ದ್ವೇಷದ ಬೆಂಕಿಯ ಹೊತ್ತಿಸಿದ ಆ ಗೀರು…

Team Udayavani, Sep 16, 2018, 9:06 AM IST

“ಏನು ಮಾಡಲಿ? ಸಿಖ್ಖರಿಗೆ ವಿಷಯ ತಿಳಿಯುವ ಮೊದಲು ನಾನು ಕೆಲಸ ಮುಗಿಸಲೇಬೇಕಿತ್ತು. ನೆಹರು, ಪಟೇಲ್‌, ಜಿನ್ನಾ ಎಲ್ಲರಿಗೂ ಅವಸರ ಇತ್ತು…’ ಹೇಳುತ್ತಿದ್ದವನು ತಡವರಿಸುತ್ತಾನೆ, “ಹಾ, ಮಹಾತ್ಮ ಹೇಳಿದ್ದ, ಈ ಗೆರೆ ತರಬಹುದಾದ ಹಿಂಸಾಚಾರಗಳ ಬಗ್ಗೆ ಆತ ಮಾತ್ರ ಹೇಳಿದ್ದ…’,

ಒಂದು ಕಿರುಚಿತ್ರ. ಇಂಗ್ಲೆಂಡ್‌ನಲ್ಲೆಲ್ಲೋ ಇರುವ ಒಂದು ಮೇಲ್ಮಧ್ಯಮ ವರ್ಗದ ಮನೆ. ಅಲ್ಲಿ ನೀಟಾಗಿ ಬಟ್ಟೆ ಧರಿಸಿದ ಒಬ್ಬ ಇಂಗ್ಲಿಷ್‌ ಮುದುಕ. ಕಣ್ಣುಗಳಲ್ಲಿ ಹೂವು ಬಂದು, ನಡೆಯುವಾಗ ತಡವರಿಸುತ್ತಾನೆ. ಒಂದು ದಿನ ಫೋನ್‌ ಗಂಟೆ ಬಾರಿಸುತ್ತದೆ, ಆಚೆ ಬದಿ ಇದ್ದವರು “ಕವಿ ಏಡೆನ್‌ ನಿಮ್ಮ ಬಗ್ಗೆ ಬರೆದ ಕವನ ಚೆನ್ನಾಗಿದೆ’ ಅನ್ನುತ್ತಾರೆ. ಅಜ್ಜನಿಗೆ ಖುಷಿ, ಹೆಮ್ಮೆ. ಓದೋಣ ಎಂದರೆ ಕಣ್ಣು ಸರಿಯಾಗಿ ಕಾಣಿಸುವುದಿಲ್ಲ, ಹೆಂಡತಿಗೆ ಓದಲು ಹೇಳುತ್ತಾನೆ. “ಬೇಡ, ಅದು ಒಂದು ಒಳ್ಳೆಯ ಕವಿತೆ ಅಲ್ಲ, ಆ ಕವಿತೆಗೆ ಕರುಣೆ ಇಲ್ಲ’ ಎಂದು ಪತ್ನಿ ಹೇಳಿದರೂ ಆತ ಕೇಳುವುದಿಲ್ಲ. ಕವಿ ಏಡೆನ್‌ ತನ್ನ ಬಗ್ಗೆ ಬರೆದ ಕವಿತೆ ಕೇಳಲೆಂದು, ವಾಕಿಂಗ್‌ ಸ್ಟಿಕ್‌ ಮೇಲೆ ಕೈಗಳನ್ನು ಊರಿ, ಕೈಗಳ ಮೇಲೆ ಮುಖವನ್ನಿಟ್ಟು ಕೂರುತ್ತಾನೆ. ಇವನು, John Cyril Radcliff e.. ಹೀಗೆ ಹೇಳಿದರೆ ಹೆಚ್ಚು ಜನರಿಗೆ ನೆನಪಿರಲಿಕ್ಕಿಲ್ಲ, ಅದೇ Radcliff e Line ಎಂದರೆ ಕಿವಿಗಳು ಚುರುಕಾಗುತ್ತವೆ. ಹೌದು,ಅದೇ ರೇಖೆ, ಭಾರತ ಮತ್ತು ಪಾಕಿಸ್ತಾನಗಳನ್ನು ಎರಡು ಭಾಗಗಳನ್ನಾಗಿ ವಿಂಗಡಿಸಿದ ರೇಖೆ. ಆ ರೇಖೆ ಯನ್ನು ಎಳೆದ ಲೇಖನಿ ಹಿಡಿದ ಕೈಗಳು ಈತನವು. 

ರಾಡ್‌ಕ್ಲಿಫ್ ಒಬ್ಬ ವಕೀಲ, ಇಂಗ್ಲೆಂಡಿನಲ್ಲಿದ್ದವನನ್ನು ಇದೊಂದು ಕೆಲಸದ ಮಟ್ಟಿಗೆ ಭಾರತಕ್ಕೆ ಕರೆಸಲಾಗುತ್ತದೆ. ಇಲ್ಲಿನ ಜನ, ಇಲ್ಲಿನ ಸಂಸ್ಕೃತಿ, ಸಾಮಾಜಿಕ ಸಂರಚನೆ ಇತ್ಯಾದಿಗಳ ಪರಿಚಯ ಇರುವುದಿರಲಿ, ಇದಕ್ಕೆ ಮೊದಲು ಈತ ಭಾರತವನ್ನು ನೋಡೂ ಇರುವುದಿಲ್ಲ. ದೇಶ ವಿಭಜನೆ ಆಗುತ್ತಿದೆ. ಮುಸ್ಲಿಮರು ಬಹುಸಂಖ್ಯಾತರಾಗಿದ್ದ ಬಲೂಚಿಸ್ತಾನ ಮತ್ತು ಸಿಂಧ್‌ ಪ್ರಾಂತ್ಯಗಳು ಪಾಕಿಸ್ತಾನಕ್ಕೆ ಸೇರುತ್ತವೆ. ದೆಹಲಿಯಿಂದೀಚೆಗಿನ ಭೂಭಾಗ ಭಾರತಕ್ಕೆ ಸೇರುವುದು ಎಂದಾಗುತ್ತದೆ. 

ಆದರೆಸಿಖ್ಖರು ಮತ್ತು ಮುಸ್ಲಿಮರು ಇದ್ದ ಪಂಜಾಬ್‌ ಮತ್ತು ಬಂಗಾಲಿಗಳು ಮತ್ತು ಮುಸ್ಲಿಮರು ಇದ್ದ ಬಂಗಾಲವನ್ನು ಆತ ಎರಡೂ ದೇಶಗಳಿಗೆ ಹರಿದು ಹಂಚಬೇಕಾಗಿರುತ್ತದೆ. ಲೆಕ್ಕ ಹಾಕಿದಂತೆ ಆತನ ಸಹಾಯಕ್ಕೆ ನಾಲ್ವರು ವಕೀಲರನ್ನು ಕೊಡಲಾಗುತ್ತದೆ, ಇಬ್ಬರು ಹಿಂದೂಗಳು, ಇಬ್ಬರು ಮುಸ್ಲಿಮರು. ಇಂತಹ ಸಂಕೀರ್ಣ ಕೆಲಸಕ್ಕೆ ಈತನಿಗೆ ದೊರಕುವ ಸಮಯ ಕೇವಲ ಐದಾರು ವಾರಗಳು. ಸುಮಾರು 1,75,000 ಚದುರ ಮೈಲಿಗಳ ಭೂಭಾಗ, ಅದರಲ್ಲಿದ್ದ 88 ದಶಲಕ್ಷ ಪ್ರಜೆಗಳ ಭವಿಷ್ಯ ಇವನು ಎಳೆಯುವ ರೇಖೆಯ ಮೇಲೆ ನಿಂತಿರುತ್ತದೆ. ಇವನಿಗೆ ಕೊಟ್ಟ ನಕ್ಷೆಗಳು ನಿಖರವಾಗಿರುವುದಿಲ್ಲ. ಯಾವ ಪ್ರಾಂತ್ಯದಲ್ಲಿ ಎಷ್ಟು ಜನ ಇ¨ರೆ, ಅವರ ಜೀವನ,  ಭಾಷಾ ವೈವಿಧ್ಯ, ಹಾಸುಹೊಕ್ಕಾದಂತೆ ಬೆಸೆದುಕೊಂಡ ಇಲ್ಲಿನ ಬದುಕುಗಳು ಇವು ಯಾವುವೂ ಅವನಿಗೆ ಗೊತ್ತಿಲ್ಲ. 

ಒಂದು ಉಪಖಂಡ ಎಂದು ಕರೆಯಲ್ಪಡುತ್ತಿದ್ದ ಈ ದೇಶವನ್ನು ಪ್ರತ್ಯಕ್ಷವಾಗಿ ಪರಿಶೀಲಿಸದೆ, ಇಲ್ಲಿನ ಜನರ ಸಮಸ್ಯೆಗಳನ್ನು ಆಲಿಸದೆ, ಜನಾದೇಶವನ್ನು ಪಡೆಯದೆ, ಯಾವುದೇ ವೈಜ್ಞಾನಿಕ ಆಧಾರ ಇಲ್ಲದೆ, ಆತ ನಕ್ಷೆಯ ಮೇಲೆ ಅಂದು ಎಳೆದ ಬರೆ ಮಾಡಿದ ಗಾಯದಿಂದ ಇಂದಿಗೂ ರಕ್ತ ಒಸರುತ್ತಲೇ ಇದೆ. ಇಂದಿಗೂ ಆ ರೇಖೆಯ ಪಶ್ಚಿಮ ಭಾಗ ಭಾರತ ಮತ್ತು ಪಾಕಿಸ್ತಾನಕ್ಕೆ ಗಡಿಯಾಗಿದ್ದರೆ, ಪೂರ್ವ ಭಾಗ ಭಾರತ ಮತ್ತು ಬಾಂಗ್ಲಾದೇಶಕ್ಕೆ ಗಡಿಯಾಗಿದೆ. ಕೆಲಸ ಮುಗಿಸಿ ಹೋದ ರಾಡ್‌ಕ್ಲಿಫ್ ಮತ್ತೆಂದೂ ಭಾರತಕ್ಕೆ ಹಿಂದಿರುಗುವುದಿಲ್ಲ, ಅಷ್ಟೇ ಅಲ್ಲ, ನಿಧಾನವಾಗಿ ಖನ್ನತೆಗೊಳಗಾಗುತ್ತಾ ಹೋಗುತ್ತಾನೆ.  ಹೀಗೆ ಗಾಯ ಮಾಡಿ, ಗಾಯಗೊಂಡವನ ಬಗೆಗೆ ಒಂದು ಕಿರುಚಿತ್ರ ಮಾಡಲಾಗಿದೆ. ಅದು “This bloody line ನಿರ್ದೇಶನ, “ನೀರಜಾ’ ನಿರ್ದೇಶಕ ರಾಮ್‌ ಮಾಧ್ವಾನಿ. 

ಕಿರುಚಿತ್ರದಲ್ಲಿ ಪತ್ನಿ ಪದ್ಯವನ್ನು ಓದುತ್ತಾ ಹೋಗುತ್ತಾಳೆ, ಅದಕ್ಕೆ ಆ ಅಜ್ಜ ಕೊಡುವ ಪ್ರತಿಕ್ರಿಯೆ ಒಮ್ಮೆ ಒಪ್ಪಿಗೆ, ಮತ್ತೂಮ್ಮೆ ನಿರಾಕರಣೆ, ಅಸಹನೆ, ಕೋಪ, ಅಸಹಾಯಕತೆ. ಆತನ ಕೆಲಸಕ್ಕಾಗಿ ಬ್ರಿಟನ್‌ ಸರಕಾರ ಆ ಕಾಲಕ್ಕೆ 3000 ಪೌಂಡ್‌ಗಳ ಸಂಭಾವನೆ ಯನ್ನು ನಿಗದಿ ಪಡಿಸಿರುತ್ತದೆ. ಆದರೆ ಆತ ಆ ಹಣವನ್ನು ಮುಟ್ಟುವುದಿಲ್ಲ. ತನ್ನ ಪಾಡಿಗೆ ತಾನು ಜಗತ್ತಿಗೆ ಬಾಗಿಲು ಹಾಕಿಕೊಂಡು ಕುಳಿತುಬಿಡುತ್ತಾನೆ.  ಆದರೆ ಎದೆಯಲ್ಲಿ ಅಗ್ನಿ ಉರಿಯುತ್ತಲೇ ಇರುತ್ತದೆ. ಹೆಂಡತಿ ಕವನ ಓದುತ್ತಿರುವಾಗ ಮೊದಲು ತನ್ನ ಕ್ರಿಯೆಗಳನ್ನು ಸಮರ್ಥಿಸಿಕೊಳ್ಳಲು, ಅದರಲ್ಲಿ ತನ್ನ ಪಾತ್ರವನ್ನು ನಿರಾಕರಿಸಲು ಪ್ರಯತ್ನಿಸುತ್ತಾನೆ. “ಏನು ಮಾಡಲಿ? ಸಿಖ್ಖರಿಗೆ ವಿಷಯ ತಿಳಿಯುವ ಮೊದಲು ನಾನು ಕೆಲಸ ಮುಗಿಸಲೇಬೇಕಿತ್ತು. ನೆಹರು, ಪಟೇಲ್‌, ಜಿನ್ನಾ ಎಲ್ಲರಿಗೂ ಅವಸರ ಇತ್ತು…’ ಹೇಳುತ್ತಿದ್ದವನು ತಡವರಿಸುತ್ತಾನೆ, “ಹಾ, ಮಹಾತ್ಮ ಹೇಳಿದ್ದ, ಈ ಗೆರೆ ತರಬಹುದಾದ ಹಿಂಸಾಚಾರಗಳ ಬಗ್ಗೆ ಆತ ಮಾತ್ರ ಹೇಳಿದ್ದ…’, ಅವನು ತಡವರಿಸುತ್ತಾನೆ. 
ಅವನ ಮನಸ್ಸಿನ ಲ್ಲಿದ್ದ ಅಪರಾಧಿ ಪ್ರಜ್ಞೆಗೆ ಈ ಕವನ ತಿದಿ ಒತ್ತುತ್ತಿದೆ. “ಹೌದು, ಪಾಪ ನಿನ್ನ ತಪ್ಪೇನಿತ್ತು, ಅವಸರದ ನೀನು ಕೆಲಸ ಮಾಡಿದೆ, ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನ, ನಡುವಲ್ಲಿ ಭಾರತ. ಅವರು ನೆಮ್ಮದಿಯಾಗಿ ಬದುಕುವ ಸಾಧ್ಯತೆಗಳೇ ಇರಲಿಲ್ಲ..’ ಹೆಂಡತಿ ಮೆಲುವಾಗಿ ಮಾತು ಸೇರಿಸುತ್ತಾಳೆ. ಅಜ್ಜ ಈಗ ಮಾತು ನಿಲ್ಲಿಸುತ್ತಾನೆ. ಮೌನಿಯಾಗುತ್ತಾನೆ, ಆಮೇಲೆ ನಿಧಾನವಾಗಿ ಹೇಳುತ್ತಾನೆ, “ನಾನೀಗ ಕಣ್ಣುಗಳನ್ನು ಕಳೆದುಕೊಂಡಿ ದ್ದೇನೆ, ಆದರೆ ನಿಜಕ್ಕೂ ನಾನು ಕುರುಡನಾಗಿದ್ದು ಆಗ’, ಅವನ ಮನಸ್ಸಿನಲ್ಲಿ ಒತ್ತಿಟ್ಟ ಪಶ್ಚಾತ್ತಾಪ, ಸಿಟ್ಟು, ಅಸಹನೆ ಎಲ್ಲವೂ ದನಿಯಾಗಿ, ನಿಟ್ಟುಸಿರಾಗಿ ಈಚೆಗೆ ಸಿಡಿ ಯುತ್ತದೆ, “This line, this bloody line’.ಮಾನವ ಜನಾಂಗದ ಅತಿ ದೊಡ್ಡ ವಲಸೆಗೆ ನಾಂದಿ ಹಾಡಿದ ರೇಖೆ ಅದು. ಸುಮಾರು 12 ದಶಲಕ್ಷ ಮಂದಿ ಮನೆಗಳನ್ನು ಬಿಟ್ಟು ಓಡಿಹೋಗಬೇಕಾಗುತ್ತದೆ. ದಂಗೆ, ಗಲಾಟೆಯಲ್ಲಿ ಒಂದು ದಶಲಕ್ಷಕ್ಕೂ ಮೀರಿದ ಜನರ ಹತ್ಯೆ ಆಗುತ್ತದೆ, ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ಆಗುತ್ತದೆ. ವಿಭಜನೆಯ ಆ ನೋವು, ಅಸಹಾಯಕತೆ, ಅದು ಹುಟ್ಟುಹಾಕಿದ ದ್ವೇಷದ ಬೆಂಕಿ ಇಂದಿಗೂ ಉರಿಯುತ್ತಲೇ ಇದೆ. “ಯಾರ ಲೀಲೆಗೋ ಯಾರೋ ಏನೋ ಗುರಿಯಿರದೆ ಬಿಟ್ಟ ಬಾಣ’ದ ನೋವು ಇಂದಿಗೂ ಮಾಗಿಲ್ಲ. ಇದರ ಬಗ್ಗೆ ಡಬುಎಚ್‌ ಆಡೆನ್‌ ಒಂದು ಕವನ ಸಹ ಬರೆದಿರೆ. ಓದುತ್ತಾ ಓದುತ್ತಾ ಆ “bloody line ಇನ್ನೂ ಆಳವಾಗುತ್ತಾ ಹೋಗುತ್ತದೆ.

 ಸಂಧ್ಯಾರಾಣಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ