83 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ: ಪ್ರಕಾಶ್
Team Udayavani, Jun 7, 2018, 5:16 PM IST
ಕೂಡ್ಲಿಗಿ: ಈ ಬಾರಿ ಮುಂಗಾರು ಆರಂಭದ ಪೂರ್ವದಲ್ಲಿಯೇ ಮಳೆರಾಯನ ಆರ್ಭಟ ಜೋರಾಗಿದ್ದು, ರೈತರ ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಕಳೆದ ಬಾರಿ ಮುಂಗಾರು ವೈಫಲ್ಯದಿಂದಾಗಿ ಮಳೆಗಾಗಿ ದೇವರ ಮೊರೆ ಹೋಗಿದ್ದ ರೈತರು, ಈ ಬಾರಿ ಮುಂಗಾರು ಆರಂಭದ ಮೊದಲೇ ಸಮೃದ್ಧಿ ಮಳೆಯಾಗಿ ಕೆರೆ ಕಟ್ಟೆಗಳು ತುಂಬಿದ್ದು, ಅನ್ನದಾತನಿಗೆ ನೆಮ್ಮದಿ ತಂದಿದ್ದು, ಈಗಾಗಲೇ
ಬಿತ್ತನೆ ಕಾರ್ಯ ಭರದಿಂದ ನಡೆದಿದೆ.
ತಾಲೂಕಿನಲ್ಲಿ 1.1 ಲಕ್ಷ ಹೆಕ್ಟೇರ್ ಭೂಮಿ ಬಿತ್ತನೆಗೆ ಯೋಗ್ಯವಾಗಿದ್ದು, ಪ್ರತಿವರ್ಷ ಮುಂಗಾರು ಹಂಗಾಮಿನಲ್ಲಿ 83 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಮುಂಗಾರು ಹಂಗಾಮಿನಲ್ಲಿ ಬಹುತೇಕ ಭಾಗದಲ್ಲಿ ರೈತರು ಜೋಳ, ಮೆಕ್ಕೆಜೋಳ, ಮಿಡಿ ಸೌತೆ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೀಜಗಳ ಬಿತ್ತನೆ ಮಾಡಿದ್ದಾರೆ. ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದೆ. ಈಗಾಗಲೇ ಜೋಳ, ಹೆಸರು, ಮೆಕ್ಕೆಜೋಳ, ಮೆಣಸಿನಕಾಯಿ
ಸೇರಿದಂತೆ ವಿವಿಧ ಧಾನ್ಯಗಳ ಬೀಜಗಳನ್ನು ರೈತರು ಬಿತ್ತನೆ ಮಾಡಿದ್ದು, ಕೆಲವು ತಾಂತ್ರಿಕ ಕಾರಣಗಳಿಂದ ರೈತರಿಗೆ ನಿಗದಿತ ಸಮಯದಲ್ಲಿ ಡಿಎಪಿ ಗೊಬ್ಬರ ಸಿಕ್ಕಿಲ್ಲ. ಇನ್ನೆರಡು ದಿನಗಳಲ್ಲಿ ಡಿಎಪಿ ಗೊಬ್ಬರವನ್ನು ರೈತರಿಗೆ ಲಭ್ಯವಾಗಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎನ್.ವಿ.ಪ್ರಕಾಶ್ ತಿಳಿಸಿದ್ದಾರೆ.
ತಾಲೂಕಿನಲ್ಲಿ ನಾಲ್ಕೈದು ಉತ್ತಮ ಮಳೆಯಾಗಿದ್ದರಿಂದ ಕೆಲವು ಭಾಗಗಳಲ್ಲಿ ಹಳ್ಳಗಳು ಹರಿದು ಕೆರೆ ಕಟ್ಟೆಗಳಿಗೆ ನೀರು
ಬಂದಿದೆ. ಎರಡು ವರ್ಷಗಳಿಂದ ನಿಂತಿದ್ದ ರೈತರ ಪಂಪ್‌ಸೆಟ್‌ಗಳಲ್ಲಿ ನೀರು ಬರುತ್ತಿದೆ. ಇದರಿಂದ ರೈತರಿಗೆ ಅನುಕೂಲವಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ಸೂಕ್ತ ಸಮಯಕ್ಕೆ ಡಿಎಪಿ ಪೂರೈಸಿದ್ದರೆ ಮುಂಗಾರಿನಲ್ಲಿ ಬಿತ್ತಿದ ಬೆಳೆಗಳು ದಷ್ಟಪುಷ್ಟವಾಗಿ ಬೆಳೆಯಲು ಅನುಕೂಲವಾಗುತ್ತಿತ್ತು. ಆದರೆ ಸೂಕ್ತ ಸಮಯಕ್ಕೆ ಬಿತ್ತನೆ ಬೀಜ, ಇತರೆ ಗೊಬ್ಬರ ಸಿಕ್ಕರೂ ಡಿಎಪಿ ಗೊಬ್ಬರ ರೈತರಿಗೆ ಸಿಗದಿರುವುದ್ದರಿಂದ ರೈತರಿಗೆ ತೊಂದರೆಯಾಗಿದೆ.
ಈ ಬಗ್ಗೆ ಅಧಿಕಾರಿಗಳು ಈಗಲಾದರೂ ರೈತರಿಗೆ ಬೇಕಾದ ರಾಸಾಯನಿಕ ಗೊಬ್ಬರ ಪೂರೈಸಲು ಮುಂದಾಗಬೇಕೆಂದು ರೈತ ಬಸವರಾಜ ಒತ್ತಾಯಿಸಿದ್ದಾರೆ.