಂದು ದಿನ ಓದಬಹುದೆಂಬ ಆಸೆಯೂ ಹುಟ್ಟಿತು.

ಮಾತು ನಿಲ್ಲಿಸಿದಾಗ ಜೋರಾದ ಚಪ್ಪಾಳೆ. ಮತ್ತೆ ಮತ್ತೆ ಚಪ್ಪಾಳೆ. ಅನೇಕರು ಎದ್ದುಬಂದು ಕೈಕುಲುಕಿದರು. ಕೆಲವರು ಪ್ರೀತಿಯಿಂದ ಅಪ್ಪಿಕೊಂಡು ಬೆಚ್ಚನೆಯ ಭಾವವನ್ನು ಮುಟ್ಟಿಸಿದರು.
ಮತ್ತೆ ಆರಂಭವಾದದ್ದು ಪ್ರಶ್ನೋತ್ತರ. ಕತೆಯ ವಸ್ತು, ವಿನ್ಯಾಸ, ತಂತ್ರ, ಭಾಷೆ, ಶೈಲಿ, ರೂಪಕ. ಪ್ರಶ್ನೆ ಕೇಳುವವರಿಗೆ ಎಷ್ಟೊಂದು ಪ್ರಶ್ನೆಗಳು. ನಾನೇನೂ ಅಂಥ ಜಾಣೆಯಲ್ಲ. ಎಲ್ಲ ಪ್ರಶ್ನೆಗಳಿಗೂ ಉತ್ತರ ಹೇಳಲಿಲ್ಲ. ಹಾಗೆಂದು ಸುಮ್ಮನೆ ಇರಲೂ ಇಲ್ಲ. ಮಾತು ಎಳೆದ ಕಡೆ ಬರುತ್ತಿದ್ದವು. ಹೇಳಿದ್ದನ್ನು ಕೇಳುವುದಕ್ಕೆ ಕಿವಿಗಳು ತೆರೆದೇ ಇದ್ದವು. ಆಗಾಗ ಚಪ್ಪಾಳೆ. ಏನು ಹೇಳಿದೆನೋ, ಏನು ಕೇಳಿದರೋ. ಗಡಿಯಾರದ ಮುಳ್ಳಂತೂ ಜೋರಾಗಿ ತಿರುಗಿತ್ತು.
“ಇಲ್ಲಿಗೆ ಪ್ರಶ್ನೋತ್ತರ ಮುಗಿಯಿತು’ ಎಂದು ಹೇಳುತ್ತಿರುವಾಗಲೇ ಒಬ್ಬ ಪುಟಾಣಿ ಹುಡುಗಿ ಎದ್ದು ಬಂದಳು: “ಆಂಟಿ ನನಗೂ ಒಂದು ಪ್ರಶ್ನೆ ಇದೆ. ಕೇಳಲೇ?’ ಎಂದಳು.

ಎಲ್ಲ ಕಣ್ಣುಗಳೂ ಈ ಬಾಲೆಯ ಮೇಲೆ ನೆಟ್ಟವು. ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದ ಅಂಕಲ್‌, “ಕೇಳು ಮರಿ, ಕೇಳು’ ಎಂದು ಹುರಿದುಂಬಿಸಿದರು.
ಪುಟ್ಟ ಹುಡುಗಿ; ಇಷ್ಟೆ ಎತ್ತರ.
ಮೈಕಿನವ ಬಂದು ಮೈಕನ್ನು ಇಳಿಸಿಕೊಟ್ಟ.
“ಇಲ್ಲ, ನಾನು ಕದಿಯಲೇ ಇಲ್ಲ; ನನಗೆ ಗೊತ್ತೂ ಇಲ್ಲ ಎಂದು ನೀವು ನಿಮ್ಮ ಭಾವನಿಗೆ ಹೇಳಿದ್ದರೆ ನಿಮಗೆ ನೋವೂ ಇರುತ್ತಿರಲಿಲ್ಲ, ಬಾಣಗಳೂ ಚುಚ್ಚುತ್ತಿರಲಿಲ್ಲ. ನೀವು ಯಾಕೆ ಹೇಳಲಿಲ್ಲ?’
ಬೆಚ್ಚಿಬಿದ್ದು ಈ ಬಾಲೆಯನ್ನು ನೋಡಿದರೆ ಅವಳಾಗಲೇ ಬಿಟ್ಟ ಬಾಣದಂತೆ ಗುಂಪಿನಲ್ಲಿ ಮರೆಯಾಗಿದ್ದಳು.

– ಜಿ.ಪಿ. ಬಸವರಾಜು

ಟಾಪ್ ನ್ಯೂಸ್

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.