ಕಡು ಬಡತನದಲ್ಲೂ “ಚಿನ್ನ’ ಬೆಳೆದ ಸುಷ್ಮಾ

Team Udayavani, Feb 29, 2020, 1:30 PM IST

ಬಾಗಲಕೋಟೆ: ಇದು ಬಡತನದಲ್ಲೂ ಚಿನ್ನ ಬೆಳೆದ ಕಥೆ. ಇರುವುದು 3 ಎಕರೆ ಭೂಮಿ. ಆಸರೆಯಾಗಿದ್ದ ಕೊಳವೆ ಬಾವಿಯೂ ಕೈಕೊಟ್ಟ ಪ್ರಸಂಗ. ದೃತಿಗೆಡದೆ ಮಳೆಯನ್ನೇ ನಂಬಿ ಕೃಷಿ ಮಾಡುತ್ತಿರುವ ರೈತ ದಂಪತಿ. ಆ ದಂಪತಿಯ ಕಷ್ಟ-ಸುಃಖ-ನೋವು ನೋಡುತ್ತಲೇ ಬೆಳೆದ ಪುತ್ರಿ, ಇದೀಗ ಜ್ಞಾನ ದೇಗುಲದ ಅಂಗಳದಲ್ಲಿ ಚಿನ್ನ ಬೆಳೆದಿದ್ದಾಳೆ. ಅದು ಬರೋಬ್ಬರಿ 15 ಚಿನ್ನದ ಪದಕ ಪಡೆದು ರಾಜ್ಯದ ಗಮನ ಸೆಳೆದಿದ್ದಾಳೆ.

ಹೌದು, ಸದ್ಯ ದೆಹಲಿಯ ಭಾರತೀಯ ಕೃಷಿ ಅನುಸಂಧಾನದಲ್ಲಿ ಬೀಜಶಾಸ್ತ್ರದಲ್ಲಿ ಎಂಎಸ್ಸಿ ಮಾಡುತ್ತಿರುವ ಸುಷ್ಮಾ ಎಂ.ಕೆ ಎಂಬ ರೈತ ದಂಪತಿಯ ಪುತ್ರಿ ಬಿಎಸ್ಸಿಯಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಮೊದಲ ಶ್ರೇಣಿ ಪಡೆದು 15 ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾಳೆ. ಮಗಳು 15 ಚಿನ್ನದ ಪದಕ ಕೊರಳಿಗೆ ಹಾಕಿಕೊಂಡು ವೇದಿಕೆ ಇಳಿಯುತ್ತಿದ್ದರೆ ಮೂಲೆಯಲ್ಲಿ ಮೌನವಾಗಿ ನಿಂತಿದ್ದ ತಂದೆ ಕುಮಾರ, ತಾಯಿ ಚಂದ್ರಮತಿ ಅವರು ಆನಂದದ ಕಣ್ಣೀರು ಸುರಿದರು. ತಂದೆ-ತಾಯಿಯ ಕಷ್ಟ ನೋಡುತ್ತ ಹೊಲದಲ್ಲಿ ಆಗಾಗ ಕೃಷಿ ಮಾಡುತ್ತಲೇ ಬೆಳೆದ ಸುಷ್ಮಾ ಎಂ.ಕೆ, ವೇದಿಕೆಯಿಂದ ಇಳಿದ ತಕ್ಷಣವೇ ತನ್ನ ಕೊರಳಲ್ಲಿದ್ದ ಚಿನ್ನದ ಪದಕಗಳನ್ನು ತಾಯಿಯ ಕೊರಳಿಗೆ ಹಾಕಿ ಖುಷಿಪಟ್ಟಳು.

ಗೋಲ್ಡ್ ಮೆಡಲ್‌ ಬೆಡಗಿ: ತೋಟಗಾರಿಕೆ ವಿವಿ ವ್ಯಾಪ್ತಿಯ ಮೈಸೂರಿನ ತೋಟಗಾರಿಕೆ ಕಾಲೇಜಿನಲ್ಲಿ ಬಿಎಸ್ಸಿ ಪೂರೈಸಿದ ಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿ ಗ್ರಾಮದ ಸುಷ್ಮಾ ಎಂ.ಕೆ, ಬಿಎಸ್ಸಿಯಲ್ಲಿ 9.16ರಷ್ಟು (10ಕ್ಕೆ) ಅಂಕ ಪಡೆದು ಇಡೀ ವಿವಿಗೆ ಗೋಲ್ಡ್‌ ಮೆಡಲ್‌ ಬೆಡಗಿಯಾಗಿ ಹೊರ ಹೊಮ್ಮಿದ್ದಾಳೆ. ರ್‍ಯಾಂಕ್‌ ಪಡೆದ ಈ ವಿದ್ಯಾರ್ಥಿನಿಗೆ ರಾಜ್ಯದ ತೋಟಗಾರಿಕೆ ಸಚಿವ ಎ. ನಾರಾಯಣಗೌಡ, ಕುಲಪತಿ ಡಾ|ಕೆ.ಎಂ. ಇಂದಿರೇಶ, ಕೇಂದ್ರ ಸರ್ಕಾರದ ಭಾರತೀಯ ಪರಿವರ್ತನಾ ಸಂಸ್ಥೆ (ನೀತಿ) ಆಯೋಗ ಹಾಗೂ 15ನೇ ಹಣಕಾಸು ಆಯೋಗದ ಸದಸ್ಯ ಡಾ| ರಮೇಶ ಚಂದ್‌ ಅವರು 15 ಚಿನ್ನದ ಪದಕಗಳನ್ನು ಕೊರಳಿಗೆ ಹಾಕಿ ಅಭಿನಂದಿಸಿದರು. ತೋಟಗಾರಿಕೆ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಪ್ರೇರೇಪಿಸಿದರು.

ಹೆಣ್ಣು ಮಕ್ಕಳಲ್ಲೇ ಹೊನ್ನು ಕಂಡ ದಂಪತಿ: ಸಂತೆಮರಹಳ್ಳಿಯ ರೈತ ಕುಮಾರ ಮತ್ತು ಚಂದ್ರಮತಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಗಂಡು ಮಕ್ಕಳಿಗಾಗಿ ಹಾತೊರೆದವರಲ್ಲ. ಹೆಣ್ಣು ಮಕ್ಕಳಲ್ಲೇ ಹೊನ್ನು ಕಂಡ ದಂಪತಿ ಇವರು. ಮೊದಲ ಮಗಳು ರೇಷ್ಮಾ ಕೂಡ ಪ್ರತಿಭಾವಂತೆ. ಅವಳಿಗೆ ಮದುವೆ ಮಾಡಿಕೊಟ್ಟಿದ್ದು, 2ನೇ ಪುತ್ರಿಯೇ ಈ ಸುಷ್ಮಾ. ಸುಷ್ಮಾ ಸಂತೆಮರಹಳ್ಳಯಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗವನ್ನು ಶೇ.90ರಷ್ಟು ಅಂಕ, ದ್ವಿತೀಯ ಪಿಯುಸಿಯನ್ನು ಜೆಎಸ್‌ಎಸ್‌ ಕಾಲೇಜಿನಲ್ಲಿ ಶೇ.91.83 ಅಂಕದೊಂದಿಗೆ ಪೂರೈಸಿದ್ದಾಳೆ. ಶಾಲೆ-ಕಾಲೇಜಿನ ರಜೆ ದಿನಗಳಂದು ತಂದೆ-ತಾಯಿ ಜತೆಗೆ ಭೂಮಿ (ಕೃಷಿ)ಯಲ್ಲಿ ಕೆಲಸ ಮಾಡಿಕೊಂಡಿದ್ದ ಸುಷ್ಮಾ, ತಂದೆ ಬೆಳೆಯುತ್ತಿದ್ದ ತರಕಾರಿ ಬೆಳೆಗೆ ಹೆಚ್ಚು ಆಸಕ್ತಿ ತೋರಿದ್ದಳು. ಪಿಯುಸಿ ಮುಗಿದ ಬಳಿಕ ಮೈಸೂರಿನ ತೋಟಗಾರಿಕೆ ಕಾಲೇಜಿನಲ್ಲಿ ಮೆರಿಟ್‌ ಆಧಾರದ ಮೇಲೆ ಬಿಎಸ್ಸಿಗೆ ಸೇರಿ, ಇದೀಗ ಇಡೀ ವಿವಿಗೆ ರ್‍ಯಾಂಕ್‌ ಪಡೆದಿದ್ದಾಳೆ.

ನಾನು ಕೃಷಿ ಕುಟುಂಬದಿಂದ ಬಂದವಳು. ಖುಷ್ಕಿ ಭೂಮಿಯಲ್ಲೇ ತರಕಾರಿ ಬೆಳೆದು ಜೀವನ ಮಾಡುತ್ತೇವೆ. ತಂದೆ-ತಾಯಿ ನನ್ನ ಓದಿಗಾಗಿ ಬಹಳ ಕಷ್ಟಪಟ್ಟಿದ್ದರು. ನಾನು ಚೆನ್ನಾಗಿ ಓದಿ ಅವರ ಹೆಸರು ತರಬೇಕೆಂಬ ಆಸೆ ಮಾತ್ರ ಹೊಂದಿದ್ದೆ. ಆದರೆ, ಇಡೀ ವಿವಿಗೆ ಶ್ರೇಣಿ ಪಡೆದು 15 ಚಿನ್ನದ ಪದಕ ಪಡೆಯುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ. ನನಗೂ, ತಂದೆ-ತಾಯಿಗೂ ಖುಷಿಯಾಗಿದೆ. ತೋಟಗಾರಿಕೆ ಬೀಜಶಾಸ್ತ್ರದಲ್ಲಿ ಸಂಶೋಧನೆ ಮಾಡಬೇಕು ಎಂಬುದು ನನ್ನ ಗುರಿ. ಯಾವುದೇ ನೌಕರಿಗಾಗಿ ಆಸೆ ಪಡದೆ, ರೈತರಿಗೆ ಸುಧಾರಿತ, ಲಾಭದಾಯಕ ತರಕಾರಿ ಬೀಜಗಳು ದೊರೆಯುವಂತೆ ಮಾಡುವುದು ನನ್ನ ಬಯಕೆ. -ಸುಷ್ಮಾ ಎಂ.ಕೆ, 15 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ

ನಮಗೆ ಗಂಡು ಮಕ್ಕಳಿಲ್ಲ. ಇಬ್ಬರೂ ಹೆಣ್ಣು ಮಕ್ಕಳು, ಚೆನ್ನಾಗಿ ಕಲಿತಿದ್ದಾರೆ. ಸುಷ್ಮಾ 15 ಚಿನ್ನದ ಪದಕ ಪಡೆದು ತೋಟಗಾರಿಕೆ ವಿವಿಯಲ್ಲಿ ನಮಗೂ ಗೌರವ ತಂದುಕೊಟ್ಟಿದ್ದಾಳೆ. ಅವಳು ಇಷ್ಟಪಟ್ಟಷ್ಟು ಓದಿಸಲು ನಾವು ಸಿದ್ಧರಿದ್ದೇವೆ. ಹೆಣ್ಣು ಮಗಳಿಂದ ಹೊನ್ನು ಪಡೆದ ಖುಷಿ ನಮಗಿದೆ. –ರೈತ ದಂಪತಿ ಕುಮಾರ ಮತ್ತು ಚಂದ್ರಮತಿ, ಸಂತೆಮರಹಳ್ಳಿ, ಚಾಮರಾಜನಗರ ತಾಲೂಕು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ