ದಾರಿ ತೋರುವ ಡಿಜಿಟಲ್ ಮಾರ್ಗದರ್ಶಕ

ಡಿಜಿಟಲ್ ಮ್ಯಾಪ್‌ಗೆ ಆಗ್ಮೆಂಟೆಡ್‌ ರಿಯಾಲಿಟಿಯ ಸ್ಪರ್ಶ

Team Udayavani, Aug 12, 2019, 5:00 AM IST

ಹಿಂದೊಂದು ಕಾಲವಿತ್ತು, ಒಂದು ಊರಿಂದ ಇನ್ನೊಂದು ಊರಿಗೆ ಹೋಗುವುದಿದ್ದರೆ ನಮಗೆ ದಾರಿ ತೋರಿಸಲು ಜೊತೆಗೊಬ್ಬ ಬೇಕಿತ್ತು. ಅದೂ ಅಲ್ಲದಿದ್ದರೆ ಸಿಕ್ಕ ಸಿಕ್ಕವರನ್ನೆಲ್ಲ ವಿಳಾಸ ಕೇಳುತ್ತಾ ಸಾಗಬೇಕಿತ್ತು. ವಿಳಾಸ ಹೇಳುವ ವಿಧಾನವೂ ಒಂದೊಂದು ಪ್ರದೇಶಕ್ಕೆ ಒಂದೊಂದು ರೀತಿ. ಊರಲ್ಲಿ ಸೀದಾ ಹೋಗಿ ಬಲಕ್ಕೆ ಆಲದ ಮರದ ಹತ್ತಿರ ಮೂರು ರಸ್ತೆ ಕೂಡುವಲ್ಲಿ ಬಲಗಡೆ ರಸ್ತೆಯಲ್ಲಿ ಹೋಗಿ ಎಂದರೆ, ಬೆಂಗಳೂರಿನಂಥ ನಗರದಲ್ಲಿ ಅರ್ಧ ಇಂಗ್ಲೀಷಲ್ಲೂ ಅರ್ಧ ಕನ್ನಡದಲ್ಲೂ ಸೇರಿಸಿ ಸ್ಟ್ರೇಟ್ ಆಗಿ ಹೋಗಿ, ರೈಟ್ ತಗೊಂಡು ಸೆಕೆಂಡ್‌ ಲೆಫ್ಟ್ ತಗೊಳ್ಳಿ ಅನ್ನೋದು ಸಾಮಾನ್ಯ. ಕಾಲ ಬದಲಾಗುತ್ತಿದ್ದಂತೆಯೇ ಮಾರಿಗೊಂದು ಕಟ್ಟಡಗಳು ಬರುತ್ತಿದ್ದಂತೆಯೇ, ಹೊಸ ಹೊಸ ಗುರುತುಗಳು ಬಂದವು. ನಾವೇ ಯಾವುದೋ ಬಿಲ್ಡಿಂಗಿನ ಹೆಸರನ್ನೋ ಅಥವಾ ಮತ್ತೇನನ್ನೋ ಹೇಳಿ ಹೊಸ ಅತಿಥಿಗಳನ್ನು ಮನೆಗೆ ಆಹ್ವಾನಿಸಲು ಆರಂಭಿಸಿದೆವು.

ಯಾವಾಗ ಜನರ ಕೈಗೆ ಸ್ಮಾರ್ಟ್‌ಫೋನ್‌ಗಳು ಬಂದವೋ ಅದರಲ್ಲಿ ಮ್ಯಾಪ್ಸ್‌ ಎಂಬ ಅಪ್ಲಿಕೇಶನ್‌ ಒಂದು ಜನರ ಗಮನ ಸೆಳೆಯಿತು. ಅದರಲ್ಲಿ ಪ್ರತಿ ಬೀದಿಗಳನ್ನೂ ಗುರುತು ಮಾಡಲಾಗಿದೆ. ಒಂದೊಂದು ಹೆಜ್ಜೆ ಇಡುವಾಗಲೂ ನಮಗೆ ಮಾರ್ಗದರ್ಶನವನ್ನು ಅದು ನೀಡುತ್ತದೆ. ಆರಂಭದಲ್ಲಿ ಗೂಗಲ್ನ ಮ್ಯಾಪ್ಸ್‌ ಎಂಬ ಅಪ್ಲಿಕೇಶನ್‌ ಬಿಡುಗಡೆಯಾದಾಗ ಯಾರೂ ಇದರ ಅಗಾಧತೆಯನ್ನು ಗಮನಿಸಿರಲಿಲ್ಲ. ನಗರಗಳು ವ್ಯಾಪಕವಾಗಿ ಬೆಳೆಯುತ್ತಿದ್ದಂತೆ ರಸ್ತೆಗಳೆಲ್ಲ ಒಂದೇ ರೀತಿ ಕಾಣಿಸತೊಡಗಿದಾಗ ನಾವು ಹೋಗಬೇಕಾದ ಕಡೆ ತಲುಪಲು ಈ ಮ್ಯಾಪ್‌ ಇಲ್ಲದಿದ್ದರೆ ಸಾಧ್ಯವೇ ಇಲ್ಲ ಎಂಬಂಥ ಪರಿಸ್ಥಿತಿ ಇದೆ.

ಯಾವುದೇ ಹೊಸ ಸ್ಥಳಕ್ಕೆ ಹೋಗುವಾಗ ಮೊದಲು ನಾವು ಮ್ಯಾಪ್‌ ತೆರೆಯುತ್ತೇವೆ. ಅದನ್ನು ನೋಡಿಕೊಂಡು ಎಲ್ಲಿ ತಿರುಗಬೇಕು, ಯಾವ ದಾರಿಯಲ್ಲಿ ಹೋಗಬೇಕು ಎಂದು ನೋಡಿಕೊಳ್ಳುತ್ತೇವೆ. ಆನ್‌ಲೈನ್‌ನಲ್ಲಿ ಯಾವುದೋ ಸಾಮಗ್ರಿಯನ್ನು ಬುಕ್‌ ಮಾಡಿದಾಗ ಡೆಲಿವರಿ ಮಾಡುವ ಹುಡುಗ ನಮ್ಮ ಮನೆಗೆ ಮ್ಯಾಪ್‌ನಲ್ಲಿ ದಾರಿ ನೋಡಿಕೊಂಡು ಸುಲಭವಾಗಿ ಮನೆ ಎದುರು ನಿಂತು ಕರೆ ಮಾಡುತ್ತಾನೆ. ಸಾರ್‌, ನಿಮ್ಮ ಮನೆ ಹತ್ತಿರ ಇದ್ದೀನಿ. ಎಷ್ಟನೇ ಫ್ಲೋರ್‌? ಅಂತ ಕೇಳುತ್ತಾನೆ.

ಹಾಗೆಂದ ಮಾತ್ರಕ್ಕೆ ಈ ಮ್ಯಾಪ್‌ ಎಲ್ಲವೂ ಸರಿ ಇದೆ ಅಂತೇನಿಲ್ಲ. ಮೊದಲ ಬಾರಿಗೆ ಯಾರದ್ದಾದರೂ ಕೈಗೆ ಮ್ಯಾಪ್‌ ಕೊಟ್ಟರೆ ಅವನ ಸ್ಥಿತಿ ಅಯೋಮಯ. ಒಂದು ಕಾಗದದ ಮೇಲೆ ನಾಲ್ಕು ರೇಖೆಯನ್ನು ಎಳೆದುಬಿಟ್ಟಂತೆ ಇದು ಕಾಣಿಸುತ್ತದೆ. ಐದಾರು ರಸ್ತೆ ಸೇರುವಲ್ಲಿ ನಿಂತು ಮ್ಯಾಪ್‌ ನೋಡಿದರೆ ಇಂದಿಗೂ ಜನರು ಕನ್‌ಫ್ಯೂಸ್‌ ಆಗುತ್ತಾರೆ. ನಾವು ನಮ್ಮ ಸ್ಮಾರ್ಟ್‌ಫೋನ್‌ ಹಿಡಿದಿರುವ ರೀತಿ ಸರಿ ಇಲ್ಲದಿದ್ದರೆ ಯಾವ ಕಡೆಗೆ ಹೋಗಬೇಕು ಎಂಬುದನ್ನು ಸರಿಯಾಗಿ ತೋರಿಸಲಾರದು, ಕೆಲವೊಮ್ಮೆ ದಿಕ್ಕನ್ನೂ ತಪ್ಪಿಸಬಹುದು. ಕನಿಷ್ಠ ನೂರು ಮೀಟರ್‌ ತಪ್ಪು ದಾರಿಯಲ್ಲಿ ಹೋಗಿ ನಂತರ ವಾಪಸ್‌ ಬಂದು, ಸರಿಯಾದ ದಾರಿಯನ್ನು ಕಂಡುಕೊಂಡು ಹೋಗಬೇಕಾಗುತ್ತದೆ. ಯಾಕೆಂದರೆ ನಾವು ಈಗ ನೋಡುತ್ತಿರುವ ಮ್ಯಾಪ್‌ಗ್ಳಲ್ಲಿ ವರ್ಚುವಲ್ ಅಂಶದ ಕೊರತೆಯಿದೆ. ನಮಗೆ ನಿಜವಾದ ರಸ್ತೆಯನ್ನು ಅವು ತೋರಿಸುವು ದಿಲ್ಲ. ರಸ್ತೆ ಎಂದು ಗುರುತಿಸಿದ ಭಾಗವನ್ನು ತೋರಿಸುತ್ತವೆ. ಹೀಗಾಗಿ ನಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ರಸ್ತೆಯ ಗುರುತಿನ ಜೊತೆಗೆ ಹೋಲಿಕೆ ಮಾಡಿ ನಮ್ಮ ಎದುರು ಇರುವ ವಾಸ್ತವವನ್ನು ತಾಳೆ ಹಾಕುವಲ್ಲಿ ನಮ್ಮ ತಲೆಯಲ್ಲಿ ಹತ್ತಾರು ಗಣಿತವೇ ನಡೆಯಬೇಕು. ಅದರಲ್ಲಿ ವಿಫ‌ಲವಾದರೆ ನಮ್ಮ ದಿಕ್ಕು ತಪ್ಪುತ್ತದೆ.

ಹೀಗಾಗಿ ಇದನ್ನು ನಿವಾರಿಸುವ ನಿಟ್ಟಿನಲ್ಲಿ ಮ್ಯಾಪ್‌ಗ್ಳ ಅಭಿವೃದ್ಧಿ ನಿರಂತರವಾಗಿ ನಡೆಯುತ್ತಲೇ ಇದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಮಹತ್ವದ ಬೆಳವಣಿಗೆಯಾಗಿದೆ. ಆಗ್ಮೆಂಟೆಡ್‌ ರಿಯಾಲಿಟಿಯನ್ನು ಈ ಮ್ಯಾಪ್‌ಗೆ ಅಳವಡಿಸಲಾಗಿದೆ. ಗೂಗಲ್ ಕಳೆದ ವರ್ಷ ಇಂಥದ್ದೊಂದು ಸೌಲಭ್ಯವನ್ನು ತನ್ನ ಡೆವಲಪರ್‌ ಸಮ್ಮೇಳನದಲ್ಲಿ ಪರಿಚಯಿಸಿತ್ತು. ಈಗ ಇದನ್ನು ಗೂಗಲ್ ಎಲ್ಲ ಆಂಡ್ರಾಯ್ಡ ಮತ್ತು ಐಒಎಸ್‌ ಸ್ಮಾರ್ಟ್‌ಫೋನ್‌ಗಳಿಗೆ ಲಭ್ಯವಾಗಿಸುವುದಾಗಿ ಹೇಳಿದೆ. ಕಳೆದ ಮಾರ್ಚ್‌ನಿಂದಲೇ ಇದು ಪ್ರಾಯೋಗಿಕವಾಗಿ ಗೂಗಲ್ನ ಪಿಕ್ಸೆಲ್ ಫೋನ್‌ಗಳಲ್ಲಿ ಲಭ್ಯವಿತ್ತು.

ಏನಿದು ಆಗ್ಮೆಂಟೆಡ್‌ ರಿಯಾಲಿಟಿ?
ಆಗ್ಮೆಂಟೆಡ್‌ ರಿಯಾಲಿಟಿ ಎಂದರೆ ಕಣ್ಣುಬಿಟ್ಟುಕೊಂಡೇ ಹಗಲು ಕನಸು ಕಂಡಂತೆ! ನಮ್ಮ ಮನೆಯ ಗೋಡೆಯ ಮೇಲೆ ಒಂದು ವರ್ಚುವಲ್ ಟಿವಿಯನ್ನು ಸೃಷ್ಟಿಸಿ, ಅದರಲ್ಲಿ ಸಿನಿಮಾ ನೋಡುವುದು! ಆಗ್ಮೆಂಟೆಡ್‌ ಅಂದರೆ ಏನನ್ನಾದರೂ ಸೇರಿಸುವುದು ಎಂದರ್ಥ. ನಿಸರ್ಗ ಸಹಜವಾದ ಯಾವುದೇ ಸಂಗತಿಗೆ ಡಿಜಿಟಲ್ ರೂಪದಲ್ಲಿ ಏನನ್ನಾದರೂ ಸೇರಿಸುವುದು. ಕೆಲವರು ಇದನ್ನು ವರ್ಚುವಲ್ ರಿಯಾಲಿಟಿ ಎಂದು ಕರೆಯುತ್ತಾರಾದರೂ, ವರ್ಚುವಲ್ ರಿಯಾಲಿಟಿಗೂ ಆಗ್ಮೆಂಟೆಡ್‌ ರಿಯಾಲಿಟಿಗೂ ಭಾರಿ ವ್ಯತ್ಯಾಸವಿದೆ. ವರ್ಚುವಲ್ ರಿಯಾಲಿಟಿ ಎಂದರೆ ಕಣ್ಣು ಮುಚ್ಚಿಕೊಂಡು ಕನಸು ಕಂಡಂತೆ. ಅಂದರೆ, ಸಂಪೂರ್ಣವಾದ ಹೊಸ ಲೋಕವನ್ನೇ ಇದು ಸೃಷ್ಟಿಸುತ್ತದೆ. ಆದರೆ ಆಗ್ಮೆಂಟೆಡ್‌ ರಿಯಾಲಿಟಿ ನಮ್ಮ ಕಣ್ಣೆದುರಿರುವ ವಾಸ್ತವಕ್ಕೆ ಡಿಜಿಟಲ್ ರೂಪದ ಒಂದೆರಡು ಸಂಗತಿಗಳನ್ನು ಸೇರಿಸುತ್ತದೆ. ಎಆರ್‌ ತಂತ್ರಜ್ಞಾನವನ್ನು ಬಳಸಿ ಈಗಾಗಲೇ ಹಲವು ಸಾಧನಗಳು ಬಿಡುಗಡೆಯಾಗಿವೆ. ಎಆರ್‌ ಕನ್ನಡಕಗಳಂತೂ ಭಾರಿ ಜನಪ್ರಿಯ.

ಆಗ್ಮೆಂಟೆಡ್‌ ರಿಯಾಲಿಟಿ ನೇರವಾಗಿ ಜನ ಜೀವನಕ್ಕೆ ಮ್ಯಾಪ್‌ ಮೂಲಕ ಕಾಲಿಡುತ್ತಿದೆಯಾದರೂ, ಇದರ ಬಳಕೆ ವಿವಿಧ ರೀತಿಯಲ್ಲಿದೆ. ಹಾಲೋಗ್ರಾಮ್‌ಗೂ ಈ ಆಗ್ಮೆಂಟೆಡ್‌ ರಿಯಾಲಿಟಿ ತಂತ್ರಜ್ಞಾನವನ್ನೇ ಬಳಸಲಾಗುತ್ತದೆ. ಈ ತಂತ್ರಜ್ಞಾನವನ್ನು ಬಳಸಿ ವ್ಯಕ್ತಿಯೊಬ್ಬನ ಅಥವಾ ವಸ್ತುವೊಂದರ ಡಿಜಿಟಲ್ ಪ್ರತಿರೂಪವನ್ನು ಎಲ್ಲಿ ಬೇಕಾದರೂ ನಿಲ್ಲಿಸಬಹುದು.

ಹೇಗೆ ಕಾಣಿಸುತ್ತದೆ ಹೊಸ ನಕ್ಷೆ?
ಗೂಗಲ್ ತನ್ನ ಹೊಸ ವಿಧಾನದ ಮ್ಯಾಪ್‌ಗೆ ಲೈವ್‌ ವ್ಯೂ ಎಂದು ಹೆಸರು ಕೊಟ್ಟಿದೆ. ಇದೇ ಸೌಲಭ್ಯವನ್ನು ಇನ್ನೊಂದು ತಂತ್ರಜ್ಞಾನ ಕಂಪನಿ ಆ್ಯಪಲ್ ಕೂಡ ಪರಿಚಯಿಸುವುದಾಗಿ ಹೇಳಿದೆ. ಈ ಮ್ಯಾಪ್‌ ಅನ್ನು ನಾವು ಯಾವುದೋ ಒಂದು ಬೀದಿಯಲ್ಲಿ ನಿಂತು ಆನ್‌ ಮಾಡುತ್ತೇವೆ ಎಂದಿಟ್ಟುಕೊಳ್ಳೋಣ. ನಮ್ಮ ಸ್ಮಾರ್ಟ್‌ಫೋನ್‌ ಕ್ಯಾಮೆರಾ ಕೂಡ ಆನ್‌ ಆಗುತ್ತದೆ. ಈ ಕ್ಯಾಮೆರಾದ ಮೂಲಕ ನಮ್ಮ ಎದುರು ಇರುವ ರಸ್ತೆಯ ಚಿಹ್ನೆಗಳು ಹಾಗೂ ಕಟ್ಟಡಗಳನ್ನು ಅಂದಾಜಿಸಿ, ಹೋಗಬೇಕಾದ ರಸ್ತೆಯನ್ನು ಇದು ತೋರಿಸುತ್ತದೆ. ಅಂದರೆ ಮೊದಲು ಒಂದು ಬಿಳಿ ಪಟ್ಟಿಯ ಮೇಲೆ ಬಾಣದ ಗುರುತನ್ನು ತೋರಿಸಿ, ಈ ದಾರಿಯಲ್ಲಿ ಹೋಗು ಎನ್ನುತ್ತಿದ್ದ ಮ್ಯಾಪ್‌ ಈಗ ನಮಗೆ ನಮ್ಮ ಎದುರು ಇರುವ ರಸ್ತೆಯನ್ನ ನಿಜ ವೀಡಿಯೋವನ್ನೇ ತೋರಿಸಿ, ಈ ದಾರಿಯಲ್ಲಿ ಹೋಗು ಎನ್ನುತ್ತದೆ.

ನಮಗೆಲ್ಲರಿಗೂ ಗೊತ್ತಿರುವ ಹಾಗೆ ಗೂಗಲ್ ಕಳೆದ ಹಲವು ವರ್ಷಗಳಿಂದಲೂ ಸ್ಟ್ರೀಟ್ ವ್ಯೂ ಎಂಬ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿತ್ತು. ಈ ಸ್ಟ್ರೀಟ್ ವ್ಯೂ ಮೂಲಕ ಬೀದಿ ಬೀದಿಗಳ ಚಿತ್ರವನ್ನೂ ಸೆರೆಹಿಡಿದು ಅದನ್ನು ಸಂಗ್ರಹಿಸಿತ್ತು. ಸ್ಟ್ರೀಟ್ ವ್ಯೂನಲ್ಲಿ ಜಗತ್ತಿನ ಬಹುತೇಕ ಎಲ್ಲ ದೇಶಗಳ ಪ್ರಮುಖ ನಗರಗಳು ಹಾಗೂ ಸ್ಥಳಗಳನ್ನು ಸೆರೆಹಿಡಿಯಲಾಗಿದೆ. ಈ ತಂತ್ರಜ್ಞಾನವೇ ಈಗ ಗೂಗಲ್ಗೆ ಲೈವ್‌ ವ್ಯೂ ಅನ್ನು ಅಭಿವೃದ್ಧಿಪಡಿಸಲು ನೆರವಾಗಿದೆ. ನಾವು ಮ್ಯಾಪ್‌ನ ಲೈವ್‌ ವ್ಯೂ ತೆರೆದಾಗ ಅದರಲ್ಲಿ ಕ್ಯಾಮೆರಾದ ಮೂಲಕ ಕಾಣುವ ರಸ್ತೆ ಹಾಗೂ ಕಟ್ಟಡಗಳನ್ನು ಅದು ಅಂದಾಜು ಮಾಡುವಾಗ ಈ ಸ್ಟ್ರೀಟ್ ವ್ಯೂ ಡೇಟಾ ನೆರವಾಗುತ್ತದೆ. ಅದನ್ನು ಬಳಸಿ ನಾವು ಯಾವ ದಿಕ್ಕಿನಲ್ಲಿ ಮುಂದೆ ಹೆಜ್ಜೆ ಇಡಬೇಕು ಮತ್ತು ಎಷ್ಟು ದೂರ ಸಾಗಿದ ನಂತರ ಯಾವ ದಿಕ್ಕಿಗೆ ತಿರುಗಬೇಕು ಎಂಬುದನ್ನು ತೋರಿಸುತ್ತದೆ.

ತೊಂದರೆಯೂ ಇದೆ!
ಸದ್ಯ ಈ ಸೌಲಭ್ಯ ಕೇವಲ ನಡೆದುಕೊಂಡು ಹೋಗುವವರಿಗೆ ಮಾತ್ರ ಲಭ್ಯ. ಯಾಕೆಂದರೆ ರಸ್ತೆಯ ಮೇಲೆ ವಾಹನ ಓಡಿಸುವಾಗ ಈ ಲೈವ್‌ ವ್ಯೂ ನೋಡುವುದು ಯಾವ ಕಾರಣಕ್ಕೂ ಸುರಕ್ಷಿತವಲ್ಲ. ಅಷ್ಟೇ ಅಲ್ಲ, ನಡೆದುಕೊಂಡು ಹೋಗುವವರೂ ಸ್ಮಾರ್ಟ್‌ಫೋನಲ್ಲಿ ಕಾಣಿಸುವ ಲೈವ್‌ ವ್ಯೂ ಅನ್ನೇ ನೋಡಿಕೊಂಡು ಹೋಗುವುದರಲ್ಲೂ ಅಪಾಯವಿದೆ. ನಾವು ಲೈವ್‌ ವ್ಯೂ ಆನ್‌ ಮಾಡಿ ಹೋಗಬೇಕಾದ ದಿಕ್ಕನ್ನು ತೋರಿಸಿದ ನಂತರ ನಾವು ನಡೆಯಲು ಶುರು ಮಾಡಿದಾಗ ಲೈವ್‌ ವ್ಯೂ ತನ್ನಿಂತಾನೇ ಸಾಮಾನ್ಯ ವ್ಯೂಗೆ ಮರಳುತ್ತದೆ. ರಸ್ತೆಯಲ್ಲಿ ತಿರುಗುವಾಗ ಮಾತ್ರವೇ ಇದನ್ನು ಪುನಃ ಸಕ್ರಿಯಗೊಳಿಸುವ ವ್ಯವಸ್ಥೆಯಿದೆ.

ಯಾಕೆಂದರೆ ರಸ್ತೆಯ ಫ‌ೂಟ್ಪಾತ್‌ ಮೇಲೆ ನೀವು ನಡೆದುಕೊಂಡು ಹೋಗುತ್ತಿದ್ದೀರಿ. ಫ‌ೂಟ್ಪಾತ್‌ನ ಒಂದು ಕಲ್ಲು ಕಿತ್ತು ಹೋಗಿದೆ. ನಿಮ್ಮ ಕಣ್ಣು ಸ್ಮಾರ್ಟ್‌ಫೋನ್‌ನ ಮೇಲಿದೆ. ಆಗ ನಿಮ್ಮ ಕಾಲು ಸೀದಾ ಚರಂಡಿಗೇ ಹೋಗುತ್ತದೆ. ಲೈವ್‌ ವ್ಯೂ ಬಂದ್‌ ಆಗುತ್ತದೆ! ಇಂತಹ ಸನ್ನಿವೇಶವನ್ನು ತಪ್ಪಿಸುವುದಕ್ಕೆಂದೇ ಇಂಥ ಸೌಲಭ್ಯವನ್ನು ಎಚ್ಚರಿಕೆಯಿಂದ ಅಭಿವೃದ್ಧಿಪಡಿಸಬೇಕಿದೆ.

ಲೈವ್‌ ವ್ಯೂ ಎಂಬುದರ ಅನುಕೂಲದ ಜೊತೆಗೆ ಅನಾನುಕೂಲವೂ ಇದೆ. ಹೀಗಾಗಿ ಈ ಸೌಲಭ್ಯವನ್ನು ನಾವು ಸ್ವಲ್ಪ ಎಚ್ಚರಿಕೆಯಿಂದ ಬಳಸಬೇಕು. ಸದ್ಯದ ಮ್ಯಾಪ್‌ ನಮಗೆ ಸಾಮಾನ್ಯ ದಾರಿ ತೋರಿಸಲು ಸಾಕು. ಸಾಮಾನ್ಯವಾಗಿ ನಮಗೆ ನೇರ ದಾರಿಗಳನ್ನು ಹುಡುಕುವಲ್ಲಿ ಅಥವಾ ಕ್ರಮಿಸುವಲ್ಲಿ ಸಮಸ್ಯೆ ಇರುವುದಿಲ್ಲ. ಆದರೆ ಯಾವಾಗ ಎರಡು ರಸ್ತೆಗಳು ಸೇರುತ್ತವೆಯೋ ಅಲ್ಲಿ ತಿರುಗುವಾಗ ಗೊಂದಲವಾಗುತ್ತವೆ. ಅಂತಹ ಸಂದರ್ಭದಲ್ಲಿ ಮಾತ್ರ ಇವುಗಳನ್ನು ಬಳಸಿದರೆ ಹೆಚ್ಚು ಉಪಯುಕ್ತವೂ, ಅನುಕೂಲವೂ ಆದೀತು. ಇದೊಂದು ಅತ್ಯುತ್ತಮ ಸೌಲಭ್ಯ ಹೌದಾದರೂ ಎಚ್ಚರ ತಪ್ಪಿ ಬಳಸಿದರೆ ಇದೊಂದು ಆಘಾತಕಾರಿಯೂ ಆಗುವುದರಲ್ಲಿ ಸಂದೇಹವಿಲ್ಲ.

-ಕೃಷ್ಣ ಭಟ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ