ಭಾರತೀಯ ಯುವಜನರಿಗೆ ನೇತಾಜಿ ಬರೆದ ಪತ್ರಗಳು


Team Udayavani, Jan 23, 2021, 8:00 AM IST

ಭಾರತೀಯ ಯುವಜನರಿಗೆ ನೇತಾಜಿ ಬರೆದ ಪತ್ರಗಳು

ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರು ಭಾರತದ ಯುವಕರಲ್ಲಿ ಪ್ರೇರಣೆ ತುಂಬಲು, ತಮ್ಮ ಹಿಂಬಾಲಕರನ್ನು ಪ್ರೋತ್ಸಾಹಿಸಲು ಲೇಖನಗಳನ್ನು, ಪತ್ರಗಳನ್ನು ಪ್ರಕಟಿಸುತ್ತಲೇ ಇದ್ದರು. ಬಂಧನದಲ್ಲಿದ್ದ ವೇಳೆಯೂ ಅವರು ಯುವಕರಿಗಾಗಿ ಅನೇಕ ಪತ್ರಗಳನ್ನೂ ಬರೆದಿದ್ದರು. ಅವುಗಳನ್ನೆಲ್ಲ ಸಂಗ್ರಹಿಸಿ ಅವರು ಬಂಗಾಲಿ ಭಾಷೆಯಲ್ಲಿ “ತರುಣೇರ್‌ ಸ್ವಪ್ನಾ'(ಯುವಕರ ಕನಸು) ಎನ್ನುವ ಪುಸ್ತಕವನ್ನು ಪ್ರಕಟಿಸಿದ್ದರು. ಆ ಅದ್ಭುತ ಪುಸ್ತಕದ ಆಯ್ದ ಭಾಗ ನಿಮ್ಮ ಮುಂದೆ….

ಸ್ನೇಹಿತರೇ, ನಿಮ್ಮ ಮನಸ್ಸು ಗೊಂದಲದ ಗೂಡಾಗಿರಬಹುದು ಎನ್ನುವುದನ್ನು ನಾನು ಬಲ್ಲೆ. ಇದಕ್ಕೆ ಕಾರಣವೇನು ಎನ್ನುವುದನ್ನೂ ಅರಿತಿದ್ದೇನೆ. ಮನುಷ್ಯನ ಸರ್ವತೋಮುಖ ಬೆಳವಣಿಗೆ ಕೇವಲ ಕೆಲಸ ಮತ್ತು ಸೇವೆಯಿಂದ ಮಾತ್ರ ಸಾಧ್ಯವಾಗುವಂಥದ್ದಲ್ಲ. ಒಬ್ಬ ವ್ಯಕ್ತಿಯ ಬೆಳವಣಿಗೆಗೆ ಬಾಹ್ಯ ಚಟುವಟಿಕೆಗಳ ಜತೆ ಜತೆಗೇ ಆಳವಾದ ಅಧ್ಯಯನ ಮತ್ತು ಗಾಢ ಮೆಡಿಟೇಶನ್‌(ಧ್ಯಾನ) ಅಗತ್ಯವೂ ಇರುತ್ತದೆ. ಕೆಲಸವೆನ್ನುವುದು ವ್ಯಕ್ತಿಯೊಬ್ಬನಲ್ಲಿನ ಅಶಿಸ್ತನ್ನು ತೊಲಗಿಸುತ್ತದೆ ಮತ್ತು ಬಾಹ್ಯ ವರ್ತನೆಯನ್ನು ನಿಯಂತ್ರಿಸುತ್ತದೆ. ಆದರೆ ಅಧ್ಯಯನ ಮತ್ತು ಧ್ಯಾನವೆನ್ನುವುದು ಆಂತರಿಕ ಶಿಸ್ತನ್ನು ಅವನಿಗೆ ದಯಪಾಲಿಸುತ್ತದೆ. ಯಾವಾಗ ಮನುಷ್ಯನಲ್ಲಿ ಆಂತರಿಕ ಶಿಸ್ತಿನ ಅಭಾವ ಇರುತ್ತದೋ ಆಗ ಆತನ ಬಾಹ್ಯ ಶಿಸ್ತೂ ಕರಗುತ್ತಾ ಹೋಗಿಬಿಡುತ್ತದೆ. ಹೇಗೆ ನಿಯಮಿತ ದೈಹಿಕ ವ್ಯಾಯಾಮ ಮನುಷ್ಯನ ದೇಹವನ್ನು ಸದೃಢಗೊಳಿಸುತ್ತದೋ, ಹಾಗೆಯೇ ಆಳವಾದ ಧ್ಯಾನವು ನಿಮ್ಮಲ್ಲಿ ಪರಿಶುದ್ಧ ಭಾವನೆಗಳನ್ನು ಬೆಳೆಸುತ್ತದೆ ಮತ್ತು ಮನಸ್ಸಿನ ನಿಗ್ರಹಕ್ಕೆ ಅನುವು ಮಾಡಿಕೊಡುತ್ತದೆ.

ಧ್ಯಾನವೆನ್ನುವುದು ಎರಡು ರೀತಿಯ ಉದ್ದೇಶಗಳನ್ನು ಈಡೇರಿಸಲು ಸಹಾಯ ಮಾಡುತ್ತದೆ.

1)ಮುಖ್ಯವಾಗಿ ಕಾಮೋದ್ರೇಕ, ಭಯ ಮತ್ತು ಸ್ವಾರ್ಥದಂಥ ಉದ್ವೇಗಗಳ ಮೇಲೆ ಗೆಲುವು ಸಾಧಿಸಲು.

2) ಪ್ರೀತಿ, ಗೌರವ, ತ್ಯಾಗ, ವಿವೇಕ ಇತ್ಯಾದಿ ಸದ್ಗುಣಗಳನ್ನು ಬೆಳೆಸಿಕೊಳ್ಳಲು

ಪ್ರತೀ ದಿನವೂ ಮುಂಜಾನೆ ಮತ್ತು ಸಂಜೆ ಕೆಲವು ಸಮಯವನ್ನು ಧ್ಯಾನಕ್ಕಾಗಿಯೇ ಮೀಸಲಿಡಿ. ಧ್ಯಾನವು ನಿಮ್ಮಲ್ಲಿ ಶಕ್ತಿ ತುಂಬುವ ಜತೆ ಜತೆಗೇ ಮಾನಸಿಕ ನೆಮ್ಮದಿಯನ್ನೂ ನೀಡುತ್ತದೆ.

ಖಂಡಿತವಾಗಿಯೂ ಒಬ್ಬ ವ್ಯಕ್ತಿ ತನ್ನ ಗುಣಗಳಿಗೆ ಮತ್ತು ಬುದ್ಧಿಮತ್ತೆಗೆ ತಕ್ಕಂತೆ ನಿರ್ದಿಷ್ಟ ದಿಕ್ಕಿನಲ್ಲಿ ಪರಿಣತಿ ಪಡೆಯಬೇಕಾಗುತ್ತದೆ. ಆದರೆ ಮನುಷ್ಯನೊಬ್ಬ ಸರ್ವತೋಮುಖವಾಗಿ ಬೆಳವಣಿಗೆ ಆಗದಿದ್ದರೆ, ಆತ ಎಂದಿಗೂ ಸಂತಸದಿಂದ ಇರಲಾರ. ಆತನ ಹೃದಯದಲ್ಲಿ ಯಾವಾಗಲೂ ಒಂದು ಕೊರತೆ, ಖಾಲಿತನ ಕಾಡುತ್ತಲೇ ಇರುತ್ತದೆ. ಈ ಕಾರಣಕ್ಕಾಗಿಯೇ ಸರ್ವತೋಮುಖ ಅಭಿವೃದ್ಧಿಗಾಗಿ ನೀವು 1) ದೈಹಿಕ ವ್ಯಾಯಾಮ 2) ಆಳ ಅಧ್ಯಯನ 3) ಧ್ಯಾನವನ್ನು ಮಾಡಿ.

ಕೆಲವೊಮ್ಮೆ ಕೆಲಸದ ಒತ್ತಡದಿಂದಲೋ ಅಥವಾ ಸಮಯದ ಅಭಾವದಿಂದಲೋ ನಾವು ಈ ವಿಷಯಗಳನ್ನು ಅವಗಣಿಸಬಹುದು. ಆದರೆ ಈ ಒತ್ತಡಗಳಿಂದ ಬಿಡುಗಡೆ ಸಿಕ್ಕ ತತ್‌ಕ್ಷಣ ನಾವು ಈ ಸಂಗತಿಗಳತ್ತ ಚಿತ್ತ ಹರಿಸಬೇಕು.

ಒಂದು ವೇಳೆ ನೀವು ದಿನಕ್ಕೆ ಕನಿಷ್ಠ ಒಂದೂವರೆಯಿಂದ 2 ಗಂಟೆಯವರೆಗೆ ಈ ಬಹುಮುಖ್ಯ ಚಟುವಟಿಕೆಗಳತ್ತ ಗಮನಹರಿಸಿದರೆ ನಿಮಗೆ ಬಹಳ ಒಳ್ಳೆಯದಾಗುತ್ತದೆ. ತಜ್ಞರ ಪ್ರಕಾರ ದಿನಕ್ಕೆ ಕೇವಲ 15 ನಿಮಿಷ ದೈಹಿಕ ವ್ಯಾಯಾಮ ಮಾಡಿದರೂ ಮನುಷ್ಯನ ಆರೋಗ್ಯ ಉತ್ತಮವಾಗುತ್ತದೆ. ಇನ್ನೊಂದು ಹದಿನೈದು ನಿಮಿಷವನ್ನು ನಾವು ಧ್ಯಾನಕ್ಕಾಗಿ ಮೀಸಲಿಟ್ಟರೆ ಒಟ್ಟು ಅರ್ಧಗಂಟೆಯಾಗುತ್ತದೆ. ಇನ್ನುಳಿದ ಒಂದು ಗಂಟೆಯನ್ನು ನೀವು ಓದಿಗಾಗಿ/ಅಧ್ಯಯನಕ್ಕಾಗಿ ಮೀಸಲಿಡಿ(ಹಾಗೆಂದು ಸುದ್ದಿ ಪತ್ರಿಕೆಗಳನ್ನು ಓದಿಎಂದು ನಾನು ಹೇಳುತ್ತಿಲ್ಲ, ಅದಕ್ಕಾಗಿಯೇ ಪ್ರತ್ಯೇಕ ಸಮಯ ಮೀಸಲಿಡಬೇಕು..) ಸಹ ಮನುಷ್ಯರಿಗೆ ಸಂತಸವನ್ನು ಹಂಚೋಣ

ನಾವು ಈ ಭೂಮಿಗೆ ಬಂದದ್ದೇ ಕೆಲವು ಉದ್ದೇಶಗಳ ಈಡೇರಿಕೆಗಾಗಿ, ಈ ಜಗತ್ತಿಗೆ ಕೆಲವು ಸಂದೇಶ ನೀಡುವುದಕ್ಕಾಗಿ. ಹೇಗೆ ಸೂರ್ಯನು ಇಡೀ ವಿಶ್ವವನ್ನು ಬೆಳಗಲು ಆಕಾಶದಲ್ಲಿ ಉದಯಿಸುತ್ತಾನೋ, ಹೇಗೆ ಹೂಗಳು ತಮ್ಮ ಪರಿಮಳದಿಂದ ಗಾಳಿಯನ್ನು ಸಿಹಿಗೊಳಿಸಲು ಅರಳುತ್ತವೋ, ಹೇಗೆ ನದಿಗಳು ತಮ್ಮ ಸಮೃದ್ಧ ಜಲವನ್ನು ಧಾರೆಯೆರೆಯಲು ಸಾಗರದತ್ತ ಧಾವಿಸುತ್ತವೋ, ಆ ರೀತಿಯಲ್ಲೇ ನಾವೆಲ್ಲರೂ ಈ ಭೂಮಿಗೆ ನಮ್ಮ ಯೌವನ ಹಾಗೂ ತುಂಬುರಕ್ತದ ಜೀವನದೊಂದಿಗೆ ಯಾವುದೋ ಮಹಾನ್‌ ಸತ್ಯವನ್ನು ಸ್ಥಾಪಿಸಲು ಬಂದಿದ್ದೇವೆ.

ಏಕಾಗ್ರ ಚಿತ್ತದಿಂದ ಮತ್ತು ಈ ಜೀವನದಲ್ಲಿ ನಾವು ಸಂಪಾದಿಸಿದ ಪ್ರಾಯೋಗಿಕ ಅನುಭವದ ಮೂಲಕ ಬದುಕಿನ ಅಜ್ಞಾತ-ರಹಸ್ಯ ಉದ್ದೇಶವನ್ನು ನಾವು ಅನ್ವೇಷಿಸಬೇಕು. ತನ್ಮೂಲಕ ಅರ್ಥಹೀನ ಅಸ್ತಿತ್ವವನ್ನು ಅರ್ಥಪೂರ್ಣವಾಗಿ ರೂಪಾಂತರಿಸಬಹುದು.

ಸಹ ಮನುಷ್ಯನಿಗೆ ಸಂತಸವನ್ನು ಹಂಚುವ ಕಾರಣಕ್ಕಾಗಿಯೇ ನಾವು ಹುರುಪಿನಿಂದ ಈ ಜಗತ್ತಿಗೆ ಬಂದಿದ್ದೇವೆ. ಏಕೆಂದರೆ ನಾವು ಸಂತೋಷದ ಪೂರ್ಣ ಚೈತನ್ಯದ ಪ್ರತಿನಿಧಿಗಳು. ನಾವು ಉಲ್ಲಾಸ ಹಾಗೂ ಸಂತೋಷದ ಸಾಕಾರ ರೂಪಗಳಾಗಿ ಈ ಭೂಮಿಯ ಮೇಲೆ ಸಂಚರಿಸೋಣ. ನಾವೂ ನಗುತ್ತಾ ಇಡೀ ಜಗತ್ತನ್ನು

ನಮ್ಮೊಂದಿಗೆ ಹರ್ಷಿಸುವಂತೆ ಮಾಡೋಣ. ನಾವು ದೃಷ್ಟಿ ಹರಿಸಿದಲ್ಲೆಲ್ಲ ವಿಷಣ್ಣತೆಯ ಕತ್ತಲೆಯು ಮಂಜಿನಂತೆ ಕರಗಿಹೋಗುತ್ತದೆ, ಅನೇಕರ ಕಣ್ಣೀರಿಗೆ ಕಾರಣವಾದ ಶೋಕಗಳು, ಉಪದ್ರವಗಳು, ಯಾತನೆಗಳನ್ನು ನಮ್ಮ ಉಲ್ಲಾಸಮಯ ಸ್ಪರ್ಶವು ಕೊನೆಗೊಳಿಸಲಿ.

ನಾವು ತ್ಯಾಗ, ಧೈರ್ಯ, ಭರವಸೆ ಮತ್ತು ಉತ್ಸಾಹವೆಂಬ ದೈವಿಕ ಉಡುಗೊರೆಗಳನ್ನು ಹೊತ್ತು ತಂದವರು. ನಾವು ಭೂಮಿಗೆ ಬಂದಿರುವುದೇ ಏನನ್ನಾದರೂ ಸೃಷ್ಟಿಸಲು. ಏಕೆಂದರೆ ಸೃಷ್ಟಿಯಲ್ಲೇ ನಿಜವಾದ ಸಂತೋಷವಿದೆ. ನಮ್ಮೆಲ್ಲ ಬಾಹ್ಯ ಶಕ್ತಿಯ ಬಳಕೆಯೊಂದಿಗೆ ನಾವು ನಮ್ಮ ಸೃಜನಾತ್ಮಕ ಕೆಲಸಗಳನ್ನು ಮಾಡೋಣ. ನಮ್ಮೊಳಗಿನ ಜ್ವಾಲೆಯಿಂದ ಉದ್ಭವವಾಗುವ ಸಂತಸವೆಂಬ ಬೆಳಕಲ್ಲಿ ಕಳೆದುಹೋಗೋಣ. ಆ ಬೆಳಕಿನ ಮೂಲಕ ಈ ಭೂಮಿಯನ್ನು ಸುಖ, ಸಂತೋಷ, ನಲಿವಿನ ಆಗರವಾಗಿಸೋಣ.

ನಾವು ಅನಂತ ಭರವಸೆಗಳೊಂದಿಗೆ, ಅಸೀಮ ಉತ್ಸಾಹದೊಂದಿಗೆ ಮತ್ತು ಅದಮ್ಯ ಪರಾಕ್ರಮದೊಂದಿಗೆ ಸಜ್ಜಾಗಿ ಬಂದಿದ್ದೇವೆ. ನಮ್ಮೊಳಗಿನ ಈ ಜೀವನೋತ್ಸಾಹವನ್ನು ತಡೆಯಲು ಈ ಭೂಮಿಯ ಮೇಲೆ ಯಾವ ಶಕ್ತಿಗೂ ಸಾಧ್ಯವಿಲ್ಲ. ಅನುಮಾನ, ಅಳುಕುಗಳು ನಮ್ಮ ಮುಂದೆ ಪರ್ವತದಂತೆ ಬಂದು ನಿಲ್ಲಲಿ, ಇಡೀ ಮಾನವ ಕುಲದ ವೈಷಮ್ಯವು ನಮ್ಮನ್ನು ವಿರೋಧಿಸಲು ಪ್ರಯತ್ನಿಸಲಿ, ನಮ್ಮ ಸಂಭ್ರಮದ ಪಥಸಂಚಲನ ಮಾತ್ರ ನಿರ್ವಿಘ್ನವಾಗಿ ಮುಂದುವರಿಯಲಿದೆ…

ಹೆಣ್ಣಲ್ಲಿನ ದೈವತ್ವವನ್ನು ಗುರುತಿಸಿ : 

ಕಾಮವನ್ನು ಗೆಲ್ಲುವುದಕ್ಕೆ ಅತ್ಯುತ್ತಮ ದಾರಿಯೆಂದರೆ ಪ್ರತಿಯೊಬ್ಬ ಮಹಿಳೆಯನ್ನೂ ತಾಯಿಯಂತೆ ಕಾಣುವುದು, ತಾಯಿಯಲ್ಲಿನ ಗುಣವಿಶೇಷಗಳನ್ನು ಆಕೆಯಲ್ಲಿ ಗುರುತಿಸುವುದು ಮತ್ತು ಮಹಿಳೆಯ ರೂಪದಲ್ಲಿ ದೇವರನ್ನು ಧ್ಯಾನಿಸುವುದು (ಉದಾ: ದುರ್ಗಾ, ಕಾಳಿ). ಯಾವಾಗ ನೀವು ದೇವರನ್ನು ಮಹಿಳೆಯ ರೂಪದಲ್ಲಿ ನೋಡಲು ಆರಂಭಿಸುತ್ತೀರೋ ಆಗ ನೀವು ಪ್ರತೀ ಹೆಣ್ಣಿನಲ್ಲೂ ಇರುವ ದೈವತ್ವವನ್ನು ಗುರುತಿಸಲು ಕಲಿಯುತ್ತೀರಿ. ಯಾವಾಗ ನೀವು ಈ ಹಂತವನ್ನು ತಲುಪುತ್ತೀರೋ ಆಗ ನೀವು ಕಾಮವನ್ನು ಸಂಪೂರ್ಣವಾಗಿ ಗೆಲ್ಲುತ್ತೀರಿ. ನಮ್ಮ ಪೂರ್ವಿಕರು ದೈವೀ ಶಕ್ತಿಯನ್ನು ಮಹಿಳೆಯರ ರೂಪದಲ್ಲಿ ಏಕೆ ಸ್ಮರಿಸುತ್ತಿದ್ದರು ಎನ್ನುವುದು ಇದರಿಂದ ಅರ್ಥವಾಗುತ್ತದೆ. ನಿತ್ಯ ಜೀವನದಲ್ಲಿ ಹೆಣ್ಣುಮಕ್ಕಳನ್ನು ತಾಯಿಯ ರೂಪದಲ್ಲಿ ನೋಡುವುದು, ನಮ್ಮ ಮನಸ್ಸನ್ನು ಪರಿಶುದ್ಧಗೊಳಿಸುವ ಮಾರ್ಗ.

ಜಗತ್ತು ಸುತ್ತಿ, ಮನೆಯ ಮೂಲೆಯಲ್ಲಿ ಕುಳಿತುಕೊಳ್ಳಬೇಡಿ ;

ಭಾರತೀಯ ಯುವಜನತೆ ಇಂದು ಜಗತ್ತನ್ನು ಸುತ್ತಲು ತೋರಿಸುತ್ತಿರುವ ಆಸಕ್ತಿಯು ನಿಸ್ಸಂಶಯವಾಗಿಯೂ ಅತ್ಯಂತ ಪ್ರೇರಣಾದಾಯಕ ಲಕ್ಷಣ. ನಮ್ಮ ಯುವಕರು ತಮ್ಮ ಮನೆಗಳ ಸುರಕ್ಷಿತ ಚೌಕಟ್ಟಿನಿಂದ ಹೊರಬಂದು ವಿದೇಶಗಳನ್ನು ಸುತ್ತುತ್ತಾರೆ ಎಂದು ಕೆಲವು ವರ್ಷಗಳ ಹಿಂದೆ ಯಾರು ತಾನೇ ಊಹಿಸಿದ್ದರು?  ಅಪರಿಚಿತ ಪ್ರದೇಶಗಳನ್ನು ನೋಡಬೇಕು, ಅಪರಿಚಿತ ಹಾದಿಯಲ್ಲಿ ಸಾಗಬೇಕು, ಅಪರಿಚಿತ ಜನರನ್ನು ಭೇಟಿಯಾಗಬೇಕು ಎನ್ನುವ ಹಂಬಲವೇ ರಾಷ್ಟ್ರಗಳನ್ನು ಮತ್ತು ಸಾಮ್ರಾಜ್ಯಗಳನ್ನು ಸೃಷ್ಟಿಸುವ ರಹಸ್ಯ. ಯಾವ ರಾಷ್ಟ್ರಗಳು ತಮ್ಮ ಸಂಕುಚಿತ ವಲಯವನ್ನು ದಾಟಿ ಹೊರಗೆ ಬರಲು ನಿರಾಕರಿಸುತ್ತವೋ, ಅವು ಸಾಯುವುದು ಖಚಿತ. ಇನ್ನೊಂದೆಡೆ ಯಾವ ರಾಷ್ಟ್ರಗಳು ವಿದೇಶಿ ನೆಲಗಳಿಗೆ ಭೇಟಿ ಕೊಡಬೇಕೆಂಬ ತಮ್ಮ ಹಂಬಲಕ್ಕಾಗಿ ಎಲ್ಲ ಅಡ್ಡಿಗಳನ್ನು ಅವಗಣಿಸಿ, ಕೆಲವೊಮ್ಮೆ ಸಾವಿನ ಅಪಾಯವನ್ನೂ ಎದುರಿಸಿ ಮುನ್ನಡೆಯುತ್ತವೋ ಆ ರಾಷ್ಟ್ರಗಳು ಭೌತಿಕವಾಗಿ, ಮಾನಸಿಕವಾಗಿ ಬೆಳೆಯುತ್ತವೆ. ಇದೇ ವೇಳೆಯಲ್ಲೇ ತಮ್ಮ ಸಾಮ್ರಾಜ್ಯಗಳ ವ್ಯಾಪ್ತಿಯನ್ನೂ ವಿಸ್ತರಿಸುತ್ತವೆ. ನಾವು ನಮ್ಮ ಮನೆಗಳ ಬೆಚ್ಚನೆಯ ಮೂಲೆಗಳನ್ನು ತೊರೆದು, ಹೊರ ಜಗತ್ತಿಗೆ ಕಾಲಿಡಬೇಕು. ನಮ್ಮ ರಾಷ್ಟ್ರವನ್ನು ಅರ್ಥಮಾಡಿಕೊಂಡು, ಅನಂತರ ಒಂದು ರಾಷ್ಟ್ರದಿಂದ ಇನ್ನೊಂದಕ್ಕೆ, ಒಂದು ಸಾಗರದಿಂದ ಇನ್ನೊಂದಕ್ಕೆ ಅಪರಿಚಿತ ಜಾಗಗಳ ಹುಡುಕಾಟಕ್ಕಾಗಿ ಸಾಗಬೇಕು. ಅಂಥ ದೇಶವಾಸಿಗಳಿರುವ ರಾಷ್ಟ್ರವು ಧೈರ್ಯ, ಬಲಿಷ್ಟ ವ್ಯಕ್ತಿತ್ವ, ಜ್ಞಾನ ಮತ್ತು ಅನುಭವವನ್ನು ಪಡೆಯುತ್ತದೆ. ಇದೇ ವೇಳೆಯಲ್ಲೇ ಅದು ವಾಣಿಜ್ಯಿಕವಾಗಿಯೂ ವಿಸ್ತರಿಸುತ್ತದೆ.  ಜಗತ್ತನ್ನು ಸುತ್ತುವುದರಿಂದ ನಮ್ಮ ದೃಷ್ಟಿಕೋನ ಹಿರಿದಾಗುತ್ತದೆ, ನಮ್ಮ ಜ್ಞಾನ, ಅನುಭವದ ವ್ಯಾಪ್ತಿ ವಿಸ್ತರಿಸುತ್ತದೆ, ನಮ್ಮ ಆತ್ಮವಿಶ್ವಾಸ ಮತ್ತು ಬೌದ್ಧಿಕ ಶಕ್ತಿಯೂ ಅಭಿವೃದ್ಧಿಯಾಗುತ್ತದೆ.

ಟಾಪ್ ನ್ಯೂಸ್

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.