ವಾಯುಸೇನೆಗೆ ರಫೇಲ್‌ ಸೇರ್ಪಡೆ: ಆಧುನೀಕರಣದ ಹೆಜ್ಜೆ

Team Udayavani, Oct 9, 2019, 5:14 AM IST

ವಾಯುಸೇನೆ ಬತ್ತಳಿಕೆಯಲ್ಲಿ ಸುಖೋಯ್‌, ಮಿಗ್‌-21 ಬೈಸನ್‌ ಮತ್ತು ಜಾಗ್ವಾರ್‌ನಂಥ ಯುದ್ಧ ವಿಮಾನಗಳೇ ಪ್ರಮುಖವಾಗಿದ್ದವು. ಈಗ ರಫೇಲ್‌ ನಮ್ಮ ವಾಯು ಸೇನೆಯ ಪ್ರಮುಖ ಶಕ್ತಿಯಾಗಿ ಕಾಣಿಸಿಕೊಳ್ಳಲಿದೆ.

ತನ್ನ ಎಂಟೂವರೆ ದಶಕಕ್ಕೂ ಹೆಚ್ಚಿನ ಇತಿಹಾಸದಲ್ಲಿ ಭಾರತದ ವಾಯುಸೇನೆಯು ಅನೇಕ ಏರಿಳಿತಗಳನ್ನು ನೋಡುತ್ತಲೇ ಬಂದಿದೆ. ಚೀನಾ ಮತ್ತು ಪಾಕಿಸ್ತಾನದ ವಿರುದ್ಧ ಯುದ್ಧವಾದಾಗ ವಾಯುಸೇನೆಯು ಶತ್ರುರಾಷ್ಟ್ರಗಳ ಎದೆ ನಡುಗಿಸಿದ ರೀತಿಯನ್ನು ಯಾರಿಗೆ ಮರೆಯಲು ಸಾಧ್ಯವಿದೆ? ಇಂದು ಭಾರತೀಯ ವಾಯುಸೇನೆಯು ಪ್ರಪಂಚದ ನಾಲ್ಕನೇ ಸರ್ವ ಶ್ರೇಷ್ಠ ವಾಯುಸೇನೆಯೆಂದು ಪರಿಗಣಿಸಲ್ಪಡುತ್ತಿರುವುದು ದೇಶಕ್ಕೇ ಗೌರವದ ವಿಷಯ.

ಮಂಗಳವಾರ, ವಾಯು ಸೇನಾ ದಿವಸದ ಸಂರ್ದರ್ಭದಲ್ಲಿ ಮತ್ತೂಂದು ಹೊಸ ಅಧ್ಯಾಯ ಆರಂಭವಾಗಿದೆ. ರಕ್ಷಣಾ ಮಂತ್ರಿ ರಾಜನಾಥ್‌ ಸಿಂಗ್‌ ಅವರು ಫ್ರಾನ್ಸ್‌ನ ಬಾರ್‌ ಡೆಕ್ಸ್‌ ನಗರದಲ್ಲಿ ದೇಶದ ಮೊದಲ ರಫೇಲ್‌ ಯುದ್ಧ ವಿಮಾನವನ್ನು ಫ್ರಾನ್ಸ್‌ನಿಂದ ಪಡೆದಿದ್ದಾರೆ. ಈಗ ರಫೇಲ್‌ ನಮ್ಮ ವಾಯುಸೇನೆಯ ಪ್ರಮುಖ ಶಕ್ತಿಯಾಗಿ ಕಾಣಿಸಿಕೊಳ್ಳಲಿದೆ. ಭಾರತೀಯ ವಾಯುಸೇನೆಗೆ ಬಹಳ ಕಾಲದಿಂದ ಉನ್ನತ ಶ್ರೇಣಿಯ ಯುದ್ಧ ವಿಮಾನಗಳ ಅಗತ್ಯವಿತ್ತು. ರಫೇಲ್‌ ಯುದ್ಧ ವಿಮಾನದ ವೈಶಿಷ್ಟ್ಯ ಕೇವಲ ಅದರ ವೇಗವಷ್ಟೇ ಅಲ್ಲದೇ, ಗಾಳಿಯಲ್ಲೇ ಎದುರಾಳಿ ವಿಮಾನಗಳನ್ನು ಪುಡಿಗಟ್ಟುವ ಮೀಟಿ ಯೋರ್‌ ಮತ್ತು ಸ್ಕಾಲ್ಪ್ ಮಿಸೈಲ್‌ಗಳನ್ನು ಹೊಂದಿರುವುದು. ಇದರ ಹೊರತಾಗಿ, ಭಾರತೀಯ ವಾಯುಸೇನೆಯು ತನ್ನ ಅಗತ್ಯಗಳಿಗೆ ತಕ್ಕಂತೆ ರಫೇಲ್‌ ಯುದ್ಧ ವಿಮಾನದಲ್ಲಿ ಮಾರ್ಪಾಡುಗಳನ್ನು ಮಾಡಿಸಿಕೊಂಡಿದೆ. ಇಲ್ಲಿಯವರೆಗೂ ಭಾರತದ ವಾಯುಸೇನೆಯ ಬತ್ತಳಿಕೆಯಲ್ಲಿ ಸುಖೋಯ್‌, ಮಿಗ್‌-21 ಬೈಸನ್‌ ಮತ್ತು ಜಾಗ್ವಾರ್‌ನಂಥ ಯುದ್ಧ ವಿಮಾನಗಳೇ ಪ್ರಮುಖವಾಗಿದ್ದವು. ಭಾರತವು ಏಷ್ಯಾದಲ್ಲಿ ಶಕ್ತಿ ಸಂತುಲನಕ್ಕಾಗಿ ಪ್ರಯತ್ನಿಸುತ್ತಿರುವುದು ಮತ್ತು ಚೀನಾ-ಪಾಕಿಸ್ತಾನದಿಂದ ವಿವಿಧ ರೀತಿಯ ಸಾಮರಿಕ ಸವಾಲುಗಳನ್ನು ಎದುರಿಸುತ್ತಿರುವುದನ್ನು ಪರಿಗಣಿಸಿದಾಗ, ವಾಯುಸೇನೆಯ ಆಧುನೀಕರಣವು ಅತ್ಯಗತ್ಯ ಹಾಗೂ ಅನಿವಾರ್ಯವೂ ಆಗಿದೆ. ಇದು ತಂತ್ರ ಜ್ಞಾನದ ಕಾಲವಾಗಿದ್ದು, ಯುದ್ಧದ ರೀತಿ-ನೀತಿಗಳೂ ಬದಲಾಗಿವೆ. ಸೆಕೆಂಡ್‌ಗಳಲ್ಲಿ ಶತ್ರುಗಳ ಅಡಗುತಾಣಗಳನ್ನು ಪುಡಿಗಟ್ಟುವ ಶಸ್ತಾಸ್ತ್ರಗಳು ಮತ್ತು ವಿಮಾನಗಳು ವಾಯುಸೇನೆಯ ಅಗತ್ಯವಾಗಿ ಬದಲಾಗಿವೆ. ಕೆಲ ಸಮಯದ ಹಿಂದೆ ನಮ್ಮ ವಾಯು ಸೇನೆಯಲ್ಲಿ ಪ್ರಪಂಚದ ಅತ್ಯಾಧುನಿಕ ಯುದ್ಧ ಹೆಲಿಕಾಪ್ಟರ್‌ ಅಪಾಚೆ ಎಎಎಚ್‌-64 ಇ ಸೇರ್ಪಡೆಯಾಗಿದೆ. ಈ ಹೆಲಿಕಾಪ್ಟರ್‌ಗಳನ್ನು ಅಮೆರಿಕದಿಂದ ಖರೀದಿಸಲಾಗಿದ್ದು, ಈಗ ಭಾರತದ ಬಳಿ ಒಟ್ಟು ಎಂಟು ಅಪಾಚೆ ಹೆಲಿಕಾಪ್ಟರ್‌ಗಳು ಇವೆ. ಅಪಾಚೆ ಹೆಲಿಕಾಪ್ಟರ್‌ಗಳ ಅಬ್ಬರವು ಗಡಿ ಭಾಗದಲ್ಲಿನ ನುಸುಳುಕೋರರ ಎದೆ ನಡುಗಿಸಿರುವುದಂತೂ ಸತ್ಯ. ಇದಷ್ಟೇ ಅಲ್ಲದೇ ಎತ್ತರದ ಮತ್ತು ದುರ್ಗಮ ಪರ್ವತ ಪ್ರದೇಶಗಳಲ್ಲಿ ಸೈನಿಕರನ್ನು ಕರೆದೊಯ್ಯಲು-ಕರೆತರಲು, ಶಸ್ತ್ರಾಸ್ತ್ರ ಮತ್ತು ಅವಶ್ಯಕ ಸಾಮಗ್ರಿಗಳನ್ನು ಪೂರೈಸಲು ಕಷ್ಟವಾಗುತ್ತಿತ್ತು. ಇದಕ್ಕಾಗಿ ಈಗ “ಚಿನೂಕ್‌’ ಹೆಲಿಕಾಪ್ಟರ್‌ಗಳನ್ನು ಖರೀದಿಸಲಾಗಿದೆ. ಒಟ್ಟಾರೆಯಾಗಿ ನೋಡುವುದಾದರೆ, ಭಾರತೀಯ ವಾಯುಸೇನೆಯನ್ನು ಹೊಚ್ಚ ಹೊಸ ಹೆಲಿಕಾಪ್ಟರ್‌ಗಳು ಮತ್ತು ಯುದ್ಧ ವಿಮಾನಗಳಿಂದ ಸಜ್ಜು ಗೊಳಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ಶ್ಲಾಘನೀಯ ಕೆಲಸ ಮಾಡುತ್ತಿದೆ.

ಆದಾಗ್ಯೂ, ಹಳೆಯ ಯುದ್ಧ ವಿಮಾನಗಳು ಇಂದಿಗೂ ತುಸು ತಲೆ ನೋವಾಗಿ ಉಳಿದಿವೆ. ಈಗಲೂ ಭಾರತದ ಬಳಿ ದೊಡ್ಡ ಪ್ರಮಾಣದಲ್ಲಿ ಮಿಗ್‌ ವಿಮಾನಗಳು ಇವೆ. ರಷ್ಯಾದಿಂದ ಖರೀದಿಸಲಾದ ಈ ಯುದ್ಧ ವಿಮಾನಗಳ ಎಕ್ಸ್‌ಪೈರಿ ಡೇಟ್‌ ಎಂದೋ ಮುಗಿದಿದ್ದರೂ ಇವುಗಳನ್ನು ಈಗಲೂ ಬಳಸಲಾಗುತ್ತಿದೆ. ಹೆಚ್ಚುತ್ತಿರುವ ಮಿಗ್‌ ವಿಮಾನಗಳ ದುರ್ಘ‌ಟನೆಗಳಲ್ಲಿ ನೂರೂರು ವೀರ ಪೈಲಟ್‌ಗಳು, ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಪದೇ ಪದೆ ರಿಪೇರಿ ಕಾರ್ಯಗಳನ್ನು ಈ ವಿಮಾನಗಳು ಬೇಡುತ್ತವೆ. ಹೊಸ ವಿಮಾನಗಳು ಕೈಗೆ ಸಿಗುವವರೆಗೂ ಮಿಗ್‌ ವಿಮಾನಗಳ ಮೇಲೆ ಅವಲಂಬಿತವಾಗುವುದು ವಾಯುಸೇನೆಗೆ ಅನಿವಾರ್ಯವಾಗಿದೆ. ಇದುವರೆಗಿನ ಸರ್ಕಾರಗಳ ವಿಳಂಬ ಧೋರಣೆ, ನಿಷ್ಕ್ರಿಯತೆಯೇ ವಾಯುಸೇನೆಯ ಆಧುನೀಕರಣಕ್ಕೆ ಅಡ್ಡಗಾಲಾಗಿತ್ತು. ಆದರೆ ಈಗ ಸಮಯ ಬದಲಾಗುತ್ತಿದೆ ಎಂಬ ಸಂದೇಶ ಸಿಗುತ್ತಿವೆ. ವಾಯುಸೇನೆಯನ್ನು ಬಲಿಷ್ಠಪಡಿಸುವಲ್ಲಿ ಮೋದಿ ನೇತೃತ್ವದ ಸರ್ಕಾರ ಇಡುತ್ತಿರುವ ಹೆಜ್ಜೆಯು ಅಭಿನಂದನೀಯ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ