ಯುವ ಸಂಘಟನೆಯಿಂದ ಗೋವುಗಳ ರಕ್ಷಣೆ

Team Udayavani, Apr 18, 2019, 3:00 AM IST

ಬೆಂಗಳೂರು: ಗೋವುಗಳನ್ನುರಕ್ಷಿಸುವ ಉದ್ದೇಶದಿಂದ ಜೈನ್‌ ಯವ ಸಂಘಟನೆ ವಿಶೇಷ ಕಾಳಜಿ ವಹಿಸುತ್ತಿದೆ. ಕಳೆದ ಒಂದುವರೆ ದಶಕಗಳಿಂದ ಈ ಸಂಘಟನೆಯ ಸದಸ್ಯರು ಗೋಶಾಲೆಗಳಿಗೆ ದೇಣಿಗೆ ಮತ್ತು ಗೋವುಗಳಿಗೆ ಅಗತ್ಯವಿರುವ ಆಹಾರವನ್ನು ನೀಡುವುದರ ಮೂಲಕ ಸಹಾಯಹಸ್ತ ನೀಡಿದ್ದಾರೆ.

“ಬೆಂಗಳೂರಿನಲ್ಲಿ 30 ಗೋಶಾಲೆಗಳಿದ್ದು, ಈ ಎಲ್ಲ ಗೋಶಾಲೆಗಳಿಗೂ ಜೈನ್‌ ಧರ್ಮಿಯರು ಸಹಾಯ ಮಾಡುತ್ತಿದ್ದಾರೆ. ಇದಕ್ಕೆ ಜೈನ್‌ ಯುವ ಸಂಘಟನೆ ಕೈಜೋಡಿಸಿದೆ’ ಎನ್ನುತ್ತಾರೆ ಸಂಘಟನೆಯ ಸದಸ್ಯ ರಾಜೇಶ್‌.

ಜೈನ್‌ ಸಮುದಾಯ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಗೋಶಾಲೆಗಳ ನಿರ್ವಹಣೆಗೆ ದೇಣಿಗೆ ಸಂಗ್ರಹಿಸಲಾಗುತ್ತಿದ್ದು, ಜನರು ಅಪಾರ ಪ್ರಮಾಣದಲ್ಲಿ ಧನಸಹಾಯ ಮಾಡುತ್ತಿದ್ದಾರೆ. ಹೀಗೆ ಸಂಗ್ರಹವಾದ ದೇಣಿಗೆಯನ್ನು ಗೋಶಾಲೆಗಳಿಗೆ ನೀಡಲಾಗುತ್ತಿದೆ.

ಗೋವುಗಳಿಗೆ ಮೇವು ಮತ್ತು ಔಷಧಿ ವೆಚ್ಚಕ್ಕಾಗಿ ಇದನ್ನು ಬಳಸಲಾಗುತ್ತಿದೆ. ಬುಧವಾರ ಶ್ರಮಣ ಭಗವಾನ್‌ ಮಹಾವೀರರ 2,618ನೇ ಜನ್ಮಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಸಹ ಗೋವುಗಳಿಗೆ ದೇಣಿಗೆ ಸಂಗ್ರಹಿಸಲಾಗಿದೆ.

ಮಹಾವೀರರ 2618ನೇ ಜನ್ಮಕಲ್ಯಾಣ ಮಹೋತ್ಸವ ವಿಶೇಷ: ಶ್ರಮಣ ಭಗವಾನ್‌ ಮಹಾವೀರರ 2618ನೇ ಜನ್ಮದಿನದ ವಿಶೇಷವಾಗಿ ಜೈನ್‌ ಯುವ ಸಂಘಟನೆ ವಿಭಿನ್ನ ರೀತಿಯಲ್ಲಿ ಗೋವುಗಳಿಗೆ ದೇಣಿಗೆ ಸಂಗ್ರಹಿಸಲು ಮುಂದಾಗಿದೆ.

ಮಹಾವೀರರ 2618ನೇ ಜನ್ಮದಿನದ ಪ್ರಯುಕ್ತ ಜೈನ್‌ ಧರ್ಮ ಅನುಯಾಯಿ 2,618 ಜನರಿಗೆ ಗೋವಿನಾಕಾರದ ಪ್ಲಾಸ್ಟಿಕ್‌ ಹುಂಡಿಯನ್ನು ನೀಡಲಾಗಿದೆ. ಇದರಲ್ಲಿ ಪ್ರತಿ ತಿಂಗಳು ತಮ್ಮ ಕೈಲಾದಷ್ಟು ಹಣವನ್ನು ಸಂಗ್ರಹಿಸಿ, ಹತ್ತಿರದ ಗೋಶಾಲೆಗಳಿಗೆ ನೀಡುವಂತೆ ಮನವಿ ಮಾಡಲಾಗಿದೆ. ವಿಶೇಷವೆಂದರೆ, ಈ ಹುಂಡಿಯನ್ನು ಪಡೆದವರೇ ನೇರವಾಗಿ ಈ ಹಣವನ್ನು ಹತ್ತಿರದ ಗೋಶಾಲೆಗಳಿಗೆ ನೀಡಲಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ