ಮೋದಿ 2.0 ಆದ್ಯತೆಗಳೇನು?

Team Udayavani, May 25, 2019, 5:00 AM IST

ಲೋಕಸಭೆ ಚುನಾವಣೆ ಫ‌ಲಿತಾಂಶ ಪ್ರಕಟವಾಗಿದ್ದು, ನರೇಂದ್ರ ಮೋದಿ ನೇತೃತ್ವದ ಸರ್ಕಾರವೇ ಅಧಿಕಾರದಲ್ಲಿ ಮುಂದುವರಿಯಲಿದೆ. 2014-2019ರ ಅವಧಿಯಲ್ಲಿ ಹಲವು ಉತ್ತಮ ಸಾಧನೆಗಳನ್ನು ಮಾಡಿದೆ ಹಾಲಿ ಸರ್ಕಾರ. ಈ ಫ‌ಲಿತಾಂಶ, ಮೋದಿ ನೇತೃತ್ವದ ಸರ್ಕಾರಕ್ಕೆ ಇನ್ನಷ್ಟು ಸುಧಾರಣೆ, ದೇಶ ಹಿತದ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಹೆಚ್ಚಿನ ಅವಕಾಶ ಮಾಡಿಕೊಟ್ಟಿದೆ. ಮುಂದಿನ ಐದು ವರ್ಷಗಳಲ್ಲಿ ಸರ್ಕಾರ ಮಾಡಬೇಕಾಗಿರುವ ಕೆಲಸಗಳ ಬಗ್ಗೆ ಪಟ್ಟಿ ಇಲ್ಲಿದೆ.

ಜಮ್ಮು ಮತ್ತು ಕಾಶ್ಮೀರ ವಿಚಾರ: ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಪರಿಸ್ಥಿತಿ ಏನೇನೂ ಉತ್ತಮವಾಗಿಲ್ಲ. ಫೆ.14ರಂದು ಪುಲ್ವಾಮಾ ಘಟನೆಯ ಬಳಿಕ ಭಾರತ ಮತ್ತು ಪಾಕಿಸ್ತಾನಗಳ ನಡುವೆ ರಾಜತಾಂತ್ರಿಕ ಸಂಬಂಧ ಸಂಪೂರ್ಣವಾಗಿ ಹಳಿತಪ್ಪಿದೆ. ಕಣಿವೆ ರಾಜ್ಯದಲ್ಲಿ ಉಗ್ರಗಾಮಿಗಳ ವಿರುದ್ಧ ನಿರ್ದಯದ ಕಾರ್ಯಾಚರಣೆ ನಡೆಸಲಾಗುತ್ತಿದ್ದರೂ, ಪದೇ ಪದೆ ದಾಳಿ ನಡೆಯುತ್ತಿದೆ. ಇದರ ಜತೆಗೆ ಪ್ರಚಾರದ ಸಂದರ್ಭದಲ್ಲಿ ಮತ್ತು ಪ್ರಣಾಳಿಕೆಯಲ್ಲಿ ಸಂವಿಧಾನದ 35-ಎ ಮತ್ತು 370ನೇ ವಿಧಿಗಳನ್ನು ರದ್ದು ಮಾಡುವ ಬಗ್ಗೆ ಬಿಜೆಪಿ ವಾಗ್ಧಾನ ಮಾಡಿತ್ತು.

ಅದನ್ನು ಯಾವ ರೀತಿ ಜಾರಿಗೊಳಿಸಬೇಕು ಎನ್ನುವ ವಿಚಾರ ನಿಜಕ್ಕೂ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಲಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಅಲ್ಲಿ ರಾಜ್ಯಪಾಲರ ಆಳ್ವಿಕೆ ಇದೆ. ಶೀಘ್ರವೇ ಅಲ್ಲಿ ವಿಧಾನಸಭೆಗೆ ಚುನಾವಣೆ ನಡೆಸಿ ಹೊಸ ರಾಜ್ಯ ಸರ್ಕಾರ ರಚನೆ ಮಾಡುವತ್ತ ಕ್ರಮ ಕೈಗೊಳ್ಳಬೇಕಾಗಿದೆ. ಈ ಮೂಲಕ ರಾಜ್ಯದ ಜನರ ಮನಸ್ಸನ್ನು ಗೆಲ್ಲುವತ್ತ ಮುಂದಡಿ ಇಡಬೇಕಾಗಿದೆ. ಹಾಲಿ ಚುನಾವಣೆಯಲ್ಲಿ ಕಣಿವೆ ರಾಜ್ಯದ 6 ಕ್ಷೇತ್ರಗಳ ಪೈಕಿ 3ರಲ್ಲಿ ಬಿಜೆಪಿ ಗೆದ್ದಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದಿನೇಶ್ವರ್‌ ಮಿಶ್ರಾ ನೇತೃತ್ವದಲ್ಲಿ ಸಂಧಾನಕಾರರ ಸಮಿತಿ ನೇಮಿಸಿದೆ. ಈ ಸಮಿತಿ ಕಣಿವೆ ರಾಜ್ಯಕ್ಕೆ ಭೇಟಿ ನೀಡಿ ಸಮಾಜದ ವಿವಿಧ ವರ್ಗಗಳ ಜತೆಗೆ ಸಮಾಲೋಚನೆ ನಡೆಸಿ ಸಂಧಾನ ಮಾಡುವ ನಿಟ್ಟಿನಲ್ಲಿ ಪ್ರಯತ್ನವನ್ನೂ ನಡೆಸಿದೆ. ಉಗ್ರರನ್ನು ಮಟ್ಟ ಹಾಕುವ ಜತೆಗೆ ಸ್ಥಳೀಯವಾಗಿ ಶಾಂತಿ ಮಾತುಕತೆಗೆ ಕ್ರಮ ಕೈಗೊಂಡಿದೆ. ಉಗ್ರರನ್ನು ಮಟ್ಟ ಹಾಕುವ ಜತೆಗೆ ಸ್ಥಳೀಯವಾಗಿ ಶಾಂತಿ ಮತ್ತು ನೆಮ್ಮದಿ ಮರಳಿ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಕ್ಕೆ ಆದ್ಯತೆ ನೀಡಬೇಕಾಗಿದೆ. 90ರ ದಶಕದಲ್ಲಿನ ನಿರಂತರ ಭಯೋತ್ಪಾದನೆಯಿಂದ ರಾಜ್ಯವನ್ನು ಬಿಟ್ಟು ತೆರಳಿದ್ದ ಕಾಶ್ಮೀರಿ ಪಂಡಿತರನ್ನು ಮರಳಿ ಕರೆ ತರುವ ನಿಟ್ಟಿನಿಲ್ಲಿ ಹಂತ ಹಂತವಾಗಿ ಕ್ರಮ ಕೈಗೊಳ್ಳಲು ಆದ್ಯತೆಯ ಹೆಜ್ಜೆಗಳನ್ನು ಇರಿಸಬೇಕಾಗಿದೆ.

ಸಂವಿಧಾನದ 370ನೇ ವಿಧಿ ಎಂದರೇನು?: ದೇಶದ ಸಂವಿಧಾನದ 21 ಭಾಗದಲ್ಲಿ ಉಲ್ಲೇಖವಾಗಿರುವ 370ನೇ ವಿಧಿಯ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲು ಅವಕಾಶ ಉಂಟು. “ತಾತ್ಕಾಲಿಕ, ಪರಿವರ್ತನೆ (ಟ್ರಾನ್ಸಿಷನಲ್‌) ಮತ್ತು ವಿಶೇಷ ನಿಬಂಧನೆ’ಗಳನ್ನು ರಾಜ್ಯಕ್ಕೆ ಒದಗಿಸಲಾಗಿದೆ. ದೇಶದ ಇತರ ಭಾಗಕ್ಕೆ ಅನ್ವಯವಾಗುವ ಸಂವಿಧಾನದ ಎಲ್ಲಾ ನಿಯಮಗಳು ಈ ರಾಜ್ಯಕ್ಕೆ ಅನ್ವಯವಾಗುವುದಿಲ್ಲ. ಉದಾಹರಣೆಗೆ ಹೇಳುವುದಿದ್ದರೆ 1965ರ ವರೆಗೆ ಕಣಿವೆ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದ ಬದಲಾಗಿ ಸದರ್‌-ಎ-ರಿಯಾಸತ್‌ ಎಂಬ ಹುದ್ದೆ ಇತ್ತು. ಅದು ರಾಜ್ಯಪಾಲರು ಮತ್ತು ಪ್ರಧಾನಮಂತ್ರಿ ಹುದ್ದೆಗೆ ಸಮನಾಗಿತ್ತು.

ಈ ವಿಧಿಯ ಇತಿಹಾಸ: ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಡಾ.ಫಾರೂಕ್‌ ಅಬ್ದುಲ್ಲಾರ ತಂದೆ ಶೇಖ್‌ ಅಬ್ದುಲ್ಲಾ 1947ರಲ್ಲಿ ಈ ಬಗ್ಗೆ ಕರಡು ನಿಯಮ ಸಿದ್ಧಪಡಿಸಿದ್ದರು. ಅವರು ಈ ಅಂಶವನ್ನು ಸಂವಿಧಾನದ ತಾತ್ಕಾಲಿಕ ವಿಧಿಗಳ ವ್ಯಾಪ್ತಿಯಲ್ಲಿ ಇರಿಸಬಾರದು. ರಾಜ್ಯಕ್ಕೆ ಸಂಪೂರ್ಣ ಮತ್ತು ಕಠಿಣ ನಿಯಮಗಳನ್ನು ಒಳಗೊಂಡ ಸ್ವಾಯತ್ತೆ ಇರಬೇಕು ಎಂದು ವಾದಿಸಿದ್ದರು. ಅದೇ ವಿಚಾರಕ್ಕೆ ಕೇಂದ್ರ ಸರ್ಕಾರ ಒಪ್ಪಿಕೊಂಡಿಲ್ಲ. ಜತೆಗೆ ಅಲ್ಲಿನ ಪ್ರತ್ಯೇಕತಾವಾದಿಗಳು ಮತ್ತು ಕೆಲ ರಾಜಕೀಯ ಪಕ್ಷಗಳು ಅದನ್ನು ಜಾರಿ ಮಾಡಬೇಕೆಂದು ಒತ್ತಾಯಿಸುತ್ತಿವೆ.

ಈ ವಿಧಿಯ ಅನ್ವಯ ಏನಾಗುತ್ತದೆ?: ರಕ್ಷಣೆ, ವಿದೇಶಾಂಗ, ಹಣಕಾಸು ಮತ್ತು ಸಂಪರ್ಕ ವಿಚಾರಗಳ ಹೊರತಾಗಿ ಸಂಸತ್‌ ಇತರ ನಿಯಮಗಳನ್ನು ಅನ್ವಯ ಮಾಡಬೇಕಾಗಿದ್ದರೆ ರಾಜ್ಯ ಸರ್ಕಾರದ ಜತೆಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಬೇಕು. ಭಾರತದ ಇತರ ಭಾಗದ ಜನರು ಜಮ್ಮು ಮತ್ತು ಕಾಶ್ಮೀರದಲ್ಲಿ ಆಸ್ತಿ ಖರೀದಿಸಲು ಸಾಧ್ಯವಿಲ್ಲ. ಜತೆಗೆ ಪೌರತ್ವಕ್ಕೆ, ಮೂಲಭೂತ ಹಕ್ಕುಗಳಿಗೆ ಪ್ರತ್ಯೇಕ ನಿಯಮ ಕಾಶ್ಮೀರಕ್ಕೆ ಇದೆ.

ಕೇಂದ್ರ ಸರ್ಕಾರಕ್ಕೆ ಸಂವಿಧಾದ 360ನೇ ವಿಧಿಯ ಅನ್ವಯ ಹಣಕಾಸು ತುರ್ತು ಪರಿಸ್ಥಿತಿ ಜಾರಿಗೊಳಿಸಲು ಅಧಿಕಾರವಿಲ್ಲ. ಯುದ್ಧ ಅಥವಾ ಬಾಹ್ಯ ಶಕ್ತಿಗಳು ದಾಳಿ ನಡೆಸಿದಾಗ ಮಾತ್ರ ಕೇಂದ್ರಕ್ಕೆ ತುರ್ತು ಪರಿಸ್ಥಿತಿ ಘೋಷಣೆ ಮಾಡಲು ಅವಕಾಶ ಉಂಟು. ಇತರ ಯಾವುದೇ ಸಂದರ್ಭದಲ್ಲಿ ಆಂತರಿಕವಾಗಿ ತುರ್ತು ಪರಿಸ್ಥಿತಿ ಉಂಟಾದರೆ ಅಥವಾ ಒಟ್ಟಾರೆ ದೇಶದ ಭದ್ರತೆಗೆ ಧಕ್ಕೆ ಇದೆ. ಹೀಗಾಗಿ ಎಲ್ಲಾ ಕಡೆ ತುರ್ತುಪರಿಸ್ಥಿತಿ ಜಾರಿಗೆ ತರಬೇಕು ಎಂದು ಅನಿಸಿದಾಗ, ರಾಜ್ಯ ಸರ್ಕಾರದ ಜತೆಗೆ ಚರ್ಚಿಸಿ ಅದರ ಸಹಮತದೊಂದಿಗೆ ಅದನ್ನು ಜಾರಿ ಮಾಡಬಹುದು.

ಪಾಕಿಸ್ತಾನದ ಜತೆಗಿನ ಬಾಂಧವ್ಯ: ಮೊದಲ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಚತುರ ರಾಜತಾಂತ್ರಿಕ ಪರಿಣತಿಯಿಂದ ವಿಶ್ವ ಮಟ್ಟದಲ್ಲಿ ಭಾರತ ಎಂದರೆ ಏನು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಜೈಶ್‌-ಎ-ಮೊಹಮ್ಮದ್‌ ಉಗ್ರ ಮಸೂದ್‌ ಅಝರ್‌ನನ್ನು ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸಲು ಚೀನಾದ ಮೇಲೆ ಇತರ ರಾಷ್ಟ್ರಗಳ ಮೂಲಕ ಒತ್ತಡ ಹೇರಿಸಲು ಯಶಸ್ವಿಯಾದದ್ದು. ಆದರೆ ಅದಕ್ಕಿಂತ ಪ್ರಮುಖವಾಗಿರುವ ವಿಚಾರವೆಂದರೆ ಅತ್ಯಂತ ಸನಿಹದ ನೆರೆಯ ದೇಶವಾಗಿರುವ ಪಾಕಿಸ್ತಾನದ ಜತೆಗೆ ಹೊಂದಿರುವ ಬಿಕ್ಕಟ್ಟಿನ ಸ್ಥಿತಿಯನ್ನು ತಹಬದಿಗೆ ತರಬೇಕು. ಆ ದೇಶ ನಿರಂತರವಾಗಿ ಉಗ್ರಗಾಮಿಗಳನ್ನು ಗಡಿಯಾಚೆಯಿಂದ ಕಳುಹಿಸುತ್ತಿದೆ. ಬಾಲಕೋಟ್‌ ದಾಳಿಯ ಮೂಲಕ ಭಾರತಕ್ಕೂ ದುಸ್ಸಾಹಸ ಮಾಡಿದರೆ ತಕ್ಕ ಶಾಸ್ತಿ ಮಾಡುವ ಸಾಮರ್ಥ್ಯ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ತೋರಿಸಿಕೊಟ್ಟಿದ್ದರು.

ದಕ್ಷಿಣ ಏಷ್ಯಾ ರಾಷ್ಟ್ರಗಳ ಸಹಕಾರ ಒಕ್ಕೂಟ (ಸಾರ್ಕ್‌)ವನ್ನು ಮುನ್ನೆಲೆಗೆ ತರುವಲ್ಲಿಯೂ ಪ್ರಧಾನಿ ಮೋದಿ ಇನ್ನಷ್ಟು ಕ್ರಮ ಕೈಗೊಳ್ಳಬೇಕಾಗಿದೆ. ಜಿ.20 ರಾಷ್ಟ್ರಗಳು, ಬ್ರಿಕ್ಸ್‌ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಶೃಂಗ ಸಮ್ಮೇಳನಗಳಲ್ಲಿ ಭಾರತ ಏನು ಎನ್ನುವುದನ್ನು ಪ್ರಧಾನಿ ಮೋದಿ ಈಗಾಗಲೇ ಸಾಬೀತು ಮಾಡಿದ್ದಾರೆ. ಅದನ್ನು ಕಾಯ್ದುಕೊಂಡು ಬರಬೇಕಾದ ಅಗತ್ಯವಿದೆ. ಅಮೆರಿಕ-ಇರಾನ್‌ ನಡುವಿನ ಬಿಕ್ಕಟ್ಟಿನಲ್ಲಿ ಕಚ್ಚಾ ತೈಲವನ್ನು ಇರಾನ್‌ನಿಂದ ಆಮದು ಮಾಡಿಕೊಳ್ಳಬಾರದೆಂದು ಗುಟುರು ಹಾಕುತ್ತಿರುವ ಡೊನಾಲ್ಡ್‌ ಟ್ರಂಪ್‌ ಸರ್ಕಾರದ ಜತೆಗೆ ಮುಂದೆ ಕೈಗೊಳ್ಳುವ ಹೆಜ್ಜೆ ಪ್ರಮುಖವಾಗಿರುತ್ತದೆ.

ಪಾಕಿಸ್ತಾನದ ಜತೆಗಿನ ಬಾಂಧವ್ಯ: ಮೊದಲ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಚತುರ ರಾಜತಾಂತ್ರಿಕ ಪರಿಣತಿಯಿಂದ ವಿಶ್ವ ಮಟ್ಟದಲ್ಲಿ ಭಾರತ ಎಂದರೆ ಏನು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಜೈಶ್‌-ಎ-ಮೊಹಮ್ಮದ್‌ ಉಗ್ರ ಮಸೂದ್‌ ಅಝರ್‌ನನ್ನು ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸಲು ಚೀನಾದ ಮೇಲೆ ಇತರ ರಾಷ್ಟ್ರಗಳ ಮೂಲಕ ಒತ್ತಡ ಹೇರಿಸಲು ಯಶಸ್ವಿಯಾದದ್ದು. ಆದರೆ ಅದಕ್ಕಿಂತ ಪ್ರಮುಖವಾಗಿರುವ ವಿಚಾರವೆಂದರೆ ಅತ್ಯಂತ ಸನಿಹದ ನೆರೆಯ ದೇಶವಾಗಿರುವ ಪಾಕಿಸ್ತಾನದ ಜತೆಗೆ ಹೊಂದಿರುವ ಬಿಕ್ಕಟ್ಟಿನ ಸ್ಥಿತಿಯನ್ನು ತಹಬದಿಗೆ ತರಬೇಕು. ಆ ದೇಶ ನಿರಂತರವಾಗಿ ಉಗ್ರಗಾಮಿಗಳನ್ನು ಗಡಿಯಾಚೆಯಿಂದ ಕಳುಹಿಸುತ್ತಿದೆ. ಬಾಲಕೋಟ್‌ ದಾಳಿಯ ಮೂಲಕ ಭಾರತಕ್ಕೂ ದುಸ್ಸಾಹಸ ಮಾಡಿದರೆ ತಕ್ಕ ಶಾಸ್ತಿ ಮಾಡುವ ಸಾಮರ್ಥ್ಯ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ತೋರಿಸಿಕೊಟ್ಟಿದ್ದರು.

ದಕ್ಷಿಣ ಏಷ್ಯಾ ರಾಷ್ಟ್ರಗಳ ಸಹಕಾರ ಒಕ್ಕೂಟ (ಸಾರ್ಕ್‌)ವನ್ನು ಮುನ್ನೆಲೆಗೆ ತರುವಲ್ಲಿಯೂ ಪ್ರಧಾನಿ ಮೋದಿ ಇನ್ನಷ್ಟು ಕ್ರಮ ಕೈಗೊಳ್ಳಬೇಕಾಗಿದೆ. ಜಿ.20 ರಾಷ್ಟ್ರಗಳು, ಬ್ರಿಕ್ಸ್‌ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಶೃಂಗ ಸಮ್ಮೇಳನಗಳಲ್ಲಿ ಭಾರತ ಏನು ಎನ್ನುವುದನ್ನು ಪ್ರಧಾನಿ ಮೋದಿ ಈಗಾಗಲೇ ಸಾಬೀತು ಮಾಡಿದ್ದಾರೆ. ಅದನ್ನು ಕಾಯ್ದುಕೊಂಡು ಬರಬೇಕಾದ ಅಗತ್ಯವಿದೆ. ಅಮೆರಿಕ-ಇರಾನ್‌ ನಡುವಿನ ಬಿಕ್ಕಟ್ಟಿನಲ್ಲಿ ಕಚ್ಚಾ ತೈಲವನ್ನು ಇರಾನ್‌ನಿಂದ ಆಮದು ಮಾಡಿಕೊಳ್ಳಬಾರದೆಂದು ಗುಟುರು ಹಾಕುತ್ತಿರುವ ಡೊನಾಲ್ಡ್‌ ಟ್ರಂಪ್‌ ಸರ್ಕಾರದ ಜತೆಗೆ ಮುಂದೆ ಕೈಗೊಳ್ಳುವ ಹೆಜ್ಜೆ ಪ್ರಮುಖವಾಗಿರುತ್ತದೆ.

ಉದ್ಯೋಗ ಸೃಷ್ಟಿ: 2014ರ ಚುನಾವಣೆ ವೇಳೆ ಭರವಸೆ ನೀಡಿದ್ದಂತೆ, ಮೋದಿ ಸರ್ಕಾರ ಉದ್ಯೋಗ ಸೃಷ್ಟಿಗೆ ಕ್ರಮಗಳನ್ನು ಕೈಗೊಂಡಿದ್ದರೂ, ಅದು ಮತ್ತಷ್ಟು ಹೆಚ್ಚು ವೇಗ ಪಡೆದುಕೊಳ್ಳಬೇಕಾಗಿದೆ.

ತೆರಿಗೆ ಕಾನೂನಿನಲ್ಲಿ ಬದಲು: ಐವತ್ತು ವರ್ಷ ಹಳೆಯದಾಗಿರುವ ಆದಾಯ ತೆರಿಗೆ ಕಾಯ್ದೆಯಲ್ಲಿ ಬದಲಾವಣೆ ತರಲು ಕೇಂದ್ರ ಸರ್ಕಾರ 2017ರಲ್ಲಿ ಟಾಸ್ಕ್ಫೋರ್ಸ್‌ ರಚಿಸಿತ್ತು. ಮಾಸಾಂತ್ಯದ ವರೆಗೆ ಅದರ ಅವಧಿ ಇದೆ. ಟಾಸ್ಕ್ಫೋರ್ಸ್‌ ನೀಡುವ ಶಿಫಾರಸುಗಳ ಅನ್ವಯ ಕೆಲವೊಂದು ಬದಲಾವಣೆಯಾಗುವ ಸಾಧ್ಯತೆಗಳಿವೆ.

ಪಿಂಚಣಿ ಮುಂದುವರಿಕೆ: ಪ್ರಧಾನಮಂತ್ರಿ ವಯ ವಂದನಾ ಯೋಜನೆಯ ಅನ್ವಯ 15 ಲಕ್ಷ ರೂ. ಹೂಡಿಕೆ ಮಾಡಲು ಅವಕಾಶ ನೀಡಲಾಗಿತ್ತು. ಹೇಗಿದ್ದರೂ ಹಾಲಿ ಸರ್ಕಾರವೇ ಅಧಿಕಾರದಲ್ಲಿ ಮುಂದುವರಿಯಲಿರುವುದರಿಂದ ಅದು ಮುಂದುವರಿಕೆ ಯಾಗುವುದು ಖಚಿತ.

ರೈತರ ಆದಾಯ ವೃದ್ಧಿ: 2022ರ ಒಳಗಾಗಿ ರೈತರ ಆದಾಯ ವೃದ್ಧಿಮಾಡಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂಕಲ್ಪ. ಅದಕ್ಕಾಗಿ ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದಕ್ಕೆ ಮುಂಗಾರು ಮಳೆಯನ್ನೇ ನೆಚ್ಚಿಕೊಂಡು ಇರುವ ದೇಶದ ಕೃಷಿ ವ್ಯವಸ್ಥೆ ಇದೆ. ಕೆಲವೊಂದು ಬಾರಿ ಮಳೆಯಾಗದೆ ಬರದ ಸ್ಥಿತಿ ಇರುವ ಹಿನ್ನೆಲೆಯಲ್ಲಿ ಬರದ ಸಂದರ್ಭದಲ್ಲಿ ಕೃಷಿ ವ್ಯವಸ್ಥೆ ಹಳಿ ತಪ್ಪದಂತೆ ನೋಡುವುದು ಅನಿವಾರ್ಯ.

ಅರ್ಥ ವ್ಯವಸ್ಥೆ ಬಲಪಡಿಸುವುದು: ಚುನಾವಣೆಯ ಅವಧಿಯಲ್ಲಿ ಅರ್ಥ ವ್ಯವಸ್ಥೆ ಕುಸಿದಿದೆ ಎನ್ನುವುದು ಪ್ರತಿಪಕ್ಷಗಳ ಪ್ರಧಾನ ಆರೋಪವಾಗಿತ್ತು. ಅಂಥ ಪರಿಸ್ಥಿತಿ ಇರದೇ ಇದ್ದರೂ, ಬ್ಯಾಂಕಿಂಗ್‌, ಕಾರ್ಪೊರೇಟ್‌ ವಲಯದಲ್ಲಿನ ಕೆಲವು ಪ್ರಕರಣಗಳು ಬ್ಯಾಂಕಿಂಗ್‌ ವ್ಯವಸ್ಥೆ ಮೇಲೆ ಕರಾಳ ಛಾಯೆ ಬೀರಿದೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣ, ಐಎಲ್‌ಆ್ಯಂಡ್‌ ಎಫ್ಎಸ್‌ ದಿವಾಳಿ ಎದ್ದ ವಿಚಾರ ನಿಜಕ್ಕೂ ಮೋದಿ ಸರ್ಕಾರಕ್ಕೆ ಸವಾಲು ಎಂದರೆ ತಪ್ಪಾಗಲಾರದು. ದಿವಾಳಿ ಕಾಯ್ದೆಯನ್ನು ಸಂಸತ್‌ನಲ್ಲಿ ಅಂಗೀಕರಿಸಿ ಜಾರಿಗೊಳಿಸಿ ಕ್ರಮ ಕೈಗೊಂಡರೂ ಬ್ಯಾಂಕ್‌ಗಳಲ್ಲಿನ ಅನುತ್ಪಾದಕ ಆಸ್ತಿ ಪ್ರಮಾಣ ಹೆಚ್ಚುತ್ತಲೇ ಇದೆ. ಅದರ ನಿಯಂತ್ರಕ್ಕೆ ಮತ್ತಷ್ಟು ಕ್ರಮ ಕೈಗೊಳ್ಳಲೇಬೇಕಾಗಿದೆ.

ಸಂವಿಧಾನದ 35 ಎ ವಿಧಿ ಎಂದರೇನು?: ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ರಾಜ್ಯದಲ್ಲಿ ಯಾರು “ಕಾಯಂ ನಿವಾಸಿಗಳು’ ಎಂದು ಗುರುತಿಸುವ ಅಧಿಕಾರ ನೀಡುವ ವ್ಯವಸ್ಥೆ ಇದರಲ್ಲಿದೆ. ರಾಜ್ಯದಲ್ಲಿ ಆಸ್ತಿ ಖರೀದಿ, ಸಾರ್ವಜನಿಕ ಉದ್ದಿಮೆಗಳಲ್ಲಿ ಉದ್ಯೋಗ, ವಿದ್ಯಾರ್ಥಿವೇತನ ಮತ್ತು ಇತರ ಸಾರ್ವಜನಿಕ ನೆರವು ಮತ್ತು ಕಲ್ಯಾಣ ಯೋಜನೆಗಳ ಲಾಭವನ್ನು ರಾಜ್ಯದಲ್ಲಿರುವವರಿಗೇ ಮೀಸಲಾಗಿ ಇರಿಸಿದೆ. ಹೊರಗಿನ ಪ್ರಜೆಗಳಿಗೆ ಅವಕಾಶ ಇರುವುದಿಲ್ಲ.

ಅಸ್ತಿತ್ವಕ್ಕೆ ಬಂದದ್ದು ಹೇಗೆ?: ಜವಾಹರ್‌ಲಾಲ್‌ ನೆಹರೂ ನೇತೃತ್ವದ ಸಂಪುಟ ಸಭೆಯ ಸಲಹೆಯ ಅನ್ವಯ ರಾಷ್ಟ್ರಪತಿಗಳಾಗಿದ್ದ ರಾಜೇಂದ್ರ ಪ್ರಸಾದ್‌ 1954ರಲ್ಲಿ ಈ ಬಗ್ಗೆ ಆದೇಶ ಹೊರಡಿಸಿದ್ದರು. ಇದು ಅತ್ಯಂತ ವಿವಾದಾತ್ಮಕ ಆದೇಶ ಎಂದು ಪರಿಗಣಿತವಾಗಿದೆ. 1952ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪ್ರಧಾನಮಂತ್ರಿಯಾಗಿದ್ದ ಶೇಖ್‌ ಅಬ್ದುಲ್ಲಾ ಮತ್ತು ನೆಹರೂ ನಡುವೆ ನಡೆದಿದ್ದ ಒಪ್ಪಂದದ ಅನ್ವಯ ಈ ಕ್ರಮ ಕೈಗೊಳ್ಳಲಾಗಿತ್ತು. ಸಂವಿಧಾನದ 370 (1)(ಡಿ) ವಿಧಿಯನ್ವಯ ರಾಷ್ಟ್ರಪತಿ ಈ ಆದೇಶ ಹೊರಡಿಸಿದ್ದರು. ಅದರ ಅನ್ವಯ “ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಒಳಪಡುವ ಕೆಲ ವಿಚಾರಗಳಲ್ಲಿ ಬದಲಾವಣೆ ಮಾಡಲು ರಾಷ್ಟ್ರಪತಿಗೆ ಅವಕಾಶ ಕೊಡುತ್ತದೆ’

ಈ ಅಂಶಕ್ಕೆ ಆಕ್ಷೇಪವೇಕೆ?: ಸಂಸತ್‌ ಮೂಲಕ ಕಾನೂನು ರಚಿಸಬೇಕಾದ ಮಾರ್ಗವನ್ನು ಮೀರಲಾಗಿತ್ತು ಎಂಬ ಪ್ರಬಲ ಆಕ್ಷೇಪವಿದೆ. ಅಂದರೆ ಸಂವಿಧಾನದ 368ನೇ ವಿಧಿಯನ್ವಯ ಕಾನೂನುಗಳನ್ನು ರೂಪಿಸುವ ಅಧಿಕಾರ ಸಂಸತ್‌ಗೆ ಮಾತ್ರವಿದೆ. ಈ ವಿಚಾರ ಸುಪ್ರೀಂಕೋರ್ಟ್‌ನಲ್ಲಿ 1961ರಲ್ಲಿ ವಿಚಾರಣೆಗೆ ಬಂದಿತ್ತು. ಪೂರ್ಣಲಾಲ್‌ ಲಖನ್‌ಪಾಲ್‌ ಮತ್ತು ಭಾರತದ ರಾಷ್ಟ್ರ ಪತಿ ನಡುವಿನ ಮೊಕದ್ದಮೆಯಲ್ಲಿ ಸಂವಿಧಾನದ 370ನೇ ವಿಧಿಯ ಅನ್ವಯ ಸಂವಿಧಾನದಲ್ಲಿ ಕೆಲ ಬದಲಾವಣೆ ಮಾಡ ಬಹುದು ಎಂದು ತೀರ್ಪು ನೀಡಿತ್ತು. ಆದರೆ ಸಂಸತ್‌ ಅನುಮತಿ ಯಲ್ಲದೆ ರಾಷ್ಟ್ರಪತಿ ಸಂವಿಧಾನ ಬದಲು ಮಾಡ ಬಹುದೇ ಎಂಬ ವಿಚಾರಕ್ಕೆ ಮಾತ್ರ ತೀರ್ಪಿನಲ್ಲಿ ಉಲ್ಲೇಖ ಮಾಡಲಾಗಿಲ್ಲ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ