ಅವಕಾಶ ಕೈಚೆಲ್ಲಿದ ಕಾಂಗ್ರೆಸ್‌

Team Udayavani, Aug 13, 2019, 5:07 AM IST

ಸುಮಾರು ಎರಡೂವರೆ ವರ್ಷಗಳ ಬಳಿಕ ಕಾಂಗ್ರೆಸ್‌ ಸೂತ್ರ ಮರಳಿ ಸೋನಿಯಾ ಕೈಗೆ ಬಂದಿದೆ. 2017ರಲ್ಲಿ ಮಗ ರಾಹುಲ್‌ ಗಾಂಧಿ ಕೈಗೆ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಯನ್ನು ಹಸ್ತಾಂತರಿಸಿ ಅರೆ ವಿಶ್ರಾಂತಿಯಲ್ಲಿದ್ದ ಸೋನಿಯಾ ಗಾಂಧಿ ಪರಿಸ್ಥಿತಿಯ ಅನಿವಾರ್ಯತೆಯಿಂದಾಗಿ ಮರಳಿ ಪಕ್ಷದ ನೊಗಕ್ಕೆ ಕೊರಳೊಡ್ಡಬೇಕಾಗಿ ಬಂದಿರುವುದು ಕಾಂಗ್ರೆಸ್‌ ಪಕ್ಷದೊಳಗಿನ ಸೈದ್ಧಾಂತಿಕ ದಿವಾಳಿತನವನ್ನೂ ನಾಯಕತ್ವದ ಬರವನ್ನೂ ಢಾಳಾಗಿ ತೋರಿಸಿಕೊಡುತ್ತಿದೆ. ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಬೆನ್ನಿಗೆ ರಾಹುಲ್‌ ಗಾಂಧಿ ಅಧ್ಯಕ್ಷ ಹುದ್ದೆಯನ್ನು ತೊರೆದಿದ್ದರು. ಈ ಸಂದರ್ಭದಲ್ಲಿ ಅವರು ಪಕ್ಷಕ್ಕೆ ನೆಹರು-ಗಾಂಧಿ ಪರಿವಾರದ ಹೊರಗಿನವರೊಬ್ಬರು ಅಧ್ಯಕ್ಷರಾಗಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಆದರೆ ಕಾಂಗ್ರೆಸ್‌ನ ಪರಮೋಚ್ಚ ನೀತಿ ನಿರ್ಧಾರ ರೂಪಣಾ ಸಮಿತಿಯಾಗಿರುವ ಸಿಡಬ್ಲ್ಯುಸಿ ಎರಡೂವರೆ ತಿಂಗಳ ಸಮಾಲೋಚನೆಯ ಬಳಿಕ ಪಕ್ಷವನ್ನು ಮರಳಿ ನೆಹರೂ ಪರಿವಾರದ ಪದತಲದಲ್ಲಿರಿಸಿದೆ.

ಕಾಂಗ್ರೆಸ್‌ ಈಗ ತೀರಾ ಸಂಕಷ್ಟದ ದಿನಗಳನ್ನು ಕಾಣುತ್ತಿದೆ. ಸತತ ಎರಡು ಸೋಲುಗಳು ಮಾತ್ರವಲ್ಲ ಅದನ್ನು ಈ ಸ್ಥಿತಿಗೆ ತಳ್ಳಿರುವುದು. ಅದರ ಸೈದ್ಧಾಂತಿಕ ನೆಲೆಗಟ್ಟು ಅಲುಗಾಡತೊಡಗಿದೆ. ಪಕ್ಷದೊಳಗಿನ ಗುಂಪುಗಾರಿಕೆ ಹೊಸ ಆಯಾಮ ಪಡೆದುಕೊಂಡಿದೆ. ಇದೆಲ್ಲದಕ್ಕಿಂತ ತೀವ್ರವಾಗಿ ಹಿರಿಯರ ಮತ್ತು ಕಿರಿಯರ ನಡುವಿನ ಸಂಘರ್ಷ ಪಕ್ಷಕ್ಕೆ ಇನ್ನಿಲ್ಲದ ಹಾನಿಯನ್ನುಂಟು ಮಾಡುತ್ತಿದೆ.

ರಾಹುಲ್‌ ಗಾಂಧಿ ತನ್ನನ್ನು ಯುವ ಪೀಳಿಗೆಯ ನಾಯಕರ ಮುಖಂಡ ಎಂದು ಹೇಳಿಕೊಳ್ಳುತ್ತಿದ್ದರೂ ಪಕ್ಷದೊಳಗೇ ಅವರಿಗೆ ಯುವಪೀಳಿಗೆಗೆ ಸೂಕ್ತ ಸ್ಥಾನಮಾನ ಕೊಡಲು ಸಾಧ್ಯವಾಗುತ್ತಿಲ್ಲ. ರಾಜೀನಾಮೆ ಪತ್ರದಲ್ಲಿ ಈ ವಿಚಾರವನ್ನು ಅವರು ಸ್ಪಷ್ಟವಾಗಿಯೇ ಹೇಳಿದ್ದರೂ ಹಿರಿಯರು ತಮ್ಮ ಪಟ್ಟು ಬಿಟ್ಟುಕೊಡಲು ತಯಾರಿಲ್ಲ. ಹಿರಿಯರಿಗೆ ನೆಹರು-ಗಾಂಧಿ ಪರಿವಾರದವರೇ ಪಕ್ಷದ ಅಧ್ಯಕ್ಷರಾಗಿದ್ದಾಗಲೇ ಸುರಕ್ಷಿತ ಭಾವನೆ ಇರುತ್ತದೆ. ಇದೀಗ ಸೋನಿಯಾ ಗಾಂಧಿ ಮಧ್ಯಂತರ ಅಧ್ಯಕ್ಷೆಯಾಗಿ ಆಯ್ಕೆಯಾಗುವುದರೊಂದಿಗೆ ಗೆದ್ದಿರುವುದು ಈ ಹಿರಿಯರು.

ನರೇಂದ್ರ ಮೋದಿ- ಅಮಿತ್‌ ಶಾ ಜೋಡಿ ಬಿಜೆಪಿ ದೇಶದ ರಾಜಕೀಯ ವ್ಯವಸ್ಥೆಗೊಂದು ಹೊಸ ವ್ಯಾಖ್ಯಾನವನ್ನು ನೀಡಿದೆ. ಬಿಜೆಪಿಯ ಅಭಿವೃದ್ಧಿ ಮತ್ತು ರಾಷ್ಟ್ರೀಯತೆ ಭಾವನೆಯ ರಾಜಕೀಯ ಪ್ರತಿಪಾದನೆ ಯುವ ಪೀಳಿಗೆಯನ್ನು ಬಹುವಾಗಿ ಆಕರ್ಷಿಸಿದ್ದು, ಈ ಪರಿಸ್ಥಿತಿಗನುಗುಣವಾಗಿ ಕಾಂಗ್ರೆಸ್‌ ತನ್ನನ್ನು ಬದಲಾಯಿಸಿಕೊಳ್ಳಬೇಕಿತ್ತು. ಅದಕ್ಕೆ ಹೊಸ ಚಿಂತನೆಯ ಜೊತೆಗೆ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ನಾಯಕತ್ವ ಅಗತ್ಯವಿತ್ತು. ರಾಹುಲ್‌ ರಾಜೀನಾಮೆ ಬಳಿಕ ಈ ರೀತಿಯ ನಾಯಕನನ್ನು ಆರಿಸಲು ಇದ್ದ ಅವಕಾಶವನ್ನು ಪಕ್ಷ ಕೈಯಾರೆ ಕಳೆದುಕೊಂಡಿದೆ. ಒಂದು ಕುಟುಂಬದ ಹಿಡಿತದಲ್ಲಿರುವ ಪಕ್ಷ ಎಂಬ ಟೀಕೆಗೆ ಉತ್ತರ ನೀಡುವ ಅವಕಾಶವನ್ನೂ ಕೈಚೆಲ್ಲಿದೆ.

ಶತಮಾನಕ್ಕೂ ಹೆಚ್ಚಿನ ಇತಿಹಾಸವನ್ನು ಹೊಂದಿರುವ ಪಕ್ಷ ಈಗಲೂ ತನ್ನ ಚಿಂತನಾಕ್ರಮವನ್ನು ಬದಲಾಯಿಸಿಕೊಳ್ಳಲು ತಯಾರಿಲ್ಲದೆ ಇರುವುದು ಅದರ ದೊಡ್ಡ ಬಲಹೀನತೆ. ನೆಹರು-ಗಾಂಧಿ ಪರಿವಾರ ತಪ್ಪಿದರೆ ಹಿರಿ ಮುಖಗಳೇ ಅದರ ಆಯ್ಕೆಪಟ್ಟಿಯಲ್ಲಿರುವುದು. ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಲು ಅದು ಪ್ರಸ್ತಾವಿಸಿದ ಹೆಸರುಗಳಿಂದಲೇ ಸ್ಪಷ್ಟವಾಗುತ್ತದೆ. ಮಲ್ಲಿಕಾರ್ಜುನ ಖರ್ಗೆ, ಮುಕುಲ್‌ ವಾಸ್ನಿಕ್‌, ಗುಲಾಮ್‌ ನಬಿ ಆಜಾದ್‌ ಹೀಗೆ ಕೆಲವೊಂದು ಹಿರಿತಲೆಗಳ ಹೆಸರು ಪ್ರಸ್ತಾವಕ್ಕೆ ಬಂದವೇ ಹೊರತು ಜ್ಯೋತಿರಾದಿತ್ಯ ಸಿಂಧಿಯಾ, ಸಚಿನ್‌ ಪೈಲಟ್‌ ಅವರಂಥ ಯುವ ನಾಯಕರ ಕೈಗೆ ಪಕ್ಷದ ಸೂತ್ರವನ್ನು ನೀಡಿದರೆ ಹೇಗಾಗಬಹುದು ಎಂಬ ಕುರಿತು ಕನಿಷ್ಠ ಚರ್ಚೆಯಾದರೂ ನಡೆಯಲಿಲ್ಲ. ಶಶಿ ತರೂರು ,ಅಧೀರ್‌ ರಂಜನ್‌ ಚೌಧರಿ ಅವರಂಥ ಕೆಲವು ಡೈನಾಮಿಕ್‌ ನಾಯಕರ ಹೆಸರು ಮುನ್ನೆಲೆಗೆ ಬಂದಷ್ಟೇ ವೇಗವಾಗಿ ನೇಪಥ್ಯಕ್ಕೆ ಸರಿದು ಹೋಗಿವೆ. ಇಲ್ಲಿಗೆ ಬದಲಾವಣೆಗೆ ತೆರೆದುಕೊಳ್ಳಲು ತಾನು ತಯಾರಿಲ್ಲ ಎಂಬುದನ್ನು ಕಾಂಗ್ರೆಸ್‌ ಒಪ್ಪಿಕೊಂಡಿದೆ.

ಸೋನಿಯಾ ಯಶಸ್ವಿ ಅಧ್ಯಕ್ಷೆ ಎನ್ನುವುದು ನಿಜ. 19 ವರ್ಷ ಪಕ್ಷವನ್ನು ಮುನ್ನಡೆಸಿರುವ ಅನುಭವ ಹೊಂದಿರುವ ಅವರು ಸತತ ಎರಡು ಸಲ ಪಕ್ಷವನ್ನು ಅಧಿಕಾರ ಪೀಠದಲ್ಲಿ ಸ್ಥಾಪಿಸಿದ್ದಾರೆ. ಸಮಾನ ಮನಸ್ಕ ಪಕ್ಷಗಳ ಜೊತೆಗೆ ಮೈತ್ರಿ ಸಾಧಿಸುವ ಕಲೆ ಅವರಿಗೆ ಸಿದ್ಧಿಸಿದೆ. ಪಕ್ಷ ಛಿದ್ರವಾಗದಂತೆ ನೋಡಿಕೊಳ್ಳುವ ಸಾಮರ್ಥ್ಯ ಅವರಿಗಿದೆ. ನೆಹರು ಪರಿವಾರದವರೇ ಮರಳಿ ಪಕ್ಷದ ಚುಕ್ಕಾಣಿ ಹಿಡಿದಿರುವುದರಿಂದ ಪಕ್ಷದಿಂದ ಈಗ ನಡೆಯುತ್ತಿರುವ ವಲಸೆಯೂ ನಿಲ್ಲಬಹುದು. ಆದರೆ ಸಂಪೂರ್ಣ ಧರಾಶಾಹಿಯಾಗಿರುವ ಪಕ್ಷವನ್ನು ಮತ್ತೆ ಕಟ್ಟಲು ಇಷ್ಟೇ ಸಾಲದು. ಇದಕ್ಕಾಗಿ ದೇಶವಿಡೀ ಓಡಾಡಿ ತಳಮಟ್ಟದಿಂದ ಪಕ್ಷವನ್ನು ಪುನಶ್ಚೇತನಗೊಳಿಸುವ ಕೆಲಸವಾಗಬೇಕು. ಸೋನಿಯಾಗೆ ಈಗ 72 ವರ್ಷ ಪ್ರಾಯ ಮತ್ತು ಅವರ ಆರೋಗ್ಯವೂ ಚೆನ್ನಾಗಿಲ್ಲ. ಈ ಪರಿಸ್ಥಿತಿಯಲ್ಲಿ ಅವರಿಂದ ಇದೆಲ್ಲ ಸಾಧ್ಯವೇ? ಈ ವರ್ಷಾಂತ್ಯಕ್ಕೆ ಮಹಾರಾಷ್ಟ್ರ ಸೇರಿ ಮೂರು ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಷ್ಟರಲ್ಲಿ ಪಕ್ಷವನ್ನು ಪುನರ್‌ ಸಂಘಟಿಸುವ ಸವಾಲು ಸೋನಿಯಾ ಮುಂದಿದೆ. ಇದರಲ್ಲಿ ಅವರು ಎಷ್ಟು ಯಶಸ್ವಿಯಾಗುತ್ತಾರೆ ಎನ್ನುವುದು ಕಾಂಗ್ರೆಸ್‌ ಭವಿಷ್ಯದ ದೃಷ್ಟಿಯಿಂದ ಮುಖ್ಯವಾಗಲಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಹಿಂದೆ ರಾಮಕೃಷ್ಣ ಹೆಗಡೆ ಮತ್ತು ಎಚ್ ಡಿ ದೇವೇಗೌಡರ ನಡುವಿನ ರಾಜಕೀಯ ಗುದ್ದಾಟಕ್ಕೆ ಫೋನ್‌ ಕದ್ದಾಲಿಕೆ ಕಾರಣವಾಗಿತ್ತು. ಈಗ ದೇವೇಗೌಡರ ಪುತ್ರ ಕುಮಾರಸ್ವಾಮಿ...

  • ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡ ಬಳಿಕ ದಿಕ್ಕು ತೋಚದಂತಾಗಿರುವ ಪಾಕಿಸ್ಥಾನ ಅಂತರಾಷ್ಟ್ರೀಯ ಸಮುದಾಯದೆದುರು ಬೆತ್ತಲಾಗುತ್ತಿದೆ....

  • ಇಡೀ ಜಗತ್ತೇ ಗಾಢನಿದ್ರೆಯಲ್ಲಿರುವ ಈ ಅಪರಾತ್ರಿಯಲ್ಲಿ ಭಾರತವು ಹೊಸ ಸ್ವಾತಂತ್ರ್ಯ ಮತ್ತು ಬದುಕಿನತ್ತ ತೆರೆದುಕೊಳ್ಳಲಿದೆ...'' ಅದು 1947 ಆಗಸ್ಟ್‌ 14ರ ಅಪರಾತ್ರಿ....

  • ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಿಂದ ಮಾಡಿದ 73ನೇ ಸ್ವಾತಂತ್ರ್ಯೋತ್ಸವ ಭಾಷಣ ನವಭಾರತ ನಿರ್ಮಾಣ ಕುರಿತು ಅವರು ಹೊಂದಿರುವ ಚಿಂತನೆಗಳ ಹೊಳಹನ್ನು ನೀಡಿದೆ....

  • ದೇಶದ ವಾಹನ ಉದ್ಯಮ ತೀವ್ರ ಬಿಕ್ಕಟ್ಟಿನಲ್ಲಿದೆ. ಭಾರತೀಯ ವಾಹನ ಉತ್ಪಾದಕರ ಒಕ್ಕೂಟ ಬಿಡುಗಡೆಗೊಳಿಸಿರುವ ಅಂಕಿ-ಅಂಶಗಳು ಈ ಉದ್ಯಮದ ನಿರಾಶಾದಾಯಕ ಚಿತ್ರಣವನ್ನು...

ಹೊಸ ಸೇರ್ಪಡೆ