ಬಹುಪಯೋಗಿ ಜೀವಾಮೃತವಿದು ಸೀಯಾಳ; ಎಳನೀರು ಐಸ್‌ಕ್ರೀಮ್‌, ಜ್ಯೂಸ್!

Team Udayavani, Apr 17, 2019, 12:30 PM IST

ವಿದ್ಯಾನಗರ: ಕಲ್ಪವೃಕ್ಷ ಎಂದು ಹೆಸರುಪಡೆದಿರುವ ತೆಂಗಿನ ಮರದ ಉಪಯೋಗವನ್ನು ಅರಿತ ನಮ್ಮ ಹಿರಿಯರು ಪ್ರತಿ ಮನೆ ಮನೆಯಲ್ಲೂ ತೆಂಗಿನ ಮರ ನೆಟ್ಟ ಕಾರಣ ಇಂದು ಭಾರತದಾದ್ಯಂತ ಎಲ್ಲಾ ಕಾಲದಲ್ಲೂ ಜನರ ಅಗತ್ಯವನ್ನು ಪೂರೈಸುವ ಅಕ್ಷಯಪಾತ್ರೆಯಾಗಿ ಇವುಗಳು ಆವರಿಸಿಕೊಂಡಿವೆ. ಬಹಳ ಉಪಯೋಗಪ್ರದವಾದ ತೆಂಗಿನ ಮರದ  ತೆಂಗಿನ ಹೂವು, ಕಾಯಿ, ಗರಿ, ಕಾಂಡಗಳು ಸೇರಿದಂತೆ ಪ್ರತಿಯೊಂದು ಭಾಗವೂ ಅಮೂಲ್ಯ. ಅದರಲ್ಲೂ ಪೂರ್ಣ ಬಲಿತಿಲ್ಲದ, ಹೆಚ್ಚು ನೀರನ್ನೇ ಹೊಂದಿರುವ ಎಳನೀರು ಒಂದು ನೈಸರ್ಗಿಕ ಪಾನೀಯವಾಗಿ ಸರ್ವರೋಗವನ್ನೂ ನಿವಾರಿಸುವ ಪನ್ನೀರಾಗಿ ಮನೆಮಾತಾಗಿದೆ.

ಪೋಷಕಾಂಶಗಳ ಆಗರವಾಗಿರುವ ಸೀಯಾಳ ವರ್ಷ ಪೂರ್ತಿ ದೊರಕುವ ಏಕೈಕ ಫಲ. ನವಿರಾದ ಸಿಹಿ ಹಾಗೂ ಬಹಳಷ್ಟು ಪೋಷಕಾಂಶಗಳ ಮೂಲಕ ದೇಹದ ದಣಿವನ್ನು ಶೀಘ್ರವಾಗಿ ನಿವಾರಿಸಿ ಪೂರ್ಣ ಕ್ಷಮತೆಯನ್ನು ನೀಡಿ ದೇಹವನ್ನು ಬಲಗೊಳಿಸುತ್ತದೆ.

ದೇಹಕ್ಕೆ ಅಗತ್ಯವಾದ ಖನಿಜ, ಲವಣ, ಸಕ್ಕರೆಯ ಅಂಶಗಳು ನಮ್ಮ ದೇಹಕ್ಕೆ ಅಗತ್ಯವಾದ ಪ್ರಮಾಣದಲ್ಲಿ ಇರುವ ಸೀಯಾಳ ಅಮೃತ ಸಮಾನವಾದ ಪಾನೀಯ. ಜೀವಕೋಶಗಳ ಸಮರ್ಪಕ ಬೆಳವಣಿಗೆ, ನಿಯಂತ್ರಣ ಮಾತ್ರವಲ್ಲದೆ ದೇಹವನ್ನು ಕ್ಯಾನ್ಸರ್‌ನಿಂದ ತಡೆಯಬಲ್ಲ ಎಳನೀರು ಜೀವರಾಸಾಯನಿಕ ಕ್ರಿಯೆಗಳನ್ನೂ ಹೆಚ್ಚಿಸುತ್ತದೆ.

ಬೇಸಗೆಯಲ್ಲಿ ಭಾರೀ ಡಿಮ್ಯಾಂಡ್‌:

ಬೇಸಗೆ ಕಾಲದಲ್ಲಿ ನಿರ್ಜಲಿಕರಣದಿಂದ ಎದುರಾಗುವ ನಿಶ್ಶಕ್ತಿಗೆ ಸೀಯಾಳ ಬಹಳ ಉಪಯುಕ್ತ ಔಷಧ. ಆದುದರಿಂದಲೇ ಬಿಸಿಲ ಧಗೆ ತಣಿಸುವ ಎಳನೀರಿಗೆ ಬೇಡಿಕೆ ಜಾಸ್ತಿ. ದಿನದಿಂದ ದಿನಕ್ಕೆ ಬಿಸಿಲ ತಾಪಮಾನ ಹೆಚ್ಚಾಗುತ್ತಿದ್ದು ಧಗೆ ತಣಿಸಲು ಜನರು ತಂಪು ಪಾನೀಯಗಳಿಗಿಂತಲೂ ಎಳನೀರಿಗೆ ಮೊರೆ ಹೋಗುತ್ತಾರೆ. ಸುಲಭವಾಗಿ ಸಿಗುವ ಸೀಯಾಳಕ್ಕೆ ಸದ್ಯದ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆಯಿದೆ.

ತೆಂಗಿನ ಮರದೆತ್ತರಕ್ಕೇರಿದ ಬೆಲೆ:

ಸುಡು ಬಿಸಿಲಿನಂತೆ ಎಳೆನೀರಿನ ಬೆಲೆಯೂ ಗಗನಕ್ಕೇರುತ್ತಿದೆ. 20- ‐25 ರೂ. ಇದ್ದ ಸೀಯಾಳಕ್ಕೀಗ 30 ‐-40ರೂ. ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಪೇಟೆ ಪಟ್ಟಣಗಳಲ್ಲಿ ರಸ್ತೆ ಬದಿಯಲ್ಲಿ ಎಳೆನೀರನ್ನು ರಾಶಿ ಹಾಕಿ ಮಾರಾಟ ಮಾಡುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ. ಮಾತ್ರವಲ್ಲದೆ ವ್ಯಾಪಾರವೂ ಭರ್ಜರಿಯಾಗಿ ನಡೆಯುತ್ತಿದೆ. ಒಂದೆಡೆ ಬೆಲೆ ಏರಿಕೆಯಿಂದ ರೈತರಿಗೆ ಲಾಭವಾಗಿದೆ.

ಕೆಲವು ಕಡೆಗಳಲ್ಲಿ ಕೃಷಿಕರು ನೇರವಾಗಿ ಮಾರುಕಟ್ಟೆಗೆ ಸೀಯಾಳ ತಂದು ಅಂಗಡಿಗಳಿಗೆ ಮಾರಾಟ ಮಾಡಿದರೆ ಇನ್ನು ಕೆಲವೆಡೆಗಳಲ್ಲಿ ತಾವೇ ರಸ್ತೆ ಬದಿಯಲ್ಲಿ ತೆರೆದ ವಾಹನದಲ್ಲೋ, ರಾಶಿ ಹಾಕಿಯೋ ಮಾರಾಟ ಮಾಡುವುದನ್ನು ಕಾಣಬಹುದು. ಆದರೆ ಬೆಲೆಯಲ್ಲಿ ವ್ಯತ್ಯಾಸ ಕಂಡುಬರುವುದು ವಿರಳ.

ಕೆಲವೊಮ್ಮೆ ಮಾರಾಟಗಾರರು ನೇರವಾಗಿ ರೈತರ ತೋಟಗಳಿಗೆ ಹೋಗಿ ಸೀಯಾಳ ಖರೀದಿ ಮಾಡುತ್ತಾರೆ. ಎಳೆನೀರು ಮರದಿಂದ ಇಳಿಸುವ ಕೆಲಸದಾಳುಗಳ ಕೊರತೆಯಿಂದ ಇದರ ಪೂರೈಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎನ್ನುವ ಮಾತು ವ್ಯಾಪಾರಿಗಳಿಂದ ಕೇಳಿಬರುತ್ತಿದೆ. ಕರ್ನಾಟಕದಿಂದಲೂ ಹೆಚ್ಚು ಪ್ರಮಾಣದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಗೆ ಎಳನೀರು ಪೂರೈಕೆಯಾಗುತ್ತಿದೆ.

ಸೀಯಾಳ ಜ್ಯೂಸ್‌:

ಸೀಯಾಳದಿಂದ ತಯಾರಿಸಿದ ಪಾನೀಯಕ್ಕೆ ಅತ್ಯಂತ ಬೇಡಿಕೆಯಿದ್ದು ಅಲ್ಲಲ್ಲಿ ಎಳನೀರು ಜ್ಯೂಸ್‌ ಸ್ಟಾಲ್‌ಗ‌ಳು ತಲೆಯಿತ್ತಿವೆ. ಯಾವುದೇ ರೀತಿಯ ಬಣ್ಣ ಮುಂತಾದ ರಾಸಾಯನಿಕಗಳಂತಹ ಕಲಬೆರಕೆಯಾಗಲಿ ಇಲ್ಲದ ಎಳನೀರು ಜ್ಯೂಸ್‌ ಅತ್ಯಂತ ರುಚಿಕರ ಹಾಗೂ ಆರೋಗ್ಯದಾಯಕ ಪಾನೀಯ.

ಎಳನೀರು ಐಸ್‌ಕ್ರೀಮ್‌:

ಮಾರುಕಟ್ಟೆಯಲ್ಲಿ ಎಳನೀರು ಐಸ್‌ಕ್ರೀಮ್‌ ಕೂಡಾ ತನ್ನ ಬೇಡಿಕೆಯನ್ನು ಉಳಿಸಿಕೊಂಡಿದೆ. ಅತ್ಯಂತ ಹೆಚ್ಚು ಬೇಡಿಕೆಯಿರುವ ಫ್ಲೆàವರ್‌ಗಳಲ್ಲಿ ಟೆಂಡರ್‌ ಕೋಕೊನಟ್‌ ಐಸ್‌ಕ್ರೀಂ ಕೂಡಾ ಸೇರಿದೆ.

ಎಲ್ಲಾ ಕಾರ್ಯಕ್ಕೂ ಸೀಯಾಳ ಅಗತ್ಯ

ಯಾವುದೇ ಶುಭ ಸಮಾರಂಭವಾಗಲಿ ಅಥವಾ ಇನ್ನಿತರ ಉತ್ಸವ, ಆಚರಣೆಗಳಾಗಲಿ ಎಳನೀರು ಬೇಕೇ ಬೇಕು. ದೇವಸ್ಥಾನ, ದೆ„ವಸ್ಥಾನ, ಮದುವೆ ಹೀಗೆ ಸೀಯಾಳವಿಲ್ಲದೆ ಯಾವುದೇ ಕಾರ್ಯ ನಡೆಯುವುದಿಲ್ಲ. ಪವಿತ್ರವಾದ ಕಲ್ಪವೃಕ್ಷದ ಫಲಕ್ಕಿರುವ ಮಹತ್ವ ಅಪಾರವಾದುದು.

ದರ ಏರಿಕೆಯಿಂದ ಎಳನೀರು ಪೂರೈಕೆಯಲ್ಲಿ ಸಣ್ಣ ವ್ಯತ್ಯಯ ಉಂಟಾಗಿದೆ. ಆದರೆ ಭಿಸಿಲಿನ ಧಗೆಯಿಂದಾಗಿ ಬೇಡಿಕೆಯೂ ಹೆಚ್ಚಾಗಿದೆ. ದಿನವೊಂದಕ್ಕೆ ಕಡಿಮೆಯೆಂದರೂ 200 ಸಿಯಾಳ ಮಾರಾಟವಾಗುತ್ತದೆ ಎನ್ನುತ್ತಾರೆ ವ್ಯಾಪಾರಿಗಳು.

 *ವಿದ್ಯಾಗಣೇಶ್‌ ಆಣಂಗೂರು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ