ನಗರದಲ್ಲಿ ಹಲವೆಡೆ ಸಾಧಾರಣ ಮಳೆ
Team Udayavani, Jul 18, 2019, 3:05 AM IST
ಬೆಂಗಳೂರು: ನಗರದಲ್ಲಿ ಬುಧವಾರ ರಾತ್ರಿ ಸುರಿದ ಮಳೆಗೆ ನಗರದ ವಿವಿಧ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಯಿತು. ರಾತ್ರಿ 9 ಗಂಟೆಯಿಂದ ಬೆಂಗಳೂರಿನ ವಿವಿಧ ಭಾಗದಲ್ಲಿ ತಡರಾತ್ರಿ 12 ಗಂಟೆವರೆಗೆ ಧಾರಕಾರ ಮಳೆ ಸುರಿದಿದ್ದು, ಇದರಿಂದ ಸಿಟಿ ಮಾರುಕಟ್ಟೆ, ಮೆಜೆಸ್ಟಿಕ್, ಚಾಮರಾಜಪೇಟೆ ಹಾಗೂ ಆನಂದ ರಾವ್ ವೃತ್ತ ಸೇರಿದಂತೆ ವಿವಿಧೆಡೆ ರಸ್ತೆ, ಅಂಡರ್ ಪಾಸ್ ಮತ್ತು ಮೇಲು ಸೇತುವೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸಿದರು.
ಆದರೆ, ಮಳೆಗೆ ಮರದ ಕೊಂಬೆ ಹಾಗೂ ಮನೆಗಳಿಗೆ ನೀರು ನುಗ್ಗಿರುವುದು, ಸಂಚಾರ ದಟ್ಟಣೆ ಹೆಚ್ಚಾಗಿರುವ ಯಾವುದೇ ದೂರು ಬಂದಿಲ್ಲ ಎಂದು ಬಿಬಿಎಂಪಿ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಬೆಂಗಳೂರು ಉತ್ತರ ಭಾಗದ ಬಾಗಲೂರು 6.5 ಮಿ.ಮೀ, ಬೆಟ್ಟಲಸೂರು 1 ಮಿ.ಮೀ, ಯಲಹಂಕ ಮತ್ತು ಕೊಡಿಗೆಹಳ್ಳಿಯಲ್ಲಿ 5 ಮಿ.ಮೀ, ವಿದ್ಯಾರಣ್ಯಪುರದಲ್ಲಿ 2.5 ಮಿ.ಮೀ, ದೊಡ್ಡಗುಬ್ಬಿ 2.5, ಮಹದೇವಪುರ 3.5 ಮಿ.ಮೀ, ಅಗ್ರಹಾರ ಮತ್ತು ದಾಸರಹಳ್ಳಿಯಲ್ಲಿ 0.5 ಮಿ.ಮೀ. ಬೀದರಹಳ್ಳಿ, ಮಂಡೂರು, ಮಹದೇವಪುರ ಮತ್ತು ಹೂಡಿ ಸುತ್ತಮುತ್ತಲ ಪ್ರದೇಶಗಳಲ್ಲಿ 0.5 ಮಿ.ಮೀ ಮಳೆಯಾಗಿದೆ.
ಚೌಡೇಶ್ವರಿ ವಾರ್ಡ್‌ನಲ್ಲಿ 14 ಮಿ.ಮೀ, ಬೀದರಹಳ್ಳಿಯಲ್ಲಿ 8.5 ಮಿ.ಮೀ, ಕೆ.ಆರ್.ಪುರದಲ್ಲಿ 12.5 ಮಿ.ಮೀ, ರಾಮಮೂರ್ತಿ ನಗರದಲ್ಲಿ 9.5 ಮಿ.ಮೀ ಮತ್ತು ಆವಲಹಳ್ಳಿಯಲ್ಲಿ 5.5 ಮಿ.ಮೀ. ಹೊರಮಾವು 10 ಮಿ.ಮೀ ಎಸ್‌ಬಿಆರ್ ಲೇಔಟ್ 10.5 ಮಿ.ಮೀ, ಕುಶಾಲನಗರದಲ್ಲಿ 9.5 ಮಿ.ಮೀ. ಬೆನ್ನಿಗಾನಹಳ್ಳಿ 5 ಮಿ.ಮೀ ಮತ್ತು ಬಾಣಸವಾಡಿಯ ಸುತ್ತಮುತ್ತಲಿನ ಪ್ರದೇಶದಲ್ಲಿ 7 ಮಿ.ಮೀ ಹಾಗೂ ಬೆಂಗಳೂರು ಪೂರ್ವದ ನಾಗೇನಹಳ್ಳಿಯಲ್ಲಿ ಸಾಧಾರಣ ಮಳೆಯಾಗಿದ್ದು, ನಗರದ ಬಹುತೇಕ ಕಡೆ ತುಂತುರು ಮಳೆಯಾಗಿದೆ.