ಪಾಕ್‌ ಉಪಟಳ ಕಟ್ಟೆಚ್ಚರ ಅಗತ್ಯ

Team Udayavani, Sep 18, 2019, 5:00 AM IST

ಜಮ್ಮು-ಕಾಶ್ಮೀರದಲ್ಲಿ ಭಾರತ-ಪಾಕಿಸ್ತಾನಿ ಸೇನೆಯ ನಡುವೆ ಸೃಷ್ಟಿಯಾಗುತ್ತಿರುವ ಬಿಕ್ಕಟ್ಟು ಚಿಂತೆಯ ವಿಷಯವಾಗಿದೆ. ಅದರಲ್ಲೂ ಕಲಂ 370 ದಯಪಾಲಿಸಿದ್ದ ವಿಶೇಷಾಧಿಕಾರವನ್ನು ಈ ಭಾಗದಿಂದ ಹಿಂಪಡೆದ ನಂತರದಿಂದ ಪಾಕಿಸ್ತಾನವಂತೂ ನಿತ್ಯ ಗಡಿಭಾಗದಲ್ಲಿ ಭಾರತೀಯ ಸೈನಿಕರತ್ತ ಗುಂಡಿನದಾಳಿ ನಡೆಸುತ್ತಿದೆ. ಪರಿಣಾಮವಾಗಿ ಗಡಿ ಗ್ರಾಮಗಳಲ್ಲಿ ಆತಂಕ ಸೃಷ್ಟಿಯಾಗಿ, ಜನ ಭಯಭೀತರಾಗಿದ್ದಾರೆ. ವಿದೇಶಾಂಗ ಸಚಿವಾಲಯದ ಪ್ರಕಾರ ಪಾಕಿಸ್ತಾನಿ ಸೇನೆಯು ಈ ವರ್ಷ ಎರಡು ಸಾವಿರದ ಐದುನೂರು ಬಾರಿ ಕದನವಿರಾಮದ ಉಲ್ಲಂಘನೆ ಮಾಡಿದೆ! ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ನಂತರದಿಂದ ಪಾಕ್‌ ಚಿಂತಾಕ್ರಾಂತವಾಗಿರುವುದಂತೂ ಸತ್ಯ. ಅತ್ತ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌, ಆ ದೇಶದ ಸೇನಾ ಮುಖ್ಯಸ್ಥ ಮತ್ತು ಸಚಿವರು ಮಾನಸಿಕ ಸಮತೋಲನ ಕಳೆದುಕೊಂಡಂತೆ ವರ್ತಿಸುತ್ತಿದ್ದಾರೆ. ಇದೆಲ್ಲರ ಪರಿಣಾಮ ಗಡಿಭಾಗದಲ್ಲಿ ಕಾಣಿಸುತ್ತಿದೆ.

ಅನೇಕ ಬಾರಿ ಗಡಿ ಭಾಗದ ಪ್ರದೇಶಗಳ ಪರಿಸ್ಥಿತಿ ಎಷ್ಟು ಗಂಭೀರವಾಗುತ್ತದೆಂದರೆ, ಪ್ರಾಣ ಉಳಿಸಿಕೊಳ್ಳಲು ಜನ ಊರು ಬಿಡಬೇಕಾಗುತ್ತದೆ. ಹಿಂದಿರುಗಿ ಬಂದಾಗ ಅವರ ಮನೆಗಳು ಶೆಲ್ ಮತ್ತು ಮೋರ್ಟರ್‌ಗಳಿಂದಾಗಿ ತೀವ್ರ ಜಖಂಗೊಂಡಿರುತ್ತವೆ. ಮತ್ತೆ ಬದುಕನ್ನು ಸಹಜ ಸ್ಥಿತಿಗೆ ಒಯ್ಯಲು ಅವರಿಗೆ ವರ್ಷಗಳೇ ಹಿಡಿಯುತ್ತವೆ. ಈ ವರ್ಷದಲ್ಲಿ ಭಾರತೀಯ ಗಡಿಪ್ರದೇಶದಲ್ಲಿನ 21 ನಾಗರಿಕರು ಪಾಕಿಸ್ತಾನಿ ಸೈನಿಕರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಕಾಶ್ಮೀರದಲ್ಲಿ ಅಸ್ಥಿರತೆ ಸೃಷ್ಟಿಸುವ ಹುಚ್ಚಲ್ಲಿ ಪಾಕಿಸ್ತಾನ ಯಾವುದೇ ಹಂತಕ್ಕೂ ಹೋಗಬಲ್ಲದು ಎನ್ನುವುದನ್ನು ಈ ಘಟನೆಗಳು ಸಾರುತ್ತಿವೆ. ಭಾರತೀಯ ಸೈನಿಕರ ಗಮನವನ್ನು ಬೇರೆಡೆ ಸೆಳೆದು ಕಾಶ್ಮೀರದಲ್ಲಿ ಉಗ್ರರನ್ನು ನುಗ್ಗಿಸುವ ಉದ್ದೇಶದಿಂದಲೇ ಪಾಕ್‌ ಸೇನೆ ಈ ರೀತಿ ಮಾಡುತ್ತದೆ.

ಕೆಲವೇ ದಿನಗಳ ಹಿಂದಷ್ಟೇ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಆ ದೇಶ ಎರಡು ಸಾವಿರಕ್ಕೂ ಹೆಚ್ಚು ಸೈನಿಕರನ್ನು, 500ಕ್ಕೂ ಹೆಚ್ಚು ಪರಿಣತ ಕಮಾಂಡೋಗಳನ್ನು ನಿಲ್ಲಿಸಿದೆ. ಈ ಗುಂಪು ಠಿಕಾಣಿ ಹೂಡಿರುವುದು ಗಡಿನಿಯಂತ್ರಣ ರೇಖೆಯಿಂದ 30 ಕಿಲೋಮೀಟರ್‌ ದೂರದಲ್ಲಿ ಎನ್ನುತ್ತಿವೆ ಗುಪ್ತಚರ ವರದಿಗಳು.

ಭಾರತೀಯ ಸೇನೆ, ಭದ್ರತಾಪಡೆ ಮತ್ತು ಜಮ್ಮು-ಕಾಶ್ಮೀರದ ಪೊಲೀಸರಿಗೆ ಈ ವೇಳೆಯಲ್ಲಿ ಅತಿಹೆಚ್ಚು ಚಿಂತೆಯ ವಿಷಯವಾಗಿರುವುದು ಇದೊಂದೇ ಅಲ್ಲ, ಕಾಶ್ಮೀರ ಕಣಿವೆಯಲ್ಲಿ ಸ್ಲೀಪರ್‌ಸೆಲ್ಗಳಾಗಿರುವ ಆತಂಕವಾದಿಗಳನ್ನು ಹತ್ತಿಕ್ಕುವ ಬೃಹತ್‌ ಸವಾಲೂ ಅವುಗಳ ಮುಂದಿದೆ. ಪ್ರಸಕ್ತ 250ಕ್ಕೂ ಹೆಚ್ಚು ಉಗ್ರರು ಕಾಶ್ಮೀರದಲ್ಲಿ ಇದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಶ್ರೀನಗರವೊಂದರಲ್ಲೇ 24ಕ್ಕೂ ಹೆಚ್ಚು ಉಗ್ರರಿರುವುದಾಗಿ, ಇವರೆಲ್ಲ ದೊಡ್ಡ ದಾಳಿಯೊಂದಕ್ಕೆ ಸಂಚು ರೂಪಿಸುತ್ತಿರುವುದಾಗಿ ಖುದ್ದು ಸೇನೆಯೇ ಹೇಳಿದೆ. ಶ್ರೀನಗರದಂಥ ಬೃಹತ್‌ ನಗರದಲ್ಲೇ ಈ ಪರಿಸ್ಥಿತಿ ಇದೆ. ಇನ್ನು ಗ್ರಾಮೀಣ ಭಾಗದಲ್ಲಂತೂ ಪರಿಸ್ಥಿತಿ ಮತ್ತಷ್ಟು ವಿಷಮವಾಗಿದೆ ಎನ್ನಲಾಗುತ್ತದೆ. ಪ್ರಸಕ್ತ ಕಾಶ್ಮೀರದಾದ್ಯಂತ ಪೊಲೀಸರು ಮತ್ತು ಸೇನೆ ತೀವ್ರ ಕಟ್ಟೆಚ್ಚರ ವಹಿಸಿರುವುದರಿಂದ, ಹಲವು ನಿರ್ಬಂಧಗಳನ್ನು ಹೇರಿರುವುದರಿಂದ ಪರಿಸ್ಥಿತಿ ಹಿಡಿತದಲ್ಲಿದೆ. ಆದರೂ ಹೊರಗಿನಿಂದ ಮತ್ತು ಒಳಗಿನಿಂದ ಶತ್ರುಗಳು ಪಿತೂರಿ ನಡೆಸುತ್ತಿರುವಾಗ ಬಹಳ ಜಾಗರೂಕರಾಗಿ ಹೆಜ್ಜೆಯಿಡುವುದು ಅಗತ್ಯವಾಗಿದೆ. ಎಲ್ಲಕ್ಕೂ ಮುಖ್ಯವಾಗಿ ಜಾಗತಿಕ ವೇದಿಕೆಗಳಲ್ಲಿ ಶಾಂತಿ, ಮಾನವೀಯತೆಯ ಮಾತನಾಡುತ್ತಾ, ಹಿಂಬಾಗಿಲಿನಿಂದ ಭಾರತಕ್ಕೆ ಅತೀವ ತೊಂದರೆ ಕೊಡುತ್ತಿರುವ ಪಾಕಿಸ್ತಾನವನ್ನು ಎಲ್ಲಾ ರೀತಿಯಿಂದಲೂ ಕಟ್ಟಿಹಾಕುವ ಅಗತ್ಯ ಹಿಂದೆಂದಿಗಿಂತಲೂ ಅಧಿಕವಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ