ರಾಜನ ಗರ್ವಭಂಗ; ವಸಿಷ್ಠ, ಕಾಮಧೇನುಗೆ ಶರಣಾದ ವಿಶ್ವಾಮಿತ್ರ!

ಪಲ್ಲವಿ, Mar 26, 2019, 1:07 PM IST

ವಿಶ್ವಾಮಿತ್ರರು ಶಬಲ ಗೋವನ್ನು ಸೆಳೆದೊಯ್ಯುವಾಗ ಅದು ಶೋಕದಿಂದ ಮನಸ್ಸಿನಲ್ಲೇ ಅಳುತ್ತಾ, ಅತ್ಯಂತ ದುಃಖದಿಂದ  ” ವಸಿಷ್ಠರು ನನ್ನನ್ನು ತ್ಯಜಿಸಿಬಿಟ್ಟರೆ? ನಾನು ಅಂತಹ ಅಪರಾಧವನ್ನೇನುಮಾಡಿದೆ ? ನಿರಪರಾಧಿಯಾದ  ನಾನು ಅವರ ಭಕ್ತಳೆಂದು ತಿಳಿದಿದ್ದರೂ ಈ ರಾಜರ ಭೃತ್ಯರು ನನ್ನನ್ನು ಸೆಳೆದೊಯ್ಯುತ್ತಿರಲು, ಅದನ್ನು ನೋಡಿಕೊಂಡು ಸುಮ್ಮನಿದ್ದುಬಿಟ್ಟರಲ್ಲ  ಎಂದು ನಿಟ್ಟುಸಿರು ಬಿಟ್ಟು ರಾಜನ ನೂರು ಸೇವಕರನ್ನು ಕೊಡವಿ ವಸಿಷ್ಠರ ಬಳಿಗೆ ಬಂದು ಅಳುತ್ತಾ, ಕಿರುಚುತ್ತಾ ಯಾವ ಅಪರಾಧಕ್ಕೆ ನನ್ನನ್ನು ತ್ಯಜಿಸುತ್ತಿರುವಿರೆಂದು ಕೇಳಿತು.

ಸಾಧು ಮತೀಯ ವಸಿಷ್ಠರು ಶಬಲೆಯ ಮಾತನ್ನು ಕೇಳಿ ಬಹಳ ವ್ಯಾಕುಲರಾಗಿ ” ಎಲೈ ಶಬಲೆ ! ನನ್ನನು ಕ್ಷಮಿಸಿಬಿಡು, ನಾನು ನಿನ್ನನ್ನು ತ್ಯಜಿಸುತ್ತಿಲ್ಲ, ನೀನು ನನಗೆ ಯಾವುದೇ ಅಪರಾಧವನ್ನೂ ಮಾಡಲಿಲ್ಲ. ಆದರೆ ಈ ಮಹಾಬಲಶಾಲಿಯಾದ ರಾಜನು ಮದೋನ್ಮತ್ತನಾಗಿ ನಿನ್ನನ್ನು ನನ್ನಿಂದ ಕಸಿದುಕೊಂಡು ಹೋಗುತ್ತಿದ್ದಾನೆ.  ಈ ರಾಜನಂತೆ ನನ್ನಲ್ಲಿ ಬಲವಿಲ್ಲ ವಿಶೇಷವಾಗಿ ಈಗ ಇವನು ರಾಜಪದವಿಯಲ್ಲಿ ಪ್ರತಿಷ್ಠಿತನಾಗಿದ್ದಾನೆ. ಇವನು ಈ ಪೃಥ್ವಿಯ ಪಾಲಕನಾಗಿದ್ದಾನೆ. ಆದ್ದರಿಂದ ಈತನು ಬಲವಂತ ಪಡಿಸುತ್ತಿದ್ದಾನೆ” ಎಂದು ಹೇಳಿದರು.

ವಸಿಷ್ಠರ ಈ ಮಾತುಗಳನ್ನು ಕೇಳಿ ಶಬಲೆಯು “ ಬ್ರಾಹ್ಮಣೋತ್ತಮನೇ ! ಕ್ಷತ್ರಿಯರ ಬಲಕ್ಕಿಂತಲೂ ಬ್ರಾಹ್ಮಣರ  ಬಲವು ದಿವ್ಯವಾಗಿದೆ. ಹೇ ಋಷಿವರ್ಯ ! ನಾನು ನಿಮ್ಮ ಬ್ರಹ್ಮಬಲದಿಂದ ಪುಷ್ಟಳಾಗಿರುವೆ. ಆದ್ದರಿಂದ ನೀವು ಕೇವಲ ನನಗೆ ಅಪ್ಪಣೆ ಮಾಡಿರಿ. ನಾನು ಈ ದುರಾತ್ಮರಾಜನ ಬಲ, ಪ್ರಯತ್ನ, ಅಹಂಕಾರವನ್ನು ಈಗಲೇ ನುಚ್ಚು ನೂರಾಗಿಸಿಬಿಡುವೆನು” ಎಂದು ಹೇಳಿತು.

ಕಾಮಧೇನುವು ಹೀಗೆ ಹೇಳಿದಾಗ ವಸಿಷ್ಠರು ಶಬಲೆಗೆ ಶತ್ರು ಸೈನ್ಯವನ್ನು  ನಾಶ ಮಾಡತಕ್ಕ ಸಾಮರ್ಥ್ಯವುಳ್ಳ  ಸೈನಿಕರನ್ನು ಸೃಷ್ಟಿ ಮಾಡುವಂತೆ ಆದೇಶಿಸಿದರು. ಅವರ ಆದೇಶಕ್ಕಾಗಿಯೇ ಕಾಯುತಿದ್ದ ಶಬಲೆಯು, ಕೇವಲ ಹುಂಕಾರ ದಿಂದಲೇ ಆಯುಧಸಹಿತರಾದ ನೂರಾರು ವೀರರನ್ನು ಸೃಷ್ಟಿಮಾಡಿತು. ನೋಡುನೋಡುತ್ತಿದ್ದಂತೆಯೇ ಅವರೆಲ್ಲರೂ ವಿಶ್ವಾಮಿತ್ರರ ಸೈನ್ಯದೊಂದಿಗೆ ಯುದ್ಧಮಾಡಿ ಶತ್ರು ಸೈನ್ಯವನ್ನೆಲ್ಲ ನಾಶ ಪಡಿಸಿದರು.

ಇದನ್ನು ಕಂಡ ವಿಶ್ವಾಮಿತ್ರರು ರೋಷಗೊಂಡು ವಿವಿಧ ಅಸ್ತ್ರಗಳಿಂದ ಆ ವೀರರನ್ನು ಸಂಹರಿಸಿಬಿಟ್ಟರು. ಶಬಲೆಯು ಪುನಃ ಸಾವಿರಾರು ವೀರರನ್ನು ಸೃಷ್ಟಿಮಾಡಿದಳು. ಅವರೆಲ್ಲರನ್ನು ವಿಶ್ವಾಮಿತ್ರರು ನಾಶಪಡಿಸಿ ಅತ್ಯಂತ ಕ್ರೋಧದಿಂದ ನೂರುಪುತ್ರರನ್ನು ಸೃಷ್ಟಿಸಿದರು. ಅವರೆಲ್ಲರೂ ನಾನಾ ಪ್ರಕಾರದ ಅಸ್ತ್ರಗಳೊಂದಿಗೆ ವಸಿಷ್ಠರ ಮೇಲೆರಗಿದರು. ಆಗ ಮಹರ್ಷಿಯ ಹುಂಕಾರಮಾತ್ರದಿಂದಲೇ ಅವರೆಲ್ಲರೂ ಸುಟ್ಟು ಭಸ್ಮವಾಗಿಬಿಟ್ಟರು.

ಇದರಿಂದ ವಿಶ್ವಾಮಿತ್ರರು ಬಹಳ ನಾಚಿಕೆಯಿಂದ ಅಲ್ಲಿಂದ ಹೊರಟು ರಾಜ್ಯಕ್ಕೆ ತೆರಳಿ ಉಳಿದ ಒಬ್ಬ ಮಗನಿಗೆ ಪಟ್ಟಕಟ್ಟಿ ಹಿಮಾಲಯದ ಪಾರ್ಶ್ವಭಾಗಕ್ಕೆ ಹೋಗಿ ಮಹಾದೇವನನ್ನು ಒಲಿಸಿಕೊಳ್ಳಲು ತಪಸ್ಸನ್ನು ಆಚರಿಸಿದರು. ಮಹಾದೇವನು ದರ್ಶನಕೊಟ್ಟು, ವಿಶ್ವಾಮಿತ್ರರ ಅಭಿಲಾಷೆಯಂತೆ ದೇವತೆಗಳಲ್ಲಿ , ದಾನವರಲ್ಲಿ , ಮಹರ್ಷಿಗಳಲ್ಲಿ, ಗಂಧರ್ವ,ಯಕ್ಷ ರಾಕ್ಷಸರ ಬಳಿ ಯಾವ ಯಾವ ಅಸ್ತ್ರಗಳಿವೆಯೋ, ಅವೆಲ್ಲವನ್ನು ವಿಶ್ವಾಮಿತ್ರರಿಗೆ ವರದ ರೂಪದಲ್ಲಿ ಕರುಣಿಸಿ ಹೊರಟುಹೋದನು.

ಅಲ್ಲಿಂದ ವಿಶ್ವಾಮಿತ್ರರು ಅಹಂಕಾರದಿಂದ, ತನ್ನನ್ನು ಸರ್ವಶ್ರೇಷ್ಠನೆಂದು, ತಿಳಿದು ವಸಿಷ್ಠರ ಆಶ್ರಮಕ್ಕೆ ಬಂದರು. ಅಲ್ಲಿ ಶಾಂತಚಿತ್ತದಿಂದ ತಪಸ್ಸನ್ನಾಚರಿಸುತ್ತಿದ್ದ ವಸಿಷ್ಠರನ್ನು ಕುರಿತು ಕೆಟ್ಟಮಾತುಗಳನ್ನಾಡಿ, ಕಾಲ್ಕೆರೆದು, ಪರೋಕ್ಷವಾಗಿ ಯುದ್ಧಕ್ಕೆ ಆಹ್ವಾನಿಸಿದರು. ಇದಾವುದರಿಂದಲೂ ವಸಿಷ್ಠರು ಗರ್ವಗೊಳ್ಳದಿರಲು, ವಿಶ್ವಾಮಿತ್ರರು ನಾನಾವಿಧವಾದ ಶಸ್ತ್ರಾಸ್ತ್ರಗಳಿಂದ, ನಂದನ ವನದಂತಿರುವ ವಸಿಷ್ಠರ ಆಶ್ರಮವನ್ನು ನಾಶಪಡಿಸಲು ಪ್ರಾರಂಭಿಸಿದರು. ಇದರಿಂದ ಆಶ್ರಮವಾಸಿಗಳಾದ ವಸಿಷ್ಠರ ಶಿಷ್ಯರು, ಪಶುಪಕ್ಷಿಗಳು ಮತ್ತು ನೂರಾರು ಮುನಿಗಳು ಭಯಭೀತರಾಗಿ ಓಡತೊಡಗಿದರು. ಕ್ಷಣಮಾತ್ರದಲ್ಲೇ ವಸಿಷ್ಠರ ಆಶ್ರಮವು ಸರ್ವನಾಶವಾಗಿ ಬಂಜರುಭೂಮಿಯಂತಾಯಿತು.

ಇವೆಲ್ಲವನ್ನೂ ನೋಡಿದ ವಸಿಷ್ಠರು, ಕ್ರೋಧದಿಂದ ಕಾಲಾಗ್ನಿಯಂತೆ ಉರಿದೆದ್ದು ಬ್ರಹ್ಮದಂಡವನ್ನು ಧಾರಣೆಮಾಡಿ , ವಿಶ್ವಾಮಿತ್ರರು ಪ್ರಯೋಗಮಾಡಿದ ಆಗ್ನೇಯಾದಿ ಅಸ್ತ್ರಗಾಳನ್ನು ಕ್ಷಣಮಾತ್ರದಲ್ಲಿಯೇ ಶಾಂತಗೊಳಿಸಿದರು. ತನ್ನಲ್ಲಿರುವ ಎಲ್ಲ ಅಸ್ತ್ರಗಳು ನಾಶವಾದಾಗ ಗಾಧಿನಂದನ ವಿಶ್ವಾಮಿತ್ರರು ಕೊನೆಯದಾಗಿ ಬ್ರಹ್ಮಾಸ್ತ್ರವನ್ನು ಪ್ರಯೋಗಮಾಡತೊಡಗಿದರು. ಮಹಾ ತಪಸ್ವಿಗಳಾದ ವಸಿಷ್ಠರು ತಮ್ಮ ಕೈಯಲ್ಲಿರುವ ಬ್ರಹ್ಮದಂಡದಿಂದ ವಿಶ್ವಾಮಿತ್ರರ ಬ್ರಹ್ಮಾಸ್ತ್ರವನ್ನೂ ಕೂಡ ಲೀಲಾಜಾಲವಾಗಿ ಸಂಹರಿಸಿ ಮಹಾತೇಜಸ್ವಿಯಾಗಿ ಕಂಗೊಳಿಸತೊಡಗಿದರು.

ತನ್ನೆಲ್ಲ ಅಸ್ತ್ರಗಳನ್ನು ಕಳೆದು ಕೊಂಡು ನಿರ್ವೀರ್ಯರಾದ  ವಿಶ್ವಾಮಿತ್ರರು ವಸಿಷ್ಠರನ್ನು ಕುರಿತು “ನನ್ನ ಕ್ಷತ್ರಿಯಬಲಕ್ಕೆ ಧಿಕ್ಕಾರವಿರಲಿ. ಬ್ರಹ್ಮತೇಜಸ್ಸಿನಿಂದ ಪ್ರಾಪ್ತವಾಗುವ ಬ್ರಹ್ಮಬಲವೇ ಯಥಾರ್ಥವಾದ ಬಲವಾಗಿದೆ. ನನ್ನ ವಶದಲ್ಲಿದ್ದ ಎಲ್ಲಾ ಅಸ್ತ್ರಗಳೂ, ಸರ್ವಸಮರ್ಥವಾದ ಬ್ರಹ್ಮದಂಡದಿಂದ ನಾಶವಾಯಿತು .  ಈ ಎಲ್ಲಾ ಘಟನೆಗಳನ್ನು ಪ್ರತ್ಯಕ್ಷವಾಗಿ ನೋಡಿದ ನಾನು ನನ್ನ ಮನಸ್ಸನ್ನು , ಇಂದ್ರಿಯಗಳನ್ನು ಪ್ರಸನ್ನ ಗೊಳಿಸಿ ಬ್ರಾಹ್ಮಣತ್ತ್ವದ ಪ್ರಾಪ್ತಿಗೆ ಕಾರಣೀಭೂತವಾದ ಮಹಾತಪಸ್ಸನ್ನು ಆಚರಿಸುವೆನು” ಎಂದು ಪ್ರತಿಜ್ಞೆ ಮಾಡಿದರು.

ಪಲ್ಲವಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ