ದೇಹಿ ಟ್ರೇಲರ್‌ನಲ್ಲಿ ಕಳರಿಪಯಟ್ಟು ಝಲಕ್‌

Team Udayavani, May 28, 2019, 11:10 AM IST

ಭಾರತದ ಅತ್ಯಂತ ಪ್ರಾಚೀನ ಸಮರ ಕಲೆಗಳಲ್ಲಿ ಒಂದಾಗಿರುವ ಕಳರಿಪಯಟ್ಟು ವಿಶೇಷತೆಗಳನ್ನು ತಿಳಿಸುವ “ದೇಹಿ’ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದೆ. ಸದ್ಯ ತನ್ನ ಕೆಲಸಗಳನ್ನು ಪೂರ್ಣಗೊಳಿಸಿರುವ “ದೇಹಿ’ ಚಿತ್ರತಂಡ, ಇತ್ತೀಚೆಗೆ ತನ್ನ ಟ್ರೇಲರ್‌ ಅನ್ನು ಬಿಡುಗಡೆಗೊಳಿಸುವ
ಮೂಲಕ ಚಿತ್ರದ ಪ್ರಮೋಷನ್‌ ಕೆಲಸಗಳಿಗೆ ಚಾಲನೆ ನೀಡಿದೆ.

ಬೆಂಗಳೂರಿನ ಜೆ.ಸಿ ರಸ್ತೆಯಲ್ಲಿರುವ ನಯನಾ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ, ಚಿತ್ರದ ಕಲಾವಿದರು, ತಂತ್ರಜ್ಞರು ಮತ್ತು ಇತರೆ ಗಣ್ಯರ ಸಮ್ಮುಖದಲ್ಲಿ “ದೇಹಿ’ ಚಿತ್ರದ ಮೊದಲ ಟ್ರೇಲರ್‌ ಬಿಡುಗಡೆಯಾಯಿತು. ಕಳರಿಪಯಟ್ಟು ಸಮರ ಕಲೆಯನ್ನು ಉಳಿಸಿ, ಬೆಳೆಸಲು ಶ್ರಮಿಸುತ್ತಿರುವ “ಕಳರಿ ಗುರುಕುಲಂ’ ತರಬೇತಿ ಸಂಸ್ಥೆ ಈ ಚಿತ್ರವನ್ನು ನಿರ್ಮಿಸುತ್ತಿದೆ.

ಬಹುಭಾಷಾ ನಟ ಕಿಶೋರ್‌ ಈ ಚಿತ್ರದಲ್ಲಿ ಕಳರಿಪಯಟ್ಟು ಸಮರ ಕಲೆಯನ್ನು ಕಲಿಸುವ ಗುರುವಿನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಉಳಿದಂತೆ “ಕಳರಿ ಗುರುಕುಲಂ’ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಇತರೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇಂಥದ್ದೊಂದು ಪ್ರಾಚೀನ ಸಮರ ಕಲೆಯನ್ನು ಚಿತ್ರವಾಗಿ ತೆರೆಮೇಲೆ ತರುತ್ತಿರುವುದರ ಬಗ್ಗೆ ಮಾತನಾಡುವ “ಕಳರಿ ಗುರುಕುಲಂ’ನ ಮುಖ್ಯಸ್ಥ ರಂಜನ್‌ ಮುಲ್ಲರತ್‌, “ಕಳರಿಪಯಟ್ಟು ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಕಲೆ. ಈಗ ಈ ಕಲೆಗೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ, ಮನ್ನಣೆ ಸಿಗುತ್ತಿದೆ.

ಇದನ್ನು ಇನ್ನಷ್ಟು ಜನರಿಗೆ ತಿಳಿಸಿ, ಅದರತ್ತ ಆಸಕ್ತರಾಗುವಂತೆ ಮಾಡುವ ಸದುದ್ದೇಶದಿಂದ ಕಳರಿಪಯಟ್ಟು ಕಲೆಯನ್ನು ಆಧರಿಸಿ ಸಿನಿಮಾ ಮಾಡುವ ಯೋಚನೆ ಬಂತು. ಆಗ ನಮ್ಮ “ಕಳರಿ ಗುರುಕುಲಂ’ಗೆ ವಿದ್ಯಾರ್ಥಿಯಾಗಿ ಬರುತ್ತಿದ್ದ ನಟ ಕಿಶೋರ್‌ ಅವರಿಗೂ ನಮ್ಮ ಯೋಚನೆಯನ್ನು ಹೇಳಿದೆವು.

ಅವರು ಕೂಡ ಇದನ್ನು ಸಿನಿಮಾ ಮಾಡಲು ಖುಷಿಯಿಂದ ಒಪ್ಪಿಕೊಂಡರು. ಈಗಾಗಲೇ ಈ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ “ದೇಹಿ’ ಸಿನಿಮಾವನ್ನು ಬಿಡುಗಡೆ ಮಾಡುವ ಯೋಜನೆ ಇದೆ’ ಎನ್ನುತ್ತಾರೆ. ಇನ್ನು ಕಳರಿಪಯಟ್ಟು ಸಮರಕಲೆ ಆಧರಿತ “ದೇಹಿ’ ಚಿತ್ರವನ್ನು ಹಂಪಿ, ಬೇಲೂರು, ಬೆಂಗಳೂರು ಸುತ್ತಮುತ್ತಲಿನ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.

ಚಿತ್ರಕ್ಕೆ ಆನಂದ್‌ ಸುಂದರೇಶ್‌ ಛಾಯಾಗ್ರಹಣ, ಎಸ್‌.ಕೆ ನಾಗೇಂದ್ರ ಅರಸ್‌ ಸಂಕಲನ ಕಾರ್ಯವಿದೆ. ಚಿತ್ರದ ಹಾಡುಗಳಿಗೆ ನೋಬಿನ್‌ ಪೌಲ್‌ ಸಂಗೀತ ಸಂಯೋಜನೆ ಇದೆ. ಜಯಮೋಹನ್‌ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಧನ ಈ ಚಿತ್ರವನ್ನು
ನಿರ್ದೇಶಿಸಿದ್ದಾರೆ. ಸದ್ಯ ಬಿಡುಗಡೆಯಾಗಿರುವ “ದೇಹಿ’ ಟ್ರೇಲರ್‌ ಗಮನ ಸೆಳೆಯುವಂತಿದ್ದು, ಚಿತ್ರ ಹೇಗಿರಲಿದೆ ಎಂಬ ಪ್ರಶ್ನೆಗೆ ಬಿಡುಗಡೆಯಾದ ಮೇಲಷ್ಟೇ ಉತ್ತರ ಸಿಗಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ