ಆಳುವವರ ಕಣ್ತೆರೆಸುವ ಫ‌ಲಿತಾಂಶ

Team Udayavani, Oct 25, 2019, 5:47 AM IST

ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆ ಎಲ್ಲ ಸಮೀಕ್ಷೆಗಳನ್ನು ಹುಸಿಗೊಳಿಸಿ ಹಲವು ಅಚ್ಚರಿಗಳನ್ನು ನೀಡಿದೆ.

ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ-ಶಿವಸೇನೆ ಕೇಸರಿ ಮೈತ್ರಿಕೂಟ ಬಹುಮತ ಪಡೆಯುವಲ್ಲಿ ಸಫ‌ಲವಾಗಿದ್ದರೂ ಇದು ಈ ಮೈತ್ರಿಕೂಟ, ನಿರ್ದಿಷ್ಟವಾಗಿ ಬಿಜೆಪಿ ಬಯಸಿದ ಫ‌ಲಿತಾಂಶವಲ್ಲ. ಶಿವಸೇನೆ ಜೊತೆಗೆ ಅನಿವಾರ್ಯ ಮೈತ್ರಿ ಮಾಡಿಕೊಂಡಿದ್ದರೂ ಏಕಾಂಗಿಯಾಗಿ ಬಹುಮತ ಪಡೆದುಕೊಳ್ಳುವುದು ಅಥವಾ ಬಹುಮತಕ್ಕೆ ಹತ್ತಿರವಾಗಿರುವ ಸ್ಥಾನಗಳನ್ನು ಪಡೆದುಕೊಳ್ಳುವುದು ಬಿಜೆಪಿಯ ಗುರಿಯಾಗಿತ್ತು. ಆದರೆ ಫ‌ಲಿತಾಂಶ ಪ್ರಕಟವಾದಾಗ ಬಿಜೆಪಿ 2014ರಲ್ಲಿ ಗಳಿಸಿರುವುದಕ್ಕಿಂತಲೂ ಕಡಿಮೆ ಸ್ಥಾನವನ್ನು ಗಳಿಸಿಕೊಂಡಿದೆ. ಇದು ಬಿಜೆಪಿಗೆ ಆಗಿರುವ ಅನಿರೀಕ್ಷಿತ ಆಘಾತ. ಶಿವಸೇನೆ ಬಹುತೇಕ 2014ರ ಸಾಧನೆಯನ್ನು ಪುನರಾವರ್ತಿಸಿದೆ. ಕಾಂಗ್ರೆಸ್‌-ಎನ್‌ಸಿಪಿ ಮೈತ್ರಿಕೂಟಕ್ಕೆ ಸುಮಾರು 15 ಸ್ಥಾನಗಳ ಲಾಭವಾಗಿದೆ. ಈ ಪೈಕಿ ದೊಡ್ಡ ಮಟ್ಟದ ಲಾಭವಾಗಿರುವುದು ಎನ್‌ಸಿಪಿಗೆ. ಮೈತ್ರಿಯಲ್ಲಿ ಕಿರಿಯ ಪಾಲುದಾರನಾಗಿದ್ದರೂ ಸ್ಥಾನಗಳಿಕೆಯಲ್ಲಿ ಕಾಂಗ್ರೆಸ್‌ಗಿಂತ ಎನ್‌ಸಿಪಿ ಮುಂದಿದೆ.

ಹರ್ಯಾಣದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಇಂಡಿಯನ್‌ ನ್ಯಾಶನಲ್‌ ಲೋಕದಳದಿಂದ ಸಿಡಿದು ಹೋಗಿ ಜನನಾಯಕ್‌ ಜನತಾ ಪಾರ್ಟಿ ಸ್ಥಾಪಿಸಿಕೊಂಡಿದ್ದ ಜಾಟ್‌ ನಾಯಕ ದುಷ್ಯಂತ್‌ ಜೌಟಾಲ ಇಲ್ಲಿ ಕಿಂಗ್‌ಮೇಕರ್‌ ಆಗಿ ಮೂಡಿ ಬಂದಿದ್ದಾರೆ. ಬಿಜೆಪಿ ಮತಗಳಿಗೆ ದುಷ್ಯಂತ್‌ ಸಿಂಗ್‌ ಪಕ್ಷ ದೊಡ್ಡ ಮಟ್ಟದಲ್ಲಿ ಹೊಡೆತ ನೀಡಿರುವುದು ಫ‌ಲಿತಾಂಶದಿಂದ ವೇದ್ಯವಾಗುತ್ತದೆ. ಹೆಚ್ಚಿನೆಲ್ಲ ಚುನಾವಣಾ ಪೂರ್ವ ಸಮೀಕ್ಷೆಗಳು ಎರಡೂ ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್‌ಸಿÌàಪ್‌ ಮಾಡುತ್ತಿದೆ ಎಂದೇ ಭವಿಷ್ಯ ನುಡಿದಿದ್ದವು. ಹೀಗಾಗಿ ಬಿಜೆಪಿ ನಾಯಕರೂ ಫ‌ಲಿತಾಂಶದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ನಿರಾಳರಾಗಿದ್ದರು. ಪರಿಸ್ಥಿತಿಯೂ ಕೇಸರಿ ಪಕ್ಷಕ್ಕೆ ಪೂರಕವಾಗಿಯೇ ಇತ್ತು . ಆದರೆ ಮತದಾರ ಈ ಲೆಕ್ಕಾಚಾರಗಳಿಗೆಲ್ಲ ಸೊಪ್ಪು ಹಾಕಿಲ್ಲ. ಈ ಕಾರಣಕ್ಕೆ ಫ‌ಲಿತಾಂಶ ಅಚ್ಚರಿದಾಯಕ.

ಸಮರ್ಥ ನಾಯಕತ್ವವಿಲ್ಲದೆ ಸೊರಗಿದ್ದ ಕಾಂಗ್ರೆಸ್‌ ಚುನಾವಣೆಯಲ್ಲಿ ಈ ಮಟ್ಟದ ಸ್ಪರ್ಧೆ ನೀಡುವ ವಿಶ್ವಾಸ ಉಳಿದವರಿಗೆ ಬಿಡಿ ಸ್ವತಃ ಕಾಂಗ್ರೆಸ್‌ ನಾಯಕರಿಗೂ ಇರಲಿಲ್ಲ. ಸೋತರೂ ಅದು ಕಳೆದುಕೊಳ್ಳುವುದೇನೂ ಇರಲಿಲ್ಲ. ಎರಡೂ ರಾಜ್ಯಗಳಲ್ಲಿ ಪಕ್ಷ ಚೇತರಿಕೆಯ ಲಕ್ಷಣ ತೋರಿಸಿರುವುದು ಈಗ ಪಕ್ಷದಲ್ಲಿ ಹೊಸ ಲವಲವಿಕೆ ಮೂಡಲು ಕಾರಣವಾಗಿದೆ.

ಪ್ರತಿ ಚುನಾವಣೆಯ ಫ‌ಲಿತಾಂಶದಿಂದಲೂ ರಾಜಕೀಯ ಪಕ್ಷಗಳು ಕಲಿಯುವುದು ಬಹಳಷ್ಟಿರುತ್ತದೆ. ಪ್ರಸ್ತುತ ಫ‌ಲಿತಾಂಶವೂ ಇದಕ್ಕೆ ಹೊರತಾಗಿಲ್ಲ. ಆದರೆ ಈ ಫ‌ಲಿತಾಂಶದಲ್ಲಿ ಉಳಿದ ಪಕ್ಷಗಳಿಗಿಂತ ಬಿಜೆಪಿ ಹೆಚ್ಚು ಪಾಠಗಳನ್ನು ಕಲಿಯಬೇಕಾಗಿದೆ. ಐದು ತಿಂಗಳ ಹಿಂದೆಯಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಎರಡೂ ರಾಜ್ಯಗಳಲ್ಲಿ ಬಹುತೇಕ ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ವಿಧಾನಸಭೆ ಚುನಾವಣೆಗಾಗುವಾಗ ಮುಗ್ಗರಿಸಿದ್ದು ಹೇಗೆ ಎನ್ನುವುದರ ಬಗ್ಗೆ ಆ ಪಕ್ಷದ ನಾಯಕರು ಚಿಂತನೆ ನಡೆಸುವ ಅಗತ್ಯವಿದೆ.

ಎರಡೂ ರಾಜ್ಯಗಳಲ್ಲಿ ಬಿಜೆಪಿ ಮುಖ್ಯವಾಗಿ ನೆಚ್ಚಿಕೊಂಡದ್ದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ವಿಚಾರವನ್ನು. ಈ ದಿಟ್ಟ ನಿರ್ಧಾರ ಮತಗಳಾಗಿ ಬದಲಾಗಬಹುದು ಎಂಬ ಬಿಜೆಪಿಯ ನಿರೀಕ್ಷೆಯನ್ನು ಮತದಾರರು ಹುಸಿಗೊಳಿಸಿದ್ದಾರೆ. ರಾಷ್ಟ್ರಮಟ್ಟದ ಚುನಾವಣೆಯಲ್ಲೇ ರಾಷ್ಟ್ರೀಯ ವಿಚಾರಗಳು ಆದ್ಯತೆ ಪಡೆಯಬಹುದೇನೋ. ಆದರೆ ವಿಧಾನಸಭೆ ಅಥವಾ ಸ್ಥಳೀಯ ಚುನಾವಣೆಗೂ ರಾಷ್ಟ್ರೀಯತೆಯೇ ಮುಖ್ಯವಾಗಬೇಕೆಂದಿಲ್ಲ ಎಂಬುದನ್ನು ಈ ಫ‌ಲಿತಾಂಶ ತೋರಿಸಿಕೊಟ್ಟಿದೆ. ಜೊತೆಗೆ ಬಿಜೆಪಿಯ ಅತಿಯಾದ ಆತ್ಮವಿಶ್ವಾಸವೂ ಅದಕ್ಕೆ ಪ್ರತಿಕೂಲವಾಗಿ ಪರಿಣಮಿಸಿದೆ. ದೇವೇಂದ್ರ ಫ‌ಡ್ನವೀಸ್‌ ಯಶಸ್ವಿ ಮುಖ್ಯಮಂತ್ರಿಯೇ ಆಗಿದ್ದರೂ ಜನರು ನಿರೀಕ್ಷಿಸಿದ ಆಡಳಿತವನ್ನು ನೀಡಲು ಅವರಿಂದ ಸಾಧ್ಯವಾಗಿಲ್ಲ. ಹೀಗಾಗಿ ಮತದಾರರು ಸಾರಾಸಗಟು ಬಿಜೆಪಿಯನ್ನು ಬೆಂಬಲಿಸಿಲ್ಲ. ಹರ್ಯಾಣದಲ್ಲೂ ಆಡಳಿತ ವಿರೋಧಿ ಅಲೆ ಪಕ್ಷವನ್ನು ಕಾಡಿದೆ. ಜೊತೆಗೆ ಮನೋಹರಲಾಲ್‌ ಖಟ್ಟರ್‌ ಆಡಳಿತ ಜನರಿಗೆ ಸಂಪೂರ್ಣ ತೃಪ್ತಿಯನ್ನು ನೀಡಿಲ್ಲ ಎನ್ನುವುದು ಫ‌ಲಿತಾಂಶದಿಂದ ಸ್ಪಷ್ಟವಾಗುತ್ತದೆ.

ಜನರು ಸ್ಥಳೀಯ ವಿಚಾರಗಳಿಗೂ ಆದ್ಯತೆ ನೀಡುತ್ತಾರೆ, ಅಂತೆಯೇ ಜಾತಿ ಸಮೀಕರಣವೂ ಚುನಾವಣೆ ಸಂದರ್ಭದಲ್ಲಿ ಮುಖ್ಯವಾಗುತ್ತದೆ ಎನ್ನುವುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ. ಪ್ರತಿ ಚುನಾವಣೆಯಲ್ಲೂ ಭಾವನಾತ್ಮಕ ಮತ್ತು ರಾಷ್ಟ್ರೀಯ ವಿಚಾರಗಳು ಮಾತ್ರ ಮತಗಳನ್ನು ತಂದುಕೊಡುವುದಿಲ್ಲ. ಕುಸಿಯುತ್ತಿರುವ ಆರ್ಥಿಕ ಪರಿಸ್ಥಿತಿ, ನಿರುದ್ಯೋಗ ಇತ್ಯಾದಿ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸುವ ಅಗತ್ಯವಿದೆ ಎನ್ನುವುದು ಈಗಲಾದರೂ ಸರಕಾರ ಅರಿತುಕೊಳ್ಳಬೇಕು.

ಮಹಾರಾಷ್ಟ್ರ ಫ‌ಲಿತಾಂಶದಲ್ಲಿ ಇನ್ನೂ ಒಂದು ಗಮನಾರ್ಹ ಅಂಶವಿದೆ. ಅದೆಂದರೆ ಬರ ಮತ್ತು ಪ್ರವಾಹಕ್ಕೆ ತುತ್ತಾಗಿದ್ದ ಪ್ರದೇಶಗಳಲ್ಲಿ ಜನರು ಆಡಳಿತ ಪಕ್ಷವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಅಂದರೆ ಈ ಜ್ವಲಂತ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಿದ ರೀತಿ ಏನೇನೂ ಸಾಲದು ಎನ್ನುವುದು ಇದರ ಅರ್ಥ. ಜನರು ಸಂಕಷ್ಟಗಳಲ್ಲಿ ನರಳುತ್ತಿರುವಾಗ ಆಳುವವರು ಸಂವೇದನಾರಹಿತರಂತೆ ವರ್ತಿಸಿದರೆ ತಿರಸ್ಕೃತರಾಗಬೇಕಾಗುತ್ತದೆ. ಇದು ಪ್ರಸ್ತುತ ಪರಿಸ್ಥಿತಿಯಲ್ಲಿ ಕರ್ನಾಟಕಕ್ಕೂ ಅನ್ವಯಿಸುವ ಮಾತು. ರಾಜ್ಯ ಎರಡೆರಡು ಸಲ ಭೀಕರ ನೆರೆಗೆ ತುತ್ತಾಗಿರುವಾಗ ಸರಕಾರ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವ ಹಿಸದಿದ್ದರೆ ಏನಾಗಬಹುದು ಎನ್ನುವುದನ್ನು ಮಹಾರಾಷ್ಟ್ರದ ಮತದಾರರು ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಇದು ಆಳುವವರ ಕಣ್ತೆರೆಸುವ ಫ‌ಲಿತಾಂಶ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ