ಒಂದೇ ವೇದಿಕೆಯಲ್ಲಿ ಮೋದಿ-ಟ್ರಂಪ್‌, ಐತಿಹಾಸಿಕ ಘಟನೆ

Team Udayavani, Sep 17, 2019, 5:35 AM IST

ಹೂಸ್ಟನ್‌ ಕಾರ್ಯಕ್ರಮ ಪಾಕ್‌ ಹಾಗೂ ಚೀನಾಕ್ಕೊಂದು ಬಲವಾದ ಸಂದೇಶ ನೀಡುವುದು ಖಚಿತ. ಏನೇ ಮಾಡಿ ದರೂ ಜಾಗತಿಕ ವೇದಿಕೆಯಲ್ಲಿ ಭಾರತದ ಪಾರಮ್ಯವನ್ನು ತಡೆಯಲು ಸಾಧ್ಯವಿಲ್ಲ ಎಂಬ ಸಂದೇಶ ಇದರಲ್ಲಿದೆ.

ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ಭಾರತೀಯ ಸಮುದಾಯದವರು ಹಮ್ಮಿಕೊಂಡಿರುವ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೂ ಭಾಗವಹಿಸಲಿರುವುದು ಒಂದು ಐತಿಹಾಸಿಕ ಘಟನೆಯಾಗಲಿದೆ. ಉಭಯ ದೇಶಗಳ ನಡುವಿನ ಸ್ನೇಹ ಈ ಮೂಲಕ ಮತ್ತಷ್ಟು ಗಟ್ಟಿಗೊಳ್ಳಲಿರುವುದು ಮಾತ್ರವಲ್ಲದೆ ಇನ್ನೂ ಅನೇಕ ಕಾರಣಗಳಿಗೆ ಸೆ. 22ರಂದು ನಡೆಯಲಿರುವ ಈ ಕಾರ್ಯಕ್ರಮ ಮುಖ್ಯವಾಗುತ್ತದೆ.

ಅಮೆರಿಕದಲ್ಲಿ ಅಲ್ಲಿನ ಅಧ್ಯಕ್ಷರೊಬ್ಬರು ಒಂದೇ ಕಡೆ 50,000 ಭಾರತೀಯ ಸಮುದಾಯದವರನ್ನುದ್ದೇಶಿಸಿ ಮಾತನಾಡಲಿರುವುದು ಇದೇ ಪ್ರಥಮ.ಕಾಶ್ಮೀರ ವಿವಾದ ಬಗೆಹರಿಸುವ ಸಲುವಾಗಿ ಮಧ್ಯಸ್ಥಿಕೆ ವಹಿಸುವ ಪ್ರಸ್ತಾಪವನ್ನು ಟ್ರಂಪ್‌ ಕೆಲವು  ಬಾರಿ ಮಂಡಿಸಿದಾಗ ಭಾರತ ಮೂರನೆಯವರ ಹಸ್ತಕ್ಷೇಪವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದೆ. ಜತೆಗೆ ಜಮ್ಮು-ಕಾಶ್ಮೀರದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಕಣಿವೆ ರಾಜ್ಯದ ಪರಿಸ್ಥಿತಿಯ ಕುರಿತು ಅಮೆರಿಕದ ಕೆಲವು ಸಂಸದರು ಭಾರೀ ಕಳವಳ ವ್ಯಕ್ತಪಡಿಸಿದ್ದರು. ಹೀಗಾಗಿ ಭಾರತದ ಬಗ್ಗೆ ಅಮೆರಿಕದ ಮನಸ್ಸಿನಲ್ಲಿ ಕಹಿ ಭಾವನೆ ಇದೆಯೇ ಎಂಬ ಅನುಮಾನವೊಂದು ಇತ್ತು.ಇದೀಗ ಮೋದಿ ಜತೆಗೆ ಟ್ರಂಪ್‌ ವೇದಿಕೆ ಹಂಚಿಕೊಳ್ಳಲು ಒಪ್ಪಿರುವುದರಿಂದ ಈ ಅನುಮಾನ ದೂರವಾಗಿದೆ. ಈ ಹಿನ್ನೆಲೆಯಲ್ಲಿ ಹೂಸ್ಟನ್‌ ಕಾರ್ಯಕ್ರಮಕ್ಕೆ ಬರೀ ಸ್ನೇಹಾಚಾರ ಮಾತ್ರವಲ್ಲದೆ ರಾಜತಾಂತ್ರಿಕವಾದ ಇನ್ನೊಂದು ಆಯಾಮವೂ ಇದೆ.

ಅಮೆರಿಕದಲ್ಲಿ ಮೋದಿ ಭಾರತೀಯ ಸಮುದಾಯದವರ ಬೃಹತ್‌ ಸಭೆಯಲ್ಲಿ ಭಾಗವಹಿಸುತ್ತಿರುವುದು ಇದು ಮೂರನೇ ಬಾರಿ. 2014ರಲ್ಲಿ ಪ್ರಧಾನಿಯಾದ ಬೆನ್ನಿಗೆ ನ್ಯೂಯಾರ್ಕ್‌ನ ಮ್ಯಾಡಿಸನ್‌ ಸ್ಕ್ವೇರ್‌ ಗಾರ್ಡನ್‌ನಲ್ಲಿ ಮತ್ತು 2016ರಲ್ಲಿ ಸಿಲಿಕಾನ್‌ ವ್ಯಾಲಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಈ ಸಭೆಗಳಲ್ಲಿ ಸುಮಾರು 20,000 ಜನರಷ್ಟೇ ಇದ್ದರು. ಈ ದೃಷ್ಟಿಯಿಂದಲೂ ಮೂರನೇ ಸಾರ್ವಜನಿಕ ಸಭೆ ಮಹತ್ವದ್ದಾಗಲಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಜಗತ್ತಿನ ಎರಡು ಬೃಹತ್‌ ಪ್ರಜಾಪ್ರಭುತ್ವ ದೇಶಗಳ ಪ್ರಮುಖರು ಸಾರ್ವಜನಿಕ ಸಭೆಯಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಉದಾಹರಣೆಯಿಲ್ಲ. ಈ ದೃಷ್ಟಿಯಿಂದಲೂ ಹೂಸ್ಟನ್‌ ಕಾರ್ಯಕ್ರಮ ಜಗತ್ತಿನಾದ್ಯಂತ ಕುತೂಹಲ ಮೂಡಿಸಿದೆ.

ಅಮೆರಿಕ ಮತ್ತು ಭಾರತದ ಜನರ ನಡುವಿನ ಬಾಂಧವ್ಯವನ್ನು ಮತ್ತು ಜಗತ್ತಿನ ಎರಡು ಅತಿ ಹಳೆಯ ಪ್ರಜಾಪ್ರಭುತ್ವ ದೇಶಗಳ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಸಿಕ್ಕಿರುವ ಅಪೂರ್ವ ಅವಕಾಶ ಇದಾಗಿದ್ದು, ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ರಾಜತಾಂತ್ರಿಕ ಜಾಣ್ಮೆಯನ್ನು ನಾವು ತೋರಿಸಬೇಕು.

ಚೀನಾ-ಅಮೆರಿಕ ದರ ಸಮರದಿಂದಾಗಿ ಉಂಟಾಗಿರುವ ವಾಣಿಜ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಕೂಡ ಇದು ಸುಸಂದರ್ಭ. ದರ ಸಮರದ ಪರಿಣಾಮವಾಗಿ ಭಾರತದ ಮೇಲೂ ಟ್ರಂಪ್‌ ಹಲವು ನಿರ್ಬಂಧಗಳನ್ನು ಹೇರಿದ್ದಾರೆ. ಈ ಬಗ್ಗೆ ಮೋದಿ ಮಾತುಕತೆ ನಡೆಸುವ ನಿರೀಕ್ಷೆಯಿದೆ. ಅಂತೆಯೇ ಸೌದಿಯ ತೈಲ ಬಾವಿಯ ಮೇಲೆ ಡ್ರೋನ್‌ ದಾಳಿಯಿಂದ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಬಗ್ಗೆಯೂ ಉಭಯ ನಾಯಕರು ಚರ್ಚಿಸುವ ಸಾಧ್ಯತೆಯಿದೆ. ಈ ಮಾತುಗಳಿಂದ ಹೊರಹೊಮ್ಮುವ ಸಕರಾತ್ಮಕ ಫ‌ಲಿತಾಂಶ ಎರಡೂ ದೇಶಗಳಿಗೆ ಪ್ರಯೋಜಕನಕಾರಿಯಾಗಬಹುದು.

ಇವೆಲ್ಲಗಳಿಗಿಂತ ಮಿಗಿಲಾಗಿ ಹೂಸ್ಟನ್‌ ಕಾರ್ಯಕ್ರಮ ನೆರೆ ರಾಷ್ಟ್ರ ಪಾಕಿಸ್ತಾನ ಹಾಗೂ ಅದರ ಸರ್ವಋತು ಮಿತ್ರ ಚೀನಾಕ್ಕೊಂದು ಬಲವಾದ ಸಂದೇಶ ನೀಡುವುದು ಖಚಿತ. ಏನೇ ತಿಪ್ಪರಲಾಗ ಹಾಕಿದರೂ ಜಾಗತಿಕ ವೇದಿಕೆಯಲ್ಲಿ ಭಾರತದ ಪಾರಮ್ಯವನ್ನು ತಡೆಯಲು ಸಾಧ್ಯವಿಲ್ಲ ಹಾಗೂ ಅಮೆರಿಕ ಮತ್ತು ಭಾರತ ನಡುವಿನ ಬಾಂಧವ್ಯ ಅಬಾಧಿತ ಎಂಬ ಸ್ಪಷ್ಟ ಸಂದೇಶ ಸದಾ ಭಾರತದ ವಿರುದ್ಧ ಮಸಲತ್ತು ನಡೆಸುತ್ತಿರುವ ಈ ಎರಡು ದೇಶಗಳಿಗೆ ಸಿಗಲಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ