ವೋಟರ್ ಐಡಿಗಾಗಿ 17 ವಯಸ್ಸಿಗೇ ಅರ್ಜಿಗೆ ಅವಕಾಶ
Team Udayavani, Jul 29, 2022, 6:50 AM IST
ನವದೆಹಲಿ: ಇನ್ನು ಮುಂದೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು 18 ವರ್ಷ ಆಗುವವರೆಗೆ ಆಗಬೇಕಾಗಿಲ್ಲ. 17 ವರ್ಷ ಇದ್ದಾಗಲೇ ಮತದಾರರ ಪಟ್ಟಿಗೆ ಹೆಸರು ಸೇರಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗಕ್ಕೆ ದಾಖಲೆಗಳನ್ನು ಸಲ್ಲಿಸಿ, ಪ್ರಕ್ರಿಯೆ ಪೂರ್ತಿಗೊಳಿಸಬಹುದು. ಇಂಥ ಒಂದು ಮಹತ್ವದ ನಿರ್ಧಾರದ ಬಗ್ಗೆ ಭಾರತೀಯ ಚುನಾವಣಾ ಆಯೋಗ ಗುರುವಾರ ಪ್ರಕಟಿಸಿದೆ.
ಈ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ರಾಜ್ಯಗಳ ಚುನಾವಣಾಧಿಕಾರಿಗಳಿಗೆ ಸುತ್ತೋಲೆ ಕಳುಹಿಸಿ ತಾಂತ್ರಿಕವಾಗಿ ಈ ಬಗ್ಗೆ ಕೈಗೊಳ್ಳಬೇಕಾಗಿರುವ ಬದಲಾವಣೆ ಮಾಡುವಂತೆಯೂ ಸೂಚನೆ ನೀಡಿದ್ದಾರೆ. ಸದ್ಯ ಏ.1, ಜು.1, ಅ.1ರಂದು 18 ವರ್ಷ ಪೂರ್ತಿಗೊಳ್ಳುವವರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ಅದಕ್ಕೆ ಪೂರಕವಾಗಿ 17 ವರ್ಷ ಆಗಿರುವವ ವಿವರಗಳನ್ನು ಪಡೆದುಕೊಂಡು ಅವುಗಳನ್ನು ಪರಿಶೀಲನಾ ಪ್ರಕ್ರಿಯೆ ಮುಕ್ತಾಯಗೊಳಿಸಬೇಕೂ ಎಂದು ಸೂಚನೆಯಲ್ಲಿ ಉಲ್ಲೇಖೀಸಲಾಗಿದೆ.
ಸದ್ಯ 18-19 ವರ್ಷ ವಯೋಮಿತಿಯಲ್ಲಿರುವ 17,36,181 ಮಂದಿಯನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ 14,52, 678 ಮಂದಿಯನ್ನು ಸೇರ್ಪಡೆ ಮಾಡಲಾಗಿತ್ತು ಎಂದು ಆಯೋಗ ತಿಳಿಸಿದೆ.