ಸಾಧನೆಗಳ ಸಾಧಕ ನರೇಂದ್ರ ಮೋದಿ

Team Udayavani, May 24, 2019, 3:00 AM IST

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಐದು ವರ್ಷಗಳ ಅವಧಿಯಲ್ಲಿ ಉತ್ತಮ ಸಾಧನೆಯನ್ನೇ ಮಾಡಿದೆ. ಆರೋಗ್ಯ, ರಾಷ್ಟ್ರೀಯ ಭದ್ರತೆ, ಸ್ವಚ್ಛತಾ ಅಭಿಯಾನ ಸೇರಿ ಹತ್ತು ಹಲವು ಕ್ಷೇತ್ರಗಳಲ್ಲಿ ಹಿಂದಿನ ಅವಧಿಗಳಿಗೆ ಹೋಲಿಕೆ ಮಾಡಿದರೆ ಅಪ್ರತಿಮ ಎನ್ನುವಂತೆ ದಾಖಲೆಗಳನ್ನು ನಿರ್ಮಿಸಿದೆ. 2014ರ ಫ‌ಲಿತಾಂಶದ ನಂತರ, ಬರೋಬ್ಬರಿ ಮೂವತ್ತು ವರ್ಷಗಳ ಬಳಿಕ ಒಂದೇ ಒಂದು ಪಕ್ಷಕ್ಕೆ ಬಹುಮತ ಲಭಿಸಿತ್ತು. ಆನಂತರದಲ್ಲಿ ಮೈತ್ರಿಧರ್ಮ ಪಾಲನೆಯಂತೆ ಇತರ ರಾಜಕೀಯ ಪಕ್ಷಗಳ ಜತೆಗೂಡಿ ಸರ್ಕಾರ ರಚಿಸಿ ಉತ್ತಮ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ.

ನೋಟು ಅಮಾನ್ಯ: ಹಾಲಿ ಸರ್ಕಾರದ ಅತಿ ದೊಡ್ಡ ನಿರ್ಣಯವೆಂದರೆ ನೋಟು ಅಮಾನ್ಯ. 2016 ನ.8ರಂದು 500, 1000 ರೂ.ನೋಟುಗಳನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿತು. ದೇಶದಲ್ಲಿರುವ ಕಪ್ಪುಹಣ ತೊಡೆದು ಹಾಕುವ ನಿಟ್ಟಿನಲ್ಲಿ ಈ ಕ್ರಮ ಭಾರಿ ಯಶಸ್ಸು ಪಡೆದುಕೊಂಡಿತು. ಆರ್‌ಬಿಐ ನೀಡಿದ ಮಾಹಿತಿ ಪ್ರಕಾರ ಶೇ.99ರಷ್ಟು ಅಮಾನ್ಯಗೊಂಡ ನೋಟುಗಳು ವಾಪಸಾಗಿವೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿದ್ದರೂ, ಸದ್ಯ ನ.8, 2016ಕ್ಕೆ ಹಿಂದೆ ಹೇಗೆ ನಗದು ಪೂರೈಕೆ ಮಾರುಕಟ್ಟೆಯಲ್ಲಿತ್ತೋ ಅದಕ್ಕೆ ವಾಪಸಾಗಿದೆ.

ಜಿಎಸ್‌ಟಿ ಜಾರಿ: ಕಗ್ಗಂಟಾಗಿದ್ದ ಜಿಎಸ್‌ಟಿಯನ್ನು ಜಾರಿ ಮಾಡಿದ ಹೆಗ್ಗಳಿಕೆ ಹಾಲಿ ಕೇಂದ್ರ ಸರ್ಕಾರದ್ದು. ವಿವಿಧ ರಾಜ್ಯ ಸರ್ಕಾರಗಳು ಮತ್ತು ಪಕ್ಷಗಳ ನಾಯಕರ ಜತೆಗೆ ಮಾತುಕತೆ ನಡೆಸಿ ಈ ಪ್ರಯತ್ನ ನಡೆಸಲಾಗಿದೆ. ಆರಂಭದಲ್ಲಿ ವಿವಿಧ ವಸ್ತುಗಳ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆ ಸ್ಲಾಬ್‌ಗಳನ್ನು ಹಂತ ಹಂತವಾಗಿ ಪರಿಷ್ಕರಿಸಿ ಸರಳೀಕರಣಗೊಳಿಸಲಾಗಿದೆ. ತೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ಜಿಎಸ್‌ಟಿ ಮಂಡಳಿ ನಿಯಮಿತವಾಗಿ ಸಭೆ ಸೇರಿ ನಿರ್ಧಾರ ಕೈಗೊಳ್ಳುತ್ತದೆ. 2019-20ನೇ ಸಾಲಿನಲ್ಲಿ ಜಿಎಸ್‌ಟಿ ತೆರಿಗೆ ಸಂಗ್ರಹ 7.61 ಲಕ್ಷ ಕೋಟಿ ರೂ.

ಮೇಕ್‌ ಇನ್‌ ಇಂಡಿಯಾ: ಬ್ರಾಂಡ್‌ ಇಂಡಿಯಾ ಎಂಬುದಕ್ಕೆ ಹೊಳಪು ಸಿಕ್ಕಿದ್ದೇ ಪ್ರಧಾನಿ ಮೋದಿ ಆಡಳಿತದಲ್ಲಿ. ಉತ್ಪಾದನಾ ಕ್ಷೇತ್ರದಲ್ಲಿ ಭಾರತ ವಿಶ್ವದಲ್ಲಿ ಪ್ರಧಾನ ಕೇಂದ್ರವಾಗಬೇಕು ಎಂದು ಮೇಕ್‌ ಇನ್‌ ಇಂಡಿಯಾ ಜಾರಿಗೆ ತಂದಿದ್ದಾರೆ. 2014ರ ಸೆ. 25ರಂದು ಘೋಷಣೆಯಾದ ಬಳಿಕ 16.40 ಲಕ್ಷ ಕೋಟಿ ರೂ.ಗಳಷ್ಟು ಬಂಡವಾಳ ಹೂಡಿಕೆ ವಾಗ್ಧಾನ ಬಂದಿತು. 25 ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ನಿಯಮಗಳಲ್ಲಿ ಸಡಿಲಿಕೆ ಮಾಡಿದ್ದರಿಂದ ವಿಶ್ವಬ್ಯಾಂಕ್‌ನ ಈಸ್‌ ಆಫ್ ಡೂಯಿಂಗ್‌ ಬಿಸಿನೆಸ್‌ ಪಟ್ಟಿಯಲ್ಲಿ ದೇಶದ ರ್‍ಯಾಂಕಿಂಗ್‌ ಉತ್ತಮಗೊಂಡಿದೆ.

ಡಿಜಿಟಲ್‌ ಇಂಡಿಯಾ: ಹಾಲಿ ವರ್ಷದಲ್ಲಿ ದೇಶದಲ್ಲಿ ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆ 627 ಮಿಲಿಯನ್‌ ತಲುಪುವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ಮೊಬೈಲ್‌, ಇಂಟರ್‌ನೆಟ್‌ ಆಧಾರಿತ ವಹಿವಾಟಿಗೆ ಕೇಂದ್ರ ಪ್ರೋತ್ಸಾಹ ನೀಡಿದೆ. ಕನಿಷ್ಠ ಮೊತ್ತಕ್ಕೆ ಉತ್ತಮ ರೀತಿಯಲ್ಲಿ ಇಂಟರ್‌ನೆಟ್‌ ನೀಡುವುದರಿಂದಾಗಿ ಸುಮಾರು 500 ಮಿಲಿಯ ಜನರಿಗೆ ಅನುಕೂಲವಾಗಿದೆ. ಹೀಗಾಗಿ ನಗದು ರಹಿತ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಹಾಲಿ ಸರ್ಕಾರದ ಕ್ರಮ ಸ್ತುತ್ಯರ್ಹವಾಗಿದೆ. ಸರ್ಕಾರಿ ಸ್ವಾಮ್ಯದ ಭೀಮ್‌ ಆ್ಯಪ್‌ಗೂ ಜನಪ್ರಿಯತೆ ಇದೆ.

ಜನಧನದ ಹೊಸ ಹಾದಿ: ದೇಶದಲ್ಲಿರುವ ಎಲ್ಲಾ ವರ್ಗದ ಜನರನ್ನು ಅರ್ಥ ವ್ಯವಸ್ಥೆಗೆ ಸೇರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೊಂದಿದ್ದ ಮಹತ್ವಾಕಾಂಕ್ಷೆಯ ಯೋಜನೆ. ಇದುವರೆಗೆ 35.50 ಕೋಟಿ ಮಂದಿ ಶೂನ್ಯ ಖಾತೆಯನ್ನು ಹೊಂದಿದ್ದಾರೆ. ಈ ಖಾತೆಗಳಲ್ಲಿ 99, 752 ಕೋಟಿ ರೂ. ಮೊತ್ತವೂ ಇದೆ. ಈ ಖಾತೆಗಳ ಮೂಲಕ ಸರ್ಕಾರದ ವಿವಿಧ ಯೋಜನೆಗಳಿಂದ ನೀಡಿಕೆಯಾಗುವ ನಗದನ್ನು ಫ‌ಲಾನುಭವಿಗಳ ಬ್ಯಾಂಕ್‌ ಖಾತೆಗೇ ವರ್ಗಾಯಿಸಲಾಗುತ್ತಿದೆ. ಹೀಗಾಗಿ, ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಿದಂತಾಗಿದೆ.

ಉಜ್ವಲ ಯೋಜನೆ: ಬಡತನ ರೇಖೆಗಿಂತ ಕೆಳಗಿರುವ 5 ಕೋಟಿ ಮಂದಿಗೆ ಉಚಿತ ಅಡುಗೆ ಅನಿಲ ನೀಡುವುದಕ್ಕಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಜಾರಿಗೆ ತರಲಾಗಿದೆ. ಅದಕ್ಕಾಗಿ ಕನಿಷ್ಠ ಮೊತ್ತ 1,600 ರೂ. ನಿಗದಿಪಡಿಸಲಾಗಿದೆ. ಕುಟುಂಬದಲ್ಲಿರುವ ಮಹಿಳೆಯ ಹೆಸರಿನಲ್ಲಿಯೇ ಅದನ್ನು ನೀಡಲಾಗುತ್ತದೆ. ಈ ಮೂಲಕ ಮಹಿಳಾ ಸಬಲೀಕರಣಕ್ಕೂ ಸರ್ಕಾರ ಒತ್ತು ನೀಡಿದೆ. ಅಡುಗೆ ಅನಿಲ ಸಹಾಯಧನ ಬೇಡ ಎಂದು ಸ್ವಯಂಘೋಷಣೆ ಮಾಡುವುದಕ್ಕೂ ಪ್ರೋತ್ಸಾಹ ನೀಡಲಾಗಿದೆ.

ಆರೋಗ್ಯ ಯೋಜನೆ: ರಾಷ್ಟ್ರೀಯ ಆರೋಗ್ಯ ಯೋಜನೆ ಅಥವಾ ಆಯುಷ್ಮಾನ್‌ ಭಾರತ ಯೋಜನೆಯಡಿ ದೇಶದ ಕಡು ಬಡವರಿಗೆ ಉತ್ತಮ ಆರೋಗ್ಯ ಸೌಲಭ್ಯ ಯೋಜನೆ ನೀಡುವ ಪ್ರಯತ್ನ ಮಾಡಲಾಗಿದೆ. ಮಧ್ಯಂತರ ಬಜೆಟ್‌ನಲ್ಲಿ ಇದಕ್ಕಾಗಿ 10 ಸಾವಿರ ಕೋಟಿ ರೂ. ಮೀಸಲಾಗಿ ಇರಿಸಲಾಗಿದೆ. 50 ಕೋಟಿ ಮಂದಿಗೆ ಇದರಿಂದ ಪ್ರಯೋಜನವಾಗಲಿದೆ. ಯೋಜನೆಯ ವ್ಯಾಪ್ತಿಯಲ್ಲಿ ಇದುವರೆಗೆ 12 ಲಕ್ಷ ಮಂದಿಗೆ ಪ್ರಯೋಜನವಾಗಿದೆ. 14, 856 ಆಸ್ಪತ್ರೆಗಳು ಯೋಜನೆ ವ್ಯಾಪ್ತಿಯಲ್ಲಿವೆ.

ಮನ್‌ ಕಿ ಬಾತ್‌: ನಾಗರಿಕರ ಜತೆಗೆ ಹೆಚ್ಚಿನ ಬಾಂಧವ್ಯ ಹೊಂದುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ವಿಶೇಷ ಕಾರ್ಯಕ್ರಮ “ಮನ್‌ ಕಿ ಬಾತ್‌’ ಆರಂಭಿಸಿದರು. 2014ರ ಅ.3ರಿಂದ 2019 ಫೆ.24ರ ವರೆಗೆ 53 ಕಂತುಗಳಲ್ಲಿ ಪ್ರಧಾನಿ ವಿವಿಧ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಪ್ರಜೆಗಳು ಪ್ರಧಾನಿಗೆ ಆಡಳಿತ ಸೇರಿದಂತೆ ಹತ್ತು ಹಲವು ವಿಚಾರಗಳಲ್ಲಿ ಸಲಹೆ, ಸೂಚನೆಗೆ ಅವಕಾಶವಿತ್ತು. ಪ್ರತಿ ಭಾನುವಾರ 20 ನಿಮಿಷ ಈ ಕಾರ್ಯಕ್ರಮ ಇರುತ್ತಿತ್ತು. ಕೇಳುಗರಿಂದ ಸುಮಾರು 16 ಸಾವಿರ ಐಡಿಯಾಗಳು ಬಂದಿದ್ದವು.

ಸ್ವಚ್ಛ ಭಾರತ ಮಿಷನ್‌: ದೇಶಾದ್ಯಂತ ಶುಚಿತ್ವದ ಅರಿವು ಮೂಡಿಸಲು 2014ರಲ್ಲಿ ಸ್ವಚ್ಛ ಭಾರತ ಅಭಿಯಾನ ಶುರು ಮಾಡಲಾಯಿತು. ಬೀದಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಬಡಾವಣೆಗಳಲ್ಲಿ ಶುಚಿತ್ವದ ಅರಿವು ಮೂಡಿಸಲು ಈ ಯೋಜನೆ ಮೂಲಕ ಪ್ರಯತ್ನಿಸಲಾಗಿದೆ. ಬಯಲು ಶೌಚಾಲಯ ಪದ್ಧತಿ ನಿವಾರಿಸಲು ಶೌಚಾಲಯ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ಸಹಾಯಧನ ನೀಡಲಾಯಿತು. 2018 ಅ.2ರಂದು ಪ್ರಧಾನಿ ಮೋದಿ ಘೋಷಿಸಿದ್ದ ಪ್ರಕಾರ 25 ರಾಜ್ಯಗಳು ಬಯಲು ಶೌಚ ಮುಕ್ತರಾಜ್ಯಗಳಾಗಿವೆ.

ರಸ್ತೆ ಮತ್ತು ವಿದ್ಯುತ್‌ ಸಂಪರ್ಕ: ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್‌ ಸಂಪರ್ಕ ನೀಡುವ ಪ್ರಕ್ರಿಯೆ ಹಾಲಿ ಸರ್ಕಾರದ ಅವಧಿಯಲ್ಲಿ ವೇಗ ಪಡೆದಿದೆ. ಇದುವರೆಗೆ 2.62 ಕೋಟಿ ಮನೆಗಳಿಗೆ ಮತ್ತು ಎಲ್ಲಾ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸಲಾಗಿದೆ. ಇದರ ಜತೆಗೆ ರಸ್ತೆ ನಿರ್ಮಾಣದ ವೇಗ ಕೂಡ ಐದು ವರ್ಷಗಳ ಅವಧಿಯಲ್ಲಿ ವೃದ್ಧಿಸಿತ್ತು. ಪ್ರತಿ ದಿನ ಹೊಸತಾಗಿ 40 ಕಿ.ಮೀಯಷ್ಟು ರಸ್ತೆ ನಿರ್ಮಾಣ ಮಾಡಲಾಗಿದೆ.

ಮುದ್ರಾ ಯೋಜನೆ: 15 ಸಾವಿರಕ್ಕೂ ಅಧಿಕ ಸ್ಟಾರ್ಟ್‌ಅಪ್‌ಗ್ಳು ಸ್ಟಾರ್ಟಪ್‌ ಇಂಡಿಯಾ ಯೋಜನೆಯಲ್ಲಿ ನೋಂದಣಿಯಾಗಿವೆ. ಮೋದಿ ಸರ್ಕಾರ ಅದಕ್ಕಾಗಿಯೇ ನಿಯಮಗಳನ್ನು ಸಡಿಲಿಕೆ ಮಾಡಿದೆ. ಮುದ್ರಾ ಯೋಜನೆಯಡಿ ಸಣ್ಣ ಪ್ರಮಾಣದ ಉದ್ದಿಮೆಗಳಿಗೆ ಹಣಕಾಸು ನೆರವು ನೀಡಲಾಗುತ್ತದೆ. ಈ ಯೋಜನೆ ಅನ್ವಯ 2019 -20ನೇ ಸಾಲಿನಲ್ಲಿ 3 ಲಕ್ಷ
ಕೋಟಿ ರೂ.ಗಳಷ್ಟು ಸಾಲವನ್ನು ನೀಡಲಾಗಿದೆ.

ವಿದೇಶಾಂಗ ನೀತಿ: ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ 84 ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕವಾಗಿ ಭಾರತದ ವರ್ಚಸ್ಸು ವೃದ್ಧಿಯಾಗಿದೆ. ಹಲವಾರು ದ್ವಿಪಕ್ಷೀಯ ಒಪ್ಪಂದಗಳಿಂದ ದೇಶಕ್ಕೆ ಅನುಕೂಲವಾಗಿದೆ. ವಿಶೇಷವಾಗಿ, ಚೀನಾ ಜತೆಗೆ ಬಹಳ ಕಾಲದಿಂದ ಇರುವ ತಂಟೆ-ತಕರಾರು ಬಗೆಹರಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಪ್ರಯತ್ನ ನಡೆದಿದೆ.

* ಜನರ ಆಶೀರ್ವಾದಗಳು ತಮಗೆ ದಣಿವರಿಯದಂತೆ ಕೆಲಸ ಮಾಡುವ ಅಧಿಕಾರ ನೀಡುತ್ತವೆ. ಒಂದು ವಿಷಯವೆಂದರೆ, ನಮ್ಮ ಕೆಲಸದ ಬಗ್ಗೆ ಬದ್ಧತೆಯಿರಬೇಕು.

* ನಾನು ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದೆ. ನನ್ನ ತಾಯಿ ಮನೆ, ಮನೆಯಲ್ಲಿ ಕೆಲಸ ಮಾಡಿ ನಮ್ಮನ್ನು ಸಾಕಿದ್ದಾಳೆ. ನಾನು ಬಡತನವನ್ನು ಹತ್ತಿರದಿಂದ ಕಂಡಿದ್ದೇನೆ. ಅನುಭವಿಸಿದ್ದೇನೆ. ನನ್ನ ಬಾಲ್ಯ ಬಡತನದಿಂದ ಕೂಡಿತ್ತು.

* ಎಲ್ಲಾ ಧರ್ಮಗಳು ಮತ್ತು ಸಮುದಾಯಗಳು ಒಂದೇ ರೀತಿಯ ಹಕ್ಕುಗಳನ್ನು ಹೊಂದಿವೆ. ಅವುಗಳಿಗೆ ರಕ್ಷಣೆ ಒದಗಿಸುವುದು ನಮ್ಮ ಜವಾಬ್ದಾರಿ. ಜಾತಿ, ಮತದ ಆಧಾರದ ಮೇಲೆ ಯಾವುದೇ ತಾರತಮ್ಯವನ್ನು ನಮ್ಮ ಸರ್ಕಾರ ಅನುಸರಿಸದು ಮತ್ತು ಸಹಿಸದು.

* ನಾವು ಒಟ್ಟಾಗಿ ಚಲಿಸೋಣ, ಒಟ್ಟಾಗಿ ಆಲೋಚಿಸೋಣ, ಒಟ್ಟಾಗಿ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸೋಣ ಮತ್ತು, ನಾವು ಈ ದೇಶವನ್ನು ಒಟ್ಟಾಗಿ ಯಶಸ್ಸಿನ ಕಡೆಗೆ ಕೊಂಡೊಯ್ಯೋಣ.

ಸಾಂಖ್ಯೀಕ ಸಾಧನೆ
-560,589 ಬಹಿರ್ದೆಶೆ ಮುಕ್ತ ಗ್ರಾಮಗಳು.

-118,919 ಆಪ್ಟಿಕಲ್‌ ಫೈಬರ್‌ ಸಂಪರ್ಕ ಹೊಂದಿರುವ ಗ್ರಾಮಗಳು.

-182, 582,882 ಮುದ್ರಾ ಯೋಜನೆ ಅಡಿ ನೀಡಲಾದ ಸಾಲ.

-356,500,000 ಜನಧನ ಯೋಜನೆಯ ಫ‌ಲಾನುಭವಿಗಳು.

-2,508, 251 ಪಿಎಂ ಜನ ಆರೋಗ್ಯ ಯೋಜನೆಯಲ್ಲಿ ಉಚಿತ ಚಿಕಿತ್ಸೆ ಪಡೆದವರು.

-98, 171, 803 ಸ್ವಚ್ಛ ಭಾರತ ಯೋಜನೆಯಡಿ ನಿರ್ಮಾಣಗೊಂಡ ಶೌಚಾಲಯಗಳು.

-350, 627, 931 ಉಜ್ವಲ ಯೋಜನೆಯಡಿ ವಿತರಿಸಲಾಗಿರುವ ಎಲ್‌ಇಡಿ ಬಲ್ಬ್ಗಳು.

-130, 175- ಇಂಡಿಯಾ ಪೋಸ್ಟ್‌ ಪಾವತಿ ಬ್ಯಾಂಕ್‌ ಕೇಂದ್ರಗಳು.

-33, 800, 000- ಇಂದ್ರ ಧನುಸ್ಸು ಯೋಜನೆಯಡಿ ಮಕ್ಕಳಿಗೆ ನೀಡಲಾಗಿರುವ ಲಸಿಕೆ.

-7,065,730,000- 2016 ಆಗಸ್ಟ್‌ನಿಂದ 2019ರ ಏಪ್ರಿಲ್‌ ವರೆಗೆ ಯುಪಿಐ ಮೂಲಕ ನಡೆದ ಡಿಜಿಟಲ್‌ ವಹಿವಾಟುಗಳ ಸಂಖ್ಯೆ.

-142, 400, 000 2018ರ ಡಿಸೆಂಬರ್‌ ವರೆಗೆ ಪಿಎಂ ಫ‌ಸಲ್‌ ಬಿಮಾ ಯೋಜನೆ ವ್ಯಾಪ್ತಿಯಲ್ಲಿ ಒಳಗೊಂಡವರು.

-15,607, 000ಕ್ಕೂ ಅಧಿಕ- ಅಟಲ್‌ ಪಿಂಚಣಿ ವ್ಯಾಪ್ತಿಗೆ ಒಳಗೊಂಡವರು.

-14,618, 767 ಇ-ನ್ಯಾಮ್‌ ಯೋಜನೆಯಲ್ಲಿ ನೋಂದಾವಣೆಗೊಂಡ ರೈತರು.

-2,366,000 ಸ್ವಯಂನಲ್ಲಿ ನೋಂದಣಿ ಮಾಡಿಸಿಕೊಂಡವರ ಸಂಖ್ಯೆ.

-71, 915, 298 ಉಜ್ವಲ ಯೋಜನೆಯಡಿ ವಿತರಿಸಲಾಗಿರುವ ಎಲ್‌ಪಿಜಿ ಸಂಪರ್ಕ.

-18,635 ನೋಂದಾವಣೆಗೊಂಡ ಸ್ಟಾರ್ಟ್‌ಅಪ್‌ಗ್ಳು.

-20, 318, 840, 000,000  ಕೋಟಿ ರೂ.- 2019ರ ಏಪ್ರಿಲ್‌ ವರೆಗೆ ಸಂಗ್ರಹಿಸಲಾಗಿರುವ ಜಿಎಸ್‌ಟಿ ಮೊತ್ತ.

-15,300, 000 ಪಿಎಂ ಆವಾಸ್‌ ಯೋಜನೆ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ಮನೆಗಳು.

-199, 095, 530 ವಿತರಣೆ ಮಾಡಲಾಗಿರುವ ಮಣ್ಣಿನ ಆರೋಗ್ಯ ಕಾರ್ಡ್‌ಗಳು.

-59,800, 000 ಪಿಎಂ ಜೀವನ್‌ ಜ್ಯೋತಿ ಬಿಮಾ ಯೋಜನೆಗೆ ನೋಂದಣಿ ಮಾಡಿದವರು.

-153, 624  ಕಿಮೀ- 2013-14ನೇ ವರ್ಷದಿಂದ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ ಅಡಿಯಲ್ಲಿ ನಿರ್ಮಾಣವಾಗಿರುವ ರಸ್ತೆ.

-318,000 ಸಾಮಾನ್ಯ ಸೇವಾ ಕೇಂದ್ರಗಳ ಸಂಖ್ಯೆ

-157, 400,000 ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಲ್ಲಿ ನೋಂದಣಿ ಮಾಡಿಸಿಕೊಂಡವರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ