ಆಂಗ್ಲರಿಗೆ ಅದೃಷ್ಟ ಬಲದ ಗೆಲುವು; ಬದಲಾಗಲಿ ನಿಯಮ 

Team Udayavani, Jul 16, 2019, 5:20 AM IST

ಇಂಗ್ಲೆಂಡ್‌ ಕ್ರಿಕೆಟ್‌ ಜಗತ್ತಿನ ಹೊಸ ಸಾಮ್ರಾಟನಾಗಿ ವಿರಾಜಮಾನವಾಗಿದೆ. ಫೈನಲ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ನ್ನು ಅದೃಷ್ಟದ ಬಲದಿಂದ ಸೋಲಿಸಿ ಆಂಗ್ಲರ ತಂಡ, ಕ್ರಿಕೆಟ್‌ ಜನಕರಿಗೆ ವಿಶ್ವಕಪ್‌ ಗೆಲ್ಲಲಾಗಲಿಲ್ಲ ಎಂಬ ಕಳಂಕವನ್ನು ತೊಡೆದುಕೊಂಡಿದೆ. 2015ರ ವಿಶ್ವಕಪ್‌ ಕೂಟದಲ್ಲಿ ಪ್ರಥಮ ಸುತ್ತಿನಲ್ಲೇ ಹೊರ ಬಿದ್ದಿದ್ದ ಇಂಗ್ಲೆಂಡ್‌ ಅನಂತರ ಪುಟಿದೆದ್ದು ಬಂದ ರೀತಿ ಅಮೋಘವಾದದ್ದು. ಒಂದು ತಂಡವಾಗಿ ಇಂಗ್ಲೆಂಡ್‌ ಮಾಡಿದ ಸಾಧನೆಯನ್ನು ಅಭಿನಂದಿಸಬೇಕು.

ಆದರೆ ದುರದೃಷ್ಟವಶಾತ್‌ ಫೈನಲ್‌ ಕಾದಾಟ ಮಾತ್ರ ವಿವಾದದ ಗೂಡಾಗಿದೆ. ಎಲ್ಲದಕ್ಕೂ ಮಿಗಿಲಾಗಿ ಇಂಗ್ಲೆಂಡ್‌ ಗೆದ್ದ ರೀತಿ ನಿಜವಾದ ಕ್ರೀಡಾಸ್ಫೂರ್ತಿ ನುಗುಣವಾಗಿಲ್ಲ ಎಂಬ ಅಪಸ್ವರ ಕೇಳಿ ಬಂದಿದೆ. ಇದಕ್ಕೆ ಕಾರಣವಾದದ್ದು ಫೈನಲ್‌ ಫ‌ಲಿತಾಂಶ ಮತ್ತು ಐಸಿಸಿಯ ಯಾರಿಗೂ ಅರ್ಥವಾಗದ ಜಟಿಲ ನಿಯಮಗಳು. ಜೊತೆಗೆ ಅಂಪಾಯರ್‌ಗಳಿಂದಲೂ ಪ್ರಮಾದವಾಗಿದೆ ಎಂಬ ಆರೋಪವಿದೆ. ಹಾಗೆ ನೋಡಿದರೆ ಕೂಟದ ಆರಂಭದಿಂದಲೂ ಅಂಪಾಯರಿಂಗ್‌ ಬಗ್ಗೆ ಅನೇಕ ದೂರುಗಳು ಇದ್ದವು. ವಿಶ್ವಕಪ್‌ನಂಥ ಪ್ರತಿಷ್ಠಿತ ಕೂಟಕ್ಕೆ ಆಯ್ಕೆ ಮಾಡಿದ ಅಂಪಾಯರ್‌ಗಳಿಂದ ಈ ಮಟ್ಟದ ಕಳಪೆ ತೀರ್ಪುಗಳು ಬಂದಿರುವುದು ನಿಜಕ್ಕೂ ಖೇದಕರ. ಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌ ಮತ್ತು ಇಂಗ್ಲೆಂಡ್‌ ತಂಡಗಳ ಸ್ಕೋರ್‌ ಸಮಾನವಾಗಿತ್ತು. ನ್ಯೂಜಿಲ್ಯಾಂಡ್‌ 8 ವಿಕೆಟ್‌ ನಷ್ಟಕ್ಕೆ 241ರನ್‌ ಮಾಡಿದರೆ ಇಂಗ್ಲೆಂಡ್‌ ಎಲ್ಲ 10 ವಿಕೆಟ್‌ಗಳನ್ನು ಕಳೆದುಕೊಂಡು ಇಷ್ಟೇ ರನ್‌ ಮಾಡಿತು. ಅನಂತರ ನಿಯಮದ ಪ್ರಕಾರ ಸೂಪರ್‌ ಓವರ್‌ ಆಡಿಸಲಾಯಿತು. ಇಲ್ಲೂ ಎರಡೂ ತಂಡಗಳ ಸ್ಕೋರ್‌ ಸಮಾನವಾಯಿತು. ಇದು ಬಹಳ ಅಪರೂಪದ ಫ‌ಲಿತಾಂಶವಾಗಿದ್ದರೂ ಈ ಮಾದರಿಯ ಫ‌ಲಿತಾಂಶ ಬಂದಾಗ ವಿಜೇತರನ್ನು ಹೇಗೆ ನಿರ್ಧರಿಸಬೇಕೆಂಬ ವಿಚಾರ ಈಗ ವಿವಾದಕ್ಕೆಡೆಮಾಡಿಕೊಟ್ಟಿದೆ.

ಐಸಿಸಿ ಫೋರ್‌ ಮತ್ತು ಸಿಕ್ಸ್‌ ಸೇರಿ ಅತಿ ಹೆಚ್ಚು ಬೌಂಡರಿ ಹೊಡೆದ ತಂಡವನ್ನು ವಿಜೇತರೆಂದು ಘೋಷಿಸುವ ನಿಯಮದ ಪ್ರಕಾರ ಇಂಗ್ಲೆಂಡ್‌ಗೆ ಕಪ್‌ ಒಪ್ಪಿಸಿದೆ. ಆದರೆ ಈ ಗೆಲುವಿಗೆ ನ್ಯೂಜಿಲ್ಯಾಂಡ್‌ ಕೂಡಾ ಅಷ್ಟೇ ಅರ್ಹವಾಗಿತ್ತು ಎನ್ನುವುದನ್ನು ಮರೆಯಬಾರದು. ಒಂದು ದೃಷ್ಟಿಯಿಂದ ನೋಡಿದರೆ ಐಸಿಸಿಯ ಈ ನಿಯಮಗಳೇ ಅಸಂಗತವಾಗಿವೆ. ಹೀಗಾಗಿ ಇದು ಇಂಗ್ಲೆಂಡ್‌ನ‌ ಪರಿಶುದ್ಧ ಮತ್ತು ಪರಿಪೂರ್ಣ ಗೆಲುವು ಎನ್ನಲು ಸಾಧ್ಯವಾಗುವುದಿಲ್ಲ. ಅದೃಷ್ಟ ಬಲ ಇದ್ದ ಕಾರಣ ಇಂಗ್ಲೆಂಡ್‌ ಕಪ್‌ ಎತ್ತಿಕೊಂಡಿದೆ ಎಂಬುದೇ ಹೆಚ್ಚು ಸರಿಯಾಗುತ್ತದೆ. ಯಾರು ಎಷ್ಟೇ ಬೌಂಡರಿ ಹೊಡೆದಿದ್ದರೂ ಎರಡೂ ತಂಡಗಳು ಸಮಾನ ರನ್‌ ಗಳಿಸಿವೆ. ಪಂದ್ಯದ ಫ‌ಲಿತಾಂಶವನ್ನು ರನ್‌ಗಳು ನಿರ್ಧರಿಸುವಾಗ ಬೌಂಡರಿಗಳ ಲೆಕ್ಕ ಏಕೆ ಹಿಡಿಯಬೇಕು ಎಂಬ ಪ್ರಶ್ನೆಗೆ ಐಸಿಸಿ ಉತ್ತರ ಕಂಡುಕೊಳ್ಳಬೇಕಿದೆ. ಹಾಗೊಂದು ವೇಳೆ ಈ ತರ್ಕವನ್ನು ಒಪ್ಪಿಕೊಳ್ಳಬೇಕೆಂದಿದ್ದರೆ ಹೆಚ್ಚು ವಿಕೆಟ್‌ ಉರುಳಿಸಿದ ತಂಡವನ್ನು ವಿಜೇತರೆಂದು ಏಕೆ ತೀರ್ಮಾನಿಸಬಾರದು? ಇಂಗ್ಲೆಂಡ್‌ನ‌ ಎಲ್ಲ ಹತ್ತು ವಿಕೆಟ್‌ಗಳನ್ನು ಉರುಳಿಸುವಲ್ಲಿ ನ್ಯೂಜಿಲ್ಯಾಂಡ್‌ ಸಫ‌ಲವಾಗಿತ್ತು. ಇಂಗ್ಲೆಂಡ್‌ ಉದುರಿಸಿದ್ದು 8 ವಿಕೆಟ್‌ಗಳನ್ನು ಮಾತ್ರ. ಒಂದು ಫೋರ್‌ ಅಥವಾ ಸಿಕ್ಸ್‌ಗಿಂದ ಒಂದು ವಿಕೆಟ್‌ ಹೆಚ್ಚು ಮೌಲ್ಯಯುತವಲ್ಲವೆ?

ಅಂತೆಯೇ ಕೊನೆ ಓವರ್‌ನಲ್ಲಿ ಅಂಪಾಯರ್‌ ನೀಡಿದ ಓವರ್‌ ತ್ರೋ ರನ್‌ ಕೂಡಾ ವಿವಾದಕ್ಕೆಡೆಮಾಡಿಕೊಟ್ಟಿದೆ. ಬ್ಯಾಟಿಗೆ ಬಡಿದು ಬೌಂಡರಿ ಗೆರೆದಾಟಿದಾಗ ಅಂಪಾಯರ್‌ ಧರ್ಮಸೇನ ಹಿಂದುಮುಂದು ನೋಡದೆ ಆರು ರನ್‌ ಘೋಷಿಸಿಬಿಟ್ಟಿದ್ದಾರೆ. ಫೀಲ್ಡರ್‌ ಚೆಂಡು ಎಸೆದ ಬಳಿಕ ಓಡಿದ ರನ್‌ ಲೆಕ್ಕಕ್ಕೆ ಸಿಗುವುದಿಲ್ಲ ಎಂಬ ನಿಯಮವನ್ನು ಅನ್ವಯಿಸಿದ್ದರೆ ಐದು ರನ್‌ ಮಾತ್ರ ಇಂಗ್ಲೆಂಡ್‌ಗೆ ಸಿಗುತ್ತಿತ್ತು. ಅಂತಿಮವಾಗಿ ಅಂಪಾಯರ್‌ ಕೃಪೆಯಿಂದ ಸಿಕ್ಕಿದ ಈ ಒಂದು ಹೆಚ್ಚುವರಿ ರನ್‌ ಫ‌ಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಕನಿಷ್ಠ ಈ ಸಂದರ್ಭದಲ್ಲಿ ಅಂಪಾಯರ್‌ಗಳು ನಿಯಮವನ್ನು ಮರುಪರಿಶೀಲಿಸುವ ವ್ಯವಧಾನವನ್ನಾದರೂ ತೋರಿಸಿದ್ದರೆ ಕ್ರಿಕೆಟ್‌ಗೆ ಅಂಟುವ ಕಳಂಕವನ್ನು ತಪ್ಪಿಸಬಹುದಿತ್ತು.ಈ ಪರಿಸ್ಥಿತಿಯಲ್ಲಿ ಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ನ್ನು ಜಂಟಿ ವಿಜೇತರೆಂದು ಘೋಷಿಸಿದ್ದರೆ ಎರಡು ತಂಡಗಳಿಗೆ ಮಾತ್ರವಲ್ಲದೆ ಒಟ್ಟಾರೆಯಾಗಿ ಕ್ರಿಕೆಟಿಗೆ ನ್ಯಾಯ ಸಲ್ಲಿಸಿದಂತಾಗುತ್ತಿತ್ತು. ಒಂದು ವಿಚಾರವಂತೂ ಸ್ಪಷ್ಟ ಕ್ರಿಕೆಟಿನ ಅಗಾಧ ಸಾಧ್ಯತೆಗಳ ಬಗ್ಗೆ ಸ್ವತಃ ಐಸಿಸಿಗೂ ಇನ್ನೂ ಪೂರ್ಣ ಅಂದಾಜು ಸಿಕ್ಕಿಲ್ಲ. ಸಭ್ಯರ ಕ್ರೀಡೆ ಈ ಮಾದರಿಯ ವಿವಾದಗಳಲ್ಲಿ ಸಿಲುಕುವುದನ್ನು ತಪ್ಪಿಸುವ ಸಲುವಾಗಿ ಐಸಿಸಿ ನಿಯಮಗಳನ್ನು ಆಮೂಲಾಗ್ರ ಪರಿಶೀಲಿಸಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಪೇಕ್ಷಣೀಯ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ