ಕಲುಷಿತ ಬದುಕು ಆದರ್ಶವಾಗದಿರಲಿ

Team Udayavani, Feb 14, 2019, 12:30 AM IST

ಪಟ್ಟಣಗಳಲ್ಲಿ ಬದುಕು ಕಟ್ಟಿಕೊಂಡ ಮಕ್ಕಳ – ಮೊಮ್ಮಕ್ಕಳ ಬರುವಿಕೆಗಾಗಿಯೋ, ವಾಟ್ಸ್‌ ಆ್ಯಪ್‌ ಸಂದೇಶಕ್ಕಾಗಿಯೋ ದೃಷ್ಟಿ ನೆಟ್ಟ ವೃದ್ಧರು ಊರ ಆಲದ ಮರದ ಕಟ್ಟೆಯ ಮೇಲೋ, ಹರಟೆ- ವಾಕ್‌ಗಳಲ್ಲೋ ಸಮಯ ಕೊಲ್ಲುವ ದಾರಿ ಹುಡುಕಿಕೊಂಡಿದ್ದಾರೆ. 

ವಿಶ್ವದ ಶೇ.2.4 ಭೂ ಭಾಗವನ್ನು ಹೊಂದಿದ ನಮ್ಮ ದೇಶ ಪ್ರಪಂಚದ ಒಟ್ಟು ಜನಸಂಖ್ಯೆಯ ಶೇ.15ನ್ನು ಅರ್ಥಾತ್‌ ಭೂಭಾಗಕ್ಕೆ ಹೋಲಿಸಿದರೆ ಆರು ಪಟ್ಟು ಅಧಿಕ ಪ್ರಮಾಣದ ಜನಸಂಖ್ಯೆಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಪ್ರತಿ ವರ್ಷ 12 ಮಿಲಿಯ ಹೊಸ ದುಡಿಯುವ ಕೈಗಳು ತಯಾರಾಗುವ ದೇಶದಲ್ಲಿ ಎಲ್ಲರಿಗೂ ಉದ್ಯೋಗ ಕಲ್ಪಿಸುವುದು ಸುಲಭವಲ್ಲ. ಕಡಲ ತಡಿಯ ಮರಳಿನ ದಂಡೆಯ ಮೇಲೆ ಬರೆದ ಬರವಣಿಗೆಯನ್ನು ದಡಕ್ಕೆ ಅಪ್ಪಳಿಸುವ ತೆರೆಗಳು ಅಳಿಸಿ ಹಾಕುವಂತೆ ಅನಿಯಂತ್ರಿತ ಮತ್ತು ಅಗಾಧ ಪ್ರಮಾಣದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ನಮ್ಮ ಪ್ರಗತಿಯ ಫ‌ಸಲನ್ನು ತಿಂದು ಹಾಕುತ್ತಿದೆ ಎಂದು ಬಹಳ ಹಿಂದೆಯೇ ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದರೂ ನಾವಿನ್ನೂ ಅಜ್ಞಾನದ ಗಾಢ ನಿದ್ದೆಯಲ್ಲಿದ್ದೇವೆ. 

ದಶಕಗಳಿಂದ ಎಲ್ಲರಿಗೂ ಉದ್ಯೋಗ ಒದಗಿಸುವ ಸವಾಲು ಸರ್ಕಾರಗಳನ್ನು ಬೆಂಬಿಡದೇ ಕಾಡುತ್ತಿದೆ. 90ರ ದಶಕದಲ್ಲಿ ದೇಶ ಜಾಗತೀಕರಣಕ್ಕೆ ತೆರೆದುಕೊಂಡ ನಂತರ ವಿಕಾಸ ದರದ ಗತಿ ಹೆಚ್ಚಿದರೂ ಉದ್ಯೋಗ ಸೃಷ್ಟಿಸದ ಆಕರ್ಷಕ ಪ್ರಗತಿದರ ಎಲ್ಲಾ ಸರಕಾರಗಳಿಗೂ ಕಡಿಮೆ ಕಿರಿಕಿರಿ ಮಾಡುತ್ತಿಲ್ಲ. ವಿಶ್ವದಲ್ಲೇ ನಮ್ಮದು ಆರನೇ ದೊಡ್ಡ ಅರ್ಥವ್ಯವಸ್ಥೆ ಆಯಿತು ಎಂದೋ, ಚೀನಾವನ್ನೂ ಹಿಂದಕ್ಕೆ ಹಾಕಿ ಭಾರತ ವಿಶ್ವದ ಅತ್ಯಂತ ಹೆಚ್ಚಿನ ವಿಕಾಸ ದರದ ರಾಷ್ಟ್ರ ಎನ್ನುವ ಹೆಗ್ಗಳಿಕೆಯ ಗರಿ ಸಿಕ್ಕಿಸಿಕೊಂಡಿತು ಎಂದೋ ಅಥವಾ ದೇಶದಲ್ಲಿ ಶ್ರೀಮಂತರು ಹೆಚ್ಚಾಗುತ್ತಿದ್ದಾರೆ ಎನ್ನುವ ಮಾಧ್ಯಮಗಳ ಬ್ರೇಕಿಂಗ್‌ ನ್ಯೂಸ್‌ ಮಧ್ಯಮ ಮತ್ತು ಕೆಳ ಮದ್ಯಮ ವರ್ಗದ ಅಸಹನೆಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಜನರ ಅಪೇಕ್ಷೆಯ ಅಗ್ನಿಪರೀಕ್ಷೆಯಲ್ಲಿ ಪಾಸಾಗದೆ “ಆ್ಯಂಟಿ ಇನಕಂಬೆನ್ಸಿ’ (anti incumbency) ಹೊಡೆತಕ್ಕೆ ಸರಕಾರಗಳ ಮೆಲೆ ಸರಕಾರಗಳು ಉರುಳುತ್ತಿವೆ.

ಉದಾರೀಕರಣ ಮತ್ತು ಜಾಗತೀಕರಣದ ಗಾಳಿ ಬೀಸಲು ಪ್ರಾರಂಭವಾದ ನಂತರ ಹಳ್ಳಿಗಳ ಚಿತ್ರಣವೇ ಬದಲಾಗುತ್ತಿದೆ. ನಗರಗಳು ಅಡ್ಡಾದಿಡ್ಡಿ ಬೆಳೆಯುತ್ತಿವೆ, ಕ್ರಿಯಾಶೀಲ ಯುವ ಜನರ ಪಲಾಯನದಿಂದ ಭಣಗುಡುವ ಹಳ್ಳಿಗಳು ಸೊರಗುತ್ತಿವೆ. ಕರ್ನಾಟಕದ ರಾಜಧಾನಿ ಬೆಂಗಳೂರಂತೂ ವರ್ಷ ವರ್ಷವೂ ಹಲವಾರು ಹಳ್ಳಿಗಳನ್ನು ನುಂಗಿ ನೊಣೆದು ಹೊಸ ಹೊಸ ಬಡಾವಣೆಗಳಿಗೆ ಜನ್ಮ ನೀಡುತ್ತಿದೆ. ವಿದ್ಯೆ, ವ್ಯವಹಾರ, ಉದ್ಯೋಗಕ್ಕಾಗಿ ಹಳ್ಳಿ ಜನ ಶಹರಗಳತ್ತ ಗುಳೆ ಹೋಗುತ್ತಿದ್ದಾರೆ. ಪಟ್ಟಣಗಳಲ್ಲಿ ಬದುಕು ಕಟ್ಟಿಕೊಂಡ ಮಕ್ಕಳ-ಮೊಮ್ಮಕ್ಕಳ ಬರುವಿಕೆಗಾಗಿಯೋ, ವಾಟ್ಸಪ್‌ ಸಂದೇಶಕ್ಕಾಗಿಯೋ ದೃಷ್ಟಿ ನೆಟ್ಟ ವೃದ್ಧರು ಊರ ಆಲದ ಮರದ ಕಟ್ಟೆಯ ಮೇಲೋ, ರೈಲ್ವೆ ಸ್ಟೇಷನ್ನಿನ ಪ್ಲಾಟ್‌ಫಾರ್ಮ್ಗಳಲ್ಲಿಯೋ ಹರಟೆ-ವಾಕ್‌ಗಳಲ್ಲಿ ಸಮಯ ಕೊಲ್ಲುವ ದಾರಿ ಹುಡುಕಿ ಕೊಂಡಿದ್ದಾರೆ. ಹೊರಗಿನವರ ಮುಂದೆ ತಮ್ಮೆಲ್ಲಾ ನೋವುಗಳನ್ನು ಅದುಮಿಕೊಂಡು, ತಮ್ಮವ ವಿದೇಶದಲ್ಲಿ ಇದ್ದಾನೆ ಎಂದು ಎದೆಯುಬ್ಬಿಸಿ ಹೊಗಳಿಕೊಳ್ಳುವ, ವಿಡಿಯೋ ಕಾಲ್‌ಗ‌ಳಿಗಾಗಿ ಕಾಯುತ್ತಾ ಮುಸ್ಸಂಜೆ ಯಾವಾಗ ರಾತ್ರಿಯಾಗುವುದೋ ಎಂದು ಹಂಬಲಿಸುತ್ತಿರುವ ಸೀನಿಯರ್‌ ಸಿಟಿಜನ್‌ (ಹಿರಿಯ ನಾಗರಿಕರು)ಗಳ ಅಯೋಮಯ ಬದುಕಿನ ಟ್ರಾಜೆಡಿ (ದುಃಖದ ಕಥೆ) ಇಂದು ಹಳ್ಳಿಗಳ ಬದುಕಿನ ಅವಿಭಾಜ್ಯ ಅಂಗವಾಗಿದೆ. ಕರ್ನಾಟಕದ ಎಲ್ಲಾ ಹಳ್ಳಿಗಳಿಗೆ ಒಂದು ಸುತ್ತು ಬಂದರೆ ಉದ್ಯೋಗದ ನಿಮಿತ್ತವಾಗಿಯೋ ಅಥವಾ ಶಿಕ್ಷಣದ ಸಲುವಾಗಿಯೋ ಬೆಂಗಳೂರಿನಲ್ಲಿ ಕಂದಮ್ಮಗಳನ್ನು ಹೊಂದಿರದ ಒಂದು ಕುಟುಂಬವೂ ಸಿಗದು ಎನ್ನುವ ಸ್ಥಿತಿ ಇದೆ. ಕೆಟ್ಟು ಪಟ್ಟಣ ಸೇರು ಎನ್ನುವ ಗಾದೆ ಮಾತಿನಂತೆ ಜೀವನದಲ್ಲಿ ಏನಾದರೂ ಸಾಧನೆ (ನೌಕರಿ ಗಿಟ್ಟಿಸಿಕೊಳ್ಳುವ) ಮಾಡಬೇಕಾದರೆ ಹಳ್ಳಿ ಬಿಟ್ಟು ದೊಡ್ಡ ನಗರಕ್ಕೆ ಹೋಗಲೇಬೇಕು ಎನ್ನುವ ಧೋರಣೆಯ ಬೇರು ಬಹಳ ಆಳಕ್ಕಿಳಿದಿದೆ. ಶಿಕ್ಷಣ ಮುಗಿಯುತ್ತಲೇ ನೌಕರಿಯ, ಕ್ಯಾಂಪಸ್‌ ಸೆಲೆಕ್ಷನ್‌ ಟ್ರೆಂಡ್‌ ಇರುವ ಈ ಕಾಲದಲ್ಲಿ ಬೆಂಗಳೂರಿನಲ್ಲಿ ಓದಿದರೆ ಮಾತ್ರ ನೌಕರಿ ಪಕ್ಕಾ ಎನ್ನುವ ಪುಕ್ಕಟೆ ಸಲಹೆ ನೀಡುವವರಿಗೂ ಬರವಿಲ್ಲ. ಬೆಂಗಳೂರಿನಲ್ಲಿ ಓದಿದ ಹೈದ, ನೌಕರಿ ಸಿಗಲಿ ಸಿಗದಿರಲಿ ಹಳ್ಳಿಗೆ ಮರಳಿ ಬರಲು ಹೇಗೆ ಸಾಧ್ಯ?

ಸರಕಾರಿ ನೌಕರಿ ಇಂದಿಗೂ ಆಕರ್ಷಣೆ ಕಳೆದುಕೊಂಡಿಲ್ಲ ಎನ್ನುವುದು ಸತ್ಯ. ಕನಿಷ್ಟ ವಿದ್ಯಾರ್ಹತೆಯ ಅಗತ್ಯವಿರುವ ಬೀದಿ ಗುಡಿಸುವ ಪೌರ ಕಾರ್ಮಿಕರ ಹುದ್ದೆಗೋ, ಕಚೇರಿಯ ಜವಾನರ ಹುದ್ದೆಗೋ ಅಥವಾ ಸರಕಾರಿ ವಲಯದ ಅಡಿಗೆಯವರ ಹುದ್ದೆಗೋ ಅರ್ಜಿ ಆಹ್ವಾನಿಸಿದಾಗ ಪದವೀಧರರು, ಸ್ನಾತಕೋತ್ತರ ಪದವೀಧರರು, ಇಂಜಿನಿಯರಿಂಗ್‌ನಂತಹ ವೃತ್ತಿಪರ ಪದವಿ ಪಡೆದವರು, ಇನ್ನು ಕೆಲವೊಮ್ಮೆ ಪಿಎಚ್‌ಡಿ ಮಾಡಿದವರೂ ಅರ್ಜಿ ಸಲ್ಲಿಸುವುದು, ಒಂದು ಹುದ್ದೆಗೆ ಸಾವಿರಾರು ಸಂಖ್ಯೆಯಲ್ಲಿ ಉನ್ನತ ವ್ಯಾಸಂಗ ಮಾಡಿದವರು ಅರ್ಜಿ ಸಲ್ಲಿಸಿರುವ ಸುದ್ದಿ ಆಗಾಗ್ಗೆ ಮಾಧ್ಯಮಗಳ ಹೆಡ್‌ಲೈನಲ್ಲಿ ಸ್ಥಾನ ಪಡೆಯುವುದನ್ನು ಕಾಣುತ್ತಿರುತ್ತೇವೆ. ಆದರೆ ಇನ್ನೊಂದೆಡೆ ಗ್ರಾಮೀಣ ಭಾರತದಲ್ಲಿ ಕೃಷಿ ಕೆಲಸ, ನಿರ್ಮಾಣ ಕಾಮಗಾರಿ ಕಾರ್ಮಿಕರು, ಇಲೆಕ್ಟ್ರಿಕ್‌-ಪ್ಲಂಬಿಂಗ್‌ ಮುಂತಾದ ಸಾಮಾನ್ಯ ತಂತ್ರಜ್ಞರ ಕೊರತೆ ಎದ್ದು ಕಾಣುತ್ತದೆ. ತೆಂಗಿನ ಮರದ ಕಾಯಿಯನ್ನು ಕೀಳಲು ಕಾರ್ಮಿಕರು ಸಿಗದೆ ಜನನಿಬಿಡ ಪ್ರದೇಶದಲ್ಲಿರುವ ತೆಂಗಿನ ಮರಗಳನ್ನು ಕಡಿಯಲು ಮುಂದಾಗುತ್ತಿದ್ದಾರೆ ಕರಾವಳಿ ಜಿಲ್ಲೆಗಳ ಜನ. ಸರಕಾರ ಮನೆ ಗಾದಡಿ ಕೊಡುವ ಎರಡು ಪಟ್ಟು ಕೂಲಿ ನೀಡಿದರೂ ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಕಾರ್ಮಿಕರು ಸಿಗದೆ ಪರದಾಡುವ ಸ್ಥಿತಿ ಇದೆ. ಗದ್ದೆ ಉಳುವ, ನೇಜಿ, ಕಟಾವಿನ ಯಂತ್ರಗಳ ಆಗಮನದಿಂದಾಗಿ ಜನ ಕೊಂಚ ಮಟ್ಟಿಗೆ ನಿರಾಳರಾಗಿದ್ದಾರಾದರೂ ಬೇಸಾಯ ನಂಬಿಕೊಂಡವರು ಒತ್ತಡದ ಜೀವನ ಎದುರಿಸಬೇಕಾದ ಕ್ಲಿಷ್ಟಕರ ವಾತಾವರಣವಿದೆ .

ಯುವ ಪೀಳಿಗೆ ನೌಕರಿ ಅರಸಿ ಪೇಟೆ-ಪಟ್ಟಣಗಳಿಗೆ ಹೋಗಿದ್ದರಿಂದ ಹಳ್ಳಿಗಳು ವೃದ್ಧಾಶ್ರಮದಲ್ಲಿ ತಬ್ದಿಲಾದಂತೆ ಕಾಣುತ್ತಿದೆ. ಜೀವನ ಸಂಧ್ಯಾ ಕಾಲದಲ್ಲಿ ಪ್ರಾಪಂಚಿಕ ಸುಖದ ಆಕರ್ಷಣೆ ಕಳೆದುಕೊಂಡ ವೃದ್ಧರು ತಾವು ಇನ್ನೆಷ್ಟು ದಿನ ತಮ್ಮ ದನ-ಕರು, ಹೊಲ-ಗದ್ದೆಗಳನ್ನು ಹಿಡಿದಿಟ್ಟುಕೊಳ್ಳಬೇಕು ಎಂದು ಪ್ರಶ್ನಿಸುತ್ತಿದ್ದಾರೆ. 

ಗಂಡಾಗುಂಡಿ ಮಾಡಿಯಾದರೂ ಗಡಿಗೆ ತುಪ್ಪ ಕುಡಿಯಬೇಕು ಎನ್ನುವ ಮನೋಧರ್ಮ ಯುವ ಜನತೆಯದ್ದು. ನಿಯತ್ತಾಗಿ ಕೆಲಸ ಮಾಡುವವರಿಗೆ ಎಲ್ಲಿಯೂ ಉದ್ಯೋಗಕ್ಕೆ ಬರವಿಲ್ಲ ಎನ್ನುವುದನ್ನು ನೋಡಲು ದೂರ ಹೋಗಬೇಕಿಲ್ಲ. ಹಳ್ಳಿಗಳಲ್ಲಿ ದರ್ಜಿ, ಬಡಗಿ, ಇಸ್ತ್ರಿಯಂಗಡಿಯವ, ಬೈಕ್‌, ಮಿಕ್ಸಿ ಮತ್ತಿತರ ಚಿಕ್ಕ ಪುಟ್ಟ ಉಪಕರಣಗಳ ರಿಪೇರಿ ಮಾಡಿಕೊಡುವ ಸಾಮಾನ್ಯ ತಾಂತ್ರಿಕ ಕಸಬುದಾರರ ಬಳಿ ಕೆಲಸ ಮಾಡಿಸಿಕೊಳ್ಳಲು ಹಲವಾರು ಬಾರಿ ಅಲೆದರೂ ಏನ್‌ ಮಾಡೋದು ಕೆಲ್ಸ ಜಾಸ್ತಿ ಸರ್‌ ಇನ್ನೂ ಆಗಿಲ್ಲ ಎನ್ನುವ ಜವಾಬು ಸಿಗುತ್ತದೆ. ಹಳ್ಳಿಗಳಲ್ಲಿ ಕೃಷಿ ಕಾರ್ಯದ ಜತೆ ಹೈನುಗಾರಿಕೆ, ದುಗª ಉತ್ಪಾದನೆ, ತಾಂತ್ರಿಕ ವೃತ್ತಿ ಆಶ್ರಯಿಸಿಕೊಂಡು ಬದುಕು ಹಸನಾಗಿಸಿಕೊಂಡ ಜೀವಂತ ಉದಾಹರಣೆ ನಮ್ಮ ಯುವಕರಿಗೆ ಪ್ರೇರಣೆ ನೀಡುವಂತಾಗ ಬೇಕು. ಕುಲುಷಿತ ಗಾಳಿಯಲ್ಲಿ ವಿಷಪೂರಿತ ನೀರು ಕುಡಿದುಕೊಂಡು ಹೆಚ್ಚು ಸಂಪಾದನೆ ಮಾಡಿ ಹೆಚ್ಚು ಖರ್ಚು ಮಾಡುವ ಪಟ್ಟಣಿಗರ ಬದುಕು ಹಳ್ಳಿಗಳ ಯುವಕರಿಗೆ ಆದರ್ಶವಾಗಿ ಕಾಣುವ ದೃಷ್ಟಿಕೋನ ಬದಲಾಗುವಂತಾಗಲಿ. ಅತಿಥಿಗಳನ್ನು ಆದರಿಸಿದರೆ ಎಲ್ಲಿ ತಮ್ಮ ಸುಖಕ್ಕೆ ಭಂಗ ತರುವರೋ ಎಂದು ನೆಂಟರಿಷ್ಟರನ್ನು ನೋಡಿ ಕದ ಹಾಕಿಕೊಳ್ಳುವ, ಇಕ್ಕಟ್ಟಿನ ಮನೆ-ಮನಃಸ್ಥಿತಿಯ ಸುಶಿಕ್ಷಿತ ಪಟ್ಟಣಿಗರ ಬದುಕಿಗಿಂತ ಹೊಲಗದ್ದಾಗಳಲ್ಲೋ, ಮನೆಯಂಗಳದಲ್ಲೋ ಬೆಳೆದ ಕಾಯಿಪಲ್ಲೆಗಳನ್ನು ತಿಂದುಂಡು ಅತಿಥಿ-ಅಭ್ಯಾಗತರನ್ನು ಸತ್ಕರಿಸಿ ಹರ್ಷಿಸುವ ಹಳ್ಳಿಗರ ಹರ್ಷಚಿತ್ತದ ಬದುಕೇ ಮೇಲು ಎನ್ನುವ ವ್ಯಾವಹಾರಿಕ ಜ್ಞಾನ ನಮ್ಮ ಯುವಕ-ಯುವತಿಯರಿಗೆ ಬಂದರೆ ಹಳ್ಳಿಯ ಈಗಿನ ಕಪ್ಪು ಬಿಳುಪು ಚಿತ್ರ ವರ್ಣರಂಜಿತವಾಗುವುದರಲ್ಲಿ ಸಂದೇಹವಿಲ್ಲ.

ಬೈಂದೂರು ಚಂದ್ರಶೇಖರ ನಾವಡ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ