ವಿದೇಶದಿಂದ ಸಂಗೀತಾ ಸಂದೇಶ

ಕಪಟನಾಟಕ ಪಾತ್ರಧಾರಿಗೆ ಸಾಥ್‌

Team Udayavani, Sep 24, 2019, 3:03 AM IST

ನಟಿ ಸಂಗೀತಾ ಭಟ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಹಾಗಂತ ಯಾವುದೇ ಕಾಂಟ್ರಾವರ್ಸಿಯಿಂದಲ್ಲ. ಬದಲಾಗಿ ತನ್ನ ಸಿನಿಮಾದ ಪ್ರಮೋಶನ್‌ಗೆ ವಿದೇಶದಿಂದ ವಿಡಿಯೋ ಕಳುಹಿಸುವ ಮೂಲಕ. ಪತ್ರಿಕಾಗೋಷ್ಠಿಗೆ ಬಾರಲು ಸಾಧ್ಯವಾಗದ, ದೂರದ ಊರಿನಲ್ಲಿರುವ ನಟ-ನಟಿಯರು ವಿಡಿಯೋ ಮೂಲಕ ಚಿತ್ರಕ್ಕೆ ಶುಭ ಹಾರೈಸೋದು ಸಹಜ. ಅದರಲ್ಲೇನು ವಿಶೇಷ ಎಂದು ನೀವು ಕೇಳಬಹುದು. ಕನ್ನಡ ಚಿತ್ರರಂಗದಲ್ಲಿ “ಮಿ ಟೂ’ ಆರೋಪ ಜೋರಾಗಿ ಕೇಳಿಬಂದ ಸಮಯದಲ್ಲಿ ನಟಿ ಸಂಗೀತಾ ಭಟ್‌ ಹಾಕಿದ ಪೋಸ್ಟ್‌ವೊಂದು ಜೋರಾಗಿ ಸದ್ದು ಮಾಡಿತು.

ಆಕೆಯ ಹೇಳಿಕೆಗೆ ಪರ-ವಿರೋಧಗಳು ಕೇಳಿಬಂದುವು. ಅಂತಿಮವಾಗಿ ಸಂಗೀತಾ, “ನಾನು ಇನ್ನು ನಟಿಸುವುದಿಲ್ಲ. ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ’ ಎಂದು ಹೇಳಿ ಚಿತ್ರರಂಗದಿಂದ ದೂರ ಉಳಿದಿದ್ದರು. ಸಹಜವಾಗಿಯೇ ಅನೇಕರಿಗೆ ಒಂದು ಪ್ರಶ್ನೆ ಮೂಡಿತ್ತು. ಸಂಗೀತಾ ಭಟ್‌ ನಟಿಸಿರುವ ಸಿನಿಮಾಗಳ ಪ್ರಮೋಶನ್‌ಗೆ ಬರುತ್ತಾರಾ ಅಥವಾ ದೂರ ಉಳಿಯುತ್ತಾರಾ ಎಂದು. ಆದರೆ, ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನಟಿ ಸಂಗೀತಾ ಭಟ್‌ ತಮ್ಮ ಸಿನಿಮಾಗಳ ಪ್ರಮೋಶನ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಅದು ನೇರವಾಗಿ ಅಲ್ಲದಿದ್ದರೂ ವಿಡಿಯೋ ಮೂಲಕ.

ಸೋಮವಾರ ಸಂಗೀತಾ ಭಟ್‌ ನಟಿಸಿರುವ “ಕಪಟನಾಟಕ ಪಾತ್ರಧಾರಿ’ ಚಿತ್ರದ ಟ್ರೇಲರ್‌ ಬಿಡುಗಡೆಯಾಯಿತು. ಪತ್ರಿಕಾಗೋಷ್ಠಿಗೆ ಸಂಗೀತಾ ಭಟ್‌ ಬಂದಿರಲಿಲ್ಲ. ವಿದೇಶದಲ್ಲಿರುವ ಕಾರಣ ಸಿನಿಮಾದ ಪ್ರಮೋಶನ್‌ಗೆ ಬರಲು ಸಾಧ್ಯವಾಗಿಲ್ಲ ಎನ್ನುತ್ತಲೇ ವಿಡಿಯೋ ಸಂದೇಶ ಕಳುಹಿಸಿರುವ ಸಂಗೀತಾ, “ಕಪಟ ನಾಟಕ ಪಾತ್ರಧಾರಿ’ ನಾನು ತುಂಬಾ ಇಷ್ಟಪಟ್ಟ ಸಿನಿಮಾ. ಬೇರೆ ಜಾನರ್‌ನಲ್ಲಿರುವ ಚಿತ್ರ ಹಾಗೂ ಪಾತ್ರ.

ಟ್ರೇಲರ್‌ ರಿಲೀಸ್‌ನಲ್ಲಿ ನಿಮ್ಮ ಜೊತೆ ನಾನಿರಬೇಕಿತ್ತು. ಆದರೆ, ಭಾರತದಲ್ಲಿ ನಾನಿಲ್ಲದ ಕಾರಣ, ಅದು ಸಾಧ್ಯವಾಗಿಲ್ಲ. ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಿರ್ದೇಶಕ ಕ್ರಿಶ್‌ ಅವರ ಕನಸಿದು. ಚಿತ್ರದ ಬಿಡುಗಡೆ ಹೊತ್ತಲ್ಲಿ ಚಿತ್ರತಂಡದ ಜೊತೆಗಿರಲು ಪ್ರಯತ್ನಿಸುತ್ತೇನೆ’ ಎನ್ನುವ ಮೂಲಕ ಚಿತ್ರಕ್ಕೆ ಸಾಥ್‌ ನೀಡಿದ್ದಾರೆ. ಈ ಮೂಲಕ ಸಂಗೀತಾ ಭಟ್‌ ಪ್ರಚಾರದಿಂದ ದೂರ ಉಳಿಯುತ್ತಾರೆಂದು ಓಡಾಡಿದ ಸುದ್ದಿಗೆ ಬ್ರೇಕ್‌ ಬಿದ್ದಿದೆ. ಈ ಚಿತ್ರವನ್ನು ಕ್ರಿಶ್‌ ನಿರ್ದೇಶನ ಮಾಡಿದ್ದು, ಬಾಲು ನಾಗೇಂದ್ರ ನಾಯಕ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ