ಕರ್ನಾಟಕ ನನ್ನ ಜೀವ, ಭಾರತ ನನ್ನ ಭಾವ


Team Udayavani, Sep 13, 2021, 7:00 AM IST

ಕರ್ನಾಟಕ ನನ್ನ ಜೀವ, ಭಾರತ ನನ್ನ ಭಾವ

ಉತ್ತರಪ್ರದೇಶದ ಗೌತಮಬುದ್ಧ ನಗರದ ಜಿಲ್ಲಾಧಿಕಾರಿ ಎಲ್‌.ವೈ.ಸುಹಾಸ್‌. ಇವರನ್ನು ಪರಿಚಯ ಮಾಡಿಕೊಡಬೇಕಾದ ಅಗತ್ಯವೇ ಇಲ್ಲ. ಉತ್ತರ ಭಾರತಕ್ಕೆ ತೆರಳಿ ಹೆಚ್ಚು ಕಡಿಮೆ 20 ವರ್ಷಗಳು  ಕಳೆದಿದ್ದರೂ ಅಪ್ಪಟ ಕನ್ನಡಿಗ, ತಾಯಿ ಭಾರತಿಯ ಪಾದಗಳಲ್ಲಿ ತನ್ನನ್ನು ಹೂವಂತೆ ಅರ್ಪಿಸಿಕೊಂಡಿರುವ ಸರಳ, ವಿನಮ್ರಮೂರ್ತಿ. ವಿಶ್ವಕವಿ ಕುವೆಂಪು, ವರನಟ ರಾಜ್‌ಕುಮಾರ್‌ ಅವರ ಪರಮ ಅಭಿಮಾನಿ. ಉತ್ತರಪ್ರದೇಶದಲ್ಲಿರುವ ತಮ್ಮ ಮಕ್ಕಳಿಗೂ ಕನ್ನಡ ಕಲಿಸಿರುವ ಅತ್ಯುತ್ತಮ ಶಿಕ್ಷಕ, ಅದೇ ವೇಳೆ ಅನ್ಯಭಾಷೆಗಳನ್ನು, ಅನ್ಯ ಊರುಗಳನ್ನು ಗೌರವಿಸುವ ಸಹೃದಯಿ. ಇತ್ತೀಚೆಗೆ ಟೋಕಿಯೊದಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿರುವ ಸುಹಾಸ್‌ಗೆ ಉದಯವಾಣಿ ಕಡೆಯಿಂದ ಭಿನ್ನ ಪ್ರಶ್ನೆಗಳನ್ನು ಕೇಳಲಾಯಿತು, ಅದಕ್ಕವರು ವಿಭಿನ್ನ, ವಿಶಿಷ್ಟ ರೀತಿಯಲ್ಲೇ ಉತ್ತರಿಸಿದ್ದಾರೆ..

ಜನ್ಮ ನೀಡಿದ ತಾಯಿಯೆಂದರೆ…

ಅಮ್ಮ ಎಂದರೆ ಬೆಂಬಲ, ಆಕೆ ನನ್ನೆಲ್ಲ ಸವಾಲುಗಳ ಸಂದರ್ಭದಲ್ಲಿ ಬಲವಾದ ನಿರ್ಧಾರ ತೆಗೆದುಕೊಳ್ಳಲು ನೆರವು ನೀಡಿದ ಶಕ್ತಿ. ಆಕೆಯೆಂದೂ ನಾನಾಡಿದ ಪಂದ್ಯಗಳನ್ನು ನೋಡಿಲ್ಲ. ಮಗನೆಂಬ ಅಕ್ಕರೆ, ಏನಾಗುತ್ತೋ ಎಂಬ ಕಳವಳದಿಂದ ಆಕೆ ಪಂದ್ಯಗಳನ್ನು ನೋಡುವುದಿಲ್ಲ. ಆದರೆ ಪಂದ್ಯಗಳ ಬಗ್ಗೆ ಯಾವಾಗ ಗೊಂದಲ ಬಂದರೂ ಅವಳಲ್ಲಿ ನಾನು ಚರ್ಚಿಸುತ್ತೇನೆ. ತಂದೆ ತೀರಿಕೊಂಡಾಗ ನಾನೊಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೆ. ಅದನ್ನು ಬಿಟ್ಟು ಐಎಎಸ್‌ ಸೇರುವ ನಿರ್ಧಾರ ಮಾಡಿದೆ. ನನ್ನನ್ನು ಬಿಟ್ಟರೆ ಬೇರಾರೂ ಮನೆಯಲ್ಲಿ ಕೆಲಸ ಮಾಡುವವರು ಇಲ್ಲದಿದ್ದ ಸಂದರ್ಭ ಅದು. ಆದರೂ ಆಕೆ ಕಿಂಚಿತ್ತೂ ಯೋಚಿಸದೇ ನಿನಗೆ ಇಷ್ಟ ಬಂದಿದ್ದನ್ನು ಮಾಡು ಎಂದು ಬೆಂಬಲಕ್ಕೆ ನಿಂತರು.

ಪಾಲಿಸಿ, ಪೋಷಿಸಿ, ಬದುಕನ್ನು ನೀಡಿದ ತಂದೆಯ ಕುರಿತು….

2005ರಲ್ಲಿ ತಂದೆ ತೀರಿಕೊಂಡರು. ನಾನು ಜೀವನದಲ್ಲಿ ಏನೇನು ಮಹತ್ವದ್ದಾಗಿದ್ದನ್ನು ಸಾಧಿಸಿದೆನೋ, ಅವನ್ನೆಲ್ಲ ನೋಡುವ ಮುಂಚೆಯೇ ಅವರು ಹೊರಟು ಹೋದರು. ನನ್ನ ವ್ಯಕ್ತಿತ್ವವನ್ನು ರೂಪಿಸಿದ್ದೇ ಅವರು, ನನ್ನಲ್ಲಿ ಅದ್ಭುತ ಆತ್ಮವಿಶ್ವಾಸವನ್ನು ತುಂಬಿದರು. ಒಂದು ವಯಸ್ಸಾದ ಮೇಲೆ ಮಕ್ಕಳನ್ನು ಗೆಳೆಯರಂತೆ ನೋಡಬೇಕೆನ್ನುತ್ತಿದ್ದರು. ಅವರು ಹಾಗೆಯೇ ನಡೆದುಕೊಂಡರು. ನನ್ನ ಪದಕವನ್ನು ಅವರಿಗೇ ಅರ್ಪಿಸಿದ್ದೇನೆ. ಅಂಥ‌ ಒಬ್ಬ ತಂದೆ ಸಿಕ್ಕಿದ್ದಾರೆಂದರೆ ಅದು ನನ್ನ ಅದೃಷ್ಟ. ಅವರನ್ನು ಬಲ್ಲವರೆಲ್ಲರೂ ಅಪರೂಪದಲ್ಲಿ ಅಪರೂಪ ಇಂತಹ ವ್ಯಕ್ತಿತ್ವ ಎಂದು ಗೌರವಿಸುತ್ತಾರೆ.

ಕರ್ನಾಟಕ, ಅವಳ ತಾಯಿ ಭಾರತಾಂಬೆಯ ನಡುವಿನ ಬಂಧ…

ಈ ಪ್ರಶ್ನೆ ಬಹಳ ಚೆನ್ನಾಗಿದೆ. ನಾನು ಕಾಲೇಜು ದಿನಗಳಲ್ಲಿ ಕನ್ನಡದಲ್ಲಿ ನೂರಕ್ಕೂ ಹೆಚ್ಚು ಕವಿತೆ ಬರೆದಿದ್ದೇನೆ. ಆಗ ಕನ್ನಡ ವೇದಿಕೆಯ ಸಂಯೋಜಕನಾಗಿದ್ದೆ. ನನ್ನ ಅಪ್ಪನ ಅಕ್ಕ ಅಂದರೆ ನನ್ನತ್ತೆಯೇ ಕನ್ನಡ ಶಿಕ್ಷಕಿ. ಅವರ ಕಾರಣಕ್ಕೆ ನಾನು ಕನ್ನಡವನ್ನು ಬಹಳ ಚೆನ್ನಾಗಿ ಕಲಿತೆ. ಅವರು ಇಡೀ ಜಿಲ್ಲೆಯಲ್ಲೇ ಉತ್ತಮ ಕನ್ನಡ ಶಿಕ್ಷಕಿ ಎಂಬ ಗೌರವ ಗಳಿಸಿದ್ದರು. ಅದರ ಪರಿಣಾಮ ಕನ್ನಡವೆಂದರೆ ನನಗೆ ಸರಾಗ, ಸಲೀಸು, ಅಷ್ಟೇ ಅಕ್ಕರೆಯಿದೆ. ನನ್ನ ಮಕ್ಕಳು ಕರ್ನಾಟಕದ ಮಕ್ಕಳಷ್ಟೇ ಚೆನ್ನಾಗಿ  ಕನ್ನಡ ಮಾತಾಡುತ್ತಾರೆ, ನನ್ನ ಪತ್ನಿಯೂ ಕನ್ನಡ ಕಲಿತಿದ್ದಾಳೆ! ನಾನು ಭಾರತೀಯ ಆಡಳಿತ ಸೇವೆಯಲ್ಲಿ ಕೆಲಸ ಮಾಡುತ್ತಿದ್ದೇನೆ, ಹಾಗೆಯೇ ಭಾರತದ ಪರವಾಗಿ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಕರ್ನಾಟಕ-ಭಾರತವೆಂದರೆ ಅಂಥದ್ದೊಂದು ಅವಿನಾಭಾವ ಸಂಬಂಧವಿದೆ. ಕರ್ನಾಟಕ ಮಾತೆ, ನನ್ನನ್ನು ಭಾರತ ಮಾತೆಯ ಸೇವೆಗೆ ಕಳುಹಿಸಿಕೊಟ್ಟಿದ್ದಾಳೆ.

ಅನ್ನಭೂಮಿ, ಕರ್ಮಭೂಮಿ ಉತ್ತರಪ್ರದೇಶದಲ್ಲಿನ ಅನುಭವ?

ಉತ್ತರಪ್ರದೇಶ ನನಗೆ ಅನ್ನ ನೀಡಿದ ಭೂಮಿ, ಕರ್ಮಭೂಮಿ. ನಾನು ಪದಕ ಗೆದ್ದಾಗ ಕರ್ನಾಟಕದಲ್ಲಿ ಎಷ್ಟು ಸಂಭ್ರಮಪಟ್ಟರೋ, ಅಷ್ಟೇ ಸಂಭ್ರಮವನ್ನು ಇಲ್ಲೂ ಕಂಡೆ. ಇಂತಹ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಇಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಕೆಲಸ ಮಾಡುವ ಅಪೂರ್ವ ಅವಕಾಶ ಸಿಕ್ಕಿದೆ. ಅದೇನೆ ಇದ್ದರೂ ನನ್ನೂರು ನನ್ನೂರೇ. ನನಗೆ ಯಾವಾಗಲೇ ನೆಮ್ಮದಿ ಬೇಕೆನಿಸಿದರೂ ರಜೆ ಹಾಕಿಕೊಂಡು ಶಿವಮೊಗ್ಗಕ್ಕೆ ಬರುತ್ತೇನೆ. ಅಲ್ಲಿರುವ ಬೈಕ್‌ನಲ್ಲಿ ಸುತ್ತುತ್ತೇನೆ, ರಸ್ತೆಬದಿಯಲ್ಲಿ ಪಾನಿಪುರಿ ತಿನ್ನುತ್ತೇನೆ. ಕಾಲೇಜು ದಿನಗಳಲ್ಲಿ ಹೇಗಿದ್ದೆನೋ ಅಷ್ಟೇ ಸರಳವಾಗಿರುತ್ತೇನೆ.

ಹೊಸಬದುಕು ನೀಡಿದ ಟೋಕಿಯೊ ಬಗ್ಗೆ…

ಜಪಾನಿನ ಟೋಕಿಯೊಗೆ ನಾನು ಮೂರು ಬಾರಿ ಹೋಗಿದ್ದೇನೆ. ಇದಕ್ಕೂ ಮುನ್ನ ಹೋಗಿದ್ದಾಗ ಒಂದು ಬೆಳ್ಳಿ, ಒಂದು ಕಂಚು ಗೆದ್ದಿದ್ದೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿಯೇ ಸಿಕ್ಕಿದೆ. ಟೋಕಿಯೊ ನನ್ನ ಪಾಲಿಗೆ ಅದೃಷ್ಟದ ನೆಲ, ಪದಕವಿಲ್ಲದೇ ನನ್ನನ್ನು ಎಂದಿಗೂ ಅದು ಹಿಂದಕ್ಕೆ ಕಳುಹಿಸಿಲ್ಲ. ಅದೊಂದು ಸುಂದರ ನಗರ, ಅಲ್ಲಿ ಬಹಳ ಸುತ್ತಿದ್ದೇನೆ.

ಉ.ಪ್ರ.ದಲ್ಲಿ ಮಾತನಾಡುವ ಹಿಂದಿಯೊಂದಿಗಿನ ಅನುಭವ…

ನನಗೆ ಹಿಂದಿ ಬರುತ್ತಿರಲಿಲ್ಲ. ಉತ್ತರಪ್ರದೇಶಕ್ಕೆ ಹೋದಾಗ ಕಲಿತುಕೊಂಡೆ. ಅದಕ್ಕೂ ಮುನ್ನ ಸಾರ್ವಜನಿಕವಾಗಿ ಮಾತನಾಡುವಾಗ ಸ್ವಲ್ಪ ಮುಜುಗರವಾಗುತ್ತಿತ್ತು. ಆದರೆ ನಾವೆಲ್ಲಿ ಇರುತ್ತೇವೋ ಅಲ್ಲಿನ ಭಾಷೆ ಕಲಿಯಲೇಬೇಕು. ವಿಶೇಷವಾಗಿ ಉತ್ತರಪ್ರದೇಶದ ಹಳ್ಳಿ ಜನಗಳಿಗೆ ಹಿಂದಿ ಭಾಷೆ ಮಾತ್ರ ಅರ್ಥವಾಗುವುದು. ಮಹತ್ವದ ಸಂಗತಿಯೆಂದರೆ ಹಿಂದಿ, ಕನ್ನಡ ಎರಡೂ ಭಾಷೆಗಳ ಮೂಲ ಸಂಸ್ಕೃತ. ಸಂಸ್ಕೃತದ ಹಲವು ಪದಗಳು ಎರಡೂ ಭಾಷೆಗಳಲ್ಲಿವೆ. ತತ್ಸಮ, ತದ್ಭವ ಎನ್ನುವುದೆಲ್ಲ ಈ ಕಾರಣಕ್ಕೆ ಬಂದಿದ್ದು. ಆದ್ದರಿಂದ ಒಬ್ಬರಿಗೆ ಕನ್ನಡ ಬರುತ್ತದೆ ಅಂದರೆ ಹಿಂದಿ ಕಲಿಯುವುದು ಬಹಳ ಸರಳ, ಹಿಂದಿ ಭಾಷಿಕರಿಗೆ ಕನ್ನಡವೂ ಅಷ್ಟೇ ಸರಳ. ಈ ಬಗ್ಗೆ ಬಹುತೇಕರಿಗೆ ಗೊತ್ತೇ ಇಲ್ಲ.

ಬದುಕು ಕಟ್ಟಿಕೊಳ್ಳಲು ಇಂಗ್ಲಿಷ್‌ ಬೇಕು, ಭಾಷೆಯ ಬಗ್ಗೆ?

ಇಂಗ್ಲಿಷ್‌ ಅನ್ನು ವಾಸ್ತವಿಕ ದೃಷ್ಟಿಯಿಂದ ನೋಡಬೇಕು. ಮುಂಚೆ ಎಲ್ಲ ಇಂಗ್ಲಿಷ್‌ ಕಲಿತವರು ಬುದ್ಧಿವಂತರು ಎಂಬ ತಪ್ಪು ಭಾವನೆಯಿತ್ತು. ಈಗ ಹಾಗಲ್ಲ, ಸಂವಹನಕ್ಕೆ ಇಂಗ್ಲಿಷ್‌ ಅನಿವಾರ್ಯ, ಅದೊಂದು ಭಾಷೆ ಮಾತ್ರ. ಈಗ ನಾವು ಜಪಾನ್‌ಗೆ ಹೋದಾಗ ಸಂವಹನಕ್ಕೆ ಬಳಸಿದ್ದೆಲ್ಲ ಇಂಗ್ಲಿಷ್‌ ಭಾಷೆಯನ್ನೇ. ಆದ್ದರಿಂದ ನಾನು ಹೇಳುವುದೇನೆಂದರೆ ನಿಮ್ಮ ಮಾತೃಭಾಷೆಯನ್ನು ಪ್ರೀತಿಸಿ, ಬಳಸಿ. ಆದರೆ ಎಷ್ಟು ಸಾಧ್ಯವಾಗುತ್ತದೋ, ಅಷ್ಟು ಬೇರೆ ಭಾಷೆಗಳನ್ನು ಕಲಿಯಿರಿ. ಅದರಿಂದ ಸಂವಹನ ಸಲೀಸಾಗುತ್ತದೆ.

ಕನ್ನಡ, ಹಿಂದಿ, ಇಂಗ್ಲಿಷ್‌ಗಳ ನಡುವಿನ ಭಾಷಾ ಜಗಳಗಳ ಬಗ್ಗೆ?

ಕೀಳರಿಮೆ ಯಾರಿಗಿರುತ್ತದೋ ಅವರು ಭಾಷೆಗಳ ಹೆಸರಿನಲ್ಲಿ ಮೇಲು ಕೀಳು ಎಂದು ಜಗಳವಾಡುತ್ತಾರೆ. ಇಲ್ಲಿ ಎಲ್ಲ ಭಾಷೆಗಳೂ ಶ್ರೇಷ್ಠವೇ. ಒಂದು ಪ್ರಬುದ್ಧ ಸಮಾಜ ಹೇಗಿರುತ್ತದೆ ಅಂದರೆ ಅಲ್ಲಿ ಇನ್ನೊಬ್ಬರ ಭಾಷೆ, ವಿಚಾರಗಳ ಬಗ್ಗೆಯೂ ಬಹಳ ಗೌರವವಿರುತ್ತದೆ. ನಾನು ಕನ್ನಡವನ್ನು ಪ್ರೀತಿಸುತ್ತೇನೆ, ಅದು ನನ್ನ ಹಕ್ಕು. ಹಾಗೆಯೇ ಇತರರಿಗೂ ಅವರದ್ದೇ ಆದ ಭಾವನೆಗಳಿರುತ್ತವೆ. ನಮಗಿರುವ ಅಲ್ಪ ಸಮಯವನ್ನು ನಕಾರಾತ್ಮಕ ಯೋಚನೆಗಳಲ್ಲಿ ಕಳೆಯುವುದಕ್ಕಿಂತ ಅದನ್ನು ಏನಾದರೂ ಸಾಧನೆಗೆ ಬಳಸುವುದು ಒಳಿತು. ನಾನು ಕನ್ನಡ ಮಾತನಾಡುತ್ತೇನೆಂದರೆ ಇತರೆ ಭಾಷೆಯ ಬಗ್ಗೆ ತಿರಸ್ಕಾರವಿದೆ ಎಂದಾಗಲೀ, ಇಂಗ್ಲಿಷ್‌, ಹಿಂದಿ ಬಳಸಿದೆ ಅಂದರೆ ಇನ್ನೊಂದು ಭಾಷೆಯ ಬಗ್ಗೆ ತಿರಸ್ಕಾರವಿದೆ ಎಂದಾಗಲೀ ಅಲ್ಲ. ಈ ರೀತಿಯ ಜಗಳಗಳು ಕೃತಕವಾಗಿ ಸೃಷ್ಟಿಯಾಗಿದ್ದು. ಈಗಲೂ ನಾನು ಕವನ ಬರೆಯಲು ಹೊರಟರೆ ಕನ್ನಡವನ್ನೇ ಬಳಸುತ್ತೇನೆ. ಕಾರಣ ಅದು ನನ್ನೊಳಗೆ ಅಷ್ಟು ಸಹಜವಾಗಿ ತುಂಬಿಕೊಂಡಿದೆ.

ಗುರು, ಶಿಷ್ಯನ ಬಾಂಧವ್ಯ…

ಜೀವನದ ಬೇರೆ ಬೇರೆ ಹಂತಗಳಲ್ಲಿ ನಮ್ಮನ್ನು ಕೈಹಿಡಿದು ಮುನ್ನಡೆಸುವವರು ಗುರುಗಳು. ಅವರ ಪಾತ್ರ ದೊಡ್ಡದು. ಶಿಕ್ಷಣವಾಗಲೀ, ಆಟವಾಡುವಾಗಲೀ ಅವರ ಕೊಡುಗೆ ಅಮೂಲ್ಯ. ಪ್ಯಾರಾಲಿಂಪಿಕ್ಸ್‌ಗೆ ಹೋಗುವ ಮುನ್ನ ಇಂಡೋನೇಷ್ಯಾದ ಕೋಚ್‌ ಒಬ್ಬರು ನನಗೆ ದಿನಕ್ಕೆ ಮೂರು ಗಂಟೆ ತರಬೇತಿ ನೀಡಿದ್ದಾರೆ. ಈಗಲೂ ನಾನು ಬಾಲ್ಯದಿಂದ ಇಲ್ಲಿಯವರೆಗೆ ಬೇರೆ ಬೇರೆ ವಿಷಯಗಳನ್ನು ಕಲಿಸಿದ ಗುರುಗಳನ್ನು ನೆನಪಿಸಿಕೊಳ್ಳುತ್ತೇನೆ, ಅವರೂ ನನ್ನನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಅದೊಂದು ಭಾವುಕ ಸಂಬಂಧ. ನನ್ನ ಪಾಲಿಗೆ ನನ್ನ ತಾಯಿ, ತಂದೆಯೇ ಮೊದಲ ಗುರುಗಳು.

ನಿಮ್ಮ ಬದುಕಲ್ಲಿ ಸರಸ್ವತಿಯು ಇದ್ದಾಳೆ, ಲಕ್ಷ್ಮೀಯು ಇದ್ದಾಳೆ. ಸಾಧನೆಗೆ ಇಬ್ಬರೂ ಬೇಕು. ಈ ಸಾಧನೆಯೆಂದರೆ ಏನು? ಸಾಧನೆ ಯಾಕೆ?

ಇದು ಬಹಳ ಒಳ್ಳೆಯ ಪ್ರಶ್ನೆ. ಕೆಲವರು ಬರೀ ಸರಸ್ವತಿಯನ್ನೇ ಆರಾಧಿಸುತ್ತಾರೆ, ಕೆಲವರು ಲಕ್ಷ್ಮೀಯನ್ನು, ಕೆಲವರು ಶಕ್ತಿಯನ್ನು ಮಾತ್ರ ಆರಾಧಿಸುತ್ತಾರೆ. ಬದುಕನ್ನು ಎದುರಿಸಲು ಈ ಮೂರೂ ಬೇಕು. ಈ ಮೂರೂ ಒಂದು ಶಕ್ತಿಯ, ಭಾವನೆಯ ಸಂಕೇತಗಳಷ್ಟೇ. ಸರಸ್ವತಿ ಎಂದರೆ ವಿದ್ಯೆ, ಲಕ್ಷ್ಮೀ ಎಂದರೆ ಸಮೃದ್ಧಿ, ಗಣಪತಿ ಅಂದರೆ ವಿಘ್ನನಾಶಕ, ಆಂಜನೇಯ ಎಂದರೆ ಶಕ್ತಿ… ಹೀಗೆ ಈ ಎಲ್ಲವೂ ನಮ್ಮೊಳಗೆ ಇರಬೇಕು. ಸಾಧನೆ ಅಂದರೆ ತಪಸ್ಸು. ಯಾವುದೇ ಕೆಲಸವನ್ನು ಎಷ್ಟು ನಾವು ಮನಸ್ಸಿಟ್ಟು ಮಾಡುತ್ತೇವೋ, ಅಷ್ಟು ಪರಿಣಾಮ ನಮಗೆ ಸಿಗುತ್ತದೆ.

ನಿಮಗೆ ಅತ್ಯಂತ ಇಷ್ಟವಾದ ಪುಸ್ತಕ?

ಪಾವ್ಲೊ ಕೊಯಿಲೊ ಬರೆದ ಆಲ್‌ಕೆಮಿಸ್ಟ್‌ ಪುಸ್ತಕವನ್ನು ನಾನು ಓದಿದ್ದೆ. ಅದು ನನಗೆ ಬಹಳ ಇಷ್ಟ. ಇನ್ನು ಕಾಲೇಜು ದಿನಗಳಲ್ಲಿ ಕುವೆಂಪು ಅವರು ಬರೆದ ಬಹಳ ಪುಸ್ತಕಗಳನ್ನು ಓದಿದ್ದೇನೆ, ಅವೆಲ್ಲವೂ ಬಹಳ ಖುಷಿ ನೀಡಿವೆ. ನಿಸಾರ್‌ ಅಹ್ಮದ್‌ ಅವರ ನಿತ್ಯೋತ್ಸವ ಪದ್ಯ ಜೋಗದ ಸಿರಿ ಬೆಳಕಿನಲ್ಲಿ, ಕರುನಾಡ ತಾಯಿ ಸದಾ ಚಿನ್ಮಯೀ… ಈ ರೀತಿಯ ಹಾಡುಗಳೆಲ್ಲ ಬಹಳ ಇಷ್ಟ. ಅದರಲ್ಲೂ ಹಿಂದೂಸ್ಥಾನವೂ ಎಂದೂ ಮರೆಯದ ಭಾರತರತ್ನವೂ ನೀನಾಗು ಎಂಬ ಹಾಡನ್ನು ನೂರಾರು ಬಾರಿ ಕೇಳಿದ್ದೇನೆ. ಈಗಲೂ ಅದನ್ನು ಕೇಳಿದರೆ ರೋಮಾಂಚನವಾಗುತ್ತದೆ.

ಮೊದಲಕ್ಷರವ ಕಲಿತ ಕನ್ನಡ ಭಾಷೆ  ನಿಮ್ಮ ಪಾಲಿಗೆ…

ನಾನು ಏಳನೆಯ ತರಗತಿ ಯವರೆಗೆ  ಓದಿದ್ದು ಕನ್ನಡ ಮಾಧ್ಯಮದಲ್ಲೇ. ಅದಾದ ಅನಂತರ ಇಂಗ್ಲಿಷ್‌ ಕಲಿಯಲು ಶುರು ಮಾಡಿದೆ. ಅಲ್ಲಿಯವರೆಗೆ ನನಗೆ ಆಂಗ್ಲ ಭಾಷೆಯ ಪರಿಚಯವೇ ಇರಲಿಲ್ಲ. ಈಗಲೂ ನಾನು ಕನ್ನಡದ ಹಾಡುಗಳನ್ನು ಹೇಳಿಕೊಳ್ಳುತ್ತೇನೆ, ಬರೆಯುತ್ತೇನೆ. ಏನೇ ಯೋಚನೆಗಳು ಬಂದರೂ ಅವು ಕನ್ನಡದಲ್ಲೇ ಇರುತ್ತವೆ. ಹೃದಯಕ್ಕೆ ಅಷ್ಟು ಹತ್ತಿರ ಕನ್ನಡ. ಶಿವಮೊಗ್ಗದಲ್ಲಿ ಕನ್ನಡದ ಸುಗಂಧ ಅಷ್ಟಿದೆ. ಹಾಗೆ ನೋಡಿದರೆ ಬೆಂಗಳೂರಿನಲ್ಲೇ ಕನ್ನಡದ ಬಳಕೆ ಕಡಿಮೆ. ಕರ್ನಾಟಕದ ಒಂದೊಂದು ಕಡೆ, ಕನ್ನಡದ ಸುಗಂಧ ಒಂದೊಂದು ರೀತಿಯಿದೆ.

ಜನ್ಮಭೂಮಿ ಹಾಸನ,  ಬೇರುಬಿಟ್ಟ ಶಿವಮೊಗ್ಗ ಕುರಿತು?

ನನ್ನ ತಂದೆಯ ಪೂರ್ವಜರ ಊರು ಲಾಳನಕೆರೆ. ಆ ಊರಿನೊಂದಿಗೆ ನನಗೆ ಬಹಳ ಒಡನಾಟವಿಲ್ಲ. ಹುಟ್ಟಿದ್ದು ತಾಯಿಯ ಊರು ಹಾಸನದಲ್ಲಿ, ಬೆಳೆದಿದ್ದು, ಬೇರುಬಿಟ್ಟಿದ್ದು ಶಿವಮೊಗ್ಗದಲ್ಲಿ. ರಜಾದಿನಗಳಲ್ಲಿ ಹಾಸನಕ್ಕೆ ಹೋಗುತ್ತಿದ್ದೆ. ಶಿವಮೊಗ್ಗವೆಂದರೆ ನನಗೆ ಬಹಳ ಪ್ರೀತಿ, ಅಲ್ಲಿ ಕನ್ನಡದ ಸುಗಂಧವಿದೆ. ವಿಶ್ವಕವಿ ಕುವೆಂಪು ಅವರ ಕಂಪು ಅಲ್ಲಿ ಹರಡಿಕೊಂಡಿದೆ. ಮಂಡ್ಯ ಜಿಲ್ಲೆಯಲ್ಲಿರುವ ದುದ್ದ ಎಂಬ ಹಳ್ಳಿಯಲ್ಲಿ, ತಿಪಟೂರಿನಲ್ಲಿ, ಸುರತ್ಕಲ್‌ನಲ್ಲೂ ಓದಿದ್ದೇನೆ. ಹಾಗೆ ನೋಡಿದರೆ ಇಡೀ ಕರ್ನಾಟಕವೇ ನನ್ನೂರು.

ನಿಮ್ಮ ವಾಟ್ಸ್‌ಆ್ಯಪ್‌ ಡಿಪಿಯಲ್ಲಿ ಪಂಚಮುಖೀ ಆಂಜನೇಯನ ಚಿತ್ರವಿದೆ. ಆಂಜನೇಯ ನಿಮ್ಮ ಜೀವನದಲ್ಲಿ ಮಾಡಿದ ಪರಿಣಾಮ… :

ಆಂಜನೇಯ ಶಕ್ತಿಯ ಪ್ರತೀಕ. ಹಾಗೆಯೇ ಚಿಕ್ಕ ವಯಸ್ಸಿನಿಂದಲೂ ಗಣಪತಿ ಯೆಂದರೆ ಪ್ರೀತಿ. ಒಬ್ಟಾತ ದೇವರನ್ನು ನಂಬಬಹುದು, ನಂಬದೇ ಇರ ಬಹುದು. ಒಂದು ಶಕ್ತಿಯಂತೂ ಇದ್ದೇ ಇದೆ. ಅದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಅಂಥದ್ದೊಂದು ಶಕ್ತಿಯ ಪ್ರತೀಕವಾಗಿ ಆಂಜನೇಯನನ್ನು ನೋಡುತ್ತೇನೆ. ಉತ್ತರಪ್ರದೇಶದಲ್ಲಿ ಕೊರೊನಾ ಬಂದಾಗ ಪರಿಸ್ಥಿತಿ ಬಹಳ ಸೂಕ್ಷ್ಮವಾಗಿತ್ತು. ಒಬ್ಬ ಜಿಲ್ಲಾಧಿಕಾರಿಯಾಗಿ ನಾನು ಹೇಗೆ ಪರಿಸ್ಥಿತಿಯನ್ನು ನಿಭಾಯಿಸುತ್ತೇನೆ ಎಂದು ಎಲ್ಲರೂ ಗಮನಿಸುತ್ತಿದ್ದರು. ಅಂತಹ ಹೊತ್ತಿನಲ್ಲಿ ಪಂಚಮುಖೀ ಆಂಜನೇಯನನ್ನು ನನ್ನ ಡಿಪಿಯಲ್ಲಿ ಹಾಕಿಕೊಂಡೆ. ಶಕ್ತಿಯೊಂದು ಇದ್ದರೆ ಪ್ಯಾರಾಲಿಂಪಿಕ್ಸ್‌ನಲ್ಲೂ ಪದಕ ಗೆಲ್ಲಬಹುದು, ಬೇರೆ ಬೇರೆ ಸವಾಲುಗಳನ್ನೂ ನಿಭಾಯಿಸಬಹುದು.

ಅತ್ಯಂತ  ಪ್ರೀತಿಸುವ ಸಿನೆಮಾ? :

ಡಾ|ರಾಜ್‌ಕುಮಾರ್‌ ನಟನೆಯ ಬಭ್ರುವಾಹನ, ಮಯೂರ ಸಿನೆಮಾಗಳನ್ನು ಬಹಳ ಬಾರಿ ನೋಡಿದ್ದೇನೆ. ಇವೆರಡರಲ್ಲಿ ಯಾವುದಕ್ಕೆ ಮೊದಲ ಸ್ಥಾನ ನೀಡುವುದು ಗೊತ್ತಾಗುವುದಿಲ್ಲ. ಅವುಗಳಲ್ಲಿ ರಾಜ್‌ಕುಮಾರ್‌ ಸಂಭಾಷಣೆಯನ್ನು ಒಪ್ಪಿಸುವ ರೀತಿ, ಅಭಿನಯವನ್ನು ಮರೆಯಲು ಸಾಧ್ಯವೇ ಇಲ್ಲ. ಇಂತಹ ಸಿನೆಮಾಗಳನ್ನು ಸದಾ ಪ್ರೀತಿಸುತ್ತೇನೆ.

ಯಾರು ಸರಳವಾಗಿರುತ್ತಾರೋ ದೇವರು ಅವರಿಗೆ ಎಲ್ಲವನ್ನೂ ಕೊಡುತ್ತಾನೆ. ನಾನು ಸದಾ ಸರಳವಾಗಿರುವಂತೆ ನೋಡಿಕೋ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ. ಭಗವಂತ ನನಗೆ ಎಂದುಕೊಂಡಿರುವುದಕ್ಕಿಂತ ಬಹಳ ಕೊಟ್ಟಿ ದ್ದಾನೆ. ಅವೆಲ್ಲ ಸರಳವಾಗಿರಲು ಪ್ರೇರಣೆ. ಎಲ್‌.ವೈ.ಸುಹಾಸ್‌

 

-ಕೆ. ಪೃಥ್ವಿಜಿತ್‌

 

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.