ವಿಜೃಂಭಣೆಯ ವಿಜಯ ದಶಮಿ ಉತ್ಸವ

ಮೆರವಣಿಗೆಯಲ್ಲಿ ಭಾಗವಹಿಸಿದ ವಿವಿಧ ದೇವರುಗಳು ಅದ್ಧೂರಿ ಮೆರವಣಿಗೆರಾವಣ ದಹನ

Team Udayavani, Oct 9, 2019, 2:40 PM IST

ಭದ್ರಾವತಿ: ನಗರಸಭೆಯಿಂದ ಕಳೆದ 10 ದಿನಗಳಿಂದ ಆಯೋಜಿಸಿದ್ದ ವೈವಿಧ್ಯಮಯ ದಸರಾ ಮಹೋತ್ಸವವು ಮಂಗಳವಾರ ವಿಜಯದಶಮಿ ಉತ್ಸವ ಹಾಗೂ ಬನ್ನಿ ಮುಡಿಯುವುದರೊಂದಿಗೆ ಸಮಾಪ್ತಿಯಾಯಿತು.

ವಿಜಯದಶಮಿ ಪ್ರಯುಕ್ತ ನಗರದ ವಿವಿಧ ಬಡಾವಣೆಗಳಲ್ಲಿರುವ ದೇವಾಲಯಗಳ ದೇವಾನು ದೇವತೆಗಳ ಉತ್ಸವ ಮೂರ್ತಿಗಳು ಮಂಗಳವಾರ ಮದ್ಯಾಹ್ನ ಅಪ್ಪರ್‌ ಹುತ್ತಾದ ಶ್ರೀ ತಿರುಮಲ ಶ್ರೀನಿವಾಸ ದೇವರ ದೇವಾಲಯದ ಮುಂಭಾಗದಲ್ಲಿ ಒಂದೆಡೆ ಸಾಲಾಗಿ ಸೇರಿತು.

ಶಾಸಕ ಬಿ.ಕೆ. ಸಂಗಮೇಶ್ವರ್‌ ಹಾಗೂ ನಗರಸಭಾ ಆಯುಕ್ತ ಮನೋಹರ್‌ ನಾಡದೇವಿಗೆ ಹಾಗೂ ನಂ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಜಯದಶಮಿ ಉತ್ಸವಕ್ಕೆ ಚಾಲನೆ ನೀಡಿದರು.

ಧರೆಗಿಳಿದ ದೇವತೆಗಳು: ನಾಡದೇವಿ ಚಾಮುಂಡೇಶ್ವರಿ ವಿಗ್ರಹದ ನಂತರ ಕ್ಷೇತ್ರಪಾಲಕ ಪುರಾಣ ಪ್ರಸಿದ್ಧ ಭೂದೇವಿ ಶ್ರೀದೇವಿ ಸಹಿತನಾದ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವರ ಉತ್ಸವಮೂರ್ತಿಯು ಸಕಲಾಭರಣ ಅಲಂಕಾರದೊಂದಿಗೆ ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಿತು. ಅದನ್ನು ಹಿಂಬಾಲಿಸಿ ಗ್ರಾಮದೇವತೆ ಹಳದಮ್ಮ, ಕೆರೆಕೋಡಮ್ಮ, ಕೆಂಚಮ್ಮ, ಅಂತರಗಟ್ಟಮ್ಮ, ಕಾಳಿಕಾದೇವಿ, ಶ್ರೀರಾಮೇಶ್ವರ, ಕೋಟೆ ಬಸವೇಶ್ವರ, ವಿಶ್ವಸ್ವರೂಪಿಣಿ ಮಾರಿಯಮ್ಮ, ದುರ್ಗಮ್ಮ, ಮಾರಿಯಮ್ಮ, ಆಂಜನೇಯಸ್ವಾಮಿ, ಸುಂಕಲಮ್ಮ, ದುಗ್ಗಮ್ಮ ಸೇರಿದಂತೆ 30ಕ್ಕೂ ಹೆಚ್ಚು ದೇವಾನುದೇವತೆಗಳು ಪ್ರತ್ಯೇಕ ವಾಹನಗಳಲ್ಲಿ ವೈವಿಧ್ಯಮಯವಾದ ಅಲಂಕಾರಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿತು. ಸಿಂಹಾರೂಢಳಾದ ವಿಶ್ವಸ್ವರೂಪಿಣಿ ಮಾರಿಯಮ್ಮ ದೇವರ ಸಿಂಹಘರ್ಜನೆ ಅಲಂಕಾರ ಎಲ್ಲರನ್ನೂ ಆಕರ್ಷಿಸಿತು.

ಬಿ.ಎಚ್‌. ರಸ್ತೆ, ಅಂಬೇಡ್ಕರ್‌ ವೃತ್ತ, ಹಾಲಪ್ಪ ವೃತ್ತ, ಮಾಧವಾಚಾರ್‌ ವೃತ್ತ, ರಂಗಪ್ಪ ವೃತ್ತದ ಮೂಲಕ ಸಾಗಿದ ದೇವರ ಮೆರವಣಿಗೆ ಅಂತಿಮವಾಗಿ ಕನಕ ಮಂಟಪ ಮೈದಾನಕ್ಕೆ ಬಂದು ತಲುಪಿತು. ಮೆರವಣಿಗೆಯಲ್ಲಿ ಡೊಳ್ಳಕುಣಿತ, ಜಾನಪದ ಕಲಾತಂಡಗಳು, ಮಂಗಳವಾದ್ಯಗಳು ಸೇರಿದಂತೆ ವಿವಿಧ ಕಲಾತಂಡಗಳು ಭಾಗವಹಿಸಿ ಕಲಾಪ್ರದರ್ಶನ ಮಾಡುತ್ತಾ ಮೆರವಣಿಗೆಗೆ ಕಳೆತಂದರು.

ಮೆರವಣಿಗೆಯಲ್ಲಿ ಬಾಗವಹಿಸಿದ್ದ ಸಾವಿರರು ಜನರಲ್ಲದೆ ಮೆರವಣಿಗೆಯ ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನರು ಮಕ್ಕಳು ಮಹಿಳೆಯರು ನಿಂತು ಮೆರವಣಿಗೆಯಲ್ಲಿ ಸಾಗಿಬಂದ ದೇವರ ದರ್ಶನ ಪಡೆದರು.

ಮೆರವಣಿಗೆಗೆ ಸ್ವಲ್ಪ ಮಟ್ಟಿಗೆ ಮಳೆಯಿಂದ ಆಡಚಣೆಯಾದರೂ ಭಕ್ತರ ಉತ್ಸಾಹ ಕುಗ್ಗಿರಲಿಲ್ಲ. ಮೈದಾನದಲ್ಲಿ ಒಂದೆಡೆ ಸಾಲಾಗಿ ನಿಂತ ದೇವಾತ ಮೂರ್ತಿಗಳನ್ನು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತಾದಿಗಳು ದರ್ಶನ ಪಡೆದು ನಮಸ್ಕರಿಸಿದರು.

ತಹಶೀಲ್ದಾರ್‌ ಸೋಮಶೇಖರ್‌ ಅವರು ಸಾಂಪ್ರದಾಯಿಕ ಕಚ್ಚೆಪಂಚೆ, ಕೋಟು, ಪೇಟ ಧರಿಸಿ ಮಂಗಳವಾದ್ಯದೊಂದಿಗೆ ಬನ್ನಿಮಂಟಪಕ್ಕೆ ಆಗಮಿಸುತ್ತಿದ್ದಂತೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ ನಂತರ ಕಾಳಿಕಾ ದೇವಿಯಗೆ ಪೂಜೆ ಸಲ್ಲಿಸಿ
ಕಾಳಿಕಾದೇವಿಯ ಖಡ್ಗವನ್ನು ಪಡೆದು ಬನ್ನಿ ಮಂಟಪದ ವೇದಿಕೆಗೆ ತೆರಳಿದರು.

ಬನ್ನಿ ಪೂಜೆ: ಎತ್ತರವಾದ ಬನ್ನಿ ಮಂಟಪದ ವೇದಿಕೆಯಲ್ಲಿ ನೆಟ್ಟಿದ್ದ ಕದಳಿಗಿಡಕ್ಕೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ರಂಗನಾಥಶರ್ಮ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು. ನಂತರ ಶಾಂತಿ ಮಂತ್ರ, ವೇದಪಠಣ ನಡೆಸಿ ಮಂಗಳಾರತಿ ಬೆಳಗಿದ ನಂತರ ಬನ್ನಿ ಮುಡಿಯುವಾಗ ಹೇಳುವ ‘ಶಮೀಶಮೀಯತೆ ಪಾಪಂ’ ಎಂಬ ಮಂತ್ರದ ಅರ್ಥವನ್ನು ವಿವರಿಸಿ ಸಾಮೂಹಿಕವಾ‌ಗಿ ಮಂತ್ರ ಭೋಧನೆ ಮಾಡಿದರು. ಅದನ್ನು ಅಲ್ಲಿನೆರೆದಿದ್ದ ಅಸಂಖ್ಯಾತ ಭಕ್ತಾದಿಗಳು ಯಥಾವತ್ತಾಗಿ ಹೇಳಿದ ನಂತರ ತಹಶೀಲ್ದಾರ್‌ ಸೋಮಶೇಖರ್‌ ಬನ್ನಿ ವೃಕ್ಷಕ್ಕೆ ಮೂರು ಪ್ರದಕ್ಷಿಣೆಹಕಿ ಕದಳಿಕಡಿಯುವುದರೊಂದಿಗೆ ಬನ್ನಿ ಮುಡಿಯುವ ಕಾರ್ಯಕ್ರಮ ಮುಕ್ತಾಯವಾಯಿತು.

ರಾವಣ ಸಂಹಾರ: ಒಂದೆಡೆ ಬನ್ನಿ ಮುಡಿಯುತ್ತಿದ್ದಂತೆ ಮೈದಾನದ ಮತ್ತೂಂದೆಡೆಯಲ್ಲಿ ಪ್ರತೀ ವರ್ಷದಂತೆ ಬೃಹತ್‌ ರಾವಣನ ಮೂರ್ತಿಗೆ ಬೆಂಕಿ ಹಚ್ಚುವ ಮೂಲಕ ರಾವಣ ಸಂಹಾರ ನಡೆಯಿತು.

ಜೊತೆಗೆ ಆಗಸದಲ್ಲಿ ರಂಗು, ರಂಗಿನ ಪಟಾಕಿ ಬಾಣ ಬಿರುಸುಗಳು ಬೆಳಕಿನ ಚಿತ್ತಾರವನ್ನು ನಿರ್ಮಿಸಿದವು. ಶಾಸಕ ಬಿ.ಕೆ. ಸಂಗಮೇಶ್‌, ನಗರಸಭಾ ಆಯುಕ್ತ ಮನೋಹರ್‌, ನಗರಸಭಾ ಅಧಿಕಾರಿಗಳಾದ ಸಯ್ಯದ್‌ ಮಹಮದ್‌ ಅಲಿ, ರುದ್ರೇಗೌಡ, ಸುಹಾಸಿನಿ, ಸುನಿತ, ಮತ್ತಿತರರು ಇದ್ದರು. ದೇವಾರ ಮೂರ್ತಿಗಳು ಉತ್ಸವದ ಮೂಲಕ ತಮ್ಮ,ತಮ್ಮ ದೇವಾಲಯಗಳಿಗೆ ತೆರಳಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ