ಮತಕ್ಕೆ ನಗರವಾಸಿಗಳ ನಿರಾಸಕ್ತಿ

Team Udayavani, Apr 19, 2019, 7:16 AM IST

ಎರಡನೇ ಹಂತದ ಮತದಾನ ಮೊದಲ ಹಂತಕ್ಕಿಂತ ತುಸು ಉತ್ತಮವಾಗಿತ್ತು. 95 ಲೋಕಸಭಾ ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಪಶ್ಚಿಮ ಬಂಗಾಳ ಹೊರತುಪಡಿಸಿದರೆ ಉಳಿದೆಡೆ ಬಹುತೇಕ ಶಾಂತಿಯುತವಾಗಿತ್ತು. ಏ.11ರಂದು ನಡೆದ ಮೊದಲ ಹಂತದ ಮತದಾನದಲ್ಲಿ ತೆಲಂಗಾಣ, ಆಂಧ್ರಪ್ರದೇಶ ಮತ್ತಿತರೆಡೆ ವ್ಯಾಪಕವಾಗಿ ಹಿಂಸಾಚಾರ ಸಂಭವಿಸಿ ಮೂವರು ಸಾವಿಗೀಡಾಗಿದ್ದರು. ಎರಡನೇ ಹಂತದಲ್ಲಿ ಇಷ್ಟು ತೀವ್ರವಾದ ಹಿಂಸಾಚಾರ ನಡೆದಿಲ್ಲ. ಆದರೆ ಮತದಾನ ಪ್ರಕ್ರಿಯೆ ಸಂಪೂರ್ಣ ಶಾಂತಿಯುತವಾಗಿತ್ತು ಎಂದು ಹೇಳಲು ಸಾಧ್ಯವಿಲ್ಲ. ಭಾರೀ ಕುತೂಹಲ ಹುಟ್ಟಿಸಿರುವ ಮಂಡ್ಯ ಕ್ಷೇತ್ರದಲ್ಲಿ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತ ನಿಗೂಢವಾಗಿ ಸಾವಿಗೀಡಾಗಿರುವ ಮತ್ತು ಡಾರ್ಜಿಲಿಂಗ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ಘಟನೆಗಳು ವರದಿಯಾಗಿವೆ. ಇವಲ್ಲದೆ ಚಿಕ್ಕಪುಟ್ಟ ಘರ್ಷಣೆಗಳು ಅನೇಕ ಕಡೆ ನಡೆದಿದ್ದು, ಈ ಮಾದರಿಯ ಅಹಿತಕರ ಘಟನೆ ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸುವ ಆಶಯವನ್ನು ಭಂಗಪಡಿಸುತ್ತವೆ.

ಮತಯಂತ್ರಗಳ ಅಸಮರ್ಪಕ ಕಾರ್ಯನಿರ್ವಹಣೆ, ಮತದಾರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವುದು ಇತ್ಯಾದಿ ದೂರುಗಳು ಈ ಸಲವೂ ಬಂದಿರುವುದು ಕಳವಳಕಾರಿ ವಿಚಾರ. ಇದಕ್ಕೆ ಪೂರ್ಣವಾಗಿ ಚುನಾವಣಾ ಆಯೋಗವನ್ನೇ ಹೊಣೆ ಮಾಡಬೇಕಾಗುತ್ತದೆ. ಮೊದಲ ಹಂತದಲ್ಲಿ ಮತಯಂತ್ರಗಳ ಅಸಮರ್ಪಕ ಕಾರ್ಯ ನಿರ್ವಹಣೆಯ ಬಗ್ಗೆ ವ್ಯಾಪಕವಾಗಿ ದೂರುಗಳು ಬಂದಿದ್ದವು. ಆಂಧ್ರದಲ್ಲಿ ಶೇ. 30 ಮತಯಂತ್ರಗಳು ಕಾರ್ಯ ನಿರ್ವಹಿಸಿಲ್ಲ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಟಿಡಿಪಿ ನೇತೃತ್ವದಲ್ಲಿ ಪ್ರತಿಪಕ್ಷಗಳೆಲ್ಲ ಶೇ.50 ವಿವಿಪ್ಯಾಟ್‌ ಮತಗಳನ್ನು ಮತಯಂತ್ರದ ಮತಗಳ ಜತೆಗೆ ಹೋಲಿಸಿನೋಡಬೇಕೆಂಬ ಆಗ್ರಹಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿವೆ. ಈ ಹಿನ್ನೆಲೆಯಲ್ಲಿ ಮುಂದಿನ ಹಂತದ ಮತದಾನಕ್ಕಾಗುವಾಗ ಮತಯಂತ್ರಗಳನ್ನು ಸಮರ್ಪಕವಾಗಿಟ್ಟುಕೊಳ್ಳಲು ಆಯೋಗ ಗರಿಷ್ಠ ಆದ್ಯತೆ ನೀಡಬೇಕಾಗಿತ್ತು. ಹಲವು ಮತಗಟ್ಟೆಗಳಲ್ಲಿ ಒಂದರಿಂದ ಒಂದೂವರೆ ತಾಸಿನಷ್ಟು ವಿಳಂಬವಾಗಿ ಮತದಾನ ಶುರುವಾದ, ಕೆಲವೆಡೆ ಮತದಾನ ಪ್ರಕ್ರಿಯೆ ನಿಧಾನವಾದ ಕುರಿತು ದೂರುಗಳು ಬಂದಿದ್ದು ಮುಂದಿನ ಹಂತಕ್ಕಾಗುವಾಗ ಈ ಸಮಸ್ಯೆಗಳನ್ನೆಲ್ಲ ನಿವಾರಿಸಿಕೊಳ್ಳಬೇಕು.ಅಂತೆಯೇ ಕೆಲವೆಡೆ ಚುನಾವಣಾ ಅಧಿಕಾರಿಗಳಿಗೆ ಮತಯಂತ್ರಗಳ ನಿರ್ವಹಣೆ ಸರಿಯಾಗಿ ತಿಳಿದಿರಲಿಲ್ಲ. ಪದೇ ಪದೆ ಇವೇ ಸಮಸ್ಯೆಗಳು ತಲೆದೋರಿದರೆ ಮತಯಂತ್ರಗಳು ನಮ್ಮ ಚುನಾವಣೆಗೆ ಸೂಕ್ತವಲ್ಲ ಎಂಬ ಆರೋಪಗಳನ್ನು ಜನಸಾಮಾನ್ಯರೂ ನಂಬಿ ಬಿಡುವ ಅಪಾಯವಿದೆ. ಮತಯಂತ್ರಗಳ ಕಾರ್ಯಕ್ಷಮತೆ ಮತ್ತು ಮತದಾರ ಪಟ್ಟಿಯ ಸಮರ್ಪಕತೆ ಆಯೋಗ ಆದ್ಯತೆಯಲ್ಲಿ ಗಮನಿಸಬೇಕಾದ ಅಂಶಗಳು.

ಮತದಾನ ಪ್ರಮಾಣ ಹೆಚ್ಚಿನೆಡೆ ತೃಪ್ತಿಕರವಾಗಿರುವಂತೆ ಕಂಡು ಬಂದಿದೆ. ಪ್ರಾಥಮಿಕ ವರದಿಗಳ ಪ್ರಕಾರ ಹೆಚ್ಚಿನ ಕ್ಷೇತ್ರಗಳಲ್ಲಿ ಶೇ. 70 ಮೇಲ್ಪಟ್ಟು ಮತದಾನವಾಗಿದೆ. ಜನರು ಪ್ರಜಾತಂತ್ರದ ಹಬ್ಬದಲ್ಲಿ ಹೆಚ್ಚು ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ ಎನ್ನುವುದಕ್ಕೆ ಮತದಾನ ಪ್ರಮಾಣವೇ ಸಾಕ್ಷಿ. ಮತದಾನ ಪ್ರಮಾಣ ಹೆಚ್ಚಿಸಲು ಆಯೋಗ, ಸರ್ಕಾರ ಮತ್ತು ಎನ್‌ಜಿಒಗಳು ಕೈಗೊಂಡಿರುವ ಹಲವಾರು ಉಪಕ್ರಮಗಳು ಪರಿಣಾಮ ಬೀರುತ್ತಿರುವಂತೆ ಕಾಣಿಸುತ್ತಿದ್ದು, ಇದೊಂದು ಸಕಾರಾತ್ಮಕವಾದ ಬೆಳವಣಿಗೆ.

ಆದರೆ ಎಲ್ಲ ಚುನಾವಣೆಗಳಂತೆ ಈ ಚುನಾವಣೆಯಲ್ಲೂ ಬೆಂಗಳೂರು ಮತದಾರರ ನಿರಾಸಕ್ತಿ ಮುಂದುವರಿದಿದೆ. ಎರಡನೇ ಹಂತದ 95 ಕ್ಷೇತ್ರಗಳ ಪೈಕಿ ಅತಿ ಕಡಿಮೆ ಮತದಾನವಾಗಿರುವ ಕ್ಷೇತ್ರಗಳಲ್ಲಿ ಬೆಂಗಳೂರಿನ ನಾಲ್ಕು ಕ್ಷೇತ್ರಗಳು ಇವೆ ಎನ್ನುವುದು ನಾವು ತಲೆತಗ್ಗಿಸಬೇಕಾದ ಸಂಗತಿ. ರಾಜ್ಯದ ರಾಜಧಾನಿ, ಸಿಲಿಕಾನ್‌ ಸಿಟಿ ಎಂಬೆಲ್ಲ ಹಿರಿಮೆಗಳನ್ನು ಹೊಂದಿರುವ, ಹೆಚ್ಚು ವಿದ್ಯಾವಂತರನ್ನು ಹೊಂದಿರುವ ನಗರದ ಪ್ರಜೆಗಳು ಪ್ರಜಾತಂತ್ರ ಪ್ರಕ್ರಿಯೆಯಲ್ಲಿ ನಿರಾಸಕ್ತಿ ಹೊಂದಿರುವುದು ಏಕೆ ಎನ್ನುವುದು ಇನ್ನೂ ಉತ್ತರ ಸಿಗದ ಪ್ರಶ್ನೆ.

ಬೆಂಗಳೂರಿಗೆ ಟ್ವೀಟ್‌ ಮಾಡುವುದರಲ್ಲಿ ಇರುವ ಆಸಕ್ತಿ ಓಟ್‌ ಮಾಡುವುದರಲ್ಲಿ ಇಲ್ಲ ಎನ್ನುವ ವ್ಯಂಗ್ಯೋಕ್ತಿ ಈ ಸಲವೂ ನಿಜವಾಗಿರುವುದು ದುರದೃಷ್ಟಕರ.ಮುಂದಿನ ವರ್ಷಕ್ಕಾಗುವಾಗ ಬೆಂಗಳೂರಿನಲ್ಲಿರುವ ಟೆಕ್ಕಿಗಳ ಸಂಖ್ಯೆ 80 ಲಕ್ಷಕ್ಕೇರಲಿದೆ. ಈ ಟೆಕ್ಕಿಗಳು ನಾಗರಿಕ ಸಮಸ್ಯೆಗಳ ವಿರುದ್ಧ ಧ್ವನಿಯೆತ್ತುವುದರಲ್ಲಿ ಮುಂಚೂಣಿಯಲ್ಲಿರುತ್ತಾರೆ. ಆದರೆ ಬದಲಾವಣೆಗೆ ಕಾರಣರಾಗಬೇಕಾದ ಜನಪ್ರತಿನಿಧಿಗಳನ್ನು ಆರಿಸುವ ಸಂದರ್ಭದಲ್ಲಿ ಆಲಸ್ಯ ತೋರಿಸುತ್ತಾರೆ.ನಗರವಾಸಿಗಳ ಈ ನಿರಾಸಕ್ತಿ ಸಮಾಜಕ್ಕೆ ತಪ್ಪು ಸಂದೇಶ ನೀಡುವ ಸಾಧ್ಯತೆ ಇದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ