ನಿಮಗೆ ನೀವು ಮಾಡಿಕೊಳ್ಳುತ್ತಿರುವ ಹಾನಿಯೆಷ್ಟು?

Team Udayavani, Sep 15, 2019, 5:36 AM IST

ಸಂಶೋಧಕರ ತಂಡವೊಂದು ಬೃಹತ್‌ ಶಾರ್ಕ್‌ ಮೀನನ‌್ನು ಒಂದು ದೊಡ್ಡ ಟ್ಯಾಂಕ್‌ನಲ್ಲಿ ಬಿಟ್ಟಿತು. ಆ ಟ್ಯಾಂಕ್‌ನಲ್ಲಿ ಮೊದಲೇ ಹಲವು ಚಿಕ್ಕ ಮೀನುಗಳನ್ನು ಬಿಡಲಾಗಿತ್ತು. ಈ ಹೊಸ ವಾತಾವರಣ ಪ್ರವೇಶದಿಂದಾಗಿ ಕೆಲ ಹೊತ್ತು ಗೊಂದಲದಲ್ಲಿದ್ದ ಶಾರ್ಕ್‌, ನಂತರ ಚೇತರಿಸಿಕೊಂಡು ಚಿಕ್ಕ ಮೀನುಗಳನ್ನು ಗಮನಿಸಿತು. ತಡಮಾಡದೇ ಅವುಗಳತ್ತ ಧಾವಿಸಿ, ಎಲ್ಲಾ ಮೀನುಗಳನ್ನೂ ಸ್ವಾಹಾ ಮಾಡಿತು.

ಮರುದಿನ ಸಂಶೋಧಕರು ಈ ಟ್ಯಾಂಕ್‌ನ ಮಧ್ಯದಲ್ಲಿ ಪಾರದರ್ಶಕ ಗಾಜಿನ ಗೋಡೆಯೊಂದನ್ನು ಇಟ್ಟರು. ಶಾರ್ಕ್‌ ಮೀನು, ಟ್ಯಾಂಕಿನ ಎಡಭಾಗದಲ್ಲಿ ಇತ್ತು. ಬಲಭಾಗದಲ್ಲಿ ಮತ್ತೆ ಹಲವು ಚಿಕ್ಕ ಮೀನುಗಳನ್ನು ಬಿಡಲಾಯಿತು.

ಇವುಗಳನ್ನು ನೋಡಿದ್ದೇ ಶಾರ್ಕ್‌ ವೇಗವಾಗಿ ಅವುಗಳತ್ತ ಈಜುತ್ತಾ ಹೋಯಿತು. ಆದರೆ, ಗಾಜಿನ ಗೋಡೆಗೆ ಢಿಕ್ಕಿ ಹೊಡೆಯಿತು. ಟ್ಯಾಂಕಿನಲ್ಲಿ ತಡೆಗೋಡೆಯೊಂದು ತನಗೆ ಅಡ್ಡಿಯಾಗಿ ನಿಂತಿದೆ ಎನ್ನುವುದೇ ಅದಕ್ಕೆ ಅರಿವಾಗಲಿಲ್ಲ, ಹೀಗಾಗಿ ಪದೇ ಪದೇ ಪ್ರಯತ್ನಿಸಿತು. ಆ ಬದಿಯಲ್ಲಿ ಭಯಭೀತವಾಗಿ ದಿಕ್ಕುತೋಚದೆ ಈಜುತ್ತಿದ್ದ ಚಿಕ್ಕ ಮೀನುಗಳಿಗೆ ಕೆಲವೇ ಕ್ಷಣಗಳಲ್ಲಿ ‘ಈ ಶಾರ್ಕ್‌ ತಮ್ಮೆಡೆಗೆ ಬರುವುದಿಲ್ಲ’ ಎನ್ನುವುದು ಖಾತ್ರಿಯಾಯಿತು. ಅವು ನಿಶ್ಚಿಂತೆಯಿಂದ ಈಜಾಡಲಾರಂಭಿಸಿದವು. ಸುಮಾರು ಒಂದು ಗಂಟೆಯವರೆಗೂ ಚಿಕ್ಕ ಮೀನುಗಳ ಬಳಿ ತೆರಳಲು ಪ್ರಯತ್ನ ಮಾಡಿದ ಶಾರ್ಕ್‌ ಕೊನೆಗೆ ಸೋತು ಸುಮ್ಮನಾಯಿತು. ಸಂಶೋಧಕರು, ಹಸಿದ ಶಾರ್ಕ್‌ನತ್ತ ದೊಡ್ಡ ಮಾಂಸದ ಮುದ್ದೆಯನ್ನು ಎಸೆದರು. ಆ ಶಾರ್ಕ್‌ ಗಬಗಬನೆ ಮಾಂಸವನ್ನು ಖಾಲಿ ಮಾಡಿತು.

ಈ ಪ್ರಯೋಗವನ್ನು ವಿಜ್ಞಾನಿಗಳು ಹಲವು ವಾರಗಳವರೆಗೆ ನಡೆಸಿದರು. ಶಾರ್ಕ್‌ ಚಿಕ್ಕ ಮೀನುಗಳತ್ತ ಈಜುತ್ತಾ ಬರುತ್ತಿತ್ತು, ಗಾಜಿಗೆ ಢಿಕ್ಕಿ ಹೊಡೆಯುತ್ತಾ ಹೈರಾಣಾಗುತ್ತಿತ್ತು. ಸಂಶೋಧಕರು ಅಂದಾಜಿಸಿದಂತೆಯೇ, ಪ್ರತಿ ಪ್ರಯೋಗಕ್ಕೂ ಶಾರ್ಕ್‌ನ ಉತ್ಸಾಹ ಕಡಿಮೆಯಾಗುತ್ತಾ ಬಂದಿತು. ಕೊನೆಗೊಂದು ದಿನ ಶಾರ್ಕ್‌ ತನ್ನ ಪ್ರಯತ್ನವನ್ನೇ ನಿಲ್ಲಿಸಿಬಿಟ್ಟಿತು! ಆಗ ಸಂಶೋಧನಾ ತಂಡ ಟ್ಯಾಂಕಿನ ನಡುವೆ ಇದ್ದ ಗಾಜಿನ ವಿಭಜಕವನ್ನು ತೆಗೆದುಬಿಟ್ಟರು. ಆಶ್ಚರ್ಯವೆಂಬಂತೆ, ಶಾರ್ಕ್‌ಗೆ ಇದು ಅರಿವಿಗೇ ಬರಲಿಲ್ಲ. ಚಿಕ್ಕ ಮೀನುಗಳನ್ನು ಕಬಳಿಸಲು ತನಗೆ ಇನ್ನು ಯಾವ ಅಡ್ಡಿಯೂ ಇಲ್ಲ ಎನ್ನುವುದು ಅದಕ್ಕೆ ತಿಳಿಯಲೇ ಇಲ್ಲ್ಲ…ಚಿಕ್ಕ ಮೀನುಗಳನ್ನು ತಿನ್ನುವ ಬದಲು, ಸಂಶೋಧಕರು ಎಸೆಯುವ ಮಾಂಸದ ತುಂಡಿಗಾಗಿ ಹಸಿದು ಕುಳಿತಿತ್ತು! ಎದುರಿಗೇ ಪುಷ್ಕಳವಾಗಿ ಮೀನುಗಳಿದ್ದರೂ ಅವುಗಳತ್ತ ಚಿತ್ತ ಹರಿಸಲೇ ಇಲ್ಲ.

ಈ ಪ್ರಯೋಗದ ಫ‌ಲಿತಾಂಶದಲ್ಲಿ ಅದ್ಭುತ ಪಾಠವಿದೆ. ನಾವೆಲ್ಲ ನಿತ್ಯ ಜೀವನದಲ್ಲಿ ಅನೇಕ ಅಡೆತಡೆಗಳನ್ನು, ವೈಫ‌ಲ್ಯಗಳನ್ನು ಎದುರಿಸುತ್ತಲೇ ಇರುತ್ತೇವೆ. ಇವುಗಳಿಂದಾಗಿ ಕೊನೆಗೆ ಸುಸ್ತಾಗಿಬಿಡುತ್ತೇವೆ, ಮುನ್ನುಗ್ಗುವ ಪ್ರೇರಣೆಯನ್ನೇ ಕಳೆದುಕೊಂಡುಬಿಡುತ್ತೇವೆ. ನಮ್ಮ ಗುರಿಯನ್ನು ತಲುಪಲು ಸಾಧ್ಯವೇ ಇಲ್ಲ, ಎಂದು ಭಾವಿಸಿ ಪಾಲಿಗೆ ಬಂದದ್ದನ್ನೇ ಪಂಚಾಮೃತ ಎಂದು ಇರುವುದರಲ್ಲೇ ಸಮಾಧಾನಪಟ್ಟುಕೊಳ್ಳುತ್ತೇವೆ. ನಮ್ಮಲ್ಲಿ ಅನೇಕರ ಕಥೆಯೂ ಆ ಶಾರ್ಕ್‌ನ ಕಥೆಯಂತೆಯೇ ಇದೆಯಲ್ಲವೇ?

ಹಿಂದೆ ನಾವು ಅಡ್ಡಿಗಳು, ವೈಫ‌ಲ್ಯಗಳೆಂಬ ಗೋಡೆಗೆ ಅನೇಕ ಬಾರಿ ಢಿಕ್ಕಿ ಹೊಡೆದು ಹೈರಾಣಾಗಿಬಿಟ್ಟಿರುತ್ತೇವೆ. ಆದರೆ ಆ ಗೋಡೆ ಶಾಶ್ವತವಲ್ಲ, ಅದೀಗ ಇಲ್ಲ ಎನ್ನುವುದು ನಮಗೆ ಅರಿವಾಗುವುದೇ ಇಲ್ಲ. ಹೊಸ ಪ್ರಯತ್ನಗಳಿಗೆ ಮುಂದಾಗಲು, ಹೊಸ ಸಾಹಸಕ್ಕೆ ಕೈ ಹಾಕಲು ಹಿಂಜರಿದುಬಿಡುತ್ತೇವೆ. ಸರಳವಾಗಿ ಹೇಳಬೇಕೆಂದರೆ, ನಮ್ಮ ಮನದಲ್ಲೇ ಗೋಡೆಯೊಂದನ್ನು ನಾವಾಗಿಯೇ ಸೃಷ್ಟಿಸಿಕೊಂಡುಬಿಡುತ್ತೇವೆ.

ನೆನಪಿಡಿ, ಆರಂಭಿಕನ ಪ್ರಯತ್ನಗಳಿಗಿಂತಲೂ, ಗುರಿ ಸಾಧಿಸಿದ ವ್ಯಕ್ತಿಯ ವೈಫ‌ಲ್ಯಗಳಪ್ರಮಾಣ ಅಧಿಕವಿರುತ್ತದೆ!

ಕನಸುಗಳಿಗೆ ಜೀವಾವಧಿ ಶಿಕ್ಷೆ!
ತತ್ವಜ್ಞಾನಿಯೊಬ್ಬರು ಒಮ್ಮೆ ಹೇಳಿದ್ದರು: ‘ಜೀವನದ ದುರಂತವೆಂದರೆ, ನಾವು ಸತ್ತುಹೋಗುತ್ತೇವೆ ಎನ್ನುವುದಲ್ಲ, ಬದಲಾಗಿ, ನಾವು ಬದುಕಿರುವಾಗಲೇ ನಮ್ಮೊಳಗಿನ ಕನಸನ್ನು ಸಾಯಲು ಬಿಡುತ್ತೇವೆ ಎನ್ನುವುದು.’

ನಾವು ಯಾವಾಗಲೂ ನನಗೆ ಒಳ್ಳೆಯ ಅವಕಾಶ ಸಿಗಲಿಲ್ಲ, ಜನ ನನಗೆ ಸಹಾಯ ಮಾಡಲಿಲ್ಲ ಅಂತ ನಮ್ಮ ಈ ಸ್ಥಿತಿಗೆ, ಪರಿಸ್ಥಿತಿಯನ್ನೋ-ಜನರನ್ನೋ ದೂರುತ್ತಿರುತ್ತೇವೆ. ಆದರೆ ಜನರು ನಿಮಗೆ ಮಾಡುವ ಅನ್ಯಾಯಕ್ಕಿಂತಲೂ, ನಿಮಗೆ ನೀವು ಮಾಡಿಕೊಳ್ಳುವ ಅನ್ಯಾಯ-ಹಾನಿ ಅಧಿಕ.

ನಮ್ಮ ಕನಸುಗಳನ್ನು ನಾವು ಎಂದೋ ಸೆರೆಮನೆಗೆ ತಳ್ಳಿ, ಅದಕ್ಕೆ ಜೀವಾವಧಿ ಶಿಕ್ಷೆ ವಿಧಿಸಿಬಿಟ್ಟಿದ್ದೇವೆ. ಆ ಕನಸುಗಳು ಮನದ ಮೂಲೆಯಲ್ಲಿ ವರ್ಷಗಳಿಂದ ಕೊಳೆಯುತ್ತಾ ಕುಳಿತಿರುತ್ತವೆ. ಅವನ್ನು ನಾವು ಮರೆತೂಬಿಟ್ಟಿರುತ್ತೇವೆ.

ನಿಮಗೊಂದು ಪ್ರಶ್ನೆ ಕೇಳುತ್ತೇನೆ. ನಿಮಗೆ ಪರಿಚಿತನಾಗಿರುವ ವ್ಯಕ್ತಿಯೊಬ್ಬನಿಗೆ ಅದ್ಭುತ ಸಾಮರ್ಥ್ಯವಿರುತ್ತದೆ ಎಂದುಕೊಳ್ಳಿ. ಆದರೆ ಆತ ತನ್ನ ಪ್ರಯತ್ನವನ್ನೆಲ್ಲ ಕೈಚೆಲ್ಲಿ ಸುಮ್ಮನೇ ಕುಳಿತನೆಂದರೆ ನೀವು ಸುಮ್ಮನಿರುತ್ತೀರಾ? ಆತನಿಗೆ ಬುದ್ಧಿ ಮಾತು ಹೇಳುತ್ತೀರಿ ತಾನೆ? ಬದುಕು ಹಾಳುಮಾಡಿಕೊಳ್ಳಬೇಡ, ಪ್ರಯತ್ನ ನಿಲ್ಲಿಸಬೇಡ ಎಂದು ಹುರಿದುಂಬಿಸುತ್ತೀರಿ ತಾನೆ?

ಆದರೆ ನಿಮ್ಮ ವಿಷಯದಲ್ಲಿ ನೀವೇಕೆ ಈ ರೀತಿಯ ಕಾಳಜಿ ತೋರಿಸುವುದಿಲ್ಲ? ಸಮಸ್ಯೆ ಇರುವುದೇ ಇಲ್ಲಿ. ನಾವು ಬೇರೆಯವರಿಗೆ ತೋರಿಸುವ ಗೌರವ, ಪ್ರೀತಿ, ಕಾಳಜಿಯನ್ನು ನಮಗೆ ನಾವೇ ತೋರಿಸಿಕೊಳ್ಳುವುದಿಲ್ಲ. ನಿಮಗೆ ನೀವೇ ಒಳ್ಳೆಯ ಸ್ನೇಹಿತರಾಗಿ. ಕಷ್ಟದಲ್ಲಿರುವ ಸ್ನೇಹಿತನಿಗೆ ಹೇಗೆ ಸಹಾಯ ಮಾಡುತ್ತೀರೋ, ಯಾವ ಔದಾರ್ಯ ತೋರುತ್ತೀರೋ, ಅದೇ ಔದಾರ್ಯವನ್ನು, ಪ್ರೀತಿಯನ್ನು, ಪ್ರೇರಣೆಯನ್ನು ನಿಮ್ಮ ವಿಷಯದಲ್ಲೂ ತೋರಿಸಿಕೊಳ್ಳಿ.

ರಾತ್ರೋರಾತ್ರಿ ಯಶಸ್ಸಿನ ಹಿಂದೆ…
ರಾತ್ರೋರಾತ್ರಿ ಯಶಸ್ಸು ಎನ್ನುವುದನ್ನು ಎಷ್ಟು ತಪ್ಪಾಗಿ ಅರ್ಥೈಸಲಾಗುತ್ತದೆ ಎನ್ನುವುದನ್ನು ಗಮನಿಸಿದ್ದೀರಾ? ಈ ಮಾತಿಗೆ ಪುಷ್ಠಿ ನೀಡುವ ಈ ಕಥೆಯನ್ನು ನೀವೆಲ್ಲ ಕೇಳಿಯೇ ಇರುತ್ತೀರಿ- ಒಮ್ಮೆ ಮಹಿಳೆಯೊಬ್ಬಳು ಖ್ಯಾತ ಚಿತ್ರಕಾರ ಪಿಕಾಸೋ ಬಳಿ ಬಂದು, ‘ಸರ್‌, ನನ್ನ ಚಿತ್ರ ಬಿಡಿಸುತ್ತೀರಾ?’ ಎಂದು ಕೇಳುತ್ತಾಳೆ.

ಕೂಡಲೇ ಪಿಕಾಸೋ ಹಾಳೆಯೊಂದನ್ನು ಎತ್ತಿಕೊಂಡು ಬಹುಬೇಗನೇ ಆಕೆಯನ್ನು ಹೋಲುವಂಥ ರೇಖಾ ಚಿತ್ರ ಬಿಡಿಸುತ್ತಾರೆ. ಆ ಚಿತ್ರವನ್ನು ಆಕೆಗೆ ಕೊಡುವಾಗ ನಗುತ್ತಾ ಪಿಕಾಸೋ ಹೇಳುತ್ತಾರೆ-‘ಈ ಚಿತ್ರದ ಬೆಲೆ 30 ಸಾವಿರ ಡಾಲರ್‌!

ಮಹಿಳೆಗೆ ಆಶ್ಚರ್ಯವಾಗುತ್ತದೆ. ಆಕೆ ಅಣಕಿಸುವ ಧ್ವನಿಯಲ್ಲಿ ಅನ್ನುತ್ತಾಳೆ-‘ಚಿತ್ರ ಬಿಡಿಸಲು ಹೆಚ್ಚೆಂದರೆ 30 ಸೆಕೆಂಡ್‌ ತೆಗೆದುಕೊಂಡಿದ್ದೀರಿ. ಇದಕ್ಕೆ 30 ಸಾವಿರ ಡಾಲರ್‌ ಬೆಲೆಯೇ?

ಪಿಕಾಸೋ ಹೇಳುತ್ತಾರೆ- ‘ಮೇಡಂ, 30 ಸೆಕೆಂಡ್‌ನಲ್ಲಿ ಚಿತ್ರ ಬಿಡಿಸಲು ನಾನು 30 ವರ್ಷ ವ್ಯಯಿಸಿದ್ದೇನೆ!’

ಇಂದು ಓವರ್‌ನೈಟ್ ಸೆನ್ಸೇಷನ್‌ ಎಂದು ಕರೆಸಿಕೊಳ್ಳುವವರಲ್ಲಿ ಅನೇಕರ ಕಥೆಯೂ ಹೀಗೇ ಇರುತ್ತದೆ. ‘ರಾತ್ರೋರಾತ್ರಿ ಜನಪ್ರಿಯತೆ ಗಳಿಸಿದ ವ್ಯಕ್ತಿ’ ಎಂದು ನಾವು ಯಾರನ್ನು ಕರೆಯುತ್ತೇವೋ, ಆ ವ್ಯಕ್ತಿ ವರ್ಷಗಳವರೆಗೆ ಹಗಲುರಾತ್ರಿಯೆನ್ನದೇ ಶ್ರಮ ವಹಿಸಿರುತ್ತಾನೆ.

ಪರಿಶ್ರಮ, ಶಿಸ್ತು, ಸಂಯಮ, ಪ್ರಯತ್ನಶೀಲತೆ ಇಲ್ಲದೇ ಇದ್ದರೆ ಯಶಸ್ವಿಯಾಗಲು ಸಾಧ್ಯವೇ ಇಲ್ಲ.

ಜೈ ಶೆಟ್ಟಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ