ರಸ್ತೆಯಲ್ಲಿ ವಾರ್ಡ್‌ ಕಚೇರಿ: ಪಾಲಿಕೆಗೆ ನೋಟಿಸ್‌

Team Udayavani, May 15, 2019, 3:07 AM IST

ಬೆಂಗಳೂರು: ಕಗ್ಗದಾಸಪುರದ ಸಾರ್ವಜನಿಕ ರಸ್ತೆಯಲ್ಲಿ ಬಿಬಿಎಂಪಿ ವಾರ್ಡ್‌ ಕಚೇರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಂಗಳವಾರ ಮಧ್ಯಂತರ ಆದೇಶ ನೀಡಿರುವ ಹೈಕೋರ್ಟ್‌, ಈ ಸಂಬಂಧ ಬಿಬಿಎಂಪಿ ಆಯುಕ್ತರಿಗೆ ನೋಟಿಸ್‌ ಜಾರಿಗೊಳಿಸಿದೆ.

ಈ ಕುರಿತಂತೆ ಕಗ್ಗದಾಸಪುರದ ನಿವಾಸಿ, ವಕೀಲ ಆರ್‌.ಸುರೇಂದ್ರ ಬಾಬು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಜಾನ್‌ ಮೈಕೆಲ್‌ ಕುನ್ಹಾ ಹಾಗೂ ನ್ಯಾ. ಎಚ್‌.ಟಿ ನರೇಂದ್ರಪ್ರಸಾದ್‌ ಅವರಿದ್ದ ರಜಾ ಕಾಲದ ವಿಭಾಗೀಯ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರ, ಬಿಬಿಎಂಪಿ ಆಯುಕ್ತರು ಹಾಗೂ ಸಂಬಂಧಪಟ್ಟ ಇತರರಿಗೆ ನೋಟಿಸ್‌ ಜಾರಿಗೆ ಆದೇಶಿಸಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ವಾರ್ಡ್‌ ನಂ.57ರಲ್ಲಿ ಮುರಗೇಶ್‌ ಪಾಳ್ಯಕ್ಕೆ ಸಂಪರ್ಕ ಕಲ್ಪಿಸುವ ಕಗ್ಗದಾಸಪುರ ಮುಖ್ಯ ರಸ್ತೆಯ 5ನೇ ರಸ್ತೆಯಲ್ಲಿ ಅನಧಿಕೃತವಾಗಿ ಬಿಬಿಎಂಪಿ ವಾರ್ಡ್‌ ಕಚೇರಿ ನಿರ್ಮಿಸಲಾಗುತ್ತಿದೆ. ನಕಾಶೆ ಅನುಮೋದನೆ ಇಲ್ಲದೇ ಸ್ಥಳೀಯ ಪಾಲಿಕೆ ಸದಸ್ಯರ ಪ್ರಭಾವದಿಂದ ಸಾರ್ವಜನಿಕರ ಸಂಚಾರಕ್ಕೆ ಇರುವ ರಸ್ತೆಯಲ್ಲಿ ಪಾಲಿಕೆ ಕಚೇರಿ ನಿರ್ಮಿಸುತ್ತಿರುವುದು ಕಾನೂನು ಬಾಹಿರ.

ಇದನ್ನು ಆಕ್ಷೇಪಿಸಿ 2019ರ ಫೆ.19ರಂದು ಸಲ್ಲಿಸಿದ ಮನವಿಯನ್ನು ಪಾಲಿಕೆ ಪರಿಗಣಿಸಿಲ್ಲ ಎಂದು ದೂರಿದರು. ಅಲ್ಲದೇ ಈ ರಸ್ತೆ 30 ಅಡಿ ಇದ್ದು, ಅದರಲ್ಲಿ ಕಟ್ಟಡ ನಿರ್ಮಾಣ ಮಾಡಿದರೆ ಇಡೀ ಪ್ರದೇಶದಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗುತ್ತದೆ. ಇದರಿಂದಾಗಿ ಈ ಪ್ರದೇಶದಲ್ಲಿ ನೆಲೆಸಿರುವ ಸುಮಾರು 7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ.

ಈ ಕಾಮಗಾರಿ ಕೈಗೆತ್ತಿಕೊಳ್ಳುವ ಮೊದಲು ಪಾಲಿಕೆ, ಈ ಭಾಗದಲ್ಲಿ ವಾಸ ಮಾಡುತ್ತಿರುವ 2 ಸಾವಿರಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ ನಿವಾಸಿಗಳು ಹಾಗೂ 3 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಆಗುವ ತೊಂದರೆಯನ್ನು ಗಮನಿಸಬೇಕಿತ್ತು ಎಂದು ಅರ್ಜಿಯಲ್ಲಿ ಹೇಳಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ