ರಾಜಕೀಯ ನಾಯಕರು ಪ್ರಬುದ್ಧತೆ ಪ್ರದರ್ಶಿಸಲಿ

Team Udayavani, Oct 7, 2019, 6:20 AM IST

ಜಮ್ಮು – ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಂಡ ಬಳಿಕ ಸುಮಾರು ಎರಡು ತಿಂಗಳಿಂದ ಗೃಹ ಬಂಧನದಲ್ಲಿರುವ ಅಲ್ಲಿನ ರಾಜಕೀಯ ನಾಯಕರನ್ನು ಒಬ್ಬೊಬ್ಬರನ್ನಾಗಿ ಬಿಡುಗಡೆಗೊಳಿಸಲು ಸರಕಾರ ಮುಂದಾಗಿದೆ. ಇದರ ಮೊದಲ ಹೆಜ್ಜೆಯಾಗಿ ನ್ಯಾಶನಲ್‌ ಕಾನ್ಫರೆನ್ಸ್‌ ಪಕ್ಷದ 15 ಸದಸ್ಯರ ನಿಯೋಗವೊಂದು ಫಾರೂಕ್‌ ಅಬ್ದುಲ್ಲ ಮತ್ತು ಉಮರ್‌ ಅಬ್ದುಲ್ಲ ಅವರನ್ನು ಭೇಟಿ ಮಾಡಿದೆ. ಆ.5ರ ಬಳಿಕ ಕಣಿವೆ ರಾಜ್ಯದಲ್ಲಿ ನಡೆದ ಗಮನಾರ್ಹ ರಾಜಕೀಯ ಬೆಳವಣಿಗೆಯಿದು. ನಿಧಾನವಾಗಿ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಶುರು ಆಗುತ್ತಿರುವ ಮತ್ತು ರಾಜಕೀಯ ನಾಯಕರು ಸಕ್ರಿಯರಾಗುತ್ತಿರುವ ಮುನ್ಸೂಚನೆ ಇದು. ಪ್ರಜಾತಂತ್ರದಲ್ಲಿ ಬಹುಕಾಲ ರಾಜಕೀಯ ಚಟುವಟಿಕೆಗಳು ಸ್ಥಗಿತಗೊಳ್ಳುವುದು ಕೂಡಾ ನಕರಾತ್ಮಕ ಬೆಳವಣಿಗೆ ಎಂದು ಪರಿಗಣಿಸಲ್ಪಡುತ್ತದೆ. ಈ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಲ್ಲಿ ಆದಷ್ಟು ಶೀಘ್ರ ರಾಜಕೀಯ ಸಹಜತೆಯನ್ನು ತರಲು ಯತ್ನಿಸುತ್ತಿರುವ ಕೇಂದ್ರ ಸರಕಾರದ ಪ್ರಯತ್ನ ಸ್ವಾಗತಾರ್ಹ.

ಕಾಶ್ಮೀರದಲ್ಲಿ ಬ್ಲಾಕ್‌ ಅಭಿವೃದ್ಧಿ ಕೌನ್ಸಿಲ್‌ ಚುನಾವಣೆ ನಡೆಯಲಿದ್ದು ಅದಕ್ಕೂ ಮುಂಚಿತವಾಗಿ ರಾಜಕೀಯ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳ ಬೇಕಿದೆ. ರಾಜಕೀಯ ಚಟುವಟಿಕೆ ಪ್ರಾರಂಭವಾಗಬೇಕಾದರೆ ಮುಖ್ಯವಾಹಿನಿ ರಾಜಕೀಯ ನಾಯಕರು ಗೃಹ ಬಂಧನದಿಂದ ಬಿಡುಗಡೆಯಾಗಬೇಕೆನ್ನುವುದು ಪ್ರತಿಪಕ್ಷಗಳ ಬೇಡಿಕೆ. ಸದ್ಯದ ಪರಿಸ್ಥಿತಿಯಲ್ಲಿ ಕಾಶ್ಮೀರದಲ್ಲಿ ಚುನಾವಣೆ ನಡೆಸುವುದು ಅಪಾಯಕಾರಿ ನಡೆಯೇ ಆಗಿದ್ದರೂ ಚುನಾವಣೆ ನಡೆಯದಿದ್ದರೆ ಅಲ್ಲಿ ಪ್ರಜಾತಂತ್ರದ ಅಸ್ತಿತ್ವಕ್ಕೆ ಸಾಕ್ಷಿ ಸಿಗುವುದಿಲ್ಲ. ಯಾವುದೇ ರಾಜ್ಯವನ್ನಾದರೂ ಬಹುಕಾಲ ಬಂದೂಕಿನ ತುದಿಯಲ್ಲಿ ನಿಯಂತ್ರಿಸಲು ಸಾಧ್ಯವಿಲ್ಲ.

ವಿಶೇಷ ವಿಧಿ ರದ್ದಾದ ಬಳಿಕ ಸಾಮಾನ್ಯ ಜನಜೀವನ ಕೂಡ ಅಸ್ತವ್ಯಸ್ತಗೊಂಡಿದೆ. ಯಾವುದೇ ನಿರ್ಬಂಧಗಳು ಇಲ್ಲ ಎಂದು ಸರಕಾರ ಹೇಳುತ್ತಿದ್ದರೂ ಜನರು ಮಾಮೂಲು ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಇದಕ್ಕೆ ಭಯೋತ್ಪಾದಕ ದಾಳಿಯ ಭಯವೂ ಕಾರಣ ಎಂದು ಅಲ್ಲಿಂದ ಬರುತ್ತಿರುವ ವರದಿಗಳು ಹೇಳುತ್ತಿವೆ. ಜನಜೀವನ ಮತ್ತು ರಾಜಕೀಯ ಈ ಎರಡೂ ವಿಚಾರಗಳನ್ನು ಸಹಜ ಸ್ಥಿತಿಗೆ ತರುವ ಗುರುತರವಾದ ಹೊಣೆ ಸರಕಾರದ ಮೇಲಿದೆ.

ಜಮ್ಮು-ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಸಮುದಾಯದ ಬೆಂಬಲ ಪಡೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಇತ್ತೀಚೆಗೆ ನಡೆದ ವಿಶ್ವಸಂಸ್ಥೆಯ ಅಧಿವೇಶನದಲ್ಲೂ ಪಾಕಿಸ್ಥಾನ ಕಾಶ್ಮೀರ ವಿಚಾರವನ್ನು ಎತ್ತಿ ಮುಖಭಂಗ ಅನುಭವಿಸಿದೆ. ಇನ್ನೀಗ ಆಗಬೇಕಿರುವುದು ಸ್ಥಳೀಯ ನಾಯಕರ ಮತ್ತು ವಿಪಕ್ಷಗಳ ಮನವೊಲಿಸಿ ಬೆಂಬಲ ಪಡೆಯುವ ಕೆಲಸ. ವಿಪಕ್ಷಗಳು ಇಂಥ ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಲಾಭ ಹುಡುಕದೆ ದೇಶಕ್ಕೆ ಹಿತವಾಗುವ ನಡೆಗಳನ್ನು ಇಡಬೇಕು. ದೇಶದ ಭದ್ರತೆ ಮತ್ತು ಸಮಗ್ರತೆಯ ವಿಚಾರ ಬಂದಾಗ ನಾವೆಲ್ಲ ಒಂದೇ ಎಂಬ ಸಂದೇಶವನ್ನು ಜಗತ್ತಿಗೆ ನೀಡಬೇಕಾದ ಹೊಣೆ ದೇಶದ ರಾಜಕೀಯ ಸಮುದಾಯಕ್ಕೆ ಇದೆ. ಅಂತೆಯೇ ಸರಕಾರವೂ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರಗಳನ್ನು ಕೈಗೊಳ್ಳಬೇಕು.

ಕಾಶ್ಮೀರ ಹೊರತಾದ ರಾಜಕೀಯ ಪಕ್ಷಗಳೂ ಮುಖ್ಯವಾಗಿ ಕಾಂಗ್ರೆಸ್‌, ಕಮ್ಯುನಿಸ್ಟ್‌ ಪಕ್ಷದಂಥ ರಾಷ್ಟ್ರೀಯ ಪಕ್ಷಗಳು ಈ ಸಂದರ್ಭದಲ್ಲಿ ಬಹಳ ಜವಾಬ್ದಾರಿಯುತವಾಗಿ ವರ್ತಿಸುವ ಅಗತ್ಯವಿದೆ. ಯಾವ ಕಾರಣಕ್ಕೂ ಕಾಶ್ಮೀರದಲ್ಲಿ ಮತ್ತೆ ಪರಿಸ್ಥಿತಿ ಹದಗೆಡದಂತೆ ನೋಡಿಕೊಳ್ಳುವಲ್ಲಿ ವಿಪಕ್ಷಗಳ ಪಾತ್ರವೂ ಇದೆ. ಗೃಹ ಬಂಧನದಲ್ಲಿರುವ ನಾಯಕರು ಬಿಡುಗಡೆಯಾದ ಬಳಿಕ ಹಿಂಸಾಚಾರ ನಡೆಯದಂತೆ ನೋಡಿಕೊಳ್ಳುವಲ್ಲಿ ವಿಪಕ್ಷಗಳು ಪ್ರಮುಖ ಪಾತ್ರ ವಹಿಸಬಹುದು. ಕೆಲವು ನೂರು ಮತಗಳು ಸಿಗುತ್ತವೆ ಎಂಬ ಕಾರಣಕ್ಕೆ ಪಾಕಿಸ್ಥಾನದ ಭಾಷೆಯಲ್ಲಿ ಮಾತನಾಡುವುದು ಅಥವಾ ಆ ದೇಶದ ತರ್ಕಕ್ಕೆ ಪೂರಕವಾದ ನಿರ್ಧಾರಗಳನ್ನು ಕೈಗೊಳ್ಳುವುದು ದೇಶದ ಹಿತದೃಷ್ಟಿಯಿಂದ ತಕ್ಕದಾದ ನಡೆಯಲ್ಲ. ಈ ಸಂದರ್ಭದಲ್ಲಿ ಎಲ್ಲ ನಾಯಕರು ತಮ್ಮ ಮುತ್ಸದ್ದಿತನವನ್ನು ಪ್ರದರ್ಶಿಸಬೇಕಿದೆ. ನಮ್ಮೊಳಗಿನ ರಾಜಕೀಯ ಬೇರೆ, ಶತ್ರು ರಾಷ್ಟ್ರದ ಜೊತೆಗಿನ ವ್ಯವಹಾರ ಬೇರೆ. ರಾಷ್ಟ್ರೀಯ ಭದ್ರತೆ ಪರಮೋತ್ಛ. ಅದು ಇದ್ದರೇನೆ ಪ್ರಜಾತಂತ್ರ ಆರೋಗ್ಯಕರವಾಗಿ ಇರುತ್ತದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ