ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಯುವಕನಿಗೆ ಬ್ಲ್ಯಾಕ್ಮೇಲ್
Team Udayavani, Jul 11, 2022, 11:19 AM IST
ಬೆಂಗಳೂರು: ಫೇಸ್ಬುಕ್ ಮೂಲಕ ಪರಿಚಯವಾದ ಯುವತಿಯೊಬ್ಬರು ತನ್ನ ಸಹಚರರ ಮೂಲಕ ನಗರದ ಯುವಕನೊಬ್ಬನಿಗೆ ಬ್ಲ್ಯಾಕ್ಮೇಲ್ ಮಾಡಿ 5 ಲಕ್ಷ ರೂ. ಸುಲಿಗೆ ಮಾಡಿರುವ ಪ್ರಕರಣ ಆಗ್ನೇಯ ವಿಭಾಗದ ಸೆನ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಂತ್ರಸ್ತ ಯುವಕ ನೀಡಿರುವ ದೂರಿನ ಮೇರೆಗೆ ಆಗ್ನೇಯ ವಿಭಾಗದ ಸೆನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರುದಾರ ಯುವಕನಿಗೆ ಫೇಸ್ಬುಕ್ ನಲ್ಲಿ ಪರಿಚಯವಾದ ಯುವತಿ ಜತೆ ನಿತ್ಯ ಚಾಟಿಂಗ್ ಮಾಡಿದ್ದಾನೆ. ನಂತರ ಇಬ್ಬರು ಮೊಬೈಲ್ ನಂಬರ್ ಬದಲಾಯಿಸಿಕೊಂಡು, ವಾಟ್ಸ್ಆ್ಯಪ್ನಲ್ಲಿ ಮಾತಕತೆ ಮುಂದುವರಿಸಿದ್ದಾರೆ. ಬಳಿಕ ದಿನಂಪ್ರತಿ ವಿಡಿಯೋ ಕರೆ ಮಾಡುತ್ತಿದ್ದ ಯುವತಿ ಯುವಕನಿಗೆ ಲೈಂಗಿಕವಾಗಿ ಪ್ರಚೋದಿಸಿ ತಾನೂ ಬೆತ್ತಲಾಗಿ, ಯುವಕನನ್ನು ಬೆತ್ತಲೆ ಮಾಡಿದ್ದಾಳೆ. ಅದೇ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು, ಕೆಲ ದಿನಗಳ ಬಳಿಕ ಯುವಕನಿಗೆ ಬ್ಲ್ಯಾಕ್ಮೇಲ್ ಮಾಡಿದ್ದಾಳೆ. ಯುವಕ ಹಣ ನೀಡಿರಲಿಲ್ಲ.
ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ ರಾಜಪಕ್ಸೆ
ಕೆಲದಿನ ಬಿಟ್ಟು ದೂರುದಾರರಿಗೆ ಕರೆ ಮಾಡಿದ್ದ ಅಪರಿಚಿತರು, ಸಿಬಿಐ ಅಧಿಕಾರಿಯೆಂದು ಹೇಳಿಕೊಂಡಿದ್ದರು. ನಿಮ್ಮ ಹೆಸರು ಬರೆದಿಟ್ಟು ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೊಬೈಲ್ನಲ್ಲಿ ನಿಮ್ಮ ನಗ್ನ ವಿಡಿಯೋ ಸಿಕ್ಕಿದೆ. ನಿಮ್ಮ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಸದ್ಯದಲ್ಲೇ ಮನೆ ಮೇಲೆ ದಾಳಿ ಮಾಡುತ್ತೇವೆ ಎಂದು ಬೆದರಿಸಿದ್ದಾರೆ. ಅಲ್ಲದೆ, ಐದು ಲಕ್ಷ ರೂ. ನೀಡಿದರೆ ಪ್ರಕರಣ ಮುಚ್ಚಿಹಾಕುತ್ತೇವೆ ಎಂದು ಬ್ಲ್ಯಾಕ್ ಮಾಡಿದಾಗ ಯುವಕ ಐದು ಲಕ್ಷ ರೂ. ವರ್ಗಾವಣೆ ಮಾಡಿದ್ದಾನೆ. ನಂತರವೂ ದಾಳಿಯ ಬೆದರಿಕೆ ಹಾಕಿದಾಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.