ಮಹಿಳೆಯರಿಗೆ ಬೇಡವಾದ ಟ್ರಾನ್ಸಿಟ್‌ ಹಾಸ್ಟೆಲ್‌

Team Udayavani, Dec 3, 2019, 2:01 PM IST

ಬೆಂಗಳೂರು: ಉದ್ಯೋಗ ಸಂದರ್ಶನ, ವೃತಿಪರ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ವಿವಿಧ ಜಿಲ್ಲೆಗಳಿಂದ ಬರುವ ಮಹಿಳೆಯರಿಗಾಗಿ ರಾಜಧಾನಿ ಬೆಂಗಳೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಟ್ರಾನ್ಸಿಟ್‌ ಹಾಸ್ಟೆಲ್‌ ಆರಂಭಿಸಿದ್ದರೂ ಪ್ರವೇಶ ಪಡೆಯುವವರೇ ಇಲ್ಲ. ನಗರದಲ್ಲಿ ಖಾಸಗಿ ಪಿಜಿಗಳಲ್ಲಿ ಉಳಿಯಲು ಸಾವಿರಾರು ರೂ. ವೆಚ್ಚವಾಗುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರು ಹಣ ಭರಿಸುವುದು ಕಷ್ಟ ಎಂಬ ಕಾರಣಕ್ಕೆ ವೃತ್ತಿಪರ ಕೋರ್ಸ್‌, ಉದ್ಯೋಗ ಸಂದರ್ಶನಕ್ಕೆ ಬಂದಾಗ ಉಳಿದುಕೊಳ್ಳಲು ಇಲಾಖೆ12 ಮಹಿಳಾ ಟ್ರಾನ್ಸಿಟ್‌ ಹಾಸ್ಟೆಲ್‌ ಪ್ರಾರಂಭಿಸಿದೆ.

ಆದರೆ, ಕಳೆದ ಆರು ತಿಂಗಳಲ್ಲಿ ಅಲ್ಲಿ ಪ್ರವೇಶ ಪಡೆದವರು ಕೇವಲ 24 ಮಂದಿ. ಅದರಲ್ಲೂ ಒಂಬತ್ತು ಹಾಸ್ಟೆಲ್‌ಗ‌ಳಲ್ಲಿ ಇದುವರೆಗೂ ಒಬ್ಬ ಮಹಿಳೆ ಕೂಡ ಪ್ರವೇಶ ಪಡೆದಿಲ್ಲ.ಒಂದು ಟ್ರಾನ್ಸಿಟ್‌ ಹಾಸ್ಟೆಲ್‌ನಲ್ಲಿ ಹತ್ತು ಮಂದಿ ಉಳಿದುಕೊಳ್ಳುವ ವ್ಯವಸ್ಥೆ ಇದ್ದು, ಊಟ, ಬಿಸಿ ನೀರು, ಭದ್ರತೆ ಸೇರಿ ಎಲ್ಲ ವ್ಯವಸ್ಥೆ ಇದೆಯಾದರೂ ಇಂತದ್ದೊಂದು ಅವಕಾಶ ಇರುವ ಬಗ್ಗೆ ಇಲಾಖೆಪ್ರಚಾರ ಮಾಡದ ಕಾರಣ ಇಲ್ಲಿಗೆ ಯಾರೂ ಬರುತ್ತಿಲ್ಲ ಎಂದು ಹೇಳಲಾಗಿದೆ. ಜಯನಗರ, ಮೈಸೂರು ರಸ್ತೆ, ಕೋರಮಂಗಲ, ಶಂಕರಪುರ, ಕನಕಪುರ ರಸ್ತೆ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ 12 ಟ್ರಾನ್ಸಿಟ್‌ ಹಾಸ್ಟೆಲ್‌ ಇದೆಯಾದರೂ ಅದರ ಬಗ್ಗೆ ಬಹುತೇಕರಿಗೆ ಮಾಹಿತಿ ಇಲ್ಲ ಎನ್ನಲಾಗಿದೆ.

ಸಂಪಂಗಿರಾಮನಗರ ದಲ್ಲಿರುವ ಯೂನಿವರ್ಸಿಟಿವುಮನ್‌ ಅಸೋಸಿಯೇಷನ್‌ ಉದ್ಯೋಗಸ್ಥ ಮಹಿಳೆಯರ ವಸತಿಗೃಹ, ಮಿಷನ್‌ ರೋಡ್‌ನ‌ಲ್ಲಿರುವಯಂಗ್‌ ವುಮನ್‌ ಕ್ರಿಶ್ಚಿಯನ್‌ ಅಸೋಸಿಯೇಷನ್‌ ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ, ಜಯನಗರ 4ನೇ ಬ್ಲಾಕ್‌ನಲ್ಲಿರುವ ಆಲ್‌ ಇಂಡಿಯಾ ವುಮನ್‌ಕಾನ್ಫರೆನ್ಸ್‌ ಉದ್ಯೋಗಸ್ಥ ಮಹಿಳೆಯರ ವಸತಿಗೃಹದಲ್ಲಿ ಆರಂಭವಾಗಿ ಆರು ತಿಂಗಳಲ್ಲಿ 24 ಮಹಿಳೆಯರು ಸೌಲಭ್ಯ ಪಡೆದಿದ್ದು, ಉಳಿದ 9 ವಸತಿಗೃಹಗಳಲ್ಲಿ ಮಹಿಳೆಯರೇ ಭೇಟಿ ನೀಡಿಲ್ಲ.

ಪ್ರಚಾರದ ಕೊರತೆ: ಬೆಂಗಳೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಉಳಿದುಕೊಳ್ಳಲು ವಸತಿಗೃಹಗಳು ಇದೆ ಎಂಬುದು ಗೊತ್ತಿಲ್ಲ. ಹೀಗಾಗಿ ಸರ್ಕಾರದ ಸೌಲಭ್ಯ ದೊರೆಯುತ್ತಿಲ್ಲ. ಮುಖ್ಯವಾಗಿ ಮಹಿಳೆಯರು ಮೆಜಸ್ಟಿಕ್‌, ಯಶವಂತಪುರ, ಶಾಂತಿನಗರ, ಜಯನಗರ ಸೇರಿದಂತೆ ವಿವಿಧ ಕೆಎಸ್‌ ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿಯೇ ಇಳಿಯುತ್ತಾರೆ. ಆದರೆ, ಜಯನಗರ ಹೊರತು ಪಡಿಸಿದರೆ ಮೆಜಸ್ಟಿಕ್‌, ಯಶವಂತಪುರ ಬಸ್‌ ನಿಲ್ದಾಣದ ಸುತ್ತಲಿನ ಪ್ರದೇಶದಲ್ಲಿ ವಸತಿಗೃಹಗಳೇ ಇಲ್ಲ. ಇದು ಕೂಡ ವಸತಿಗೃಹಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಲುಕಾರಣವಾಗಿದೆ ಎಂಬ ಮಾತುಗಳೂ ಇವೆ.

ದೊರೆಯುವ ಸೌಲಭ್ಯವೇನು?: ಎಲ್ಲ ವರ್ಗದಮಹಿಳೆಯರಿಗೂ ಮೂರು ದಿನಗಳು ತಂಗಲುಅವಕಾಶ, ಉಚಿತ ಊಟ, ಉಪಹಾರ, ಟೀ, ಕಾಫಿ ಮತ್ತು ಸ್ನಾನಕ್ಕೆ ಬಿಸಿನೀರಿನ ಸೌಲಭ್ಯ, ವೈಯಕ್ತಿಕ ದಾಖಲಾತಿಗಳು ಹಾಗೂ ಇನ್ನಿತರೆ ವಸ್ತುಗಳನ್ನು ಇರಿಸಿಕೊಳ್ಳಲು ಭದ್ರತಾ ಕಪಾಟು ಸೌಲಭ್ಯ ದೊರೆಯಲಿದೆ. ಈ ಯೋಜನೆಯು ಒಂಟಿಯಾಗಿ ಬೆಂಗಳೂರಿಗೆ ಬರುವ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗೆ ಮಾತ್ರ ಅನ್ವಯವಾಗುತ್ತದೆ.

ಹಾಸ್ಟೆಲ್‌ಗೆ ಸೇರುವುದು ಹೇಗೆ?: ಪ್ರವೇಶ ಪರೀಕ್ಷೆ,ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬೆಂಗಳೂರಿಗೆ ಬಂದು ಮಹಿಳೆಯರು ಹತ್ತಿರದ ವಸತಿಗೃಹಕ್ಕೆ ತೆರಳಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಗೆ ಪರೀಕ್ಷೆಯ ಪ್ರವೇಶ ಪತ್ರದ ಪ್ರತಿ, ವಿಳಾಸ ಒಳಗೊಂಡ ಗುರುತಿನ ಚೀಟಿ (ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌, ಮತದಾರರ ಗುರುತಿನಚೀಟಿ), ಪೋಷಕರ ಫೋನ್‌ ನಂಬರ್‌, ವಿಳಾಸ ನೀಡಬೇಕು. ನೋಂದಣಿಯಾದ ನಂತರ ರೂಮ್‌ ದೊರೆಯಲಿದೆ. ಒಂದು ಹಾಸ್ಟೆಲ್‌ ನಲ್ಲಿ 10 ಬೆಡ್‌ಗಳಿದ್ದು, ಒಬ್ಬರು ಮೇಲ್ವಿಚಾರಕರು, ಸೆಕ್ಯೂರಿಟಿ ಗಾರ್ಡ್‌ ಇರಲಿದ್ದಾರೆ.

 

-ಮಂಜುನಾಥ್‌ ಗಂಗಾವತಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ